ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ : ರೂ.265 ಕೋಟಿ ವ್ಯವಹಾರ | ರೂ.1.15 ಕೋಟಿ ಲಾಭ | ಶೇ.12 ಡಿವಿಡೆಂಡ್

0

ಪುತ್ತೂರು: ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು 2024-25ನೇ ಸಾಲಿನಲ್ಲಿ ರೂ.265 ಕೋಟಿ ವ್ಯವಹಾರ ಮಾಡಿ ರೂ.1 ಕೋಟಿ 15 ಲಕ್ಷ ನಿವ್ವಳ ಲಾಭ ಗಳಿಸಿದೆ. ಶೇ.97.93 ಸಾಲ ಮರುಪಾವತಿಯಾಗಿ ಅಡಿಟ್ ವರ್ಗೀಕರಣದಲ್ಲಿ `ಎ’ ತರಗತಿಯನ್ನು ಪಡೆದಿರುವ ನಮ್ಮ ಸಹಕಾರ ಸಂಘದ ಸಾಧನೆಗಾಗಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ ವತಿಯಿಂದ ಸತತವಾಗಿ 7ನೇ ಬಾರಿಗೆ ಪ್ರಶಸ್ತಿಗೆ ಭಾಜನವಾಗಿರುತ್ತದೆ ಎಂದು ಆರ್ಯಾಪು ಗ್ರಾಮದ ಸಂಪ್ಯದಲ್ಲಿರುವ ಸಹಕಾರಿ ಸಂಘದ ಕೇಂದ್ರ ಕಛೇರಿಯ ಸಭಾಭವನದಲ್ಲಿ ನಡೆದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷ ಹೆಚ್.ಮಹಮ್ಮದ್ ಆಲಿಯವರು ಹೇಳಿದರು.


ನಮ್ಮ ಸಹಕಾರಿ ಸಂಘದ ವರದಿ ವರ್ಷಾಂತ್ಯಕ್ಕೆ ರೂ.3 ಕೋಟಿ 41 ಲಕ್ಷ ಸದಸ್ಯರ ಪಾಲು ಬಂಡವಾಳ ಹೊಂದಿದ್ದು ರೂ.22 ಕೋಟಿ 80 ಲಕ್ಷ ಸದಸ್ಯರ ಠೇವಣಿ ಸಂಗ್ರಹವಿರುತ್ತದೆ, ಸದಸ್ಯರ ಹೊರಬಾಕಿ ಸಾಲ ರೂ.32 ಕೋಟಿ 51 ಲಕ್ಷ ಇರುತ್ತದೆ. ದ.ಕ.ಜಿಲ್ಲಾ ಬ್ಯಾಂಕಿನ ಸಾಲ ರೂ.19 ಕೋಟಿ 65 ಲಕ್ಷ ಹಾಗೂ ದ.ಕ.ಜಿಲ್ಲಾ ಬ್ಯಾಂಕಿನಲ್ಲಿ ಪಾಲು ಬಂಡವಾಳ 1 ಕೋಟಿ ಮತ್ತು ವಿವಿಧ ಠೇವಣಿ ರೂ.21 ಕೋಟಿ 87 ಲಕ್ಷ ಇರುತ್ತದೆ. ನಮ್ಮ ಸಹಕಾರ ಸಂಘದ ಅಭಿವೃದ್ದಿಗೆ ಸಂಪೂರ್ಣ ಸಹಕಾರ ನೀಡಿರುವ ಸಹಕಾರ ಸಂಘದ ಸದಸ್ಯರಿಗೆ ಅಧ್ಯಕ್ಷರಾದ ಎಚ್.ಮಹಮ್ಮದ್ ಆಲಿರವರು ಅಭಿನಂದನೆಯನ್ನು ಸಲ್ಲಿಸಿದರು.


