ರೂ.278.32 ಕೋಟಿ ವ್ಯವಹಾರ | ರೂ.1.23 ಕೋಟಿ ನಿವ್ವಳ ಲಾಭ
ಸದಸ್ಯರ ಹಿತದೃಷ್ಟಿಯಿಂದ ಮಹತ್ವಪೂರ್ಣ ‘ಋಣಮುಕ್ತ ಯೋಜನೆ’ ಪ್ರಾರಂಭ-ಸೊರಕೆ
ಪುತ್ತೂರು: ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು 2024-25ನೇ ಸಾಲಿನಲ್ಲಿ ರೂ.278.32 ಕೋಟಿ ವ್ಯವಹಾರ ಮಾಡಿ ರೂ 1.23 ಕೋಟಿ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ.16 ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ ಹೇಳಿದರು. ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ಸೆ.14ರಂದು ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘದ ಸದಸ್ಯರ ಸಲಹೆ, ಅಭಿಪ್ರಾಯ ಮತ್ತು ಅನುಭವ ಆಧಾರಿತ ವಿಚಾರಧಾರೆಗಳು ಸಂಘಕ್ಕೆ ಮಹತ್ವವಾಗಿದ್ದು ಸದಸ್ಯರ ಅಭಿಪ್ರಾಯಕ್ಕೆ ಸಂಘ ಯಾವತ್ತೂ ಮನ್ನಣೆ ನೀಡುತ್ತಿದೆ, ಸಂಘದ ಯಾವುದೇ ವಿಚಾರಗಳಿದ್ದರೂ ನಮ್ಮಲ್ಲಿ ನೇರವಾಗಿ ಮಾತನಾಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಅವರು ಹೇಳಿದರು. ಸಂಘವು ತನ್ನ ಕಾರ್ಯವ್ಯಾಪ್ತಿಯಲ್ಲಿ ಬರುವ ಎಲ್ಲಾ ಕೃಷಿಕ ಕುಟುಂಬಗಳ ಸದಸ್ಯರು ಮತ್ತು ಕೃಷಿಯೇತರ ಕುಟುಂಬದ ಸದಸ್ಯರ ಆರ್ಥಿಕ ಅವಶ್ಯಕತೆಗಳನ್ನು ಪೂರೈಸುತ್ತಿದ್ದು ಸದಸ್ಯರ ಹಿತ ಕಾಪಾಡುವುದು ಸಂಘದ ಮುಖ್ಯ ಧ್ಯೇಯವಾಗಿದೆ. ಬೆಳೆ ವಿಮೆ ಮಾಡಿಸುವುದರಲ್ಲಿ ನಮ್ಮ ಸಂಘ ಮೊದಲನೇ ಸ್ಥಾನದಲ್ಲಿದೆ ಎಂದು ಅವರು ಹೇಳಿದರು.ನಮ್ಮ ಸಂಘದಿಂದ ಸಾಲ ಪಡೆದ ಅದೆಷ್ಟೋ ಮಂದಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ್ದು ಕೃಷಿ ಮತ್ತಿತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಸಂಘವು ಈ ಮಟ್ಟದಲ್ಲಿ ಅಭಿವೃದ್ಧಿಯ ಪಥದಲ್ಲಿ ಸಾಗಬೇಕಾದರೆ ಅದಕ್ಕೆ ಸದಸ್ಯರು ಮುಖ್ಯ ಕಾರಣ. ಸಂಘಕ್ಕೆ ಬೆನ್ನೆಲುಬಾಗಿ ನಿಂತಿರುವ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ.ರಾಜೇಂದ್ರ ಕುಮಾರ್ ಮತ್ತು ನಿರ್ದೇಶಕ ಬಳಗದವರು, ನಮ್ಮ ಸಂಘದ ನಿರ್ದೇಶಕರು, ಸಿಬ್ಬಂದಿಗಳು ಸಂಘದ ಅಭಿವೃದ್ಧಿಯಲ್ಲಿ ವಿಶೇಷ ಪಾತ್ರ ವಹಿಸಿದ್ದಾರೆ ಎಂದು ಸುರೇಶ್ ಕುಮಾರ್ ಸೊರಕೆ ಹೇಳಿದರು.

