ಗೋಳಿತ್ತೊಟ್ಟು ಹಾ.ಉ. ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ

0

4.18 ಲಕ್ಷ ರೂ.ನಿವ್ವಳ ಲಾಭ | ಶೇ.15 ಡಿವಿಡೆಂಡ್, ಲೀ.ಹಾಲಿಗೆ 64 ಪೈಸೆ ಬೋನಸ್ ಘೋಷಣೆ

ನೆಲ್ಯಾಡಿ: ಕಡಬ ತಾಲೂಕಿನ ಗೋಳಿತ್ತೊಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘದ 2024-25ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಸೆ.19ರಂದು ಬೆಳಿಗ್ಗೆ ಗೋಳಿತ್ತೊಟ್ಟು ಶ್ರೀ ಸಿದ್ಧಿವಿನಾಯಕ ಕಲಾಮಂದಿರದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕೊರಗಪ್ಪ ಗೌಡ ಕೆ.ಮಾತನಾಡಿ, ಸಂಘದಲ್ಲಿ 263 ಸದಸ್ಯರಿದ್ದು 53,825 ಪಾಲು ಬಂಡವಾಳವಿದೆ. ಪ್ರಸ್ತುತ ದಿನವಹಿ 1050 ಲೀ.ಹಾಲು ಸಂಗ್ರಹಣೆಯಾಗುತ್ತಿದ್ದು 7 ರಿಂದ 8 ಲೀ.ನಷ್ಟು ಸ್ಥಳೀಯವಾಗಿ ಮಾರಾಟ ಮಾಡುತ್ತಿದ್ದು ಉಳಿಕೆ ಹಾಲನ್ನು ದ.ಕ.ಹಾಲು ಒಕ್ಕೂಟಕ್ಕೆ ಸರಬರಾಜು ಮಾಡುತ್ತಿದ್ದೇವೆ. ವರದಿ ಸಾಲಿನಲ್ಲಿ 3,09,417.9 ಲೀ.ಹಾಲು ಸಂಗ್ರಹಿಸಿ 1,10,23,392 ರೂ.ಮೊತ್ತ ಉತ್ಪಾದಕರಿಗೆ ಪಾವತಿಸಲಾಗಿದೆ. ನಂದಿನಿ ಪಶು ಆಹಾರ, ಸಂವೃದ್ಧಿ, ಲವಣ ಮಿಶ್ರಣ ಒಕ್ಕೂಟದಿಂದ ಖರೀದಿಸಿ ಸದಸ್ಯರಿಗೆ ಮಾರಾಟ ಮಾಡಲಾಗಿದೆ. ಹಾಲು ವ್ಯಾಪಾರ ಮತ್ತು ಲವಣ ಮಿಶ್ರಣ ಮಾರಾಟದಿಂದ ಸಂಘಕ್ಕೆ ಬಂದಿರುವ ಲಾಭದಲ್ಲಿ ಎಲ್ಲಾ ವೆಚ್ಚಗಳನ್ನು ಕಳೆದು 4,18,184.17 ರೂ.ನಿವ್ವಳ ಲಾಭಬಂದಿದೆ. ಲಾಭಾಂಶವನ್ನು ನಿಯಮಾನುಸಾರ ವಿಂಗಡಣೆ ಮಾಡಲಾಗಿದ್ದು ಸದಸ್ಯರಿಗೆ ಶೇ.15 ಡಿವಿಡೆಂಡ್ ಹಾಗೂ ಪ್ರತಿ ಲೀ.ಹಾಲಿಗೆ 64 ಪೈಸೆ ಬೋನಸ್ ನೀಡಲಾಗುವುದು ಎಂದು ಘೋಷಿಸಿದರು. 6 ತಿಂಗಳಿಗೊಮ್ಮೆ ಹಸುಗಳಿಗೆ ಜಂತುಹುಳ ನಿವಾರಣೆ ಔಷಧಿ ಉಚಿತವಾಗಿ ನೀಡಲಾಗುತ್ತಿದೆ. ಕೃತಕ ಗರ್ಭಧಾರಣೆ ಸೌಲಭ್ಯವಿದೆ. ಲವಣ ಮಿಶ್ರಣ, ಸಂವೃದ್ಧಿ ಸಂಘದಲ್ಲಿ ದಾಸ್ತಾನು ಇದ್ದು ಸದಸ್ಯರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೊರಗಪ್ಪ ಗೌಡ ಕೆ. ಹೇಳಿದರು.

