ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ

0

552.59 ಕೋಟಿ ರೂ.ವ್ಯವಹಾರ | 1.09 ಕೋಟಿ ರೂ.ಲಾಭ, ಶೇ.10 ಡಿವಿಡೆಂಡ್ ಘೋಷಣೆ

ನೆಲ್ಯಾಡಿ: ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಸೆ.11ರಂದು ಸಂಘದ ಪ್ರಧಾನ ಕಚೇರಿಯ ಕಲ್ಪವೃಕ್ಷ ಸಹಕಾರಿ ಸೌಧದ ಕಾಮಧೇನು ಸಭಾಂಗಣದಲ್ಲಿ ನಡೆಯಿತು.


ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು ಮಾತನಾಡಿ, ಕಳೆದ 65 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಸಂಘವು ವರ್ಷದಿಂದ ವರ್ಷಕ್ಕೆ ಪ್ರಗತಿ ಕಾಣುತ್ತಿದೆ. ಯಾವುದೇ ಲಾಭ ನಿರೀಕ್ಷಿಸದೆ ಪಡಿತರ ವಿತರಣೆ ಮಾಡಲಾಗುತ್ತಿದೆ. ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ವಿತರಣೆ ಮಾಡಲಾಗುತ್ತಿದೆ. ಎರಡು ಸಭಾಭವನ ಇದ್ದು ಸದಸ್ಯರಿಗೆ ಮಿತದರದಲ್ಲಿ ಬಾಡಿಗೆಗೆ ನೀಡಲಾಗುತ್ತಿದೆ. ಸದಸ್ಯರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ನೆಲ್ಯಾಡಿ ಕೇಂದ್ರ ಕಚೇರಿ, ಗೋಳಿತ್ತೊಟ್ಟು ಹಾಗೂ ಶಿರಾಡಿ ಶಾಖೆ ಸ್ವಂತ ಕಟ್ಟಡ ಹೊಂದಿದೆ. ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯ ಪ್ರಯೋಜನ ಸದಸ್ಯರು ಪಡೆದುಕೊಳ್ಳಬೇಕು. ಸಂಘದ ಉತ್ತಮ ವ್ಯವಹಾರ ಗಮನಿಸಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸತತ 5 ವರ್ಷಗಳಿಂದ ವಿಶೇಷ ಪ್ರೋತ್ಸಾಹ ಪ್ರಶಸ್ತಿ ನೀಡಿ ಗೌರವಿಸಿದೆ. 2024-25ನೇ ಸಾಲಿನಲ್ಲಿ ಸಂಘವು 33.54 ಕೋಟಿ ರೂ.ಠೇವಣಿ ಸಂಗ್ರಹಿಸಿದೆ. ಶೇ.100 ಸಾಲ ವಸೂಲಾತಿ ಸಾಧನೆ ಮಾಡಿದೆ. ವರದಿ ಸಾಲಿನಲ್ಲಿ ಸಂಘವು 552,59,63,651 ರೂ.ವ್ಯವಹಾರ ಮಾಡಿದ್ದು 1,90,82,460 ರೂ. ನಿವ್ವಳ ಲಾಭಗಳಿಸಿದೆ ಎಂದರು.

