ಪುತ್ತೂರು:ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಅಧಿಸೂಚಿತ ದೇವಾಲಯಗಳ ಸೇವಾ ದರಗಳನ್ನು ಪರಿಷ್ಕರಣೆ ಮಾಡಲಾಗಿದೆ. ರಾಜ್ಯದ ಪ್ರಸಿದ್ಧ ಕ್ಷೇತ್ರವಾಗಿರುವ ಕಡಬ ತಾಲೂಕಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ ಮತ್ತು ಶ್ರೀ ಸೂರ್ಯನಾರಾಯಣಸ್ವಾಮಿ ದೇವಾಲಯ ಮರೋಳಿ ಸೇರಿ ದ.ಕ.ಜಿಲ್ಲೆಯ ನಾಲ್ಕು ದೇವಸ್ಥಾನಗಳ ಸಹಿತ ರಾಜ್ಯದಲ್ಲಿ ಪ್ರವರ್ಗ ‘ಎ’ಗೆ ಸೇರಿರುವ 14 ದೇವಸ್ಥಾನಗಳ ಸೇವಾ ದರಗಳನ್ನು ಪರಿಷ್ಕರಣೆ ಮಾಡಲಾಗಿದೆ.
ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಅಧಿಸೂಚಿತ ಸಂಸ್ಥೆಗಳಲ್ಲಿ ಆಯಾ ದೇವಾಲಯದ ರೂಢಿ ಸಂಪ್ರದಾಯ ಮತ್ತು ಪದ್ಧತಿಗಳಿಗನುಗುಣವಾಗಿ ನಡೆಸುವ ವಿವಿಧ ಸೇವೆಗಳ ದರವನ್ನು ಕಾಲಕಾಲಕ್ಕೆ ಮಾರುಕಟ್ಟೆ ದರಗಳಿಗನುಗುಣವಾಗಿ ಪರಿಷ್ಕರಣೆ ಮಾಡಲು ಪ್ರಸ್ತಾವನೆ ಸಲ್ಲಿಸುವ ಬಗ್ಗೆ 08-08-2025ರಂದು ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ.
ಪರಿಷ್ಕರಣೆಗಾಗಿ ಸ್ವೀಕೃತ ಪ್ರಸ್ತಾವನೆಗಳನ್ನು ಧಾರ್ಮಿಕ ದತ್ತಿ ಆಯುಕ್ತರ ಕಚೇರಿಯಲ್ಲಿ ಪರಿಶೀಲಿಸಿ ಮತ್ತು ಪ್ರಸ್ತಾವನೆ ಬಗ್ಗೆ ಹಿರಿಯ ಆಗಮ ಪಂಡಿತರ ಅಭಿಪ್ರಾಯದಂತೆ ಸೇವಾ ದರಗಳ ಪರಿಷ್ಕರಣೆಗೆ ಧಾರ್ಮಿಕ ದತ್ತಿ ಆಯುಕ್ತರು ಅನುಮೋದನೆ ನೀಡುತ್ತಿರುತ್ತಾರೆ.ಸೇವಾ ದರಗಳನ್ನು ಪರಿಷ್ಕರಿಸಲು ನಿಯಮಿಸಲಾದ ಪ್ರಾಧಿಕಾರಿಗೆ ಅಧಿಕಾರವಿದ್ದು ಇದರಲ್ಲಿ ಸರ್ಕಾರದ ಹಸ್ತಕ್ಷೇಪ ಇರುವುದಿಲ್ಲ,ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಅಧಿಸೂಚಿತ ದೇವಾಲಯಗಳ ಸೇವಾ ದರಗಳನ್ನು ಕಾಲಕಾಲಕ್ಕೆ ನಿಯಮಿತವಾಗಿ ಮಾರುಕಟ್ಟೆ ದರಗಳನ್ನು ಪರಿಗಣನೆಗೆ ತೆಗೆದುಕೊಂಡು ಪರಿಷ್ಕರಣೆ ಮಾಡುವ ಪ್ರಕ್ರಿಯೆಯಾಗಿದೆ ಎಂದು ಇಲಾಖೆ ಟಿಪ್ಪಣಿಯಲ್ಲಿ ಸ್ಪಷ್ಟಪಡಿಸಲಾಗಿದೆ.