*ಮಕ್ಕಳನ್ನು ಶಾಲೆಗೆ ಕಳುಹಿಸದೇ ಪ್ರತಿಭಟನೆ
*ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು- ಸಿಆರ್ಪಿ ಭರವಸೆ-ಪ್ರತಿಭಟನೆ ಹಿಂತೆಗೆತ
ಕಾಣಿಯೂರು: ಶಿಕ್ಷಕರ ಕೊರತೆ ನಡುವೆಯೇ ಇರುವ ಆಂಗ್ಲ ಮಾಧ್ಯಮ ಶಿಕ್ಷಕಿಯನ್ನು ವರ್ಗಾವಣೆ ಮಾಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಎಸ್ಡಿಎಂಸಿ, ಪೋಷಕರು, ಶಿಕ್ಷಕಿಯ ವರ್ಗಾವಣೆ ರದ್ದುಪಡಿಸುವಂತೆ ಆಗ್ರಹಿಸಿ ಮಕ್ಕಳನ್ನು ಶಾಲೆಗೆ ಕಳುಹಿಸದೇ ಪ್ರತಿಭಟನೆ ನಡೆಸಿದ ಘಟನೆ ಶಾಂತಿಗೋಡು ಆನಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೆ.13ರಂದು ನಡೆದಿದೆ.
ಶಿಕ್ಷಕಿ ಮಾಲತಿ ಅವರು ಸೇರಿದಂತೆ ಶಾಲೆಯ ಯಾವುದೇ ಶಿಕ್ಷಕರನ್ನು ವರ್ಗಾವಣೆ ಮಾಡಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದ ಘಟನೆಯೂ ನಡೆಯಿತು. ಗ್ರಾಮಾಂತರ ಪ್ರದೇಶದಲ್ಲಿರುವ ಆನಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸ್ತುತ 72 ಮಕ್ಕಳು ಓದುತ್ತಿದ್ದಾರೆ. ಶಾಲೆಯಲ್ಲಿ ನಾಲ್ಕು ಮಂದಿ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದು ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿತ್ತು. ಇದೀಗ ಆಂಗ್ಲಭಾಷಾ ಶಿಕ್ಷಕಿ ಮಾಲತಿ ಅವರನ್ನು ‘ಹೆಚ್ಚುವರಿ’ ಎಂದು ಪರಿಗಣಿಸಿ ಇಲಾಖೆ ವರ್ಗಾವಣೆ ಮಾಡಿದೆ. ಅವರನ್ನು ವರ್ಗಾವಣೆ ಮಾಡಿದ್ದೇ ಆದಲ್ಲಿ ಮತ್ತೆ ಶಿಕ್ಷಕರ ಕೊರತೆಯಿಂದಾಗಿ ಮಕ್ಕಳಿಗೆ ಸಮಸ್ಯೆಯಾಗಲಿದೆ. ಪ್ರಸ್ತುತ ಶಾಲಾ ಮಕ್ಕಳು ಆಂಗ್ಲಮಾಧ್ಯಮ ಶಿಕ್ಷಣವನ್ನೂ ಉತ್ತಮ ರೀತಿಯಲ್ಲಿ ಪಡೆಯುತ್ತಿದ್ದು ಇದೀಗ ಮಾಲತಿ ಅವರ ವರ್ಗಾವಣೆಯಿಂದ ಮತ್ತೆ ಮಕ್ಕಳಿಗೆ ಇಂಗ್ಲಿಷ್ ಶಿಕ್ಷಣಕ್ಕೆ ಸಮಸ್ಯೆಯಾಗಲಿರುವುದರಿಂದ ಯಾವುದೇ ಕಾರಣಕ್ಕೂ ಅವರನ್ನು ಈ ಶಾಲೆಯಿಂದ ವರ್ಗಾವಣೆ ಮಾಡಬಾರದು ಎಂದು ಆಗ್ರಹಿಸಿದ ಪೋಷಕರು ಹಾಗೂ ಎಸ್ಡಿಎಂಸಿಯವರು, ನಮಗೆ ಮಾಲತಿ ಶಿಕ್ಷಕರೇ ಬೇಕು ಇಲ್ಲದಿದಲ್ಲಿ ಮಕ್ಕಳನ್ನು ಈ ಶಾಲೆಯಿಂದ ತೆಗೆಯುತ್ತೇವೆ ಎಂದು ಹೇಳಿ, ಅವರ ವರ್ಗಾವಣೆ ತಡೆಹಿಡಿಯುವಂತೆ ಒತ್ತಾಯಿಸಿದರು. ಅಲ್ಲದೇ ಆನಡ್ಕ ಶಾಲೆಯಿಂದ ಯಾವುದೇ ಶಿಕ್ಷಕರನ್ನು ವರ್ಗಾವಣೆ ಮಾಡಬಾರದು ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು. ಆಂಗ್ಲ ಮಾಧ್ಯಮ ಶಿಕ್ಷಕಿ ಮಾಲತಿಯವರು ವರ್ಗಾವಣೆಗೊಂಡಲ್ಲಿ ಮತ್ತೆ ಯಾರು ಆಂಗ್ಲ ಮಾಧ್ಯಮದಲ್ಲಿ ಪಾಠ ಮಾಡುತ್ತಾರೆ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು. ನಮ್ಮ ಸರಕಾರಿ ಶಾಲೆ ಉಳಿಯಬೇಕು ಮತ್ತು ಬೆಳೆಯಬೇಕು. ಅಲ್ಲದೇ ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ರೀತಿಯಲ್ಲಿ ತೊಂದರೆಯಾಗಬಾರದು ಎಂದು ನಾವು ಇಲ್ಲಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದೇವೆ. ಆದರೆ ನಮ್ಮ ಬೇಡಿಕೆಗಳಿಗೆ ಇಲಾಖೆಗಳು ಸರಿಯಾಗಿ ಸ್ಪಂದಿಸಬೇಕು ಎಂದರು. ಈಗಾಗಲೇ ಆನಡ್ಕ ಶಾಲೆ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದೆ. ಸರಕಾರಿ ಶಾಲೆ ಬೇಕು ಬೇಕು ಎಂದು ಬೊಬ್ಬೆ ಹೊಡೆಯುವ ಸರಕಾರ ಅದಕ್ಕೆ ಬೇಕಾದ ನಿರ್ದಿಷ್ಠ ವ್ಯವಸ್ಥೆ ಮಾಡಬೇಕು. ನಾವು ಬಡವರು ನಮಗೆ ಸರಕಾರಿ ಶಾಲೆಯೇ ಬೇಕು. ಶಾಲೆಯ ಹಿತದೃಷ್ಠಿಯಿಂದ, ಮಕ್ಕಳ ಹಿತದೃಷ್ಠಿಯಿಂದ ಆನಡ್ಕ ಶಾಲೆ ಉಳಿಯಬೇಕು ಎಂಬ ಉದ್ದೇಶದಿಂದ ನಾವು ಪ್ರತಿಭಟನೆ ನಡೆಸಿದ್ದೇವೆ ಎಂದ ಪೋಷಕರು, ಮಾಲತಿಯವರು ಸೇರಿದಂತೆ ಆನಡ್ಕ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಶಿಕ್ಷಕರು ಆನಡ್ಕ ಶಾಲೆಯಲ್ಲಿಯೆ ಉಳಿಯಬೇಕು. ಈ ಬಗ್ಗೆ ಮೇಲಾಧಿಕಾರಿಯವರ ಗಮನಕ್ಕೆ ತರಬೇಕು. ನಮ್ಮ ಕಡೆಯಿಂದ ಬೇಕಾದ ವ್ಯವಸ್ಥೆ ಮಾಡುತ್ತೇವೆ ಎಂದು ಪ್ರತಿಭಟನಾಕಾರರು ಹೇಳಿದರು. ಹಿರಿಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರೂ ಈ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ವೇದಿಕೆಯ ಉಪಾಧ್ಯಕ್ಷ ಪ್ರವೀಣ್ ಆಚಾರ್ಯ, ಸದಸ್ಯ ಸೀತಾ ಉಪಸ್ಥಿತರಿದ್ದರು.
