ಮುರದಲ್ಲಿ ನಾಲ್ಕು ತಿಂಗಳ ಹಿಂದೆ ನಡೆದ ಅಪಘಾತ : ಗಾಯಾಳು ಮಹಿಳೆ ಮೃತಪಟ್ಟ ಒಂದು ತಿಂಗಳೊಳಗೆ ತಂದೆಯೂ ಮೃತ್ಯು !

0

ಪುತ್ತೂರು: 4 ತಿಂಗಳ ಹಿಂದೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಮುರ ಸಮೀಪ ಖಾಸಗಿ ಬಸ್ ಮತ್ತು ಕಾರೊಂದರ ನಡುವೆ ಅಪಘಾತ ಸಂಭವಿಸಿ ಗಂಭೀರ ಗಾಯಗೊಂಡು ಸಾವು-ಬದುಕಿನ ನಡುವೆ ಮಂಗಳೂರು ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದ ಮಹಿಳೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಒಂದು ತಿಂಗಳೊಳಗೆ ಗಾಯಾಳು ತಂದೆಯೂ ಮೃತಪಟ್ಟ ಘಟನೆ ನ.3ರಂದು ನಡೆದಿದೆ.


ಮೇ 27ರಂದು ಖಾಸಗಿ ಬಸ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿತ್ತು. ಅದರಲ್ಲಿ ಗಂಭೀರ ಗಾಯಗೊಂಡ ಅಂಡೆಪುಣಿ ಈಶ್ವರ ಭಟ್ ಅವರ ಮಗಳು ಅಪೂರ್ವ (35ವ.) ಅ.7ರಂದು ಮೃತಪಟ್ಟಿದ್ದರು. ಇದೀಗ ಒಂದು ತಿಂಗಳೊಳಗೆ ನ.3ರಂದು ಗಾಯಾಳು ಅವರ ತಂದೆ ಈಶ್ವರ ಭಟ್ (75ವ) ಅವರು ಕೂಡಾ ಮೃತಪಟ್ಟಿದ್ದಾರೆ. ಈಶ್ವರ ಭಟ್ ಮತ್ತು ಮಗಳು ಅಪೂರ್ವ ಅವರು ಮಾಣಿ-ಮೈಸೂರು ಹೆದ್ದಾರಿಯಲ್ಲಿ ಪುತ್ತೂರು ಪೇಟೆಯಿಂದ ವ್ಯಾಗನರ್ ಕಾರಿನಲ್ಲಿ ಮನೆಗೆ ತೆರಳುತ್ತಿದ್ದಾಗ ಪುತ್ತೂರಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಮರ್ಸಿ ಖಾಸಗಿ ಬಸ್ ಹಾಗೂ ಈಶ್ವರ ಭಟ್ ಚಲಾಯಿಸುತ್ತಿದ್ದ ವ್ಯಾಗನರ್ ಕಾರಿನ ನಡುವೆ ಅಪಘಾತ ಸಂಭವಿಸಿ ಈಶ್ವರ ಭಟ್, ಅಪೂರ್ವ ಅವರು ಗಂಭೀರ ಗಾಯಗೊಂಡಿದ್ದರು.ಅಪೂರ್ವ ಅವರ 3 ವರ್ಷ ಪ್ರಾಯದ ಮಗಳು ಸಣ್ಣಪುಟ್ಟ ಗಾಯಗೊಂಡು ಅಪಾಯದಿಂದ ಪಾರಾಗಿದ್ದರು. ಗಂಭೀರ ಗಾಯಗೊಂಡಿದ್ದ ಈಶ್ವರ ಭಟ್ ಮತ್ತು ಮಗಳು ಅಪೂರ್ವ ಅವರನ್ನು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅಲ್ಲಿ ಚೇತರಿಸಿಕೊಂಡಿದ್ದ ಈಶ್ವರ ಭಟ್ ಅವರನ್ನು ಬಳಿಕ ಪುತ್ತೂರು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಕಳೆದ 134 ದಿನಗಳಿಂದ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಅಪೂರ್ವ ಅವರು ಚಿಕಿತ್ಸೆಗೆ ಸ್ಪಂದಿಸದೆ ಅ.7ರಂದು ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟರು. ನ.3ರಂದು ಅವರ ತಂದೆಯೂ ಮೃತಪಟ್ಟಿದ್ದಾರೆ.

