ಸವಣೂರು: ಸಂಸ್ಕೃತಿ ,ಶಿಕ್ಷಣ, ಕ್ರೀಡೆ, ಸಾಹಸ ಕ್ಷೇತ್ರದಲ್ಲಿ ಸೇವೆ ಮಾಡುತ್ತಿರುವ ಬೆಂಗಳೂರಿನ ಮಾತೃಭೂಮಿ ಸಂಸ್ಥೆ ನೀಡುವ 2025-26ನೇ ಸಾಲಿನ ಮಾತೃ ಭೂಮಿ ರಾಜ್ಯ ಪ್ರಶಸ್ತಿಗೆ ಸುದ್ದಿ ಬಿಡುಗಡೆಯ ಅಂಕಣಕಾರರೂ ಆಗಿರುವ ವಿಶ್ರಾಂತ ಪ್ರಾಂಶುಪಾಲ ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಎಲಿಯದ ಬಿ.ವಿ.ಸೂರ್ಯನಾರಾಯಣ ಅವರು ಆಯ್ಕೆಯಾಗಿದ್ದಾರೆ.
ಸುದ್ದಿಬಿಡುಗಡೆಯ ಅಂಕಣಕಾರರೂ ಆಗಿರುವ ಬಿ.ವಿ.ಸೂರ್ಯನಾರಾಯಣ ಅವರು ಸವಣೂರು ಪ.ಪೂ.ಕಾಲೇಜಿಗೆ ಸುಮಾರು 1.20 ಕೋಟಿಗೂ ಅಧಿಕ ದೇಣಿಗೆಯನ್ನು ದಾನಿಗಳಿಂದ ಸಂಗ್ರಹಿಸಿ ತರಗತಿ ಕೊಠಡಿಗಳು, ಪ್ರಯೋಗಾಲಯಗಳು, ವಾಚನಾಲಯ, ಶೌಚಾಲಯ ಮೊದಲಾದ ಮೂಲಭೂತ ಸೌಕರ್ಯಗಳನ್ನು ಸಂಸ್ಥೆಗೆ ಕಲ್ಪಿಸಿದಲ್ಲದೆ, ಸುಮಾರು 500ಕ್ಕೂ ಮಿಕ್ಕಿ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಧೃತಿ ಫೌಂಡೇಶನ್ ಮಂಗಳೂರು ಸಂಸ್ಥೆಯ ಸ್ವಯಂ ಸೇವಕನಾಗಿ ಆರ್ಥಿಕ ನೆರವನ್ನು ಒದಗಿಸಿದ್ದಾರೆ. ಅಲ್ಲದೆ ಉತ್ತಮ ತರಬೇತುದಾರರಾಗಿ ನಾಡಿನ ವಿವಿಧೆಡೆ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ತರಬೇತು ಕಾರ್ಯಕ್ರಮಗಳನ್ನು ನೀಡುತ್ತಾ ಬರುತ್ತಿದ್ದಾರೆ.
ಶೈಕ್ಷಣಿಕ ಕ್ಷೇತ್ರದಲ್ಲಿ 39 ವರ್ಷಗಳ ಕಾಲ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿದ್ದಾರೆ. ಇವರು ಮೈಸೂರಿನ ಶರಣ ವಿಶ್ವವಚನ ಫೌಂಡೇಶನ್ ವತಿಯಿಂದ ನೀಡುವ 2021ನೇ ಸಾಲಿನ ರಾಜ್ಯಮಟ್ಟದ ಚಿನ್ಮಯ ಜ್ಞಾನಿ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದರು. ಇವರ ಶೈಕ್ಷಣಿಕ ಕ್ಷೇತ್ರದ ಕಾಳಜಿ ಹಾಗೂ ಸಾಧನೆಗೆ ಸವಣೂರಿನಲ್ಲಿ ಅವರ ಅಭಿಮಾನಿಗಳು “ಸೂರ್ಯ ತೇಜ” ಅಭಿನಂದನಾ ಕಾರ್ಯಕ್ರಮ ನಡೆಸಿ ನಿವೃತ್ತಿ ಜೀವನಕ್ಕೆ ಶುಭಕೋರಿದ್ದರು.
ಲೇಖಕರೂ ಆಗಿರುವ ಬಿ.ವಿ.ಸೂರ್ಯನಾರಾಯಣ ಅವರ ಸಕಾಲಿಕ, ಗಾಜಿನ ಮರ, Correct Pronunciation, ಶ್ರಮ ಸಂಸ್ಕೃತಿಗೆ ಶರನೆಂದವರು, ಪದ ಪಲ್ಲವಿ ಮೊದಲಾದ ಕೃತಿಗಳನ್ನೂ ರಚಿಸಿದ್ದಾರೆ.