ಉಪ್ಪಿನಂಗಡಿ: ಸಭ್ಯ ಗ್ರಾಹಕರಂತೆ ಫೋನಾಯಿಸಿ ಚೆಕ್ ನೀಡಿ ಚಿನ್ನಾಭರಣವನ್ನು ಪಡೆದುಕೊಂಡು ಇಲ್ಲಿನ ಚಿನ್ನಾಭರಣ ಅಂಗಡಿಗೆ ವಂಚಿಸಲಾಗಿದೆ ಎಂಬ ವಿಲಕ್ಷಣ ಪ್ರಕರಣವೊಂದು ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿರುವ ಬಗ್ಗೆ ತಿಳಿದು ಬಂದಿದೆ.
ತುರ್ತು ಅಗತ್ಯಕ್ಕಾಗಿ ಆಭರಣವೊಂದು ಬೇಕಾಗಿದೆ. ಹುಡುಗನೋರ್ವನನ್ನು ಚೆಕ್ ನೊಂದಿಗೆ ಕಳುಹಿಸುತ್ತಿದ್ದೇನೆ. ಅವನಿಂದ ಚೆಕ್ ಪಡೆದುಕೊಂಡು ಚಿನ್ನಾಭರಣವನ್ನು ನೀಡಿ ಎಂದು ಫೋನ್ ಮೂಲಕ ಮಹಿಳೆಯೋರ್ವರು ತಿಳಿಸಿದ ಕಾರಣಕ್ಕೆ ಚಿನಾಭರಣ ನೀಡಲಾಗಿದೆ ಎಂದೂ, ಬಳಿಕ ಚೆಕ್‌ನ ಖಾತೆಯಲ್ಲಿ ಹಣವಿಲ್ಲವೆಂದು ತಿಳಿಸಿದ್ದಕ್ಕೆ ಆ ಮಹಿಳೆ ಚೆಕ್ ಅನ್ನು ಬ್ಯಾಂಕಿಗೆ ಹಾಕಬೇಡಿ . ನನಗೆ ಇನ್ನಷ್ಟು ಹೆಚ್ಚುವರಿ ಚಿನ್ನಬೇಕಾಗಿದ್ದು, ಅದಕ್ಕಾಗಿ ನಾನು ಹಣವನ್ನು ನೆಫ್ಟ್ ಮಾಡುತ್ತೇನೆಂದು ತಿಳಿಸಿ ನೆಫ್ಟ್ ದಾಖಲೆಯನ್ನು ವಾಟ್ಸಪ್ ಮೂಲಕ ಕಳುಹಿಸಿದ್ದಕ್ಕೆ ಅಲ್ಲಿನ ಸಿಬ್ಬಂದಿ ಆಕೆಯ ಆಪೇಕ್ಷೆಯಂತೆ ಮತ್ತಷ್ಟು ಚಿನ್ನವನ್ನು ಬಸ್ ಮೂಲಕ ಕಳುಹಿಸಿಕೊಟ್ಟು ಬಳಿಕ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ ನೆಫ್ಟ್ ಹಣವೂ ಖಾತೆಗೆ ಜಮೆಯಾಗಿಲ್ಲವೆಂದು ತಿಳಿದು ಬಂದಿದೆ. ಒಟ್ಟಾರೆ 53 ಗ್ರಾಮ್ ತೂಕದ ಚಿನ್ನಾಭರಣವನ್ನು ಚೆಕ್ ಮತ್ತು ನೆಫ್ಟ್ ಹೆಸರಿನಲ್ಲಿ ಪಡೆದು ವಂಚಿಸಲಾಗಿದೆ ಎಂದು ಅಂಗಡಿ ಮಾಲಕ ಪೊಲೀಸ್ ಇಲಾಖೆಗೆ ದೂರು ಸಲ್ಲಿಸಿದ್ದಾರೆ.
ಆದರೆ ಪ್ರಕರಣಕ್ಕೆ ಸಂಬಂಧಿಸಿ ಯಾವೊಬ್ಬ ಮಹಿಳಾ ಗ್ರಾಹಕಿ ಸದ್ರಿ ಆಭರಣದ ಅಂಗಡಿಗೆ ಭೇಟಿ ನೀಡಿರುವುದಿಲ್ಲ. ಫೋನ್ ಕರೆಗೆ ಸ್ಪಂದಿಸಿ ಚಿನ್ನಾಭರಣ ನೀಡಿರುವುದು, ನೆಫ್ಟ್ ಸಂದೇಶವನ್ನು ನೋಡಿ ಮತ್ತಷ್ಟು ಚಿನ್ನವನ್ನು ಬಸ್ಸಿನಲ್ಲಿ ಕಳುಹಿಸಿರುವುದು, ಇದೆಲ್ಲವೂ ಪ್ರಬುದ್ಧ ವ್ಯವಹಾರದ ನಡೆಯಾಗಿರುವುದಿಲ್ಲ. ಇದು ನೈಜವೂ ಅಥವಾ ಅಲ್ಲಿನ ಸಿಬ್ಬಂದಿಯಿಂದಲೇ ಹೆಣೆಯಲ್ಪಟ್ಟ ಕಟ್ಟು ಕಥೆಯೋ ತಿಳಿಯಬೇಕಾಗಿದೆ. ಚೆಕ್ ನೀಡಿ ವಂಚಿಸಿದ್ದರೆ ಅದು ಚೆಕ್ ಬೌನ್ಸ್ ಕೇಸಿನ ವ್ಯಾಪ್ತಿಗೆ ಬರುತ್ತದೆ. ಅದಕ್ಕಾಗಿ ದೂರನ್ನು ಸ್ವೀಕರಿಸಿ ಪ್ರಕರಣ ದಾಖಲಿಸುವ ಮುನ್ನಾ ನೈಜಾಂಶವನ್ನು ಪರಿಶೀಲಿಸಲಾಗುತ್ತಿದೆ ಎಂದು ಉಪ್ಪಿನಂಗಡಿ ಠಾಣಾ ಎಸೈ ಅವಿನಾಶ್ ತಿಳಿಸಿದ್ದಾರೆ.