ನೆಲ್ಯಾಡಿ: ಕಡಬ ತಾಲೂಕಿನ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಲ್ಪವೃಕ್ಷ ಸಹಕಾರಿ ಸೌಧದಲ್ಲಿರುವ ಕೇಂದ್ರ ಕಚೇರಿಯಲ್ಲಿ ನೂತನವಾಗಿ ಅಳವಡಿಸಿರುವ ಲಿಫ್ಟ್ ಉದ್ಘಾಟನೆ ಸೆ.11ರಂದು ಬೆಳಿಗ್ಗೆ ನಡೆಯಿತು. ಇದೇ ವೇಳೆ ಉಚಿತ ಆರೋಗ್ಯ ತಪಾಸಣಾ ಶಿಬಿರವೂ ಕಲ್ಪವೃಕ್ಷ ಸಹಕಾರಿ ಸೌಧದ 2ನೇ ಮಹಡಿಯಲ್ಲಿ ನಡೆಯಿತು.

ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕರೂ, ದ.ಕ.ಜಿಲ್ಲಾ ಸಹಕಾರಿ ಯೂನಿಯನ್ನ ಅಧ್ಯಕ್ಷರೂ ಆದ ಶಶಿಕುಮಾರ್ ರೈ ಬಾಲ್ಯೊಟ್ಟು ಲಿಫ್ಟ್ ಉದ್ಘಾಟಿಸಿದರು. ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ದ.ಕ.ಜಿಲ್ಲೆಯ ಗಡಿಭಾಗದಲ್ಲಿರುವ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವೂ ಉತ್ತಮ ರೀತಿಯಲ್ಲಿ ಮುನ್ನಡೆಯುತ್ತಿದೆ. ದ.ಕ.ಜಿಲ್ಲೆಯಲ್ಲಿ ಶೇ.100 ಸಾಲ ವಸೂಲಾತಿ ಮಾಡಿರುವ 13 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಪೈಕಿ ನೆಲ್ಯಾಡಿಯೂ ಒಂದಾಗಿದೆ. ಈ ಸಂಘವು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನಿಂದ ಸತತವಾಗಿ ಉತ್ತಮ ಸಹಕಾರಿ ಸಂಘ ಪ್ರಶಸ್ತಿಯೂ ಪಡೆದುಕೊಳ್ಳುತ್ತಿದೆ. ಕಳೆದ ಆರ್ಥಿಕ ಸಾಲಿನಲ್ಲಿ ಪುತ್ತೂರು ತಾಲೂಕಿನಲ್ಲಿ ಕಾವು ಹಾಗೂ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಶೇ.100 ಸಾಲ ವಸೂಲಾತಿಯ ಸಾಧನೆ ಮಾಡಿವೆ ಎಂದು ಹೇಳಿದರು. ಉಮೇಶ್ ಶೆಟ್ಟಿ ಅವರು 30 ವರ್ಷ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸಂಘವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಪ್ರಸ್ತುತ ಬಾಲಕೃಷ್ಣ ಬಾಣಜಾಲು ನೇತೃತ್ವದ ಯುವ ತಂಡವಿದೆ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಯಂ.ದಯಾಕರ ರೈ ಅವರು ನಿಷ್ಠುರವಾದಿಯಾಗಿ ಎಲ್ಲರ ಪ್ರೀತಿ, ವಿಶ್ವಾಸಗಳಿಸಿ ಸಂಘವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುತ್ತಿದ್ದಾರೆ ಎಂದು ಹೇಳಿದ ಶಶಿಕುಮಾರ್ ಅವರು, ಸಂಘದ ಮಹಾಸಭೆಯ ಸಂದರ್ಭದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸುವ ಮೂಲಕ ಸದಸ್ಯರ ಆರೋಗ್ಯ ರಕ್ಷಣೆಗೆ ಸಂಘ ಒತ್ತು ನೀಡಿದೆ. ಸದಸ್ಯರ ಅನುಕೂಲಕ್ಕಾಗಿ ಸುಮಾರು 10 ಲಕ್ಷ ರೂ.ವೆಚ್ಚದಲ್ಲಿ ಲಿಫ್ಟ್ ಅಳವಡಿಸಿದ್ದು ಇದಕ್ಕೆ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನಿಂದಲೂ ಅನುದಾನ ಕೊಡಿಸುವ ಬಗ್ಗೆ ಬ್ಯಾಂಕ್ನ ಅಧ್ಯಕ್ಷರ ಜೊತೆ ಮಾತುಕತೆ ನಡೆಸುವುದಾಗಿ ಹೇಳಿದರು.
ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿದ ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಡಾ.ಮುರಳೀಧರ ವೈ.ಕೆ.ಅವರು ಮಾತನಾಡಿ, ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸುವ ಮೂಲಕ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವೂ ಲಾಭಾಂಶವನ್ನು ಪರಿಸರದ ಜನತೆಗೆ ಉಪಯೋಗಕ್ಕೆ ಬರುವಂತೆ ಮಾಡಿರುವುದು ಶ್ರೇಷ್ಠ ಕೆಲಸ ಆಗಿದೆ. ಮಂಗಳೂರಿನ ಎ.ಜೆ.ವೈದ್ಯಕೀಯ ಆಸ್ಪತ್ರೆ ಹಾಗೂ ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯ ವೈದ್ಯರ ತಂಡ ಆರೋಗ್ಯ ತಪಾಸಣೆ ನಡೆಸಲಿದೆ. ಗ್ರಾಮಸ್ಥರು ರೋಗ ತಡೆಗಟ್ಟುವ ಮೂಲಕ ಆರೋಗ್ಯ ಸುಧಾರಿಸಿಕೊಳ್ಳಬೇಕೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು ಅವರು ಮಾತನಾಡಿ, ರೈತರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಆರೋಗ್ಯ ಶಿಬಿರ ಆಯೋಜಿಸಿದ್ದೇವೆ. ಅದೇ ರೀತಿ ಕಳೆದ ವರ್ಷದ ನಿರ್ಣಯದಂತೆ ಲಿಫ್ಟ್ ಅಳವಡಿಸಿದ್ದೇವೆ ಎಂದರು.
ಸಂಘದ ಉಪಾಧ್ಯಕ್ಷ ರವಿಚಂದ್ರ ಹೊಸವಕ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಯಂ.ದಯಾಕರ ರೈ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕ ಜಯಾನಂದ ಬಂಟ್ರಿಯಾಲ್ ನಿರೂಪಿಸಿದರು. ನಿರ್ದೇಶಕರಾದ ಜಿನ್ನಪ್ಪ ಗೌಡ, ಸರ್ವೋತ್ತಮ ಗೌಡ, ಜನಾರ್ದನ ಗೌಡ ಮುರಿಯೇಲು, ಸುಧಾಕರ ಬಿ., ಉಷಾ ಅಂಚನ್, ಶೇಷಮ್ಮ, ಹರೀಶ್ ಎ., ಬಾಬು ನಾಯ್ಕ್, ಭಾಸ್ಕರ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಿಬ್ಬಂದಿಗಳು ಸಹಕರಿಸಿದರು.
ಸನ್ಮಾನ:
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕರೂ, ದ.ಕ.ಜಿಲ್ಲಾ ಸಹಕಾರಿ ಯೂನಿಯನ್ನ ಅಧ್ಯಕ್ಷರೂ ಆದ ಶಶಿಕುಮಾರ್ ರೈ ಬಾಲ್ಯೊಟ್ಟು, ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಡಾ.ಮುರಳೀಧರ ವೈ.ಕೆ., ಹಾಗೂ ಲಿಫ್ಟ್ ನಿರ್ವಹಣೆ ಮಾಡಿದ ನವೀನ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಉಚಿತ ಆರೋಗ್ಯ ತಪಾಸಣೆ;
ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಅಶ್ವಿನಿ ಆಸ್ಪತ್ರೆ ನೆಲ್ಯಾಡಿ ಮತ್ತು ಎ.ಜೆ.ವೈದ್ಯಕೀಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಮಂಗಳೂರು ಇವರ ಆಶ್ರಯದಲ್ಲಿ ಎ.ಜೆ.ವೈದ್ಯಕೀಯ ಆಸ್ಪತ್ರೆ ಮತ್ತು ಅಶ್ವಿನಿ ಆಸ್ಪತ್ರೆಯ ತಜ್ಞ ವೈದ್ಯರಿಂದ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1.30ರ ತನಕ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಸಾಮಾನ್ಯ ವೈದ್ಯಕೀಯ ತಪಾಸಣೆ, ಎಲುಬು ಮತ್ತು ಕೀಲು, ಕಣ್ಣು, ಕಿವಿ, ಮೂಗು, ಗಂಟಲು, ಹೃದಯ, ಚರ್ಮಕ್ಕೆ ಸಂಬಂಧಿಸಿದ ರೋಗ, ಮೂತ್ರಕೋಶದ ತಪಾಸಣೆ, ಮಕ್ಕಳ ತಜ್ಞರಿಂದ ತಪಾಸಣೆ ನಡೆಯಿತು.