ಶೇ.10 ಡಿವಿಡೆಂಡ್;
ಲಾಭಾಂಶವನ್ನು ನಿಯಮಾನುಸಾರ ವಿಂಗಡಣೆ ಮಾಡಲಾಗಿದ್ದು ಆಡಳಿತ ಮಂಡಳಿ ಸಭೆಯಲ್ಲಿ ಶೇ.9 ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ಅಧ್ಯಕ್ಷ ಬಾಲಕೃಷ್ಣ ಬಾಣಜಾಲು ಹೇಳಿದರು. ಸಂಘದ ಮಾಜಿ ನಿರ್ದೇಶಕ ದಿನೇಶ್, ಸದಸ್ಯರಾದ ಪ್ರಸಾದ್ ಕೆ.ಪಿ., ಕೊರಗಪ್ಪ ಗೌಡ ಕಲ್ಲಡ್ಕ, ಗಿರೀಶ್‌ಕುಮಾರ್ ಬದನೆ, ದಿವಾಕರ ಗೌಡ ಶಿರಾಡಿ, ಸೀತಾರಾಮ ಗೌಡ ಕಾನಮನೆ ಸಹಿತ ಹಲವು ಸದಸ್ಯರು ಮಾತನಾಡಿ, ವಿಪರೀತ ಮಳೆ, ಅಡಿಕೆಗೆ ಕೊಳೆರೋಗದಿಂದ ರೈತರು ಸಂಕಷ್ಟದಲ್ಲಿ ಇದ್ದಾರೆ. ಆದ್ದರಿಂದ ಈ ವರ್ಷ ಡಿವಿಡೆಂಡ್ ಹೆಚ್ಚಳ ಮಾಡಬೇಕೆಂದು ಆಗ್ರಹಿಸಿದರು. ಸಂಘದ ಕಾನೂನು ಸಲಹೆಗಾರ, ನ್ಯಾಯವಾದಿ ಶಿವಪ್ರಸಾದ್ ಅವರು ಮಾತನಾಡಿ, ಈ ವರ್ಷ ಸಂಘಕ್ಕೆ 1.90 ಕೋಟಿ ರೂ.ನಿವ್ವಳ ಲಾಭಬಂದಿದ್ದು, ಶೇ.9ರಷ್ಟು ಡಿವಿಡೆಂಡ್ ನೀಡಲು ತೀರ್ಮಾನಿಸಿರುವ ಆಡಳಿತ ಮಂಡಳಿ ನಿರ್ಣಯ ಶೇ.100ರಷ್ಟು ಸರಿಯಾಗಿದೆ. ಷೇರು ಬಂಡವಾಳ ಕಡಿಮೆ ಮಾಡಿದಲ್ಲಿ ಡಿವಿಡೆಂಡ್ ಹೆಚ್ಚು ಸಿಗಲಿದೆ. ಆದರೆ ಷೇರು ಬಂಡವಾಳ ಸಂಘಕ್ಕೆ ಭದ್ರತೆ ಇದ್ದಂತೆ. ಅದನ್ನು ಕಡಿಮೆ ಮಾಡುವಂತೆಯೂ ಇಲ್ಲ. ಸರಕಾರದ ನಿಯಮ ಪ್ರಕಾರ ಲಾಭಾಂಶ ವಿಂಗಡನೆ ಮಾಡಿರುವುದು ಸರಿಯಾಗಿದೆ ಎಂದರು. ಮಾಜಿ ನಿರ್ದೇಶಕ ದಿನೇಶ್ ಮಾತನಾಡಿ, ಇತರೇ ನಿಧಿಗಳಿಗೆ ಹಂಚಿಕೆಯಾಗಿರುವ ಮೊತ್ತವನ್ನು ಶೇಕಡಾವಾರು ಕಡಿಮೆ ಮಾಡಲು ಸಾಧ್ಯವಿದೆ. ಇವೆಲ್ಲವನ್ನು ಪರಿಗಣಿಸಿ ಕನಿಷ್ಠ ಶೇ.12 ಡಿವಿಡೆಂಡ್ ಘೋಷಣೆ ಮಾಡಬೇಕೆಂದು ಹೇಳಿದರು. ಈ ಬಗ್ಗೆ ಚರ್ಚೆ ನಡೆಯಿತು. ಅಧ್ಯಕ್ಷ ಬಾಲಕೃಷ್ಣ ಬಾಣಜಾಲು ಮಾತನಾಡಿ, 1ಶೇ. ಡಿವಿಡೆಂಡ್ ಹೆಚ್ಚಳ ಮಾಡಬೇಕಾದರೂ 9 ಲಕ್ಷ ರೂ.ಬೇಕಾಗುತ್ತದೆ. ಸದಸ್ಯರ ಬೇಡಿಕೆಯಂತೆ ಇತರೇ ನಿಧಿಗಳಿಗೆ ಹಂಚಿಕೆಯಾಗಿರುವ ಮೊತ್ತ ಕಡಿಮೆ ಮಾಡಿ ಸದಸ್ಯರಿಗೆ ಶೇ.10 ಡಿವಿಡೆಂಡ್ ನೀಡುವುದಾಗಿ ಘೋಷಿಸಿದರು.

