ಹಿಂದು ಧರ್ಮಕ್ಕೆ ಆದ್ಯತೆ ಕೊಡುವ ಕೆಲಸ ಆಗಬೇಕು-ಶಾಸಕ ಅಶೋಕ್ ಕುಮಾರ್ ರೈ
ನಿಡ್ಪಳ್ಳಿ: ಪಾಣಾಜೆಯ ಜನತೆ ಯಾವಾಗಲೂ ಶಿಸ್ತನ್ನು ಕಾಪಾಡುವವರು ಎಂಬುದಕ್ಕೆ ಇಂದಿನ ಈ ಕಾರ್ಯಕ್ರಮ ನೋಡುವಾಗ ಕಾಣುತ್ತದೆ.ಈ ಕೃಷ್ಣಾಷ್ಟಮಿ ಕಾರ್ಯಕ್ರಮ ಯಾದವ ಸಮಾಜದ ಕಾರ್ಯಕ್ರಮವಾದರೂ ಇಲ್ಲಿ ಎಲ್ಲಾ ಜಾತಿಯ ಜನರನ್ನು ಒಂದೇ ತಾಯಿಯ ಮಕ್ಕಳಂತೆ ಒಟ್ಟು ಸೇರಿಸಿ ಕೊಂಡು ಮಾಡಿದ ಒಂದು ಉತ್ತಮ ಕಾರ್ಯಕ್ರಮ. ಆದುದರಿಂದ ಇಂತಹ ಧಾರ್ಮಿಕ ಕಾರ್ಯಕ್ರಮಗಳಿಂದ ಹಿಂದು ಧರ್ಮಕ್ಕೆ ಹೆಚ್ಚಿನ ಆದ್ಯತೆ ನೀಡುವ ಕೆಲಸ ಆಗಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಅವರು ಯಾದವ ಸಭಾ ಪ್ರಾದೇಶಿಕ ಸಮಿತಿ ಆರ್ಲಪದವು ಪಾಣಾಜೆ ಇದರ ವತಿಯಿಂದ ಸೆ.14 ರಂದು ಆರ್ಲಪದವು ರಣಮಂಗಲ ಸಭಾಭವನದಲ್ಲಿ ನಡೆದ 19 ನೇ ವರ್ಷದ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಅಚ್ಚುಕಟ್ಟಾದ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಬೆಟ್ಟಂಪಾಡಿ, ನಿಡ್ಪಳ್ಳಿ, ಪಾಣಾಜೆ ನನಗೆ ಆಶೀರ್ವಾದ ಮಾಡಿದ ಈ ಭಾಗದ ನನ್ನ ಅತೀ ಪ್ರೀತಿಯ ಗ್ರಾಮಗಳು. ಕೋಡಿಂಬಾಡಿ ನನ್ನ ಗ್ರಾಮವಾದರೂ ಪಾಣಾಜೆಯು ನನ್ನ ಊರು ಇಲ್ಲಿಯ ಜನರು ಆಶೀರ್ವಾದ ಮಾಡಿದ್ದರಿಂದ ನಾನು ಶಾಸಕನಾದೆ ಎಂದು ಹೇಳಿ ಯಶಸ್ವಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
- ಗೊಂದಲಕ್ಕೆ ಪರಿಹಾರ ಸಿಗಲಿ; ಪದ್ಮರಾಜ್ ಆರ್.ಪೂಜಾರಿ ಕಾರ್ಯಕ್ರಮದಲ್ಲಿ ವಿಶೇಷ ಅಹ್ವಾನಿತರಾಗಿ ಭಾಗವಹಿಸಿದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್.ಪೂಜಾರಿ ಮಾತನಾಡಿ ಹಿಂದುಗಳ ಹಬ್ಬ ಹರಿದಿನಗಳಲ್ಲಿ ಸಂಭ್ರಮ ಪಡ ಬೇಕಾದ ಸಂದರ್ಭಗಳಲ್ಲಿ ಹೆಚ್ಚಾಗಿ ಗೊಂದಲಗಳನ್ನು ಕಾಣುತ್ತಿದ್ದೇವೆ. ಈ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸ ನಡೆಯಬೇಕು. ನಮ್ಮ ಸ್ವಾಮೀಜಿಗಳು, ಧಾರ್ಮಿಕ ಮುಖಂಡರು ಸೇರಿ ಸರಿ ಪಡಿಸುವ ಕೆಲಸ ಆಗಬೇಕು ಎಂದು ಹೇಳಿದರು. ಈ ಕಾರ್ಯಕ್ರಮ ಬಹಳ ಅರ್ಥಪೂರ್ಣವಾಗಿ ನಡೆದಿದ್ದು ನನ್ನ ಮೇಲೆ ಪ್ರೀತಿಯಿಂದ ಕರೆದಿದ್ದೀರಿ ಎಂದು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
- ಶ್ರೀಕೃಷ್ಣ ಜಗತ್ತಿಗೆ ಬೆಳಕು ಶಾಂತಿ ನೀಡಿದ ದೇವರು- ನಳಿನ್ ಕುಮಾರ್ ಕಟೀಲ್
