ನಾನೊಂದು ಗೋಣಿಚೀಲ ಸಿಕ್ಕಸಿಕ್ಕಿದನೆಲ್ಲಾ ತುಂಬಿಸಿಕೊಳ್ಳುತ್ತೇನೆ. ನನಗಾಗಿ ಅಲ್ಲ ನನ್ನ ಶಾಲೆಗಾಗಿ''. ಸರಿಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ಪುತ್ತೂರು ತಾಲೂಕಿನಲ್ಲಿ ಬಹಳ ಸುದ್ದಿ ಮಾಡಿದ ಮಾತಿದು. , ವಾಸ್ತವ ಅಲ್ವಾ..? ಒಬ್ಬ ಶಿಕ್ಷಕ ಗೋಣಿಚೀಲವಾಗದೆ ಹೋದರೆ ಆತ ಕರ್ತವ್ಯ ನಿರ್ವಹಿಸುತ್ತಿರುವ ಶಾಲೆ ತುಂಬಿ ನಿಲ್ಲುವುದು ಹೇಗೆ..? ಆತನ ಕಲಿಕೆಯ ಗರ್ಭದೊಳಗೆ ಮೂಡಿಬರುವ ವಿದ್ಯಾರ್ಥಿಗಳು ತಮ್ಮ ಮೆದುಳನ್ನು ತುಂಬಿಸಿಕೊಳ್ಳುತ್ತಾ ಸಂಸ್ಕಾರವಂತರಾಗಿ ಬೆಳೆಯುದು ಹೇಗೆ..? ಪ್ರತಿಭಾವಂತರಾಗಿ ಮೂಡಿ ಬರುವುದು ಹೇಗೆ..? ಅಂದು ಈ ಮಾತನ್ನು ಹೇಳಿದವರು ಬೇರೆ ಯಾರೂ ಅಲ್ಲ. ಪುತ್ತೂರಿನ ಪ್ರತಿಭಾವಂತ ಶಿಕ್ಷಕ?! ಸರಿಸುಮಾರು ಸಾವಿರಕ್ಕಿಂತಲೂ ಹೆಚ್ಚು ಮಕ್ಕಳಿಗೆ ರಂಗ ದರ್ಶನ ಮಾಡಿದ ರಂಗ ಶಿಕ್ಷಕ?! ನೂರಾರು ಮಕ್ಕಳಿಗೆ ಯಕ್ಷಗಾನದ ಗೆಜ್ಜೆ ಕಟ್ಟಿ ಕುಣಿಸಿದ ಯಕ್ಷ ಶಿಕ್ಷಕ..! ಹತ್ತಾರು ತರಬೇತಿಗಳ ಮೂಲಕ ನೂರಾರು ಶಿಕ್ಷಕರ ವೃತ್ತಿಜೀವನಕ್ಕೆ ಮಾರ್ಗದರ್ಶನ ನೀಡಿದ ಸಂಪನ್ಮೂಲ ಶಿಕ್ಷಕ..! ತಾರಾನಾಥ ಸವಣೂರು ರವರು. ಈ ಮಾತು ಸಂಗತಿಗಳು ಮತ್ತೆ ನೆನಪಾದದ್ದು ಈ ಒಂದು ಶುಭ ಸುದ್ದಿಯಿಂದ. ಈ ಶುಭ ಸುದ್ದಿ ಇನ್ನಾವುದೂ ಅಲ್ಲ.ತಾರಾನಾಥ ಸವಣೂರು ರವರನ್ನು ೨೦೨೫ -೨೬ ನೇ ಸಾಲಿನ ದಕ ಜಿಲ್ಲಾ ಮಟ್ಟದ
ಅತ್ಯುತ್ತಮ ಶಿಕ್ಷಕ” ಪ್ರಶಸ್ತಿ ಹುಡುಕಿಕೊಂಡು ಬಂದಿದೆ. ಹೆಗಲೇರಿದೆ?ಹೆಚ್ಚಿನ ಪ್ರಶಸ್ತಿಗಳು ಬಿಕಾರಿಯಾಗುತ್ತಿರುವ ಈ ಸಂದರ್ಭದಲ್ಲಿ ಅರ್ಹರೊಬ್ಬರಿಗೆ ಪ್ರಶಸ್ತಿ ಸಿಕ್ಕಿದ ಖು ಷಿಯನ್ನು ಮೂಡಿಸಿದೆ.