ಮಹತ್ವಪೂರ್ಣ ‘ಋಣಮುಕ್ತ ಯೋಜನೆ’ ಪ್ರಾರಂಭ:
ಸಂಘದಲ್ಲಿ ‘ಮರಣ ವಿಮೆ ನಿಧಿ’ ಎನ್ನುವ ಮಹತ್ವದ ಯೋಜನೆಯೊಂದನ್ನು ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ ತಿಳಿಸಿದರು. ಸದಸ್ಯರ ಪಾಲನ್ನು ಪಡೆದುಕೊಂಡು ಈ ವಿಮಾ ನಿಧಿಯನ್ನು ಸ್ಥಾಪಿಸಲಾಗುತ್ತದೆ. ಲಾಭದಲ್ಲಿ ಅದನ್ನು ಒಂದು ಫಂಡ್ ಆಗಿ ರೂಪಿಸಲಾಗುತ್ತದೆ. ಇದರಲ್ಲಿ ಬಹುಮುಖ್ಯವಾಗಿ ಪಡೆದುಕೊಂಡ ಸಾಲಗಾರರ ಸಾಲವನ್ನು ಋಣಮುಕ್ತಗೊಳಿಸುವ ಸದುದ್ದೇಶ ಇಟ್ಟುಕೊಂಡು ಆಡಳಿತ ಮಂಡಳಿಯವರು ಚಿಂತನೆ ನಡೆಸಿ ಇದನ್ನು ಅನುಷ್ಠಾನಗೊಳಿಸುವ ಬಗ್ಗೆ ನಿರ್ಧರಿಸಲಾಗಿದೆ. ಸಭೆಯಲ್ಲಿ ಒಪ್ಪಿಗೆ ಬಂದ ಹಾಗೆ ೦.4%(ಒಂದು ಲಕ್ಷಕ್ಕೆ 4೦೦ ರೂ.) ಪಡೆದುಕೊಂಡು ಈ ಫಂಡನ್ನು ಸಿದ್ದಪಡಿಸಲಾಗುತ್ತದೆ. ನಂತರ ಪ್ರತೀ ವರ್ಷದ ಲಾಭಾಂಶದಲ್ಲಿ 10%ನ್ನು ಇದಕ್ಕೆ ನಿಗದಿಪಡಿಸಲಾಗುವುದು, ಮುಂದಿನ ದಿನಗಳಲ್ಲಿ ಶರತ್ತುಗಳನ್ನು ಅನ್ವಯಿಸಿಕೊಂಡು ಅದನ್ನು ಯಾವ ರೀತಿ ಅನುಷ್ಠಾನ ಮಾಡಬಹುದು ಎನ್ನುವ ಬಗ್ಗೆ ಆಡಳಿತ ಮಂಡಳಿಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಇದಕ್ಕೆ ಒಟ್ಟಾರೆಯಾಗಿ ವರ್ಷಕ್ಕೆ 40ರಿಂದ 50 ಲಕ್ಷ ರೂ ಫಂಡ್ ಬೇಕಾಗುತ್ತದೆ ಎಂದು ಅವರು ಹೇಳಿದರು.
