ಸಾಂಸ್ಕೃತಿಕ ವಿಚಾರಧಾರೆಗಳ ಪಸರಿಸುವಿಕೆಗೆ ಹಬ್ಬ ಅಗತ್ಯ : ಗಿರೀಶ ಭಟ್ ಕುವೆತ್ತಂಡ
ಪುತ್ತೂರು: ಕೇರಳ ರಾಜ್ಯವು ತನ್ನ ಅಸ್ತಿತ್ವ ಉಳಿಸಿಕೊಳ್ಳುವಲ್ಲಿ ಓಣಂನಂತಹ ಹಬ್ಬಗಳ ಆಚರಣೆ ಪ್ರಮುಖ ಪಾತ್ರ ವಹಿಸಿವೆ. ಪ್ರಹ್ಲಾದನ ಮೊಮ್ಮಗನಾದ ಮಹಾಬಲಿಯನ್ನು ನೆನಪಿಸಿಕೊಳ್ಳುವ ಓಣಂ ಹಬ್ಬ ಒಂದು ವಿಶಿಷ್ಟ ಆಚರಣೆ. ನಮ್ಮ ಸಾಂಸ್ಕೃತಿಕ ವಿಚಾರಧಾರೆಗಳು ತಲೆಮಾರಿನಿಂದ ತಲೆಮಾರಿಗೆ ಹರಿದುಹೋಗುವುದಕ್ಕಾಗಿ ಹಬ್ಬಗಳನ್ನು ಆಚರಿಸುವುದು ಅಗತ್ಯ ಎಂದು ಸವಣೂರಿನ ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಯ ಕನ್ನಡ ಪ್ರಾಧ್ಯಾಪಕ ಗಿರೀಶ ಭಟ್ ಕುವೆತ್ತಂಡ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಲಾದ ಓಣಂ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ವಿಷ್ಣುವಿನ ದಶಾವತಾರಗಳಲ್ಲಿ ವಾಮನಾವತಾರ ವಿಶೇಷವಾದದ್ದು. ಮಹಾಬಲಿ ದುಷ್ಟನಲ್ಲ. ಆದರೆ ಇಂದ್ರಪದವಿಗೆ ಸಂಚಕಾರ ತಂದೊಡ್ಡಬಹುದಾದ ಕಾರಣದಿಂದ ಆತನನ್ನು ಮಹಾವಿಷ್ಣು ಪಾತಾಳಕ್ಕೆ ತಳ್ಳಬೇಕಾಗಿ ಬಂತು. ಆದರೂ ವಿಷ್ಣು ಆತನನ್ನು ಸಂಹರಿಸಿಲ್ಲ ಎಂಬುದು ಗಮನೀಯ. ಹಾಗೆ ಪಾತಾಳಕ್ಕೆ ತಳ್ಳಲ್ಪಟ್ಟ ಮಹಾಬಲಿ ಮರಳಿ ಭೂಮಿಗೆ ಬರುವ ದಿನವನ್ನು ಓಣಂ ಹಬ್ಬವೆಂದು ಆಚರಿಸಲಾಗುತ್ತದೆ ಎಂದು ಹಬ್ಬದ ಪೌರಾಣಿಕ ಮಹತ್ವದ ಬಗೆಗೆ ತಿಳಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ ಪ್ರಸಾದ್ ಎ ಮಾತನಾಡಿ ಹಬ್ಬಗಳು ನಮ್ಮ ಸಂಭ್ರಮಕ್ಕೆ ಕಾರಣವಾಗುತ್ತವೆ. ಎಲ್ಲರೂ ಒಂದೆಡೆ ಕಲೆತು ನಮ್ಮ ಆಚಾರ ವಿಚಾರಗಳನ್ನು ತಿಳಿದುಕೊಳ್ಳುವುದಕ್ಕೆ ಇದು ಸಹಕಾರಿ ಎನಿಸುತ್ತದೆ. ನಾವು ನಮ್ಮ ಪರಂಪರೆಯಿಂದ ಬಂದ ಹಬ್ಬಗಳನ್ನು ಆಚರಿಸಿದಾಗ ಮಾತ್ರ ಮುಂದಿನ ತಲೆಮಾರಿಗೆ ಈ ಹಬ್ಬಗಳ ಮಹತ್ವ ಅರ್ಥವಾಗುವುದಕ್ಕೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಮಾತನಾಡಿ ಹಿಂದೂ ಪರಂಪರೆ ಉಳಿದಿರುವುದೇ ಧಾರ್ಮಿಕತೆಯ ತಳಹದಿಯಲ್ಲಿ. ಈ ದೇಶದ ಮೇಲೆ ಎಷ್ಟೇ ಆಕ್ರಮಣಗಳಾದರೂ ಹಿಂದೂ ಜೀವನ ಪದ್ಧತಿ, ಸಂಸ್ಕೃತಿ – ಸಂಸ್ಕಾರಗಳು ಉಳಿದಿದ್ದರೆ ಅದಕ್ಕೆ ನಮ್ಮ ಆಚರಣೆಗಳು, ಭಾವನೆಗಳು ಕಾರಣ. ಓಣಂ ಮೂಲತಃ ಕೇರಳದ ಹಬ್ಬವಾದರೂ ಕರ್ನಾಟಕದಲ್ಲಿಯೂ ಆಚರಿಸಲ್ಪಡುತ್ತಿರುವುದರ ಹಿಂದೆ ಧಾರ್ಮಿಕ ಸಾಮರಸ್ಯ, ಭಾಷಾ ಸಾಮರಸ್ಯಗಳನ್ನು ಗುರುತಿಸಬಹುದು ಎಂದು ನುಡಿದರು.
ವೇದಿಕೆಯಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅನ್ವಿತ್, ಕಾರ್ಯದರ್ಶಿ ಸುಜನಾ ಉಪಸ್ಥಿತರಿದ್ದರು. ಇತ್ತೀಚೆಗೆ ಆಚರಿಸಲಾದ ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಈ ಹಿಂದೆ ಅಂಬಿಕಾ ಮಹಾವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದ ಗಿರೀಶ್ ಭಟ್ ಕುವೆತ್ತಂಡ ಅವರನ್ನು ವಿದ್ಯಾರ್ಥಿಗಳ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು. ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ವಿದ್ಯಾರ್ಥಿನಿಯರಾದ ಅಪರ್ಣಾ ಪ್ರಾರ್ಥಿಸಿ, ಶ್ರೀದೇವಿ ಸ್ವಾಗತಿಸಿದರು. ವಿದ್ಯಾರ್ಥಿನಿ ಮಾನ್ಯ ವಂದಿಸಿದರು. ವಿದ್ಯಾರ್ಥಿನಿ ಆಕ್ಷಿತಾ ಕಲ್ಲಡ್ಕ ಕಾರ್ಯಕ್ರಮ ನಿರ್ವಹಿಸಿದರು.