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ ಭಗವದ್ಗೀತೆ ಮುಖಾಂತರ ಜಗತ್ತಿಗೆ ಉತ್ತಮ ಸಂದೇಶ ನೀಡಿದ ವ್ಯಕ್ತಿ ಶ್ರೀಕೃಷ್ಣ. ಶ್ರೀಕೃಷ್ಣನ ಬದುಕು,ಉತ್ತಮ ಜೀವನದ ಸಂದೇಶವನ್ನು ನೀಡುವ ಕೆಲಸ ಇಲ್ಲಿಯ ಯಾದವ ಸಮಿತಿ ನೀಡಿದೆ.ಆ ನಿಟ್ಟಿನಲ್ಲಿ ಶ್ರೀಕೃಷ್ಣ ಇಡೀ ಜಗತ್ತಿಗೆ ಬೆಳಕು ಮತ್ತು ಶಾಂತಿಯನ್ನು ನೀಡಿದ ದೇವರು ಎಂದು ಹೇಳಿದರು. ಆತ್ಮವೇ ಪರಮಾತ್ಮ ಎಂಬ ಸಂದೇಶ ನೀಡಿರುವ ಶ್ರೀಕೃಷ್ಣನ ಆದರ್ಶದ ಮೂಲಕ ಮಕ್ಕಳಿಗೆ ಅವನ ಜೀವನ ಪದ್ದತಿ, ಸಂಸ್ಕಾರ, ಆಚಾರ ವಿಚಾರಗಳನ್ನು ನೀಡುವ ಕೆಲಸ ಆಗಬೇಕು ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
- ಶ್ರೀಕೃಷ್ಣ ದೈವಾಂಶ ಸಂಭೂತ : ಸಂಜೀವ ಮಠಂದೂರು
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ ಶ್ರೀಕೃಷ್ಣ ಜನ್ಮಾಷ್ಟಮಿ ಮೂಲಕ ಕೃಷ್ಣನ ಆದರ್ಶಗಳು ನಮಗೆ ತಿಳಿಯುತ್ತದೆ. ಯಾದವ ಸಮಾಜ ಒಬ್ಬ ದೈವಾಂಶ ಸಂಭೂತ ವ್ಯಕ್ತಿಯನ್ನು ನೀಡಿದ ಸಮಾಜ. ಇಂತಹ ಉತ್ತಮ ಸಂದೇಶ ಎಲ್ಲಾ ಸಮಾಜದಿಂದ ಜಗತ್ತಿಗೆ ಬರ ಬೇಕಾಗಿದೆ ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ರಣಮಂಗಲ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀಕೃಷ್ಣ ಬೋಳಿಲ್ಲಾಯ ಕಡಮಾಜೆ ಪಾಣಾಜೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲರೂ ಸಹಕಾರ ನೀಡುವಂತೆ ವಿನಂತಿಸಿದ ಅವರು ಈ ರಣಮಂಗಲ ಸಭಾಭವನ ವರ್ಷದ ಒಳಗೆ ಒಂದು ಸುಸಜ್ಜಿತ ಸಭಾಭವನ ಆಗಲು ಎಲ್ಲರೂ ತಮ್ಮ ಕೊಡುಗೆ ನೀಡುವಂತೆ ಹೇಳಿದರು. ಮುಖ್ಯ ಅತಿಥಿಗಳಾದ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಿವ್ಯನಾಥ ಶೆಟ್ಟಿ ಕಾವು, ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಡಾ.ರಘು ಬೆಳ್ಳಿಪ್ಪಾಡಿ, ಅಜಿತ್ ಕುಮಾರ್ ಪಾಲೇರಿ,ಸುಭಾಷ್ ರೈ ಬೆಳ್ಳಿಪ್ಪಾಡಿ, ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದ ಟ್ರಸ್ಟಿ ನಾರಾಯಣನ್ ಮಾತನಾಡಿ ಕಾರ್ಯಕ್ರಮದ ಆಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು. ಪುತ್ತೂರು ವಿದ್ಯಾಮಾತಾ ಆಕಾಡೆಮಿಯ ಆಡಳಿತ ನಿರ್ದೇಶಕ ಭಾಗ್ಯೇಶ್ ರೈ ಇವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು.ಸನ್ಮಾನಿತರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಪೊಲೀಸ್ ಇಲಾಖೆಯ ಅಧಿಕಾರಿ ಜಯಂತಿ ಶಶಿಧರ್, ಪಾಣಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಜಯಶ್ರೀ ದೇವಸ್ಯ, ಬಿ.ಜೆ.ಪಿ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಪುತ್ತೂರು ಬಿ.ಜೆ.ಪಿ ಗ್ರಾಮಾಂತರ ಮಂಡಲದ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ವಿಶ್ವಹಿಂದೂ ಪರಿಷತ್ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷ ಜಯಂತ ರೈ ಕಂಬಳತ್ತಡ್ಕ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಹರೀಶ್ ಬಿಜತ್ರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯಾದವ ಸಭಾ ತಾಲೂಕು ಸಮಿತಿ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ ಅಧ್ಯಕ್ಷತೆ ವಹಿಸಿದ್ದರು. ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯಕ್, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಕಾರ್ಯಕ್ರಮದ ನಡುವಲ್ಲಿ ಆಗಮಿಸಿ ಶುಭ ಹಾರೈಸಿ ತೆರಳಿದ್ದರು. ಶ್ರೀ ಹರಿ ನಡುಕಟ್ಟ ಪಾಣಾಜೆ ಸ್ವಾಗತಿಸಿ, ದಿನೇಶ್ ಯಾದವ್ ವಂದಿಸಿದರು. ಪ್ರದೀಪ್ ಪಾಣಾಜೆ ಕಾರ್ಯಕ್ರಮ ನಿರೂಪಿಸಿದರು. ಧಾರ್ಮಿಕ ಕಾರ್ಯಕ್ರಮಗಳು;ಬೆಳಿಗ್ಗೆ ಬಾಲಕೃಷ್ಣ ಮಣಿಯಾಣಿ ಪಡ್ಯಂಬೆಟ್ಟು ಇವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ನಂತರ ಗಣಹೋಮ ನಡೆದು ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ನಂತರ ಶ್ರೀ ಕೃಷ್ಣಾರ್ಪಣ ಪೂಜೆ ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಂತರ ಪಲ್ಲಪೂಜೆ ನಡೆದು ಅನ್ನಸಂತರ್ಪಣೆ ನಡೆಯಿತು. ಅಲ್ಲದೆ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ವಿವಿಧ ಸ್ಪರ್ದಾ ಕಾರ್ಯಕ್ರಮಗಳು;. ಪುರುಷರಿಗೆ, ಮಹಿಳೆಯರಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮ ಹಾಗೂ ಪುಟಾಣಿ ಮಕ್ಕಳಿಗೆ ಶ್ರೀಕೃಷ್ಣ ವೇಷ ಸ್ಪರ್ಧೆ ನಡೆಯಿತು.