ಮಹಾಸಭೆಯ ಕಲಾಪದಲ್ಲಿ ಸದಸ್ಯರಾದ ಯನ್.ಗೋಪಾಲ ಭಟ್ ಕುಂಜೂರುಪಂಜ ಇವರು ಪ್ರಸಕ್ತ ವರ್ಷ ವಿಪರೀತ ಮಳೆಯ ಕಾರಣ ಅಡಿಕೆ ಬೆಳೆಗಾರರು ಕೊಳೆರೋಗದಿಂದ ಬಾರಿ ನಷ್ಟ ಅನುಭವಿಸಿದ್ದು ಈ ಬಗ್ಗೆ ಬೆಳೆ ನಷ್ಟ ಪರಿಹಾರಕ್ಕೆ ಸಹಕಾರ ಸಂಘ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲು ಸಲಹೆ ನೀಡಿದರು. ವಿಜಯ್ ಬಿ.ಎಸ್ ಬೈಲಾಡಿ, ಚಂದ್ರಹಾಸ ರೈ ಕೊಡೆಂಕಿರಿ, ರಮೇಶ್ ರೈ ಡಿಂಬ್ರಿ, ಉಮೇಶ್ ರೈ ನಡುಬೈಲು, ಮತ್ತು ಚಂದ್ರಹಾಸ ರೈ ಡಿಂಬ್ರಿ ಮೊದಲಾದವರು ಸೂಕ್ತ ಸಲಹೆ ಸೂಚನೆ ನೀಡಿದರು. ಸಭೆಯಲ್ಲಿ ಹೆಚ್ಚಿನ ಡಿವಿಡೆಂಡ್ ನೀಡಲು ಸದಸ್ಯರು ಒತ್ತಾಯಿಸಿದಾಗ ಶೇಕಡಾ 1ರಷ್ಟು ಹೆಚ್ಚಳ ಮಾಡಿ ಶೇ.12 ರಷ್ಟು ಡಿವಿಡೆಂಡ್ ನೀಡಲಾಗುವುದು ಎಂದು ಘೋಷಿಸಿದ ಅಧ್ಯಕ್ಷ ಹೆಚ್. ಮಹಮ್ಮದ್ ಆಲಿಯವರು ಮುಂದಿನ ವರ್ಷದಲ್ಲಿ ಠೇವಣಿಗಳ ಗುರಿ, ಸಾಲ ನೀಡುವ ಗುರಿಯನ್ನು ಹೆಚ್ಚಳ ಮಾಡಿ ವ್ಯವಹಾರವನ್ನು ವೃದ್ದಿಪಡಿಸಿ ಹೆಚ್ಚು ಲಾಭ ಗಳಿಸಿದಲ್ಲಿ ಹೆಚ್ಚು ಡಿವಿಡೆಂಡ್ ಕೊಡುವಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.


ಪ್ರಶಕ್ತ ಸಾಲಿನಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಲ್ಲಿ 748 ಸದಸ್ಯರನ್ನು ನೋಂದಾಯಿಸಿ 45 ಲಕ್ಷ ಪ್ರಿಮಿಯಂಯನ್ನು ಪಾವತಿಸಲಾಗಿದೆ. ಯಶಸ್ವಿನಿ ಯೋಜನೆಯಲ್ಲಿ 421 ಕುಟುಂಬಗಳನ್ನು ನೋಂದಾಯಿಸಿ ಒಟ್ಟು ರೂ.1 ಲಕ್ಷ 72 ಸಾವಿರ ಪ್ರಿಮಿಯಂಗಳನ್ನು ಪಾವತಿ ಮಾಡಲಾಗಿದೆ. ವರದಿ ಸಾಲಿನಲ್ಲಿ ಒಟ್ಟು 16 ಮೃತಪಟ್ಟ ಸದಸ್ಯರಿಗೆ ರೂ.5000ರಂತೆ ಸಹಾಯಧನ ಪಾವತಿಸಲಾಗಿದೆ ಎಂದು ಅಧ್ಯಕ್ಷರಾದ ಎಚ್.ಮಹಮ್ಮದ್ ಆಲಿರವರು ಸಭೆಗೆ ಮಾಹಿತಿ ನೀಡಿದರು.