೧೯೯೪ರಲ್ಲಿ ಬೆಳ್ತಂಗಡಿ ತಾಲೂಕಿನ ಬಂಡಿಹೊಳೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವೃತ್ತಿ ಆರಂಭಿಸಿದ ತಾರಾನಾಥ ಸವಣೂರು ರವರ ವೃತ್ತಿ ಬದುಕಿನ ಪಯಣ ವೃತ್ತಿಯನ್ನು ಪ್ರೀತಿಸುವ ಎಲ್ಲ ಶಿಕ್ಷಕರಿಗೆ ದಾರಿದೀಪವಾಗುವಂಥದ್ದು. ಅಲ್ಲಿಂದ ತನ್ನ ತವರು ತಾಲೂಕು ಪುತ್ತೂರಿಗೆ ಆಗಮಿಸಿದ ತಾರನಾಥರು ಪಲ್ಲತಾರು, ನಾಣಿಲ, ಬೆಳಂದೂರು ಕೆಯ್ಯೂರು, ಜಡೆಕಲ್ಲು ಶಾಲೆಗಳಲ್ಲಿ ಸಹಶಿಕ್ಷಕರಾಗಿ, ಪ್ರಭಾರ ಮುಖ್ಯ ಗುರುಗಳಾಗಿ ಶಾಲೆಯ ಕರ್ತವ್ಯ ನಿರ್ವಹಿಸಿ ಶಾಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಿದವರು. ಪಲ್ಲತ್ತಾರು ಶಾಲೆಗೆ ಹೊಸ ರೂಪ ನೀಡಿದ ಶಿಕ್ಷಕ ಎಂದು ಅಲ್ಲಿಯ ಜನ ಈಗಲೂ ಹೇಳುತ್ತಾರೆ. ನಾಣಿಲ ಶಾಲೆಯಲ್ಲಿ ನಿರ್ಮಿಸಿದ ತರಗತಿ ಕೊಠಡಿ ಮತ್ತು ರಂಗಮಂದಿರ ಈಗಲೂ ಬಹುಪಯೋಗಿಯಾಗಿ ಕಂಗೊಳಿಸುತ್ತಿದೆ. ಬೆಳಂದೂರು ಶಾಲೆಯಲ್ಲಿ ನಡೆದ ರಂಗ ಚಟುವಟಿಕೆಗಳು ಈಗಲೂ ಅಲ್ಲಿನ ಜನ ಮನಸಲ್ಲಿ ಅಚ್ಚಲಿಯದೇ ಉಳಿದಿದೆ. ಜಡೆಕಲ್ಲು ಶಾಲೆಯಲ್ಲಿ ನಡೆದ ದೇಸಿ ವೈಭವ ಇಡೀ ಇಲಾಖೆಗೆ ಒಂದು ಮಾದರಿಯಾಗುವಂತದ್ದು.