ಅತಿಥಿ ಶಿಕ್ಷಕರ ನೇಮಕಕ್ಕೆ ಕ್ರಮ- ಸಿಆರ್ಪಿ ಭರವಸೆ:
ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ನರಿಮೊಗರು ಕ್ಲಸ್ಟರ್ ಸಿಆರ್ಪಿ ಪರಮೇಶ್ವರಿ ಅವರು ವರ್ಗಾವಣೆ ಪ್ರಕ್ರಿಯೆ ಇನ್ನೂ ಮುಗಿದಿಲ್ಲ. ಹೆಚ್ಚುವರಿ ವರ್ಗಾವಣೆ ಮಾತ್ರ ಆಗಿರುವಂತದ್ದು, ಅವರಿಗೆ ನಿಯಮಾನುಸರ ವರ್ಗಾವಣೆ ಆಗಿರುವಂಥದ್ದು, ಅದೂ ಆದೇಶ ಬಂದಿಲ್ಲ. ಶಿಕ್ಷಕಿಯ ನಿಯೋಜನೆ ನಮ್ಮ ಹಂತದಲ್ಲಿ ಆಗಿರುವುದಲ್ಲ. ಅದು ಸರಕಾರದ ಮಟ್ಟದಲ್ಲಿ ಆಗಿರುವಂತದ್ದು, ನಿಮ್ಮ ಸಮಸ್ಯೆ ಬಗ್ಗೆ ನಮಗೆ ಗೊತ್ತಾಗಿದೆ. ಸಮಸ್ಯೆ ಬಗೆಹರಿಸುವಲ್ಲಿ ಪ್ರಯತ್ನಿಸುತ್ತೇವೆ. ಈ ಬಗ್ಗೆ ಮೇಲಾಧಿಕಾರಿಯವರ ಗಮನಕ್ಕೆ ತರುತ್ತೇನೆ. ಇಲ್ಲಿ ಖಾಲಿಯಿರುವ ಮುಖ್ಯಶಿಕ್ಷಕರ ಹುದ್ದೆ ಭರ್ತಿಯಾಗದಿದ್ದರೂ ಅತಿಥಿ ಶಿಕ್ಷಕರನ್ನು ಒದಗಿಸುವ ಕೆಲಸ ಖಂಡಿತವಾಗಿಯೂ ಮಾಡುತ್ತೇವೆ ಎಂದರಲ್ಲದೆ, ಮಕ್ಕಳನ್ನು ದಯವಿಟ್ಟು ಶಾಲೆಗೆ ಕಳುಹಿಸಿ, ಮಕ್ಕಳನ್ನು ಶಾಲೆಗೆ ಕಳುಹಿಸದೇ ಇದ್ದಲ್ಲಿ ಮಕ್ಕಳ ಶೈಕ್ಷಣಿಕ ವಿಚಾರಗಳಿಗೆ ಅಡ್ಡಿಪಡಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು ಎಂದು ಹೇಳಿದರು.ಪ್ರತಿಭಟನೆ ಹಿಂತೆಗೆತ
ಪ್ರತಿಭಟನಾ ಸ್ಥಳದಲ್ಲಿ ಸೇರಿದ್ದ ಶಾಲಾ ಎಸ್ಡಿಎಂಸಿ, ಪೋಷಕರು, ಊರವರು ಮಕ್ಕಳನ್ನು ಶಾಲೆಗೆ ಕಳುಹಿಸದೇ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದರು. ಈ ಮಧ್ಯೆ ನರಿಮೊಗರು ಕ್ಲಸ್ಟರ್ ಸಿಆರ್ಪಿ ಪರಮೆಶ್ವರಿ ಅವರು ಭೇಟಿ ನೀಡಿ ಮೇಲಾಧಿಕಾರಿಯವರ ಗಮನಕ್ಕೆ ತರುತ್ತೇನೆ. ಜೊತೆಗೆ ಅತಿಥಿ ಶಿಕ್ಷಕರ ನೇಮಕಕ್ಕೆ ಕ್ರಮವಹಿಸುತ್ತೇವೆ ಎಂಬ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.
