ಕಾರ್ಮಿಕರನ್ನು ಸರಕಾರ ಶೋಷಣೆಗೆಯ್ಯುತ್ತಿದೆ – ಹಮೀದ್ ಸಾಲ್ಮರ
ಪುತ್ತೂರು: ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ಎಸ್ಡಿಟಿಯು ಮಂಗಳೂರು ಗ್ರಾಮಾಂತರ ನೂತನ ಜಿಲ್ಲಾ ಸಮಿತಿಯ ಪದಗ್ರಹಣ ಎಸ್ಡಿಟಿಯು ರಾಜ್ಯ ಸಮಿತಿ ಸದಸ್ಯ ಅಬ್ದುಲ್ ಹಮೀದ್ ಸಾಲ್ಮರ ರವರ ಅಧ್ಯಕ್ಷತೆಯಲ್ಲಿ ಮನಿಷಾ ಸಭಾಂಗಣದಲ್ಲಿ ಅ.31ರಂದು ನಡೆಯಿತು.
ಕಾರ್ಮಿಕರ ಹಕ್ಕಿಗಾಗಿ ನಿರಂತರ ಹೋರಾಟ
ಅಬ್ದುಲ್ ಹಮೀದ್ ಸಾಲ್ಮರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಮಿಕ ಹೋರಾಟದ ಇತಿಹಾಸ ಮತ್ತು ಆ ಹೋರಾಟದ ಫಲವಾಗಿ ಕಾರ್ಮಿಕರ ಶ್ರೇಯೋಭಿವೃದ್ದಿಗಾಗಿ ಚಾಲ್ತಿಯಲ್ಲಿದ್ದ ಕಾನೂನನ್ನು ಉದಾರೀಕರಣ, ಖಾಸಗಿಕರಣ, ಜಾಗತಿಕರಣದ ಹೆಸರಿನಲ್ಲಿ ಗಾಳಿಗೆ ತೂರಿ ಕಾರ್ಮಿಕರನ್ನು ಸರಕಾರ ಶೋಷಣೆಗೆಯ್ಯುತ್ತಿದೆ. ಈ ನಿಟ್ಟಿನಲ್ಲಿ ಎಸ್ಡಿಟಿಯು ಕಾರ್ಮಿಕರನ್ನು ಸಂಘಟಿಸಿ ಅವರಲ್ಲಿ ಪ್ರಜ್ಞಾವಂತಿಕೆ ಮೂಡಿಸಿ ಹಕ್ಕು ಮತ್ತು ಅವಕಾಶಗಳಿಗಾಗಿ ನಿರಂತರ ಹೋರಾಟ ನಡೆಸುತ್ತಿದೆ ಎಂದರು.
ಎಸ್ಡಿಟಿಯು ರಾಜ್ಯ ಸಹ ಸಂಚಾಲಕ ಖಾದರ್ ಫರಂಗಿಪೇಟೆಯವರು ಜಿಲ್ಲಾ ಸಮಿತಿಯನ್ನು ಘೋಷಣೆ ಮಾಡಿದರು. 2025-28ರ ಅವಧಿಗೆ ನೂತನ ಜಿಲ್ಲಾಧ್ಯಕ್ಷರಾಗಿ ಸೆಲೀಮ್ ಜಿಕೆ ಗುರುವಾಯನಕೆರೆ, ಉಪಾಧ್ಯಕ್ಷರಾಗಿ ಫಿಲಿಫ್ ಹೆನ್ರಿ ಡಿಸೋಜ, ಪ್ರಧಾನ ಕಾರ್ಯದರ್ಶಿಯಾಗಿ ಸಲೀಮ್ ಆಲಾಡಿ, ಕಾರ್ಯದರ್ಶಿಯಾಗಿ ಫಝಲ್ ಉಜಿರೆ ಕೋಶಾಧಿಕಾರಿ ಹನೀಫ್ ನೆಲ್ಯಾಡಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಶ್ರಫ್ ಕಲ್ಲೇರಿ ಇಸಾಕ್ ತಲಪಾಡಿ, ಹಮೀದ್ ಕೂರ್ನಡ್ಕ, ಮುಬಾರಕ್ ಪೊನ್ನೋಡಿ, ಅಝೀಜ್ ಉಪ್ಪಿನಂಗಡಿ ಯವರುಥಿ ಆಯ್ಕೆಯಾದರು.
ಮುಖ್ಯ ಅತಿಥಿಗಳಾಗಿ ಮಂಗಳೂರು ನಗರ ಜಿಲ್ಲಾಧ್ಯಕ್ಷ ರಹಿಮಾನ್ ಬೋಳಿಯಾರ್, ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಬೆಂಗರೆ, ಕರ್ನಾಟಕ ರಾಜ್ಯ ರೈತ ಸಂಘ ಬಂಟ್ವಾಳ ತಾಲೂಕು ಕಾರ್ಯದರ್ಶಿ ಎನ್. ಕೆ ಇದ್ದಿನಬ್ಬ, ಸ್ನೇಹ ಸಂಗಮ ಆಟೋ ಚಾಲಕರ ಮಾಲಕರ ಸಂಘ ಪುತ್ತೂರು ಪ್ರಧಾನ ಕಾರ್ಯದರ್ಶಿ ಹರೀಶ್ ಕುಮಾರ್ ತೆಂಕಿಲ, ಭಾರತ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷರಾದ ಮೊಹಮ್ಮದ್ ಅಶ್ರಫ್ ಬನ್ನೂರ್, ನೇತ್ರಾವತಿ ಆಟೋ ಚಾಲಕ ಮಾಲಕರ ಸಂಘದ ಉಪ್ಪಿನಂಗಡಿ ಅಧ್ಯಕ್ಷ ಫಾರೂಕು ಝಿಂದಗಿ, ಸೋಶಿಯಲ್ ಡೆಮಾಕ್ರಟಿಕ್ ಆಟೋ ಚಾಲಕರ ಯೂನಿಯನ್ ಪುತ್ತೂರು ಏರಿಯಾ ಅಧ್ಯಕ್ಷ ಅಸಿಫ್ ಮುಕ್ವೆ ಉಪಸ್ಥಿತರಿದ್ದರು. ಸಿದ್ದೀಕ್ ಬೀಟಿಗೆ ಕಾರ್ಯಕ್ರಮ ನಿರೂಪಿಸಿ, ಸೆಲೀಮ್ ಆಲಾಡಿ ವಂದಿಸಿದರು.