ಎಷ್ಟೇ ವರ್ಷ ಒಬ್ಬ ರೈತ ಬದುಕಿದ್ದರೂ ಕೂಡಾ ಅಂತ್ಯಕಾಲದಲ್ಲಿ ಆ ರೈತನ ಸಾಲವನ್ನು ಋಣಮುಕ್ತ ಮಾಡುವಂತಹ ಮಹತ್ವಪೂರ್ಣ ಯೋಜನೆ ಇದಾಗಿದೆ. ೦.4% ದೇಣಿಗೆ ಪಡೆದುಕೊಂಡು ಕೊಡುವ ಸಾಲ ಮತ್ತು ಉಳಿಕೆ ಸಾಲವನ್ನು ಪ್ರತೀ ವರ್ಷ ನವೀಕರಣ ಮಾಡಿ, ಬಾಕಿ ಇರುವ ಮೊತ್ತಕ್ಕೆ ೦.4% ನಿಗದಿಪಡಿಸುತ್ತೇವೆ. ಯಾವುದೇ ಸಾಲಗಾರ ಸದಸ್ಯ ಮೃತಪಟ್ಟರೆ ಆ ಸದಸ್ಯನ ಋಣಮುಕ್ತಗೊಳಿಸಲು ಬೇಕಾದ ಮೊತ್ತದ ಬಗ್ಗೆ ನಿರ್ಧರಿಸಿ ತೀರ್ಮಾನ ಮಾಡಲಾಗುತ್ತದೆ. ಇದಕ್ಕೆ ಷರತ್ತುಗಳು ಕೂಡಾ ಅನ್ವಯ ಆಗುತ್ತದೆ. ಇದು ಯಾವುದೇ ಇನ್ಸೂರೆನ್ಸ್ ಕಂಪೆನಿ ಮೂಲಕ ಆಗುವುದಲ್ಲ, ಬದಲಾಗಿ ಸಂಘವೇ ಫಂಡ್‌ನ್ನು ರೂಪಿಸಿ ಈ ಕಾರ್ಯ ಮಾಡಲಿದೆ ಎಂದು ಸುರೇಶ್ ಕುಮಾರ್ ಸೊರಕೆ ಅವರು ತಿಳಿಸಿದರು.ಸದಸ್ಯರ ಗಂಭೀರ ಸ್ವರೂಪದ ಅನಾರೋಗ್ಯ ವಿಚಾರಕ್ಕೂ ಈ ಯೋಜನೆಯನ್ನು ಒಳಪಡಿಸಬೇಕೆಂದು ಸದಸ್ಯರು ಆಗ್ರಹಿಸಿದ್ದು ಇದಕ್ಕೆ ಅಧ್ಯಕ್ಷರು ಒಪ್ಪಿಗೆ ಸೂಚಿಸಿದರು. ಸದಸ್ಯರಾದ ಆನಂದ ರೈ ಸೂರಂಬೈಲ್, ರಾಮಕೃಷ್ಣ, ಇಬ್ರಾಹಿಂ ಮುಲಾರ್, ಸದಾಶಿವ ಶೆಟ್ಟಿ ಪಟ್ಟೆ ಮತ್ತಿತರರು ಈ ವಿಚಾರದಲ್ಲಿ ತಮ್ಮ ಅಭಿಪ್ರಾಯ, ಸಲಹೆ ಸೂಚನೆಗಳನ್ನು ನೀಡಿದರು.
ನೂತನ ಶಾಖಾ ಕಟ್ಟಡಕ್ಕೆ ಶೀಘ್ರದಲ್ಲೇ ಶಿಲಾನ್ಯಾಸ:
ಸಂಘದ ಭಕ್ತಕೋಡಿಯಲ್ಲಿರುವ ನಿವೇಶನದಲ್ಲಿ ರೂ.80 ಲಕ್ಷ ವೆಚ್ಚದಲ್ಲಿ ನೂತನ ಶಾಖಾ ಕಟ್ಟಡ ನಿರ್ಮಿಸಲು ಉದ್ದೇಶಿಸಿದ್ದು ಅದರ ಶಿಲಾನ್ಯಾಸ ಕಾರ್ಯಕ್ರಮ ಶೀಘ್ರದಲ್ಲೇ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಸುರೇಶ ಕುಮಾರ್ ಸೊರಕೆ ತಿಳಿಸಿದರು.