ರೈತ ಕಲ್ಯಾಣ ನಿಧಿ ಆರಂಭಿಸಿ;
ಸಂಕಷ್ಟದಲ್ಲಿರುವ ರೈತರ ನೆರವಿಗಾಗಿ ರೈತ ಕಲ್ಯಾಣ ನಿಧಿ ಆರಂಭಿಸುವಂತೆ ಸಂಘದ ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿಯೂ ಆದ ಸದಸ್ಯ ಆನಂದ ಹೆಗ್ಡೆ ಒತ್ತಾಯಿಸಿದರು. ಸದಸ್ಯರು ಮೃತಪಟ್ಟಲ್ಲಿ ಅವರಿಗೆ ಸಂಘದಿಂದ ನೆರವು ನೀಡಬೇಕೆಂದು ಜನಾರ್ದನ ಬಾಣಜಾಲು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು ಅವರು, ರೈತರಿಂದಲೇ ಬ್ಯಾಂಕ್ ಸ್ಥಾಪನೆಯಾಗಿದ್ದು ಪ್ರಗತಿಯಲ್ಲಿ ಸಾಗುತ್ತಿದೆ. ಸದಸ್ಯರ ಬೇಡಿಕೆಯಂತೆ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ರೈತ ಕಲ್ಯಾಣ ನಿಧಿ, ಸಾಂತ್ವನ ಯೋಜನೆ ಆರಂಭಿಸುವುದಾಗಿ ಹೇಳಿದರು. ಇತರೇ ಸೊಸೈಟಿಗಳಲ್ಲಿ ಇರುವಂತೆ ನಮ್ಮ ಸಂಘದ ವತಿಯಿಂದಲೂ ಹೆಣ ಸುಡುವ ಬಾಕ್ಸ್‌ನ ವ್ಯವಸ್ಥೆ ಮಾಡಬೇಕೆಂದು ಸುರೇಂದ್ರನ್ ಶಿರಾಡಿ ಒತ್ತಾಯಿಸಿದರು.

ಸಾಲದ ಮೊತ್ತ ಹೆಚ್ಚಳಕ್ಕೆ ಮನವಿ;
ಸರಕಾರ ಶೂನ್ಯ ಬಡ್ಡಿ ದರದ ಸಾಲದ ಮೊತ್ತವನ್ನು ರೂ.5 ಲಕ್ಷಕ್ಕೆ ಹಾಗೂ ಶೇ.3ರ ಬಡ್ಡಿಯ ಸಾಲದ ಮೊತ್ತವನ್ನು ರೂ.15 ಲಕ್ಷಕ್ಕೆ ಬಜೆಟ್‌ನಲ್ಲಿ ಏರಿಕೆ ಮಾಡಿದೆ. ಇದು ಕಾರ್ಯಗತ ಆಗಿದೆಯಾ ಎಂದು ಸದಸ್ಯ ದಿವಾಕರ ಗೌಡ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ ಕೆ.ಯಂ.ದಯಾಕರ ರೈ ಅವರು, ಆದೇಶ ಬಂದಿದೆ. ಆದರೆ ಅನುದಾನ ಬಂದಿಲ್ಲ. ಸರಕಾರದಿಂದ ಬಡ್ಡಿ ಸಹಾಯಧನವೂ ಬರಲು ಬಾಕಿ ಇದೆ ಎಂದರು. ಅಧ್ಯಕ್ಷ ಬಾಲಕೃಷ್ಣ ಬಾಣಜಾಲು ಮಾತನಾಡಿ, ಈ ವಿಚಾರವನ್ನು ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷರ ಗಮನಕ್ಕೂ ತಂದಿದ್ದೇವೆ. ಕಾರ್ಯರೂಪಕ್ಕೆ ಬಂದಿಲ್ಲ ಎಂದರು. ಸಂಘದ ಕಾನೂನು ಸಲಹೆಗಾರ ಶಿವಪ್ರಸಾದ್ ಅವರು ಮಾತನಾಡಿ, ರಾಜ್ಯ ಸರಕಾರ 2023-24ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದಂತೆ ಶೂನ್ಯ ಬಡ್ಡಿದರ ಹಾಗೂ ಶೇ.3ರ ಬಡ್ಡಿದರ ಸಾಲದ ಮೊತ್ತ ಹೆಚ್ಚಳಕ್ಕೆ ಸಂಬಂಧಿಸಿದ ಅನುದಾನ ಬಿಡುಗಡೆಗೆ ಸರಕಾರಕ್ಕೆ ಮನವಿ ಮಾಡುವಂತೆ ಹೇಳಿದರು. ಈ ಬಗ್ಗೆ ನಿರ್ಣಯಿಸಲಾಯಿತು.

ಸಾಲದ ಮಿತಿ ಹೆಚ್ಚಳಕ್ಕೆ ಆಗ್ರಹ;
ಶೇ.3ರ ಬಡ್ಡಿದರದಲ್ಲಿ ವಿತರಿಸುವ ಸಾಲದ ಮಿತಿಯನ್ನು ರೂ.10 ಲಕ್ಷದಿಂದ ರೂ.15 ಲಕ್ಷಕ್ಕೆ ಏರಿಕೆ ಮಾಡಬೇಕೆಂದು ಸದಸ್ಯ ಗಂಗಾಧರ ಶೆಟ್ಟಿ ಹೊಸಮನೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು ಅವರು, ಒಬ್ಬನಿಗೆ 5 ಎಕ್ರೆಗಿಂತ ಹೆಚ್ಚು ಜಾಗ ಇರಬಾರದು ಎಂಬ ನಿಯಮವಿದೆ. 10 ಎಕ್ರೆ ಜಾಗ ಇದ್ದಲ್ಲಿ ಇಬ್ಬರ ಹೆಸರಿಗೆ ಮಾಡಿಕೊಂಡು ಬಂದಲ್ಲಿ ಇಬ್ಬರಿಗೂ ತಲಾ 10 ಲಕ್ಷ ರೂ.ಸಾಲ ವಿತರಣೆಗೆ ಅವಕಾಶವಿದೆ ಎಂದರು. ಪಿಎಲ್‌ಡಿ ಬ್ಯಾಂಕ್‌ಗೆ ನಬಾರ್ಡ್‌ನಿಂದ ನೇರ ಅನುದಾನ ಬರುತ್ತಿರುವುದರಿಂದ ಪಿಎಲ್‌ಡಿ ಬ್ಯಾಂಕ್‌ನಲ್ಲಿ ಶೇ.೩ರ ಬಡ್ಡಿದರದಲ್ಲಿ 15 ಲಕ್ಷ ರೂ.ತನಕ ಸಾಲ ನೀಡಲಾಗುತ್ತಿದೆ ಎಂದು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಗೌಡ ಹೇಳಿದರು.

ಎನ್‌ಒಸಿ ವಿಚಾರ-ಚರ್ಚೆ:
ಸಹಕಾರ ಸಂಘದಿಂದ ಸಾಲ ಪಡೆಯುವ ಸಂದರ್ಭದಲ್ಲಿ ಕೃಷಿಕರು ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಎನ್‌ಒಸಿ ನೀಡಬೇಕಾಗುತ್ತದೆ. ರಾಷ್ಟ್ರೀಕೃತ ಬ್ಯಾಂಕ್‌ಗಳು ಉಚಿತವಾಗಿ ಎನ್‌ಒಸಿ ನೀಡಬೇಕೆಂಬ ನಿರ್ದೇಶನವಿದ್ದರೂ ಶುಲ್ಕ ವಸೂಲಾತಿ ಮಾಡುತ್ತಿವೆ. ಈ ಬಗ್ಗೆ ಕಳೆದ ಮಹಾಸಭೆಯಲ್ಲೂ ಪ್ರಸ್ತಾಪಿಸಿದ್ದೇನೆ. ಏನು ಕ್ರಮವಾಗಿದೆ ಎಂದು ನಿವೃತ್ತ ಬ್ಯಾಂಕ್ ಅಧಿಕಾರಿ ರಾಮಚಂದ್ರ ಪ್ರದಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ ದಯಾಕರ ಅವರು, ಬ್ಯಾಂಕ್‌ಗಳಿಗೆ ಪತ್ರ ಬರೆಯಲಾಗಿದೆ ಎಂದರು. ಈ ಬಗ್ಗೆ ಚರ್ಚೆ ನಡೆದು ಲೀಡ್ ಬ್ಯಾಂಕ್‌ಗೆ ಪತ್ರ ಬರೆಯಲು ನಿರ್ಣಯಿಸಲಾಯಿತು.

