ನೆಲ್ಯಾಡಿ: ಜೆಸಿಐ ನೆಲ್ಯಾಡಿ, ಮಹಿಳಾ ಜೇಸಿ ಹಾಗೂ ಜೂನಿಯರ್ ಜೇಸಿವಿಂಗ್ ನೆಲ್ಯಾಡಿ ಇದರ ಜೇಸಿ ಸಪ್ತಾಹದ ಅಂಗವಾಗಿ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಮಂಗಳೂರು, ಅಶ್ವಿನ್ ಒಪ್ಟಿಕಲ್ಸ್ ಮತ್ತು ಕ್ಲಿನಿಕ್ಸ್ ಕಡಬ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಟ್ಟೆಮಜಲು ಒಕ್ಕೂಟದ ಸಹಯೋಗದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ ಹಾಗೂ ಕಡಬ ಅಶ್ವಿನ್ ಒಪ್ಟಿಕಲ್ಸ್ ಮತ್ತು ಕ್ಲಿನಿಕ್ಸ್ ಇವರ ವತಿಯಿಂದ ಉಚಿತ ಕನ್ನಡಕ ವಿತರಣೆ ಶಿಬಿರ ಸೆ.೧೪ರಂದು ನೆಲ್ಯಾಡಿ ಪಿಎಂಶ್ರೀ ಸರಕಾರಿ ಉ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ, ಶಿಕ್ಷಣ ತಜ್ಞ ಅಬ್ರಹಾಂ ವರ್ಗೀಸ್‌ರವರು ಶಿಬಿರ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವ ಗ್ರಾಮಸ್ಥರಿಗೆ ಇಂತಹ ಶಿಬಿರಗಳು ವರದಾನವಾಗಿದೆ. ಕಳೆದ 10 ವರ್ಷಗಳಿಂದ ನೇತ್ರ ಚಿಕಿತ್ಸಾ ಶಿಬಿರ ಸಂಘಟಿಸುತ್ತಿರುವ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಗಂಗಾಧರ ಶೆಟ್ಟಿ ಹೊಸಮನೆಯವರ ಸೇವೆ ಶ್ಲಾಘನೀಯ ಎಂದರು.
ಜಿಲ್ಲಾ ವೆನ್‌ಲಾಕ್ ಆಸ್ಪತ್ರೆಯ ನಿವೃತ್ತ ನೇತ್ರ ಪರಿವೀಕ್ಷಕ ಶಾಂತರಾಜ್‌ರವರು ಶಿಬಿರದ ಬಗ್ಗೆ ಮಾಹಿತಿ ನೀಡಿದರು. ಅಧ್ಯಕ್ಷತೆ ವಹಿಸಿದ್ದ ನೆಲ್ಯಾಡಿ ಜೇಸಿಐ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿಯವರು ಮಾತನಾಡಿ, ಜೇಸಿ ಸಪ್ತಾಹದ ಅಂಗವಾಗಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ವೈದ್ಯಕೀಯ ಶಿಬಿರ, ನೇತ್ರ ಚಿಕಿತ್ಸಾ ಶಿಬಿರ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು. ಮುಖ್ಯ ಅತಿಥಿಗಳಾದ ನೇತ್ರ ತಜ್ಞರಾದ ಡಾ.ಅಶ್ವಿನ್ ಸಾಗರ್, ಡಾ.ವಿಕಾಸ್ ಎಸ್.ಎಂ., ನೆಲ್ಯಾಡಿ ಪಿಎಂಶ್ರೀ ಸರಕಾರಿ ಉ.ಹಿ.ಪ್ರಾ.ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ದಿನಕರ್ ಕೆ.ಎಸ್., ಶಾಲಾ ಹಿರಿಯ ಶಿಕ್ಷಕಿ ಮೇರಿಜಾನ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಟ್ಟೆಮಜಲು ಒಕ್ಕೂಟದ ಅಧ್ಯಕ್ಷ ಮಾರ್ಷಲ್ ಡಿ.ಸೋಜ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.
58ನೇ ನೇತ್ರ ಚಿಕಿತ್ಸಾ ಶಿಬಿರದ ಸಂಘಟಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಗಂಗಾಧರ ಶೆಟ್ಟಿ ಹೊಸಮನೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಜೇಸಿ ಸಪ್ತಾಹದ ಯೋಜನಾ ನಿರ್ದೇಶಕ ಪುರಂದರ ಗೌಡ ಡೆಂಜ ವಂದಿಸಿದರು.
160 ಮಂದಿಯಿಂದ ತಪಾಸಣೆ;
ಶಿಬಿರದಲ್ಲಿ 160ಕ್ಕೂ ಹೆಚ್ಚು ಸಾರ್ವಜನಿಕರು ಕಣ್ಣಿನ ತಪಾಸನೆ ಮಾಡಿಸಿದರು. ಇದರಲ್ಲಿ 10 ಮಂದಿಯನ್ನು ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗಾಗಿ ಜಿಲ್ಲಾ ವೆನ್ಲಕ್ ಆಸ್ಪತ್ರೆಗೆ ಶಿಫಾರಸು ಮಾಡಲಾಯಿತು. 80 ಮಂದಿ ಫಲಾನುಭವಿಗಳಿಗೆ ಉಚಿತ ಕನ್ನಡಕವನ್ನು ಡಾ.ಶಾಂತರಾಜ್ ರವರು ಕಡಬ ಅಶ್ವಿನ್ ಒಪ್ಟಿಕಲ್ಸ್ ವತಿಯಿಂದ ನೀಡಿದರು.
ಸನ್ಮಾನ:
ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ, ಶಿಕ್ಷಣ ತಜ್ಞರಾದ ಅಬ್ರಹಾಂ ವರ್ಗೀಸ್ ಅವರನ್ನು ಸಮಾರಂಭದಲ್ಲಿ ಶಾಲು, ಹಾರಾರ್ಪಣೆ, ಹಣ್ಣು ಹಂಪಲು, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.