ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ಮಹಿಳಾ ಸಂಘದ ಸಹಯೋಗದಲ್ಲಿ ದೇವದಾಸಿಯರ ಬದುಕಿನ ಕುರಿತಾದ ‘ಗಾಡ್ಸ್ ವೈವ್ಸ್ ಮೆನ್ಸ್ ಸ್ಲೇವ್ಸ್’ ಎಂಬ ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿ ಪ್ರತಿಷ್ಠಿತ 14ನೇ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವ-2024ರಲ್ಲಿ ವಿಶೇಷ ಪ್ರಮಾಣಪತ್ರ(ಸ್ಪೆಷಲ್ ಫೆಸ್ಟಿವಲ್ ಮೆನ್ಮನ್ ಸರ್ಟಿಫಿಕೇಟ್) ಲಭಿಸಿರುವ ಈ ಸಾಕ್ಷ್ಯಚಿತ್ರದ ನಿರ್ಮಾಪಕಿ ಹಾಗೂ ನಿರ್ದೇಶಕಿ, ಯುವ ಸಂಶೋಧಕಿ, ಪುತ್ತೂರಿನ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಆಂಗ್ಲಭಾಷಾ ಅತಿಥಿ ಉಪನ್ಯಾಸಕರಾಗಿರುವ ಪೂರ್ಣಿಮಾ ರವಿ ಮಾತನಾಡಿ, ದೇವದಾಸಿ ಎಂಬುದು ನಿಷ್ಕಲ್ಮಷ ಮನಸ್ಸಿನಿಂದ ದೇವರಿಗೆ ಅರ್ಪಿಸುವುದು ಎನ್ನುವುದು ಹಿಂದಿನ ಕಾಲದ ಆಚರಣೆಯಾಗಿತ್ತು. ಆದರೆ ವರ್ಷ ಕಳೆದಂತೆ ಈ ಆಚರಣೆಯು ಅಮಾನವೀಯ ಸ್ವರೂಪವನ್ನು ಪಡೆದುಕೊಂಡು ಬಂದಿತು. 1982ರಲ್ಲಿ ಕರ್ನಾಟಕ ಸರಕಾರ ದೇವದಾಸಿ ಪದ್ಧತಿಯನ್ನು ನಿಷೇಧ ಮಾಡಿದ್ದರೂ ಕೂಡ, ಇಂದು ಕರ್ನಾಟಕದ ಸುಮಾರು 14 ಜಿಲ್ಲೆಗಳಲ್ಲಿ ತೆರೆಮರೆಯಲ್ಲಿ ಈ ಅನಿಷ್ಟ ಪದ್ಧತಿ ಇನ್ನು ಜೀವಂತವಾಗಿದೆ ಎಂದರು. ಈ ಸಾಕ್ಷ್ಯಚಿತ್ರ ದೇವದಾಸಿ ಪದ್ಧತಿಯಿಂದ ಜನರನ್ನು ಹೊರ ತಂದು, ಶಿಕ್ಷಣಕ್ಕೆ ಅವಕಾಶ ಕಲ್ಪಿಸಿಕೊಟ್ಟು, ದೇವದಾಸಿ ಪದ್ಧತಿ ಮುಕ್ತ ಸಮಾಜ ನಿರ್ಮಾಣದ ಕನಸು ಹೊತ್ತಿದೆ. ಕಾನೂನು ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಈ ಪಿಡುಗನ್ನು ಸಂಪೂರ್ಣವಾಗಿ ತೊಲಗಿಸುವಲ್ಲಿ ಪ್ರಮುಖ ಪಾತ್ರ ವಹಿಸುವಂತೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಾದ ಮಹಾಲಕ್ಷ್ಮಿ ಮಾತನಾಡಿ, ಹಿಂದೆ ದೇವದಾಸಿ ಪದ್ಧತಿ ಎನ್ನುವುದು ದೈವಿಕ, ಪವಿತ್ರ ಆಚರಣೆಯಾಗಿತ್ತು. ಹೆಣ್ಣನ್ನು ಲಕ್ಷ್ಮಿ ಎಂದು ಪೂಜಿಸುತ್ತಿದ್ದರು. ದೇವದಾಸಿ ಪದ್ಧತಿ ಎಂದರೆ ಕಲೆಯ ಅನಾವರಣವಾಗಿತ್ತು. ಆದರೆ ನಂತರದ ಕಾಲಘಟ್ಟದಲ್ಲಿ ಇದೊಂದು ಸಾಮಾಜಿಕ ಪಿಡುಗಾಗಿ ಮಾರ್ಪಟ್ಟಿತ್ತು. ಸಾಮಾಜಿಕ ವ್ಯವಸ್ಥೆಯೊಂದು ಸಮಸ್ಯೆಯಾಗಿ ಬದಲಾದದ್ದು ಹಾಗೂ ಮುಂದೆ ಏನು ಮಾಡಬೇಕು ಎಂಬ ಅರಿವನ್ನು ಈ ಸಾಕ್ಷ್ಯಚಿತ್ರ ತಿಳಿಸಿಕೊಟ್ಟಿದೆ.