ಗೋಳಿತ್ತೊಟ್ಟು ಶಾಖೆಗೆ ಹೆಚ್ಚಿನ ಸೌಕರ್ಯ ಕೊಡಿ:
ಗೋಳಿತ್ತೊಟ್ಟು ಶಾಖೆಗೆ ಸುಸಜ್ಜಿತ ಕಟ್ಟವಾಗಿದ್ದರೂ ಅಲ್ಲಿ ಸರಿಯಾದ ವ್ಯವಸ್ಥೆ ಇಲ್ಲ ಎಂದು ಸದಸ್ಯ ಕೊರಗಪ್ಪ ಗೌಡ ಕಲ್ಲಡ್ಕ, ನಾಸೀರ್ ಹೊಸಮನೆ ಹೇಳಿದರು. ಶತಮಾನೋತ್ಸವ ಆಚರಿಸುತ್ತಿರುವ ಗೋಳಿತ್ತೊಟ್ಟು ಶಾಲೆಗೆ ಹೆಚ್ಚಿನ ಪ್ರಮಾಣದಲ್ಲಿ ಸಹಾಯಧನ ನೀಡುವಂತೆ ನಾಸೀರ್ ಹೊಸಮನೆ ಹೇಳಿದರು. ಗೋಳಿತ್ತೊಟ್ಟು ಶಾಖೆಯ ಬಳಿಕ ಪಾರ್ಕಿಂಗ್‌ಗೆ ಸರಿಯಾದ ವ್ಯವಸ್ಥೆ ಇಲ್ಲ ಎಂದು ಕೆ.ಪಿ.ಪ್ರಸಾದ್ ಹೇಳಿದರು. ಅಧ್ಯಕ್ಷ ಬಾಲಕೃಷ್ಣ ಬಾಣಜಾಲು ಮಾತನಾಡಿ, ಗೋಳಿತ್ತೊಟ್ಟು ಶಾಖೆ ಕಚೇರಿಯನ್ನು ಈಗಾಗಲೇ ಆಧುನೀಕರಣ ಮಾಡಲಾಗಿದೆ. ಸದಸ್ಯರ ಬೇಡಿಕೆ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಶತಮಾನೋತ್ಸವ ಆಚರಿಸುತ್ತಿರುವ ಆಲಂತಾಯ, ಗೋಳಿತ್ತೊಟ್ಟು ಶಾಲೆಯಿಂದ ಸಹಾಯಧನ ಕೋರಿ ಮನವಿ ಬಂದಿದೆ. ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸುತ್ತೇವೆ ಎಂದು ಹೇಳಿದರು.