ಮಗಳು ಮೃತಪಟ್ಟ ದಿನವೇ ತಂದೆ ಪುತ್ತೂರು ಅಸ್ಪತ್ರೆಗೆ !
ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಅಪೂರ್ವ ಅವರು ಮೃತಪಡುವ ಮುಂಚೆ ಅವರ ತಂದೆಯನ್ನು ಅಲ್ಲಿಂದ ಪುತ್ತೂರು ಧನ್ವಂತರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ತಂದೆಯನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸುವ ವೇಳೆ ಅತ್ತ ಕಡೆ ಮಗಳು ಮೃತಪಟ್ಟಿದ್ದರು.

ಅಜ್ಜನ ಶ್ರಾದ್ಧಕ್ಕೆಂದು ಬೆಂಗಳೂರುನಿಂದ ಬಂದಿದ್ದರು
ಈಶ್ವರ್ ಭಟ್ ಅಂಡೆಪುಣಿ ಅವರ ಮನೆಯಲ್ಲಿ ಮೇ 27ರಂದು ಅವರ ತಂದೆ ಗೋವಿಂದ ಭಟ್ ಅವರ ಶ್ರಾದ್ಧ ಕಾರ್ಯಕ್ರಮವಿತ್ತು. ಇದರಲ್ಲಿ ಭಾಗವಹಿಸಲೆಂದು ಈಶ್ವರ ಭಟ್ ಅವರ ಮಗಳು ಅಪೂರ್ವ ಹಾಗೂ ಮೊಮ್ಮಗಳು ಬೆಂಗಳೂರಿನಿಂದ ಸುಗಮ ಬಸ್‌ನಲ್ಲಿ ಪುತ್ತೂರಿಗೆ ಆಗಮಿಸಿದ್ದರು. ಅದೇ ಬಸ್ ವಿಟ್ಲಕ್ಕೆ ಹೋಗುತ್ತಿದ್ದುದರಿಂದ ಅದರಲ್ಲೇ ಮುರ ತನಕ ಬಂದು ಮುರ ಜಂಕ್ಷನ್‌ನಲ್ಲಿ ಬಸ್‌ನಿಂದ ಇಳಿದಿದ್ದರು. ಮಗಳು ಮತ್ತು ಮೊಮ್ಮಗಳನ್ನು ಮನೆಗೆ ಕರೆದೊಯ್ಯಲೆಂದು ಈಶ್ವರ್ ಭಟ್ ಅವರು ತಮ್ಮ ವ್ಯಾಗನರ್ ಕಾರಿನಲ್ಲಿ ಅಲ್ಲಿಗೆ ಬಂದಿದ್ದರು. ಅವರು ಮೂವರೂ ಕಾರಿನಲ್ಲಿ ಮನೆಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಮುರ ಜಂಕ್ಷನ್ ಬಳಿ ಪಡ್ನೂರಿಗೆ ತೆರಳುವ ಒಳರಸ್ತೆಗೆ ಕಾರನ್ನು ತಿರುಗಿಸಿ ಪಡ್ನೂರು ರಸ್ತೆ ಸೇರುವಷ್ಟರಲ್ಲೇ ಮಂಗಳೂರು ಕಡೆಗೆ ಹೋಗುತ್ತಿದ್ದಮರ್ಸಿ’ ಹೆಸರಿನ ಖಾಸಗಿ ಬಸ್ ಈಶ್ವರ ಭಟ್ ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ಕಾರು ಪಲ್ಟಿಯಾಗಿ ದೂರಕ್ಕೆ ಎಸೆಯಲ್ಪಟ್ಟು, ಈಶ್ವರ ಭಟ್ ಮತ್ತು ಅಪೂರ್ವ ಗಂಭೀರ ಗಾಯಗೊಂಡಿದ್ದರು.

LEAVE A REPLY

Please enter your comment!
Please enter your name here