ಯಶಸ್ವಿನಿ ಯೋಜನೆ ಬಗ್ಗೆ ಚರ್ಚೆ:
ಯಶಸ್ವಿನಿ ಯೋಜನೆ ಕುರಿತು ಚರ್ಚೆ ನಡೆಯಿತು. ಯಶಸ್ವಿನಿ ಯೋಜನೆ ಪುತ್ತೂರಿನ ಆಸ್ಪತ್ರೆಗಳಿಗೆ ಅನ್ವಯಿಸದಿರುವ ಬಗ್ಗೆ ಕೆಲ ಸದಸ್ಯರು ಹೇಳಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ರೈ ಸಿ ಮಾತನಾಡಿ ಯಶಸ್ವಿನಿ ಯೋಜನೆ ಅತ್ಯುತ್ತಮ ಯೋಜನೆಯಾಗಿದ್ದು ಇದರ ಪ್ರಯೋಜನವನ್ನು ಬಹಳಷ್ಟು ಮಂದಿ ಪಡೆದಿದ್ದಾರೆ. ಮಂಗಳೂರಿನ ಆಸ್ಪತ್ರೆಗಳಲ್ಲಿ ಹೆಚ್ಚಿನ ಪ್ರಯೋಜನವನ್ನು ಜನರು ಪಡೆದಿದ್ದು ಪುತ್ತೂರಿನಲ್ಲಿ ಯಾವುದೋ ಕಾರಣದಿಂದ ಸಮಸ್ಯೆ ಆಗುತ್ತಿರುವ ಬಗ್ಗೆ ದೂರುಗಳಿವೆ ಎಂದು ಹೇಳಿದರು. ಪುತ್ತೂರಿನ ಆಸ್ಪತ್ರೆಗಳಲ್ಲಿ ಇದನ್ನು ಅಳವಡಿಕೆ ಮಾಡಲು ಸಂಬಂಧಪಟ್ಟವರು ಗಮನಹರಿಸಬೇಕೆಂದು ಸದಸ್ಯರು ಆಗ್ರಹಿಸಿದರು.
ಸದಸ್ಯರಿಗೆ ಕೊಡುವ 100ರೂ ನಿಲ್ಲಿಸಿ:
ಮಹಾಸಭೆಗೆ ಬರುವ ಸಂಘದ ಸದಸ್ಯರಿಗೆ 100 ರೂ. ನೀಡುವ ಪ್ರಮೇಯ ಸಂಘದ ವತಿಯಿಂದ ಹಲವು ವರ್ಷಗಳಿಂದ ನಡೆಯುತ್ತಾ ಬರುತ್ತಿದ್ದು ಸಂಘದ ಹೆಚ್ಚುವರಿ ಆದಾಯದ ದೃಷ್ಟಿಯಲ್ಲಿ ಇದನ್ನು ನಿಲ್ಲಿಸಿದರೆ ಉತ್ತಮ ಎಂದು ಸದಸ್ಯ ಆನಂದ ರೈ ಸೂರಂಬೈಲ್ ಹೇಳಿದರು. ಸದಸ್ಯ ಗಣೇಶ್ ಕೊರುಂಗು ಧ್ವನಿಗೂಡಿಸಿ 100 ರೂ ಸದಸ್ಯರಿಗೆ ಕೊಡುವುದನ್ನು ನಿಲ್ಲಿಸಿದರೆ ಅದು ಸಂಘಕ್ಕೆ ಉಳಿತಾಯವಾಗುತ್ತದೆ ಎಂದು ಹೇಳಿದರು. ಸದಸ್ಯ ಇಬ್ರಾಹಿಂ ಮುಲಾರ್ ಮಾತನಾಡಿ 100 ರೂ ನೀಡುವುದು ಯಥಾ ಪ್ರಕಾರ ಮುಂದುವರಿಯಲಿ, ನಿಲ್ಲಿಸುವುದು ಬೇಡ ಎಂದು ಹೇಳಿದರು. ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ ಉತ್ತರಿಸಿ ಮಹಾಸಭೆಗೆ ಬರುವ ಸದಸ್ಯರಿಗೆ ನೀಡುವ 100 ರೂ. ವಿಚಾರ ಲಾಭಕ್ಕಿಂತ ಹೆಚ್ಚಾಗಿ ಮಾನಸಿಕವಾಗಿ ಸಂಘದ ಸದಸ್ಯರ ಮತ್ತು ಸಂಘದ ನಡುವಿನ ಸಂಬಂಧ ಗಟ್ಟಿಗೊಳ್ಳಲು ಕಾರಣವಾಗಿದೆ, ಹಾಗಾಗಿ ಅದು ಯಥಾ ಪ್ರಕಾರ ಮುಂದುವರಿಯಲಿದೆ ಎಂದು ಹೇಳಿದರು.