ಗೋಳಿತ್ತೊಟ್ಟಿನಲ್ಲಿ ರಾಸಾಯನಿಕ ಗೊಬ್ಬರ ವಿತರಿಸಿ;
ಗೋಳಿತ್ತೊಟ್ಟು ಶಾಖೆಯಲ್ಲಿ ರಸಾಯನಿಕ ಗೊಬ್ಬರ ವಿತರಿಸಬೇಕೆಂದು ಸದಸ್ಯ ಸಂಜೀವ ಪೂಜಾರಿ ಬಟ್ಲಡ್ಕ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು ಅವರು, ಈ ಬಗ್ಗೆ ಚಿಂತನೆ ನಡೆದಿದೆ. ಸಾಧಕ ಬಾಧಕಗಳ ಬಗ್ಗೆ ಆಡಳಿತ ಮಂಡಳಿಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದರು. ಈ ವೇಳೆ ಮಾತನಾಡಿದ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಗೌಡ ಅವರು, ಗೋಳಿತ್ತೊಟ್ಟಿನಲ್ಲಿ ರಾಸಾಯನಿಕ ಗೊಬ್ಬರ ಮಾರಾಟಕ್ಕೆ ಸಂಬಂಧಿಸಿದಂತೆ ಪಿಎಲ್‌ಡಿ ಬ್ಯಾಂಕ್‌ನಿಂದ ಪರಿಶೀಲನೆ ನಡೆಸಿದ್ದೇವೆ. ಸಂಘದಿಂದ ಮಾಡುವುದಾದರೇ ಪಿಎಲ್‌ಡಿ ಬ್ಯಾಂಕ್‌ನಿಂದ ಮಾಡುವುದಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಬಾಲಕೃಷ್ಣ ಅವರು, ಆಡಳಿತ ಮಂಡಳಿಯಲ್ಲಿ ಚರ್ಚಿಸಿ ನಿರ್ಧಾರ ತಿಳಿಸುತ್ತೇವೆ. ಸಂಘದ ಕೇಂದ್ರ ಕಚೇರಿಯಲ್ಲಿ ರಾಸಾಯನಿಕ ಗೊಬ್ಬರ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇದೆ. ರೈತರು ಸಂಘದಿಂದಲೇ ರಾಸಾಯನಿಕ ಗೊಬ್ಬರ ಖರೀದಿಸಬೇಕು. ಇದರಿಂದ ಬರುವ ಲಾಭ ಸದಸ್ಯರಿಗೆ ಹಂಚಿಕೆಯಾಗಲಿದೆ ಎಂದರು. ಸಂಘದ ಸದಸ್ಯರಿಗೆ ಒಂದೆರಡು ತಿಂಗಳ ಮಟ್ಟಿಗೆ ಸಾಲದ ರೂಪದಲ್ಲಿ ಗೊಬ್ಬರ ನೀಡಬೇಕೆಂದು ನಾಸಿರ್ ಹೊಸಮನೆ ಒತ್ತಾಯಿಸಿದರು. ಸಾಲದ ರೂಪದಲ್ಲಿ ಗೊಬ್ಬರ ವಿತರಣೆ ಸಮಂಜಸವಲ್ಲ ಎಂದು ಸೀತಾರಾಮ ಗೌಡ ಕಾನಮನೆ ಹೇಳಿದರು. ಈ ಬಗ್ಗೆಯೂ ಚರ್ಚೆ ನಡೆಯಿತು. ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಮಾಡುತ್ತೇವೆ ಎಂದು ಬಾಲಕೃಷ್ಣ ಬಾಣಜಾಲು ಹೇಳಿದರು.

ಬೆಳೆವಿಮೆ ಪರಿಹಾರ ಮೊತ್ತದ ಅಂಕಿ ಅಂಶ ಕೊಡಲಿ;
ಬೆಳೆವಿಮೆ ಕುರಿತಂತೆ ನ್ಯಾಯವಾದಿ ಶಿವಪ್ರಸಾದ್ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಯಂ.ದಯಾಕರ ರೈ ಅವರು, 2156 ರೈತರು ಬೆಳೆ ವಿಮೆ ಮಾಡಿದ್ದು 1.16 ಕೋಟಿ ರೂ.ಕಂತು ಪಾವತಿಯಾಗಿದೆ ಎಂದರು. ಸರಕಾರದಿಂದ ರೈತರಿಗೆ ಎಷ್ಟು ಬೆಳೆವಿಮೆ ಪರಿಹಾರ ಮೊತ್ತ ಮಂಜೂರು ಆಗಿದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಶಿವಪ್ರಸಾದ್ ಅವರು ಕೋರಿದರು. ಈ ಬಗ್ಗೆ ಸಂಘಕ್ಕೆ ಮಾಹಿತಿ ಸಿಗುವುದಿಲ್ಲ ಎಂದು ಸಿಇಒ ದಯಾಕರ ರೈ ಹೇಳಿದರು. ಮತ್ತೆ ಮಾತನಾಡಿದ ಶಿವಪ್ರಸಾದ್ ಅವರು, ಬೆಳೆ ವಿಮೆ ಕಂತು ಪಾವತಿಗೆ ಸಹಕಾರ ಸಂಘ ಬೇಕು. ಆದ್ದರಿಂದ ರೈತರಿಗೆ ಸಂದಾಯವಾಗಿರುವ ಬೆಳೆವಿಮಾ ಪರಿಹಾರ ಮೊತ್ತದ ಅಂಕಿ ಅಂಶಗಳನ್ನೂ ಸಂಘಕ್ಕೆ ನೀಡುವಂತೆ ಸರಕಾರ ಅಥವಾ ಕಂಪನಿಯವರಿಗೆ ಕೇಳಿಕೊಳ್ಳಬೇಕೆಂದು ಆಗ್ರಹಿಸಿದರು.