1962ರಲ್ಲಿ ಸ್ಥಾಪನೆಗೊಂಡ ಆನಡ್ಕ ಸ.ಹಿ.ಪ್ರಾ. ಶಾಲೆಯು ಇಷ್ಟರವರೆಗೆ ಯಾವುದೇ ಒಂದು ಸಮಸ್ಯೆಯಿಲ್ಲದೇ ಚೆನ್ನಾಗಿ ನಡೆಯುತ್ತಿತ್ತು. ಶಾಲೆಯಲ್ಲಿ ಒಟ್ಟು 72ಮಂದಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ವಲಯ, ತಾಲೂಕು, ಜಿಲ್ಲೆ, ರಾಜ್ಯ ಮಟ್ಟದಲ್ಲಿಯೂ ಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಇದೀಗ ಒಬ್ಬ ಶಿಕ್ಷಕಿ ಹೆಚ್ಚುವರಿ ಎಂದು ಶಾಲೆಯಿಂದ ವರ್ಗಾವಣೆ ಆಗಿರುತ್ತದೆ ಎಂಬ ಆದೇಶ ಬಂದಿದೆ. ಇಲ್ಲಿ 2 ಶಿಕ್ಷಕರ ಕೊರತೆಯಿದ್ದು, ಅದರಲ್ಲಿಯೂ ಇರುವ ಒರ್ವ ಶಿಕ್ಷಕಿಯನ್ನು ತೆಗೆಯುವುದು ಎಂದರೆ ನಮಗೆ ಬೇಸರದ ಸಂಗತಿ.
– ಹರೀಶ್ ಬಿ, ಅಧ್ಯಕ್ಷರು, ಎಸ್ಡಿಎಂಸಿ ಆನಡ್ಕ ಶಾಲೆ
62 ವರ್ಷಗಳ ಹಿಂದೆ ದಾನಿಗಳ ಮುಖಾಂತರ ಆರಂಭಗೊಂಡಿರುವ ಆನಡ್ಕ ಶಿಕ್ಷಣ ಸಂಸ್ಥೆ ಬಹಳ ಉತ್ತುಂಗಕ್ಕೇರಿ ಅತ್ಯಂತ ಹೆಸರನ್ನು ಪಡೆದಂತಹ ಸಂಸ್ಥೆಯಾಗಿದೆ. ಈ ಶಾಲೆಯಲ್ಲಿ ಹೆಚ್ಚುವರಿ ಎಂದು ಶಿಕ್ಷಕಿ ಮಾಲತಿಯವರನ್ನು ಇಲ್ಲಿಂದ ವರ್ಗಾವಣೆ ಮಾಡುವ ಕೆಲಸ ಆಗಿದೆ. ಅವರನ್ನು ಆನಡ್ಕ ಶಾಲೆಯಲ್ಲಿಯೇ ಉಳಿಸಿಕೊಳ್ಳಬೇಕು ಮತ್ತು ಶಾಲೆಯಲ್ಲಿ ಇರುವ ಯಾವುದೇ ಶಿಕ್ಷಕರನ್ನು ವರ್ಗಾವಣೆ ಮಾಡಬಾರದು ಎಂಬುದು ನಮ್ಮ ಆಗ್ರಹವಾಗಿದೆ. ಈ ನಿಟ್ಟಿನಲ್ಲಿ ಈ ಊರಿನ, ಶಾಲೆಯ ಮತ್ತು ಮಕ್ಕಳ ಹಿತದೃಷ್ಠಿಯಿಂದ ಶಾಂತಿಯುತ ಪ್ರತಿಭಟನೆ ನಡೆಸಿದ್ದೇವೆ. ಶಾಲೆಯಲ್ಲಿ ಯಾವುದೇ ದೈಹಿಕ ಶಿಕ್ಷಣ ಶಿಕ್ಷಕರು ಇಲ್ಲದಿದ್ದರೂ ವಿದ್ಯಾರ್ಥಿಗಳು ಖೋ ಖೋ ಪಂದ್ಯಾಟದಲ್ಲಿ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಶಾಲೆಯ ಒಬ್ಬ ಶಿಕ್ಷಕರನ್ನೂ ಇಲ್ಲಿಂದ ವರ್ಗಾವಣೆ ಮಾಡದೇ ಖಾಲಿಯಿರುವ ಮುಖ್ಯಶಿಕ್ಷಕರ ಹುದ್ದೆಯನ್ನೂ ಭರ್ತಿಮಾಡುವಂತೆ ಸರಕಾರ ಅಗತ್ಯ ಕ್ರಮಕೈಗೊಳ್ಳಬೇಕು.
ದಿನೇಶ್ ಮಜಲು, ಸದಸ್ಯರು, ಗ್ರಾಮ ಪಂಚಾಯತ್ ನರಿಮೊಗರು