ಕೊಳೆರೋಗ: ಪರಿಹಾರಕ್ಕೆ ಆಗ್ರಹ
ಕೊಳೆರೋಗದಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ಒದಗಿಸುವಂತೆ ಸರಕಾರಕ್ಕೆ ಬರೆಯಬೇಕೆಂದು ಇಬ್ರಾಹಿಂ ಮುಲಾರ್ ಒತ್ತಾಯಿಸಿದರು. ಈ ಬಗ್ಗೆ ಸರಕಾರಕ್ಕೆ ಬರೆಯುವುದಾಗಿ ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ ಹೇಳಿದರು.
ಬೆಳೆವಿಮೆಯಲ್ಲಿ ಸಾಧನೆ-ಸಂಘಕ್ಕೆ ಅಭಿನಂದನೆ
ಬೆಳೆ ವಿಮೆ ಮಾಡಿಸುವ ವಿಚಾರದಲ್ಲಿ ನಮ್ಮ ಸಂಘ ಸಾಧನೆ ಮಾಡಿದೆ, ಈ ರೀತಿಯ ಸಾಧನೆ ಬೇರೆ ಯಾವ ಸೊಸೈಟಿಯಿಂದಲೂ ಆಗಿಲ್ಲ, ಇದು ನಿಜವಾಗಿಯೂ ಹೆಮ್ಮೆಯ ವಿಷಯ ಎಂದು ಆನಂದ ರೈ ಸೂರಂಬೈಲ್ ಸಂಘಕ್ಕೆ ಅಭಿನಂದನೆ ಸಲ್ಲಿಸಿದರು.
ಎಲ್ಲರ ಸಹಕಾರವೇ ನಮ್ಮ ಯಶಸ್ಸು-ಜಯಪ್ರಕಾಶ್ ರೈ
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ರೈ ಸಿ ಮಾತನಾಡಿ ಸಂಘವು ಎಲ್ಲರ ಸಹಕಾರದೊಂದಿಗೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು ಸಾಲ ನೀಡುವಿಕೆ ಮತ್ತು ವಸೂಲಾತಿ ಉತ್ತಮವಾಗಿ ನಡೆಯುತ್ತಿದೆ. ಕೃಷಿ ಸಾಲ, ಗೃಹ ಸಾಲ, ಸ್ವ ಉದ್ಯೋಗ ಸಾಲ, ಉತ್ಪತ್ತಿ ಈಡು ಸಾಲ, ಆಭರಣ ಈಡು ಸಾಲ, ವಾಹನ ಸಾಲ, ಗೊಬ್ಬರ ಸಾಲವನ್ನು ಸದಸ್ಯರಿಗೆ ನೀಡುತ್ತಿದ್ದೇವೆ. ಸದಸ್ಯರಿಂದ ಆಕರ್ಷಕ ಬಡ್ಡಿ ದರದಲ್ಲಿ ವಿವಿಧ ರೀತಿಯ ಠೇವಣಿಗಳನ್ನು ಸ್ವೀಕರಿಸುತ್ತಿದ್ದೇವೆ ಎಂದು ಹೇಳಿದರು.
ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರ ಕಾರ್ಯಕ್ಷಮತೆ ಮತ್ತು ಸಂಘದ ಸದಸ್ಯರ ಸಹಕಾರದಿಂದಾಗಿ ಸಂಘ ಯಶಸ್ಸಿನ ಪಥದಲ್ಲಿ ಮುನ್ನಡೆಯುತ್ತಿದೆ, ಇದೇ ರೀತಿಯ ಸಹಕಾರವನ್ನು ಸದಸ್ಯರು ಮುಂದಕ್ಕೂ ನೀಡಬೇಕು ಎಂದು ಅವರು ಹೇಳಿದರು.