ಈ ನಡುವೆ ಇವರು ದಕ್ಷಿಣಕನ್ನಡ ಜಿಲ್ಲೆಯ ಪ್ರಥಮ ಸಿಆರ್ಪಿಯಾಗಿಯೂ ಕೂಡ ಗುರುತಿಸಿಕೊಳ್ಳುತ್ತಾರೆ. ಸವಣೂರು ಮತ್ತು ನರಿಮೊಗರು ಸಿ.ಆರ್. ಸಿ ಕೇಂದ್ರಗಳಲ್ಲಿ ಸಿ. ಆರ್ ಪಿ ಯಾಗಿ ದುಡಿದ ಇವರು ಇಡೀ ಕ್ಲಸ್ಟರ್ ನ ಚಿತ್ರವನ್ನು ಬದಲು ಮಾಡುತ್ತಾರೆ. ಸರ್ಕಾರಿ ಶಾಲೆಗೂ ಖಾಸಗಿ ಶಾಲೆಯಂತಹ ಸಮವಸ್ತ್ರ ಬೇಕೆಂದು ಪ್ರತಿಪಾದಿಸಿದವರಲ್ಲಿ ಇವರು ಮೊದಲಿಗರು ಎಂದು ಹೇಳಬಹುದು. ತನ್ನ ಕ್ಲಸ್ಟರ್ ನ ಎಲ್ಲ ಶಾಲೆಗಳ ಮಕ್ಕಳಿಗೆ ಪ್ರತ್ಯೇಕವಾದ ಸಮಸ್ತ್ರವನ್ನು ರೂಢಿಸುವಲ್ಲಿ ಯಶಸ್ವಿಯಾದರು. ಎಲ್ಲ ಶಾಲೆಯಲ್ಲಿ ಶಾಲಾ ದಿನಾಚರಣೆಗಳು ನಡೆಯುವಂತೆ ಪ್ರೋತ್ಸಾಹಿಸಿದರು. ತನ್ನದೇ ಸಂಗೀತ ವಾದ್ಯಗಳು, ತನ್ನದೇ ವಸ್ತ್ರಲಂಕಾರ,ತನ್ನದೇ ಮೇಕಪ್, ತಾನೇ ಸ್ವತಹ ಮಕ್ಕಳಿಗೆ ನೃತ್ಯ ಗುರುಗಳಾಗಿ, ನಾಟಕ ನಿರ್ದೇಶಕರಾಗಿಕ್ಲಸ್ಟರ್ ನ ಎಲ್ಲ ಶಾಲೆಗಳಲ್ಲಿಯೂ ಜನಜನಿತರಾದರು.
ವಿಶೇಷ ಚೇತನ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸರಕಾರ ರೂಪಿಸಿದ ಹೊಸ ಹುದ್ದೆ ತಾಲೂಕು ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾಗಿ ಪುತ್ತೂರು ಹಾಗೂ ಸುಳ್ಯ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸಿದ ಹಿರಿಮೆ ಇವರದು. ತಾಲೂಕು ಜಿಲ್ಲೆ, ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ನಲಿಕಲಿ, ಮೌಲ್ಯಮಾಪನ, ರಂಗಕಲೆ,ಚೈತನ್ಯ, ಚೈತನ್ಯ ತರಣಿ, ಎಸ್ ಡಿ ಎಂ ಸಿ, ಮುಂತಾದ ಹತ್ತಾರು ವಿಷಯಗಳಲ್ಲಿ ನಾಡಿನ ನೂರಾರು ಶಿಕ್ಷಕರಿಗೆ ತರಬೇತಿ ನೀಡಿ ಮಾರ್ಗದರ್ಶನ ಮಾಡಿದ ಹೆಗ್ಗಳಿಕೆಯು ಇವರದು