ಸಾಧಕರಿಗೆ ಸನ್ಮಾನ:
ರಂಗಭೂಮಿಯಲ್ಲಿ ಹಾಗೂ ನೃತ್ಯ ಕ್ಷೇತ್ರದಲ್ಲಿ ಅಪಾರ ಸಾಧನೆಗೈದು ಇದೀಗ ಚಲನಚಿತ್ರ ಪ್ರದರ್ಶಕರಾಗಿ ಸೇವೆ ಸಲ್ಲಿಸುತ್ತಿರುವ ಸಹಕಾರಿ ಸಂಘದ ಸದಸ್ಯ ಬಾಲಕೃಷ್ಣ ಶೆಟ್ಟಿ ಕುಕ್ಕಾಡಿ ಹಾಗೂ ಆರ್ಯಾಪು ಪ್ರಾ.ಸ.ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ನಿರ್ದೇಶಕರಾಗಿರುವ, ಇದೀಗ ಕಾರ್ಪಾಡಿ ಶ್ರೀ ಸುಬ್ರಮಣ್ಯ ದೇವಸ್ಥಾನದ ಆಡಳಿತ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ 4ನೇ ಬಾರಿಗೆ ಸರಕಾರದಿಂದ ನೇಮಕಗೊಂಡಿರುವ ಸದಾನಂದ ಶೆಟ್ಟಿ ಕೂರೇಲುರವರನ್ನು ಸನ್ಮಾನಿಸಲಾಯಿತು.


ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಯಂತಿ ಭಾಸ್ಕರ್‌ರವರು ಸಂಘದ ಮಹಾಸಭೆಯ ಆಮಂತ್ರಣ ಪತ್ರ ಮತ್ತು ಹಿಂದಿನ ಸಾಲಿನ ವಾರ್ಷಿಕ ಮಹಾಸಭೆಯ ನಡವಳಿಯನ್ನು ಮಂಡಿಸಿದರು. ಸಂಘದ ವ್ಯವಸ್ಥಾಪಕರಾದ ಅಜಿತ್ ಕುಮಾರ್ ರೈಯವರು 2024-25ನೇ ಸಾಲಿನ ವಾರ್ಷಿಕ ವರದಿ, ಆಯವ್ಯಯ ಪಟ್ಟಿ, ಅಂದಾಜು ಬಜೆಟ್, ಮೊದಾಲಾದವುಗಳನ್ನು ಮಂಡಿಸಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಸುರೇಂದ್ರ ರೈ ಬಳ್ಳಮಜಲು, ನಿರ್ದೇಶಕರಾದ ಸತೀಶ್ ನಾೖಕ್  ಪರ್ಲಡ್ಕ, ಸದಾನಂದ ಶೆಟ್ಟಿ ಕೂರೇಲು, ಗಣೇಶ್ ರೈ ಬಳ್ಳಮಜಲು, ಗಣೇಶ್ ರೈ ತೊಟ್ಲಮೂಲೆ, ಶೀನಪ್ಪ ಮರಿಕೆ, ಇಸ್ಮಾಯಿಲ್ ಮಲಾರು, ತಿಮ್ಮಪ್ಪ ಜಂಗಮುಗೇರು, ಸಂಶುದ್ದೀನ್ ನೀರ್ಕಜೆ, ರಂಜಿತ್ ಬಂಗೇರ ಸಂಪ್ಯ ಉಪಸ್ಥಿತರಿದ್ದರು.


ಕುಮಾರಿ ಮಾನ್ಯ ಬಾರಿಕೆ ಪ್ರಾರ್ಥಿಸಿದರು, ನಿರ್ದೇಶಕಿ ಶ್ರೀಮತಿ ಚಂದ್ರಕಲಾ ಓಟೆತ್ತಿಮಾರು ಸ್ವಾಗತಿಸಿ, ನಿರ್ದೇಶಕಿ ಶ್ರೀಮತಿ ತೆರೇಜಾ ಎಂ.ಸಿಕ್ವೇರಾ ವಂದಿಸಿದರು. ಸಂಘದ ಸಿಬ್ಬಂದಿ ಉಮೇಶ್ ಯಸ್.ಕೆ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ಅಜಿತ್ ಕುಮಾರ್ ರೈ, ಶ್ರೀಮತಿ ಸುಭಾಷಿನಿ ವಿ.ರೈ, ವಿನಯ್ ಕುಮಾರ್ ರೈ, ಶ್ರೀಮತಿ ಪ್ರಶಾಂತಿ, ಅರ್ಜುನ್ ಭಾಸ್ಕರ್, ನವೋದಯ ಸ್ವ-ಸಹಾಯ ಸಂಘದ ಪ್ರೇರಕಿ ಶ್ರೀಮತಿ ಮೋಹಿನಿ ಹಾಗೂ ಪಿಗ್ಮಿ ಸಂಗ್ರಾಹಕ ವಸಂತ ಗೌಡ, ಸಂಘದ ಸರಾಫರಾದ ಮುರಳಿಧರ ಆಚಾರ್ಯ ಹಾಗೂ ಪ್ರಮೋದ್ ಸಹಕರಿಸಿದರು.