ಅಭಿವೃದ್ಧಿಯ ದಿಸೆಯಲ್ಲಿ ಸಂಘ ಸಾಗುತ್ತಿದೆ-ಯಾಕೂಬ್ ಮುಲಾರ್
ಸಂಘದ ಉಪಾಧ್ಯಕ್ಷ ಯಾಕೂಬ್ ಮುಲಾರ್ ಮಾತನಾಡಿ ನಮ್ಮ ಸಂಘ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಸಂಘದ ಸದಸ್ಯರ ಪ್ರೀತಿ, ವಿಶ್ವಾಸಕ್ಕೆ ಪಾತ್ರವಾಗಿದೆ. ಸಂಘವು ಬೆಳೆ ವಿಮೆ ಸೇರಿದಂತೆ ಎಲ್ಲ ವಿಚಾರಗಳಲ್ಲೂ ಅಭಿವೃದ್ಧಿಯ ದಿಸೆಯಲ್ಲಿ ಸಾಗುತ್ತಿದ್ದು ಇದಕ್ಕೆ ಸದಸ್ಯರ ಪೂರ್ಣ ಸಹಕಾರವೇ ಕಾರಣ ಎಂದರು.
ಸಂಘದ ನಿರ್ದೇಶಕರಾದ ವಸಂತ ಎಸ್.ಡಿ,ಶಿವಾನಥ ರೈ ಮೇಗಿನಗುತ್ತು, ಸುಧೀರ್‌ಕೃಷ್ಣ ಎಂ ಪಡ್ಡಿಲ್ಲಾಯ, ವಸಂತ ಬಿ.ಎನ್, ಪದ್ಮಯ್ಯ ಪಿ ಬಂಡಿಕಾನ, ಆನಂದ ಪೂಜಾರಿ ಕೆ, ಆನಂದ ಪೂಜಾರಿ ಕೆ, ಕೊರಗಪ್ಪ ಸೊರಕೆ, ನಯನ ಗಣೇಶ್ ಸಾಲ್ಯಾನ್, ಶರಣ್ ರೈ ಎಂ, ಉಪಸ್ಥಿತರಿದ್ದರು.
ಸಭೆಯ ಆರಂಭದಲ್ಲಿ ಗತ ವರ್ಷದಲ್ಲಿ ನಿಧನ ಹೊಂದಿದ ಸಂಘದ ಸದಸ್ಯರಿಗೆ ಮೌನ ಪ್ರಾರ್ಥನೆ ನಡೆಸಲಾಯಿತು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ರೈ ಸಿ ಸಭಾ ಕಾರ್ಯಕಲಾಪದ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ನಿರ್ದೇಶಕ ಎಸ್.ಡಿ ವಸಂತ ಸ್ವಾಗತಿಸಿದರು. ಉಪಾಧ್ಯಕ್ಷ ಯಾಕೂಬ್ ಮುಲಾರ್ ವಂದಿಸಿದರು.
ಸಿಬ್ಬಂದಿಗಳಾದ ವತ್ಸಲಾ ಎಸ್, ಗಣೇಶ್ ಪಜಿಮಣ್ಣು, ರಿತೇಶ್ ರೈ, ಕು.ಅಕ್ಷತಾ, ಲಿಂಗಪ್ಪ ನಾಯ್ಕ, ಮೋಹನ ನಾಯ್ಕ ಪಿ, ಗಣೇಶ್ ಪಿ ಸಾಲ್ಯಾನ್ ಸಹಕರಿಸಿದರು.
ಸಭೆಯಲ್ಲಿ ಮುಂಡೂರು ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ್ ಎನ್‌ಎಸ್‌ಡಿ, ಕುಕ್ಕಿನಡ್ಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಲಕೃಷ್ಣ ಕಣ್ಣಾರಾಯ ಹಾಗೂ ಗ್ರಾ.ಪಂ ಸದಸ್ಯರು, ಸಂಘದ ಸದಸ್ಯರು ಉಪಸ್ಥಿತರಿದ್ದರು.