ಕೇಂದ್ರ ಕಚೇರಿಯಲ್ಲಿ ಸೂಪರ್ ಮಾರ್ಕೆಟ್ ಮಾಡುವಂತೆ ಸುರೇಂದ್ರನ್ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಈ ಬಗ್ಗೆ ಚರ್ಚೆ ಮಾಡಿದ್ದೇವೆ. ಸೂಪರ್ ಮಾರ್ಕೆಟ್ ಮಾಡುವುದು ಸಂಘಕ್ಕೆ ಕಷ್ಟ ಎಂದರು. ಬಲ್ಯ-ರಾಮನಗರದಲ್ಲಿ ಸಂಚಾರಿ ಪಡಿತರ ವಿತರಣೆ ವ್ಯವಸ್ಥೆ ಮಾಡುವಂತೆ ಸೀತಾರಾಮ ಗೌಡ ಒತ್ತಾಯಿಸಿದರು. ಇಚ್ಲಂಪಾಡಿಯಲ್ಲಿ ಸಂಘದ ಶಾಖಾ ಕಚೇರಿ ಆರಂಭಿಸುವಂತೆ ಭಾಸ್ಕರ ಗೌಡ ಒತ್ತಾಯಿಸಿದರು. ಸುರೇಶ್ ರೈ ಅವರು ಮಣ್ಣು ಪರೀಕ್ಷೆಯ ಬಗ್ಗೆ ಮಾಹಿತಿ ನೀಡಿದರು.