ನಾವು ಇಂತಹ ಹಲವಾರು ಸಮಸ್ಯೆಗಳನ್ನು ಕಣ್ಣು ತೆರೆಯುವಂತೆ ಮಾಡಿದರೆ, ಒಳ್ಳೆಯ ಸಮಾಜ ಕಟ್ಟಲು ಸಾಧ್ಯ. ವಿದ್ಯಾರ್ಥಿಗಳು ಇಂತಹ ಸಾಮಾಜಿಕ ಪಿಡುಗಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಶ್ರಮ ವಹಿಸಬೇಕು ಎಂದರು. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಕ್ರಮಾಧಿಕಾರಿ ಲಕ್ಷ್ಮೀಕಾಂತ ಎ. ಪ್ರಾಸ್ತವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಅಕ್ಷತಾ ಎ.ಪಿ., ಕಾನೂನು ವಿಭಾಗದ ಸಹಾಯಕ ಪ್ರಾಧ್ಯಾಪಕಿ ಹಾಗೂ ಮಹಿಳಾ ಸಂಘದ ಸಂಯೋಜಕಿ ರಕ್ಷಿತಾ ಕೆ. ಉಪಸ್ಥಿತರಿದ್ದರು.
ಎಸ್. ಎಸ್. ಘಟಕದ ಸ್ವಯಂಸೇವಕಿ ನಿಕಿತಾ ಸ್ವಾಗತಿಸಿ, ಮಹಿಳಾ ಸಂಘದ ವಿದ್ಯಾರ್ಥಿ ಸಂಯೋಜಕಿ ಸುಶ್ಮಿತಾ ಕೆ. ವಂದಿಸಿದರು. ಸ್ವಯಂಸೇವಕಿ ಕೃತಿ ಸಿ. ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಬೋಧಕ, ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
“ದೇವದಾಸಿಯರ ಬದುಕಿನ ಕರಾಳ ಸ್ವರೂಪವನ್ನೂ ಸಾಕ್ಷ್ಯಚಿತ್ರದಲ್ಲಿ ಬಿಂಬಿಸುವ ಪ್ರಯತ್ನ ಮಾಡಿದ್ದೇನೆ. ದೇವದಾಸಿ ವಿಮೋಚನಾ ಸಂಘದ ಲೆಕ್ಕಾಚಾರದ ಪ್ರಕಾರ 80 ಸಾವಿರದಷ್ಟು ದೇವದಾಸಿಯರು ರಾಜ್ಯದಲ್ಲಿದ್ದಾರೆ. 2008ರಲ್ಲಿ ನಡೆದ ಸಮೀಕ್ಷೆಯಂತೆ ರಾಜ್ಯದಲ್ಲಿ ಇರುವುದು 45 ಸಾವಿರ ದೇವದಾಸಿಯರು ಮಾತ್ರ. ಈ ಸಮೀಕ್ಷೆ ಆಧರಿಸಿ 35 ವರ್ಷ ಮೇಲ್ಪಟ್ಟವರಿಗೆ ಮಾತ್ರ ಮಾಸಿಕ ಪಿಂಚಣಿ ಸಿಗುತ್ತಿದೆ. ಈಗಲೂ ಅನೇಕರು ಪಿಂಚಣಿಯಿಂದ ವಂಚಿತರಾಗಿದ್ದಾರೆ. ಅವರೆಲ್ಲರಿಗೂ ಮಾಸಿಕ ಪಿಂಚಣಿ ದೊರೆಯಬೇಕು. ಅವರು ಎಲ್ಲರಂತೆ ಸಹಜ ಜೀವನ ನಡೆಸುವಂತಾಗಬೇಕು ಎಂಬುದು ಸಾಕ್ಷ್ಯಚಿತ್ರ ನಿರ್ಮಾಣದ ಮೂಲ ಆಶಯವಾಗಿದೆ.”
ಪೂರ್ಣಿಮಾ ರವಿ, ‘ಗಾಡ್ಸ್ ವೈವ್ಸ್ ಮೆನ್ಸ್ ಸ್ಲೇವ್ಸ್’ ಸಾಕ್ಷ್ಯಚಿತ್ರದ ನಿರ್ಮಾಪಕಿ ಹಾಗೂ ನಿರ್ದೇಶಕಿ