*ಮನೆಯಲ್ಲಿ ಸಂಸ್ಕೃತಿ – ಸಂಸ್ಕಾರ ಬೆಳೆಯಬೇಕು – ಮೋಹನ್ದಾಸ್ ಬಲ್ಕಾಡಿ
ನಮ್ಮನ್ನು ಸಾಕಿ ಬೆಳೆಸಿದವರನ್ನು ಯಾವತ್ತು ಮರೆಯಬಾರದು – ಮಹೇಶ್ ಕೆ ಸವಣೂರು
ಕಾಣಿಯೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಕಡಬ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ಇವುಗಳ ಆಶ್ರಯದಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗಾಗಿ ತಾಲೂಕು ಮಟ್ಟದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವು ಸೆ.10ರಂದು ದೋಳ್ಪಾಡಿ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆಯಿತು.
ಗುತ್ತಿಗೆದಾರರು, ಸಾಮಾಜಿಕ ಕಾರ್ಯಕರ್ತ ಮೋಹನ್ ದಾಸ್ ಬಲ್ಕಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ಸಂಸ್ಕೃತಿ – ಸಂಸ್ಕಾರ ಅವರ ಮನೆಯಲ್ಲಿ ಬೆಳೆಯಬೇಕು. ಅದಕ್ಕೆ ಮನೆಯ ಪೋಷಕರು ವಿಶೇಷ ಮುತುವರ್ಜಿಸಿ ವಹಿಸಿಕೊಂಡು ಪ್ರೇರೇಪಿಸುವ ಕೆಲಸ ನಡೆದಾಗ ಮಾತ್ರ ಅಂತಹ ಮಕ್ಕಳಲ್ಲಿ ಮಾನವೀಯ ಗುಣಗಳು ಬೆಳೆಯಲು ಸಾಧ್ಯವಿದೆ. ನಮ್ಮಲ್ಲಿ ಇರುವ ಅಸಮಾನತೆಯನ್ನು ದೂರ ಮಾಡಿ ದೇಶ, ಪ್ರೇಮದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಡೆಯಬೇಕು. ಆಗ ಮಾತ್ರ ಅಂತಹ ವಿದ್ಯಾರ್ಥಿಗಳು ಯಾವುದೇ ದುಶ್ಟಟಗಳಿಗೆ ಬಲಿಯಾಗದೇ ಉತ್ತಮ ಜೀವನ ನಡೆಸಲು ಕಾರಣವಾಗಬಹುದು ಎಂದರು. ಸಂಪನ್ಮೂಲ ವ್ಯಕಿಗಳಾಗಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಕಡಬ ಇದರ ಅಧ್ಯಕ್ಷರು, ನ್ಯಾಯವಾದಿ ಮಹೇಶ್ ಕೆ ಸವಣೂರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಜೊತೆಗೆ ಅವರಲ್ಲಿ ಮಾನವೀಯ ಸಂಬಂಧಗಳನ್ನು ಬೆಳೆಸುವ ಪ್ರಯತ್ನ ನಡೆಯಬೇಕು. ಆಗ ಮಾತ್ರ ಅಂತಹ ಮಕ್ಕಳು ವೃದ್ಧಾಪ್ಯ ವ್ಯವಸ್ಥೆಯಲ್ಲಿರುವ ತಂದೆ ತಾಯಿಗಳನ್ನು ಪ್ರೀತಿಯಿಂದ ಕಾಣಲು ಸಾಧ್ಯವಿದೆ. ವಿದ್ಯಾರ್ಥಿಗಳು ತಮ್ಮ ವ್ಯಾಸಂಗ ಸಮಯದಲ್ಲಿ ವ್ಯಾಸಂಗಕ್ಕೆ ಹೆಚ್ಚಿನ ಮಹತ್ವನ್ನು ನೀಡುವುದರ ಜೊತೆಗೆ ತಾನು ಜೀವನದಲ್ಲಿ ಸಾಧಿಸಬೇಕಾದ ಗುರಿಯನ್ನು ಇಟ್ಟುಕೊಂಡು ಪ್ರಯತ್ನಿಸಿದಾಗ ಅಂತಹ ವಿದ್ಯಾರ್ಥಿ ಸಾಧನೆಯ ಜೊತೆಗೆ ಉತ್ತಮ ವಿದ್ಯಾರ್ಥಿಯಾಗಿ ಮೂಡಿ ಬರಲು ಸಾಧ್ಯವಿದೆ. ಆದುದರಿಂದ ಅಂತಹ ವಿದ್ಯಾರ್ಥಿಗಳು ತಮ್ಮನ್ನು ಸಾಕಿ ಬೆಳೆಸಿದ ತಂದೆ ತಾಯಿ, ಶಿಕ್ಷಣ ನೀಡಿದ ಶಿಕ್ಷಕರನ್ನು ಯಾವತ್ತು ಮರೆಯುವುದಿಲ್ಲ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕಾಣಿಯೂರು ಇದರ ಉಪಾಧ್ಯಕ್ಷ ಬಾಲಕೃಷ್ಣ ಇಡ್ಯಡ್ಕ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಸಿಗುವ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡಾಗ ಅಂತಹ ವಿದ್ಯಾರ್ಥಿಗಳು ಸಮಾಜದ ಉತ್ತಮ ವ್ಯಕ್ತಿಗಳಾಗಿ ಮೂಡಿಬರಲು ಸಾಧ್ಯವಿದೆ ಎಂದರು. ಮುಖ್ಯ ಅತಿಥಿಗಳಾಗಿ ದೋಳ್ಪಾಡಿ ಪ್ರಗತಿಬಂಧು ಸ್ವಸಹಾಯ ಸಂಘದ ಅಧ್ಯಕ್ಷರಾದ ಸುಬ್ರಹ್ಮಣ್ಯ ರವರು ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ಜೊತೆಗೆ ಅವರಲ್ಲಿರುವ ಪ್ರತಿಭೆಗಳನ್ನು ಹೊರತರುವ ಪ್ರಯತ್ನವನ್ನು ಶಿಕ್ಷಕರು ಹಾಗೂ ಪೋಷಕರು ಮಾಡುವ ಪ್ರಯತ್ನ ಮಾಡಿದಾಗ ಅಂತಹ ವಿದ್ಯಾರ್ಥಿಗಳು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಿದೆ ಎಂದರು. ವೇದಿಕೆಯಲ್ಲಿ ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ವಿಶ್ವನಾಥ ಕೂಡಿಗೆ ಉಪಸ್ಥಿತರಿದ್ದರು. ಸರಕಾರಿ ಪ್ರೌಢಶಾಲೆಯ ಮುಖ್ಯಗುರು ರವಿರಾಜ್ ಸ್ವಾಗತಿಸಿ, ಶಿಕ್ಷಕಿ ವಿನೋದಾ ವಂದಿಸಿದರು. ಸವಣೂರು ವಲಯದ ಮೇಲ್ವಿಚಾರಕರಾದ ವೀಣಾ ಕೆ ಕಾರ್ಯಕ್ರಮ ನಿರೂಪಿಸಿದರು. ಸೇವಾ ಪ್ರತಿನಿಧಿ ತೀರ್ಥಲತಾ ಸಹಕರಿಸಿದರು.