ಪುತ್ತೂರು:ಉಪ್ಪಿನಂಗಡಿ ಕಾಮತ್ ಕಟ್ಟಡದ ಪಥಮ ಮಹಡಿಯಲ್ಲಿ ವ್ಯವಹರಿಸುತ್ತಿರುವ ಉಪ್ಪಿನಂಗಡಿ ಕಥೊಲಿಕ್ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಜೋಸೆಫ್ ವಿ.ಎಂರವರ ಅಧ್ಯಕ್ಷತೆಯಲ್ಲಿ ಜರುಗಿತು.
ಸದಸ್ಯತನ, ಪಾಲು ಬಂಡವಾಳ:
ಸಂಘವು ವರದಿ ಸಾಲಿನ ಆರಂಭದಲ್ಲಿ 3032 ಮಂದಿ ಸದಸ್ಯರು ಇದ್ದು, 160 ಮಂದಿ ಹೊಸ ಸದಸ್ಯರು ಸೇರ್ಪಡೆಯಾಗಿ, 17 ಸದಸ್ಯರು ಸದಸ್ಯತ್ವವನ್ನು ತ್ಯಜಿಸಿದ್ದು ಮಾರ್ಚ್ ವರ್ಷಾಂತ್ಯಕ್ಕೆ ರೂ.17,70,327 ಪಾಲು ಬಂಡವಾಳವಿರುತ್ತದೆ. ಮಾರ್ಚ್ ವರ್ಷಾಂತ್ಯಕ್ಕೆ ದೈನಿಕ ಠೇವಣಿ, ನಿರಖು ಠೇವಣಿ, ಆವರ್ತ ಠೇವಣಿ, ಸಂಚಯ ಠೇವಣಿ, ಆದರ್ಶ ಕ್ಯಾಶ್ ಸರ್ಟಿಫಿಕೇಟ್ ಸೇರಿದಂತೆ ಒಟ್ಟು ರೂ.5,10,58,815.18 ಠೇವಣಿಯಿರುತ್ತದೆ. ತಾವು ಸಂಘದ ಮೇಲೆ ವಿಶ್ವಾಸವಿಟ್ಟು, ಠೇವಣಿಯಿರಿಸಿ ಅಭಿವೃದ್ಧಿಗೆ ಕಾರಣರಾದ ಎಲ್ಲಾ ಠೇವಣಿದಾರರಿಗೂ, ಗ್ರಾಹಕರಿಗೂ ಸಂಘದ ಅಧ್ಯಕ್ಷರಾದ ಜೋಸೆಫ್ ವಿ.ಎಂರವರು ಅಭಿನಂದನೆ ಸಲ್ಲಿಸುತ್ತಾ ಮುಂದಿನ ಆರ್ಥಿಕ ವರ್ಷದಲ್ಲಿ ಇನ್ನು ಹೆಚ್ಚಿನ ವ್ಯವಹಾರವನ್ನು ನಡೆಸುವಂತೆ ಅವರು ಸಹಕಾರವನ್ನು ಕೋರಿದರು.
ರೂ.9.33 ಲಕ್ಷ ನಿವ್ವಳ ಲಾಭ, ಶೇ.12 ಡಿವಿಡೆಂಡ್:
ಸಂಘವು ಸದಸ್ಯರ ಆರ್ಥಿಕ ಅಭಿವೃದ್ಧಿಗಾಗಿ ವಿವಿಧ ಸಾಲಗಳನ್ನು ನೀಡಿದ್ದು ಈ ಪೈಕಿ ಮಾರ್ಚ್ ವರ್ಷಾಂತ್ಯಕ್ಕೆ ಅಸ್ತಿ ಅಡವು ಸಾಲ, ವ್ಯಾಪಾರ ಸಾಲ, ವಾಹನ ಸಾಲ, ಚಿನ್ನಾಭರಣ ಸಾಲ, ಠೇವಣಾತಿ ಸಾಲ, ಗೃಹ ಸಾಲ ಸೇರಿದಂತೆ ರೂ.4,40,91,681 ಹೊರ ಬಾಕಿ ಇರುತ್ತದೆ. ಸಂಘದ 2024-2025ನೇ ಸಾಲಿನಲ್ಲಿ ಲೆಕ್ಕ ಪರಿಶೋಧನೆಯನ್ನು ಲೆಕ್ಕ ಪರಿಶೋಧಕರು ನಡೆಸಿದ್ದು ಸಂಘವು ರೂ.9.33 ಲಕ್ಷ ನಿವ್ವಳ ಲಾಭ ಗಳಿಸಿರುತ್ತದೆ. ಈ ಬಾರಿ ಸಂಘದ ಸದಸ್ಯರಿಗೆ ಶೇ.12 ಡಿವಿಡೆಂಡ್ ನೀಡಲಾಗುವುದು ಎಂದು ಅಧ್ಯಕ್ಷರಾದ ಜೋಸೆಫ್ ವಿ.ಎಂರವರು ಸಭೆಯಲ್ಲಿ ಘೋಷಿಸಿದರು.