ಅಪ್ಪಟ ಪ್ರತಿಭಾವಂತ. ಯಕ್ಷಗಾನವೇ ಇವರ ಉಸಿರು .ಯಕ್ಷಗಾನದ ಬಣ್ಣಗಾರಿಕೆಯಿಂದ ಹಿಡಿದು ವೇಷ ,ಅರ್ಥಗಾರಿಕೆ ,ಚೆಂಡೆ ಮದ್ದಲೆ ವಾದನ,ನಾಟ್ಯ ತರಬೇತಿ, ಎಲ್ಲದಲ್ಲಿಯೂ ಎತ್ತಿದ ಕೈ, ನಾಟ್ಯ ತರಬೇತಿಯಲ್ಲಿ ಸುಮಾರು ೫೦೦ ಕ್ಕಿಂತಲೂ ಹೆಚ್ಚು ಮಕ್ಕಳನ್ನು ಯಕ್ಷ ಕಲಾವಿದರನ್ನಾಗಿದ ಕೀರ್ತಿ ಇವರದು. ಪ್ರಸ್ತುತ ಹನುಮಗಿರಿ ಮೇಳದ ಪ್ರಧಾನ ಕಲಾವಿದರಾದ ಪ್ರಸಾದ್ ಸವಣೂರು, ಹವ್ಯಾಸಿ ಕಲಾವಿದರಾದ ಪ್ರವೀಣ್ ಬಲ್ಲ್ಯಾಯ, ರಾಕೇಶ್ ರೈ ಕೆಡಂಜಿ ಇವರ ಶಿಷ್ಯರು ಎನ್ನುವುದು ಹೆಮ್ಮೆಯ ವಿಷಯ. ಸ್ವತಃ ವೇಷಧಾರಿಯಾಗಿರುವ ಇವರ ಗದಾಯುದ್ಧದ ದುರ್ಯೋಧನ, ದೇವಿ ಮಹಾತ್ಮೆಯ ಮಹಿಶಾಸುರ, ಶುಂಭ, ಮಧು,ಕೈಠಭ, ರಕ್ತಬೀಜ, ಅಗ್ರ ಪೂಜೆಯ ಶಿಶುಪಾಲ, ಭಾರ್ಗವ ವಿಜಯದ ಕಾರ್ತವೀರ್ಯ, ಸುದರ್ಶನ್ ವಿಜಯದ ಶತ್ರು ಪ್ರಸೂದನ, ಶ್ವೇತ ಕುಮಾರ ಚರಿತ್ರೆಯ ದುರ್ಜಯ, ಲೋಹಿತ ನೇತ್ರ,ಕಂಸ ವಧೆಯ ಕನಸಿನ ಕಂಸ, ಶಮಂತಕಮಣಿಯ ಕೇಸರಿ, ಜಾಂಭವಂತ ಹೀಗೆ ಎಲ್ಲ ವೇಷಗಳು ನೆನಪಿನಲ್ಲಿ ಉಳಿಯುವಂತದ್ದು. ಹತ್ತಾರು ಮಕ್ಕಳ ಯಕ್ಷಗಾನ ತಂಡ, ನೂರಾರು ಯಕ್ಷಗಾನ ಕಾರ್ಯಕ್ರಮಗಳು, ಹಲವಾರು ತಾಳಮದ್ದಳೆ ಸಪ್ತಾಹದಗಳ ಸಂಯೋಜನೆಯ ಮೂಲಕ ನಾಡಿನದ್ಯಂತ ಯಕ್ಷಗಾನವನ್ನು ಉಳಿಸುವ ಪ್ರಯತ್ನವನ್ನು ಮಾಡುತ್ತಲೇ ಬಂದಿದ್ದಾರೆ. ತನ್ನದೇ ಆದ ಶ್ರವಣರಂಗ ಸಾಂಸ್ಕೃತಿಕ ಪ್ರತಿಷ್ಠಾನದ ಮೂಲಕ ನೂರಾರು ಕಲಾವಿದರನ್ನು ಸಾಂಸ್ಕೃತಿಕ ಲೋಕಕ್ಕೆ ಪರಿಚಿಸಿಯಿಸಿದ್ದಾರೆ.