ಹೊಸ ಯೋಜನೆ ಘೋಷಣೆ..
ಸಂಘವು ಇಂದು ಅಭಿವೃದ್ದಿಪಥದಲ್ಲಿ ಸಾಗಬೇಕಾದರೆ ಸಂಘದ ಸದಸ್ಯರು, ಠೇವಣಿದಾರರು, ಗ್ರಾಹಕರು, ಸಾಲ ಪಡೆದು ಸೂಕ್ತ ಸಮಯದಲ್ಲಿ ಮರುಪಾವತಿಸಿದ ಗ್ರಾಹಕರು ಕಾರಣರಾಗಿದ್ದಾರೆ. ಮುಂದಿನ ದಿನಗಳಲ್ಲೂ ಸಂಘವು ಅಭಿವೃದ್ಧಿಪಥದತ್ತ ಸಾಗಬೇಕಾದರೆ ಎಲ್ಲರ ಸಹಕಾರ ಬೇಕಾಗಿದೆ. ಅಪಘಾತದಲ್ಲಿ ಹಾಗೂ ಮಾರಣಾಂತಿಕ ಖಾಯಿಲೆಗಳಿಂದ ಮೃತಪಟ್ಟ ಸದಸ್ಯರಿಗೆ ರೂ.1 ಲಕ್ಷ ಹಾಗೂ ಚಿಕಿತ್ಸೆ ವೆಚ್ಚಕ್ಕೆ ರೂ.50 ಸಾವಿರ ನೀಡುವ ಸಹಕಾರ ಸಂಜೀವಿನಿ ವಿಮೆ ಎಂಬ ಹೊಸ ಯೋಜನೆಯೊಂದಿಗೆ ಸಹಕಾರಿ ಸಂಘದ ಸಿಬ್ಬಂದಿಗಳಿಗೆ ಹೊಸದಾಗಿ ಆರೋಗ್ಯ ವಿಮಾ ಯೋಜನೆಯನ್ನು ಜಾರಿಗೆ ತರಲಾಗುವುದು
ಹೆಚ್.ಮಹಮ್ಮದ್ ಆಲಿ, ಅಧ್ಯಕ್ಷರು, ಆರ್ಯಾಪು ಪ್ರಾ.ಕೃ.ಪತ್ತಿನ ಸಹಕಾರ ಸಂಘ

ಸನ್ಮಾನ..
ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ. ಪಿಯುಸಿ, ಡಿಗ್ರಿ, ವೃತ್ತಿಪರ ಕೋರ್ಸುಗಳಲ್ಲಿ ಡಿಸ್ಟಿಂಕ್ಷನ್ ಪಡೆದಿರುವ ಸಹಕಾರಿ ಸಂಘದ ಸದಸ್ಯರ ಒಟ್ಟು 34 ಮಕ್ಕಳಿಗೆ ಸನ್ಮಾನಿಸುವ ಕಾರ್ಯಕ್ರಮ ನಡೆಸಲಾಯಿತು. ವಿಶೇಷವಾಗಿ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಕುರಿಯ ಗ್ರಾಮದ ಕೊಡ್ಲಾರು ನಿವಾಸಿಯಾಗಿರುವ ವಿದ್ಯಾರ್ಥಿ ಅಂಕಿತ್ ಎನ್.ಕೆ ಹಾಗೂ 67 ಕೆ.ಜಿ ವಿಭಾಗದ ಭಾರ ಎತ್ತುವಿಕೆಯಲ್ಲಿ ರಾಜ್ಯಮಟ್ಟದಲ್ಲಿ 3ನೇ ಸ್ಥಾನ ಪಡೆದಿರುವ ಮರಿಕೆಯ ದಿಶಾನ್ ಎಂ.ರವರಿಗೆ ಸಭೆಯಲ್ಲಿ ಸನ್ಮಾನಿಸಲಾಗಿದ್ದು, ರೂ.5000ರಂತೆ ಪ್ರೊತ್ಸಾಹಧನದೊಂದಿಗೆ ಸನ್ಮಾನಪತ್ರ ಹಾಗೂ ಟಿಪಿನ್ ಬಾಕ್ಸ್ ಉಡುಗೊರೆಯಾಗಿ ನೀಡಲಾಯಿತು.

LEAVE A REPLY

Please enter your comment!
Please enter your name here