ಸಂಘದಿಂದ ಅನಾರೋಗ್ಯ ಪೀಡಿತ ಸಂಘದ ಸದಸ್ಯರಿಗೆ ರೂ.5 ಸಾವಿರ ಸಹಾಯಧನವನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಉಪಾಧ್ಯಕ್ಷ ಜೆರಾಲ್ಡ್ ಮಸ್ಕರೇನ್ಹಸ್, ನಿರ್ದೇಶಕರಾದ ಜೋನ್ ಫೆರ್ನಾಂಡೀಸ್, ಜೊಸ್ಸಿ ಸ್ಟೀವನ್ ಮೋಂತೆರೋ, ರಾಬರ್ಟ್ ಡಿ’ಸೋಜ, ವಿನ್ಸೆಂಟ್ ಬ್ರ್ಯಾಗ್ಸ್, ಸುನಿಲ್ ಬ್ರ್ಯಾಗ್ಸ್, ಪ್ರೆಸಿಲ್ಲ ಡಿ’ಸೋಜ,ತಿ ಸವಿತ ಡಿ’ಸೋಜರವರು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಜೋಸೆಫ್ ವಿ.ಎಂ ಸ್ವಾಗತಿಸಿ, ನಿರ್ದೇಶಕ ಇನಾಸ್ ರೊಡ್ರಿಗಸ್ ವಂದಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲ್ಯಾನ್ಸಿ ಡಿ’ಸೋಜಾರವರು ವಾರ್ಷಿಕ ವರದಿಯನ್ನು ಓದಿದರು. ಪ್ರಧಾನ ಶಾಖೆಯ ಲೆಕ್ಕಿಗರಾದ ಕುಮಾರಿ ಸಪ್ನಾ ರೋಜ್ ಮಿನೇಜಸ್, ಕ್ಲರ್ಕ್ ಸ್ಫೂರ್ತಿ, ನೆಲ್ಯಾಡಿ ಶಾಖೆಯ ಅಶ್ವಿತರವರು ಜಮಾ ಮತ್ತು ಖರ್ಚಿನ ತಖ್ತೆ, ಲಾಭ-ನಷ್ಟದ ತಖ್ತೆ, ಆಸ್ತಿ ಜವಾಬ್ದಾರಿ ತಖ್ತೆ, ಅಂದಾಜು ಆಯ-ವ್ಯಯ ಪಟ್ಟಿಯನ್ನು ಓದಿದರು.
ಸದಸ್ಯರುಗಳ ಸಹಕಾರವೇ ಸಂಘವು ಅಭಿವೃದ್ಧಿ…
ಸಂಘದ ಮೇಲೆ ವಿಶ್ವಾಸವಿಟ್ಟು ಠೇವಣಿಯಿರಿಸಿ ಅಭಿವೃದ್ಧಿಗೆ ಕಾರಣರಾದ ಎಲ್ಲಾ ಠೇವಣಿದಾರರಿಗೂ, ಗ್ರಾಹಕರಿಗೂ, ಅಲ್ಲದೆ ಸೂಕ್ತ ಸಮಯದಲ್ಲಿ ಸಾಲ ಮರುಪಾವತಿ ಮಾಡಿ ಸಹಕರಿಸಿದ ಸದಸ್ಯರೆಲ್ಲರಿಗೂ ನಮ್ಮ ಸಂಘದ ಕಾರ್ಯಕಲಾಪಗಳಿಗೆ ಸದಾ ಮಾರ್ಗದರ್ಶನ ನೀಡುತ್ತಿರುವ ಎಲ್ಲರಿಗೂ ನಮ್ಮ ಸಂಘದ ಪರವಾಗಿ ಕೃತಜ್ಞತೆಗಳು. ಸದಸ್ಯರುಗಳ ಸಹಕಾರವೇ ನಮ್ಮ ಸಂಘದ ವ್ಯವಹಾರ ವೃದ್ಧಿಯಾಗಲು ಕಾರಣವಾಗಿದೆ. ಇದೇ ರೀತಿ ನಿಮ್ಮೆಲ್ಲರ ನಂಬಿಕೆ, ಉತ್ತೇಜನ ಹಾಗೂ ಪ್ರೋತ್ಸಾಹದಿಂದ ಈ ಸಹಕಾರ ಸಂಘವು ಮುಂದೆ ಅಭಿವೃದ್ಧಿ ಸಾಧಿಸಬೇಕಾಗಿದೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಸೇವೆ ಸಲ್ಲಿಸಲು ಈ ಸಹಕಾರ ಸಂಘವು ಸದಾ ಸಿದ್ಧವಿದೆ.
ಜೋಸೆಫ್ ವಿ.ಎಂ. ಅಧ್ಯಕ್ಷರು, ಉಪ್ಪಿನಂಗಡಿ ಕಥೊಲಿಕ್ ವಿವಿಧೋದ್ದೇಶ ಸಹಕಾರ ಸಂಘ ನಿ.