ನಾಟಕ ನಿರ್ದೇಶನದಲ್ಲಿಯೂ ಕೈಯಾಡಿಸಿರುವ ಇವರ ಹೆಣದೂರು''ಬೀದಿ ನಾಟಕ ಜಿಲ್ಲೆಯಾದ್ಯಂತ ಸುಮಾರು ೭೫ ಕ್ಕಿಂತ ಹೆಚ್ಚು ಪ್ರದರ್ಶನಗಳನ್ನು ಕಂಡಿದೆ. ಜನಪದ ನೃತ್ಯಗಳ ಮೂಲಕ ಮನೆ ಮಾತಾಗಿರುವ ಇವರು ವೀರಗಾಸೆ, ಕರಂಗೊಲು, ಕಂಗಿಲು, ಚೆನ್ನು, ಕಂಸಾಳೆ ಮುಂತಾದ ನೃತ್ಯಗಳನ್ನು ಶಾಲೆ ಶಾಲೆಯಲ್ಲಿ ಕಲಿಸಿ ಅದೆಷ್ಟೋ ಮಕ್ಕಳನ್ನು ರಂಗಕ್ಕೆ ಇಳಿಸಿದ್ದಾರೆ. ಸವಣೂರು ಯುವಕ ಮಂಡಲದ ಮುಖ್ಯ ಜನಪದ ಕಲಾವಿದನಾಗಿ ಆ ಯುವಕಮಂಡಲವನ್ನು ರಾಜ್ಯ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲವನ್ನಾಗಿ ರೂಪಿಸುವಲ್ಲಿ ಇವರ ಶ್ರಮ ಬಹಳವಿದೆ ಎಂದು ಹೇಳಬಹುದು. ಬರಹಗಾರರಾಗಿ ಕೆಲಸ ಮಾಡಿರುವ ಇವರ
ಆವರ” ತುಳು ಕವನಗಳ ಸಂಪಾದಿತ ಕೃತಿ ಮತ್ತು “ಚಿಂತನಾಮೃತ” ಎಂಬ ಚಿಂತನೆಗಳ ಸಂಪಾದಕೃತಿ ಸಾಹಿತ್ಯ ಲೋಕದಲ್ಲಿ ಗುರುತಿಸಲ್ಪಡುವಂಥದ್ದು ಯುವಜನ ಸೇವಾ ಇಲಾಖೆಯ ಯುವಜನ ಮೇಳಗಳ ರಾಜ್ಯ ತೀರ್ಪುಗಾರರಾಗಿ, ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆಯ ಪ್ರತಿಭಾ ಕಾರಂಜಿ ರಾಜ್ಯ ತೀರ್ಪುಗಾರರಾಗಿಯೂ ಇವರು ಗುರುತಿಸಲ್ಪಟ್ಟಿದ್ದಾರೆ ಎನ್ನುವುದು ವಿಶೇಷ
ಪ್ರಸ್ತುತ ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ವೀರಮಂಗಲದಲ್ಲಿ ಮುಖ್ಯ ಗುರುಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇವರ ಪ್ರಯತ್ನದಿಂದಲೇ ಈ ಶಾಲೆ ಪಿಎಂಶ್ರೀ ಅನುದಾನಕ್ಕೆ ಭಾಜನವಾಗಿದೆ ಎಂದರೆ ತಪ್ಪಾಗಲಾರದು. ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ನದಿ ಕುಮಾರಧಾರ ದ ತಟದ ಹಳ್ಳಿಯೊಂದರಲ್ಲಿರುವ ಈ ವೀರಮಂಗಲ ಶಾಲೆ ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅತ್ಯುತ್ತಮ ಪಿಎಂ ಶ್ರೀ ಶಾಲೆ ಎಂದು ಗುರುತಿಸಲ್ಪಡುವಂತೆ ಮಾಡಿದ ಇವರ ಶೈಕ್ಷಣಿಕ ಶ್ರಮ ನಿಜಕ್ಕೂ ಶ್ಲಾಘನೀಯವಾದದ್ದು. ಇವರ ಕೆಲಸವನ್ನು ಗುರುತಿಸಿ ೨೦೨೪ ೨೫ ನೇ ಸಾಲಿನ ಅತ್ಯುತ್ತಮ ಎಸ್ ಡಿ ಎಂ ಸಿ ಪ್ರಶಸ್ತಿ’ ಪುಷ್ಟಿ’ ೧ ಲಕ್ಷ ರೂಗಳ ನಗದು ಬಹುಮಾನಗಳೊಂದಿಗೆ ಇವರ ಶಾಲೆಗೆ ಸಂದಿದೆ. ಸುಂದರವಾದ ಹೂದೋಟ, ಸುಂದರವಾದ ಹಣ್ಣಿನ ತೋಟ, ಸಾರ್ವಜನಿಕ ವಾಚನಾಲಯ, ಆಗಾಗ ಶಾಲೆಯಲ್ಲಿ ನಡೆಯುವ ವಿಭಿನ್ನ ಕಾರ್ಯಕ್ರಮಗಳು, ಶಾಲಾ ಮಕ್ಕಳ ಯಕ್ಷಗಾನ ತಂಡ, ಶಾಲಾ ಮಕ್ಕಳ ಬ್ಯಾಂಡ್ ಸೆಟ್ ತಂಡ, ಹೀಗೆ ಶಾಲಾ ಚಿತ್ರಣವನ್ನೇ ಬದಲಿಸಿ ಬಿಟ್ಟಿದ್ದಾರೆ ತಾರಾ ನಾಥರು ಬರೀ ಮೂರು ವರ್ಷಗಳಲ್ಲಿ. ೧೩೫ ಇದ್ದ ಮಕ್ಕಳ ಸಂಖ್ಯೆ ೧೮೦ ಕ್ಕೇರಿದೆ ಸಾಧನೆ ಅಲ್ವಾ..??
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಪಿಎಂ ಶ್ರೀ ಶಾಲೆಗಳ ಶಿಕ್ಷಕರ ರಾಷ್ಟ್ರೀಯ ವಿಚಾರಗೋಷ್ಠಿ, ರಾಷ್ಟ್ರೀಯ ಮಕ್ಕಳ ರಂಗೋತ್ಸವದಲ್ಲಿ ಭಾಗವಹಿಸಿದ್ದಾರೆ. ಸ್ಪರ್ಶ, ಭಾವ, ನೋಟ, ಬೆಳಕು ಮುಂತಾದ ಬೀದಿ ನಾಟಕ ಜಾತಾಗಳಲ್ಲಿ ಭಾಗವಹಿಸಿದ್ದಾರೆ. ತಾಲೂಕು ಶಿಕ್ಷಕರ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನ. ಹಲವಾರು ಯುವಜನ ಮೇಳ, ನೂರಾರು ಮಕ್ಕಳ ರಂಗ ತರಬೇತಿ ಶಿಬಿರ, ಹಲವಾರು ಕ್ರೀಡಾಕೂಟಗಳನ್ನು ಸಂಯೋಜಿಸಿದ್ದಾರೆ. ಪುತ್ತೂರು ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನದ ಸನ್ಮಾನ, ಯಕ್ಷ ಏರು ಪದದ ಯಕ್ಷ ಸನ್ಮಾನ, ತಾಲೂಕು ಶಿಕ್ಷಕ ಸಾಹಿತ್ಯ ಸಮ್ಮೇಳನದ ಸನ್ಮಾನ ಹೀಗೆ ಹಲವಾರು ಸನ್ಮಾನ ಗೌರವಗಳಿಗೆ ಬಾಜನರಾಗಿದ್ದಾರೆ. ಶಿಕ್ಷಣ ಇಲಾಖೆಯ ಜನ ಮೆಚ್ಚಿದ ಶಿಕ್ಷಕ ಪ್ರಶಸ್ತಿಯಿಂದಲೂ ಪುರಸ್ಕೃತರಾಗಿದ್ದಾರೆ.
ಇಷ್ಟು ಸಾಕಲ್ವಾ ವೃತ್ತಿನಿಷ್ಠೆಯ ಸಾಕ್ಷಿಗೆ?! ಸೇವಾ ಸಾಧನೆಯ ಖುಷಿಗೆ..!. ಕರ್ತವ್ಯ ಬದ್ಧತೆಯ ನೆನಪಿಗೆ?!

ರಮೇಶ್ ಉಳಯ
ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರು