ಪುತ್ತೂರು: ಕರಾವಳಿ ಕ್ರೈಸ್ತರ ಪ್ರಮುಖ ಹಬ್ಬಗಳಲ್ಲಿ ಒಂದಾದ ಸೆ.8ರಂದು ಆಚರಿಸಲ್ಪಡುವ ಪ್ರಭು ಏಸುಕ್ರಿಸ್ತರ ತಾಯಿ ಮೇರಿ ಮಾತೆಯ ಜನ್ಮ ದಿನವನ್ನು ಸಾರುವ ‘ಮೊಂತಿ ಫೆಸ್ತ್ (ತೆನೆ ಹಬ್ಬ) ಪುತ್ತೂರು ಮಾಯ್ ದೆ ದೇವುಸ್ ಸೇರಿದಂತೆ ವಿವಿಧ ಚರ್ಚ್ಗಳಲ್ಲಿ ನಡೆಯಿತು.
ಮಾದೆ ದೇವುಸ್ ಚರ್ಚ್ನಲ್ಲಿ ಚರ್ಚ್ನ ಪ್ರಧಾನ ಧರ್ಮಗುರು ವಂ.ಲಾರೆನ್ಸ್ ಮಸ್ಕರೇನಸ್ರವರು ಬಲಿಪೂಜೆ ನೆರವೇರಿಸಿದರು. ಸಹಾಯಕ ಧರ್ಮಗುರು ವಂ|ಮರ್ವಿನ್ ಪ್ರವೀಣ್ ಲೋಬೊ ಬೈಬಲ್ ವಾಚಿಸಿ ಹಬ್ಬದ ಸಂದೇಶ ನೀಡಿದರು.

ಹೂ ಅರ್ಪಣೆ:
ಮಕ್ಕಳಿಂದ ಮೇರಿ ಮಾತೆಗೆ ಹೂ ಅರ್ಪಣೆ ನಡೆಯಿತು. ಮಕ್ಕಳು ಪ್ರಕೃತಿಯಲ್ಲಿ ದೊರೆಯುವ ಚೆಂದದ ಹೂಗಳನ್ನು ಹೆಕ್ಕಿ, ಆರಿಸಿ ಬುಟ್ಟಿಯಲ್ಲಿ ಸೊಗಸಾಗಿ ಜೋಡಿಸಿ ಚರ್ಚ್ಗೆ ಬಂದು ತಾವು ತಂದ ಹೂಗಳನ್ನು ಧಾರ್ಮಿಕ ವಿಧಿವಿಧಾನದೊಂದಿಗೆ ಮೇರಿ ಮಾತೆಗೆ ಅರ್ಪಿಸುವುದು ಸಂಪ್ರದಾಯವಾಗಿದೆ. ಅದರಂತೆ ಮಕ್ಕಳು ಧಾರ್ಮಿಕ ವಿಧಿವಿಧಾನಗಳೊಂದಿಗೆ ಮೇರಿ ಮಾತೆಗೆ ಹೂವುಗಳನ್ನು ಅರ್ಪಿಸಿದರು.
ಭತ್ತದ ತೆನೆ ವಿತರಣೆ:
ಬಲಿಪೂಜೆ ಬಳಿಕ ಕ್ರೈಸ್ತ ಭಾಂದವರಿಗೆ ಹೊಸ ಬತ್ತದ ತೆನೆ ವಿತರಣೆ ನಡೆಯಿತು. ಧರ್ಮಗುರುಗಳು ಪವಿತ್ರೀಕರಿಸಿದ ಭತ್ತದ ತೆನೆಗಳನ್ನು ಭಕ್ತರಿಗೆ ವಿತರಿಸಲಾಯಿತು.
ಹೊಸ ಅಕ್ಕಿ ಊಟ:
ಪೂರ್ವಿಕರಿಂದಲೇ ಅಚರಿಸುವ ಈ ಹಬ್ಬವು ತನ್ನದೇ ವಿಶಿಷ್ಟ ಸಂಸ್ಕೃತಿಯಿಂದ, ಸಂಪ್ರದಾಯವನ್ನು ಎತ್ತಿ ಹಿಡಿಯಲಾಗುತ್ತದೆ. ಚರ್ಚುಗಳಲ್ಲಿ ಭಕ್ತಿಪೂರ್ವಕವಾಗಿ ತೆನೆಯನ್ನು ಮೆರವಣಿಗೆಯ ಮೂಲಕ ದೇವಾಲಯದ ಒಳಗೆ ತಂದು ಧರ್ಮಗುರುಗಳಿಂದ ಆಶೀರ್ವಾದದ ಬಳಿಕ ಮನೆಗೆ ತಂದು ಮೇಣದ ಬತ್ತಿಯನ್ನು ಉರಿಸಿ ಆ ಭತ್ತದ ತೆನೆಯನ್ನು ಬೆಸಸಂಖ್ಯೆ ಆಧಾರದಲ್ಲಿ ಪುಡಿಮಾಡಿ ಹಾಲು ಅಥವಾ ಪಾಯಸದಲ್ಲಿ ಸೇರಿಸಿ ಮನೆಯ ಎಲ್ಲಾ ಸದಸ್ಯರು ಸೇವಿಸುತ್ತಾರೆ. ಅಂದಿನ ಹಬ್ಬದ ಎಲ್ಲಾ ಅಡುಗೆ ರುಚಿಗಳು ಸಸ್ಯಹಾರವಾಗಿದ್ದು ಸಾಂಬಾರು ಅಥವಾ ಪದಾರ್ಥಗಳು ಬೆಸ ಸಂಖ್ಯೆ ಆಧಾರದಲ್ಲಿ ಇರುತ್ತದೆ. ಹೀಗೆ ಕೌಟುಂಬಿಕ ಸಾಮರಸ್ಯವನ್ನು ಈ ಹಬ್ಬದ ಮೂಲಕ ಸಾರಲಾಗುತ್ತದೆ.
ಸಂತ ಫಿಲೋಮಿನಾ ಪಿ.ಯು ಕಾಲೇಜು ಪ್ರಾಂಶುಪಾಲರಾದ ವಂ| ಅಶೋಕ್ ರಾಯನ್ ಕ್ರಾಸ್ತಾ, ಸಂತ ಫಿಲೋಮಿನಾ ಪ್ರೌಢಶಾಲೆಯ ವಂ| ಮ್ಯಾಕ್ಸಿಮ್ ಡಿಸೋಜಾ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ಟಾ, ಕಾರ್ಯದರ್ಶಿ ಎವುಲಿನ್ ಡಿಸೋಜ, 20 ಆಯೋಗದ ಅಧ್ಯಕ್ಷ ಜಾನ್ ಡಿಸೋಜ ಹಾಗೂ ವಿವಿಧ ಸಂಟನೆಗಳ ಪದಾಧಿಕಾರಿಗಳು, ಭಕ್ತಾದಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮ ಬಳಿಕ ಉಪಾಹಾರ ಆಯೋಜಿಸಲಾಗಿತ್ತು.