ಉಪಾಧ್ಯಕ್ಷ ರವಿಚಂದ್ರ ಹೊಸವಕ್ಲು, ನಿರ್ದೇಶಕರಾದ ಜಯಾನಂದ ಬಂಟ್ರಿಯಾಲ್, ಜಿನ್ನಪ್ಪ ಗೌಡ, ಸರ್ವೋತ್ತಮ ಗೌಡ, ಜನಾರ್ದನ ಗೌಡ ಬರೆಮೇಲು, ಸುಧಾಕರ ಬಿ., ಉಷಾ ಅಂಚನ್, ಶೇಷಮ್ಮ, ಹರೀಶ್ ಎ., ಬಾಬು ನಾಯ್ಕ್, ಭಾಸ್ಕರ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಯಂ.ದಯಾಕರ ರೈ ಅವರು ವರದಿ ವಾಚಿಸಿದರು. ಬಾಲಕೃಷ್ಣ ಬಾಣಜಾಲು ಸ್ವಾಗತಿಸಿ, ರವಿಚಂದ್ರ ಹೊಸವಕ್ಲು ವಂದಿಸಿದರು. ನಿರ್ದೇಶಕ ಜಯಾನಂದ ಬಂಟ್ರಿಯಾಲ್ ನಿರೂಪಿಸಿದರು. ಸಿಬ್ಬಂದಿ ಧನುಷ್ ಪ್ರಾರ್ಥಿಸಿದರು. ಶಾಖಾ ವ್ಯವಸ್ಥಾಪಕರಾದ ಪಿ.ರತ್ನಾಕರ, ರಮೇಶ ನಾಯ್ಕ್, ಯಂ.ಟಿ.ಮಹೇಶ, ಸಿಬ್ಬಂದಿಗಳಾದ ಅನಿಶ್ ಕೆ.ಜೆ., ಸಂದೀಪ್‌ಕುಮಾರ್, ಅಶೋಕ ಎಸ್., ಮುಕುಂದ ಪ್ರಸಾದ್ ಎಸ್., ರೋಶನ್‌ಕುಮಾರ್ ಬಿ.ಜೆ., ವಿಶ್ವನಾಥ ಕೆ., ಧನುಷ್ ಜೆ., ಪ್ರಜ್ಞಾ ಬಿ., ವನಿತ ಡಿ., ಪಿ.ನಾಗೇಶ, ತಾರಾನಾಥ, ಪ್ರಮೋದ್, ವಸಂತ ಕೆ., ಪಿಗ್ಮಿ ಸಂಗ್ರಾಹಕ ಕೆ.ರಘುನಾಥ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ತಲಾ 2 ಕಾಫಿ ಗಿಡ ವಿತರಣೆ:
ಮಹಾಸಭೆಗೆ ಆಗಮಿಸಿದ ಸದಸ್ಯರಿಗೆ ತಲಾ 2 ಕಾಫಿ ಗಿಡ ವಿತರಣೆ ಮಾಡಲಾಯಿತು. ಈ ಕುರಿತು ಮಾತನಾಡಿದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು ಅವರು, ಅಡಿಕೆಗೆ ಪರ್ಯಾಯವಾಗಿ ಕಾಫಿ ಬೆಳೆಯಬೇಕೆಂಬ ಇರಾದೆಯೊಂದಿಗೆ ಸದಸ್ಯರಿಗೆ ಮಹಾಸಭೆಯ ಸಂದರ್ಭದಲ್ಲಿ ಸಂಘದ ವತಿಯಿಂದ ತಲಾ 2 ಕಾಫಿ ಗಿಡ ನೀಡಿದ್ದೇವೆ. ಸದಸ್ಯರಿಗೆ ಹೆಚ್ಚಿನ ಗಿಡ ಬೇಕಾದಲ್ಲಿ ತರಿಸಿಕೊಡುತ್ತೇವೆ ಎಂದರು. ಕಾನೂನು ಸಲಹೆಗಾರ ಶಿವಪ್ರಸಾದ್ ಅವರು ಮಾತನಾಡಿ, ಎಲೆಚುಕ್ಕಿ ರೋಗದಿಂದ ಅಡಿಕೆಮರ ನಾಶವಾಗುತ್ತಿದೆ. ಅಡಿಕೆಗೆ ಪರ್ಯಾಯವಾಗಿ ಕಾಫಿ, ಏಲಕ್ಕಿ ಬೆಳೆಯಲು ಕರಾವಳಿ ಭಾಗ ಸೂಕ್ತವಾಗಿದೆ ಎಂದು ಕಾಫಿ ಬೋರ್ಡ್ ಶಿಫಾರಸು ಮಾಡಿದೆ. ಈ ನಿಟ್ಟಿನಲ್ಲಿ ಸದಸ್ಯರಿಗೆ ಕಾಫಿ ಗಿಡ ವಿತರಿಸಲು ಆಡಳಿತ ಮಂಡಳಿ ಕೈಗೊಂಡಿರುವ ನಿರ್ಧಾರ ಸೂಕ್ತವಾಗಿದೆ. ಈ ಬೆಳೆಗಳ ಬಗ್ಗೆ ರೈತರಿಗೆ ಸೂಕ್ತ ಮಾಹಿತಿ ನೀಡಬೇಕೆಂದು ಹೇಳಿದರು. ಈ ಬಗ್ಗೆ ಸಂಘದ ವತಿಯಿಂದ ಕಾರ್ಯಾಗಾರ ನಡೆಸುವಂತೆ ಗಿರೀಶ್ ಬದನೆ ಸಲಹೆ ನೀಡಿದರು.

ವಿದ್ಯಾರ್ಥಿಗಳಿಗೆ ಗೌರವಾರ್ಪಣೆ;
ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಗೌರವಾರ್ಪಣೆ ಮಾಡಲಾಯಿತು. ನಿರ್ದೇಶಕ ಜನಾರ್ದನ ಗೌಡ ಬರೆಮೇಲು ವಿದ್ಯಾರ್ಥಿಗಳ ಹೆಸರು ವಾಚಿಸಿದರು.

LEAVE A REPLY

Please enter your comment!
Please enter your name here