ಸಂಘಕ್ಕೆ ಹೊಸ ಕಟ್ಟಡ ರಚನೆಯ ಯೋಜನೆ ಹಾಕಿಕೊಳ್ಳಲಾಗಿದೆ. ಇದಕ್ಕಾಗಿ 3 ಸೆಂಟ್ಸ್ ಜಾಗದ ಅವಶ್ಯಕತೆ ಇದ್ದು, ಹುಡುಕಾಟ ನಡೆಸುತ್ತಿದ್ದೇವೆ. ಅದೇ ರೀತಿ ಸಂಘದ ಸದಸ್ಯರಿಗೆ ಪ್ರವಾಸ ಆಯೋಜಿಸಲಾಗುವುದು ಎಂದು ಹೇಳಿದ ಅಧ್ಯಕ್ಷರು, ಈ ವರ್ಷ ಸಂಘದ ಎಲ್ಲಾ ಸದಸ್ಯರಿಗೂ ಉಡುಗೊರೆ ನೀಡಲಾಗುವುದು. ಮುಂದಿನ ವರ್ಷದಿಂದ ವಾರ್ಷಿಕ 500 ಲೀ.ಗಿಂತ ಹೆಚ್ಚು ಅಥವಾ ಕನಿಷ್ಠ 160 ದಿನ ಹಾಲು ಪೂರೈಸಿದ ಸದಸ್ಯರಿಗೆ ಮಾತ್ರ ಉಡುಗೊರೆ ನೀಡಲಾಗುವುದು ಎಂದರು.

ಹಾಲು ಗುಣಮಟ್ಟದಿಂದ ಇರಲಿ
ಅತಿಥಿಯಾಗಿದ್ದ ದ.ಕ.ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಆದಿತ್ಯ ಪಿ.ಮಾತನಾಡಿ, ಸದಸ್ಯರು ಪೂರೈಸುವ ಹಾಲು ಗುಣಮಟ್ಟದಿಂದ ಕೂಡಿದ್ದರೆ ಮಾತ್ರ ಸಂಘಕ್ಕೆ ಹೆಚ್ಚಿನ ಲಾಭ ಬರಲು ಸಾಧ್ಯವಿದೆ. ಹಾಲು ಗುಣಮಟ್ಟ ಇಲ್ಲದೇ ಇದ್ದಲ್ಲಿ ಸಂಘದ ಇತರೇ ಸದಸ್ಯರಿಗೂ, ಸಂಘಕ್ಕೂ ನಷ್ಟವಾಗಲಿದೆ. ಆದ್ದರಿಂದ ಹಾಲು ಉತ್ಪಾದಕರು ಗುಣಮಟ್ಟಕ್ಕೆ ಒತ್ತು ನೀಡಬೇಕು. ಈಗ ಸಂಘದಲ್ಲಿ ಚೀಟಿಯ ಬದಲು ಸದಸ್ಯರ ಮೊಬೈಲ್‌ಗೇ ಮಾಹಿತಿ ರವಾನೆಯಾಗುವ ಸಿಸ್ಟಮ್ ಅಳವಡಿಸಲಾಗಿದೆ. ಪಾರದರ್ಶಕತೆ ದೃಷ್ಟಿಯಿಂದ ಈ ತಂತ್ರಜ್ಞಾನ ಅಳವಡಿಸಲಾಗಿದೆ. ಜಾನುವಾರು ವಿಮೆ, ಕರುಗಳ ಜಂತುಹುಳ ಔಷಧಿ ಸೇರಿದಂತೆ ಒಕ್ಕೂಟದಿಂದ ಹಾಲು ಉತ್ಪಾದಕರಿಗೆ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಹೇಳಿದರು.

ಸಂಘದ ಉಪಾಧ್ಯಕ್ಷ ಜನಾರ್ದನ ಪಟೇರಿ, ನಿರ್ದೇಶಕರಾದ ನೋಣಯ್ಯ ಪೂಜಾರಿ ಅಂಬರ್ಜೆ, ಹೇಮಲತಾ ತಿರ್ಲೆ, ಕೆ.ಕುಶಾಲಪ್ಪ ಗೌಡ ಕೊಂಬ್ಯಾನ, ರಮೇಶ ಕೆ.ಬಿ.ಕೊಂಕೋಡಿ, ಶಶಿಧರ ಪಟೇರಿ, ಎ.ಕುಶಾಲಪ್ಪ ಗೌಡ ಅನಿಲ, ವಿಶ್ವನಾಥ ಮೂಲ್ಯ ನೆಕ್ಕರೆ, ಮೀನಾಕ್ಷಿ ಆಲಂತಾಯ, ಹರೀಶ ನಾಯ್ಕ ತಿರ್ಲೆ, ಭಾರತಿ ಎಸ್.ಪುಳಿತ್ತಡಿ, ರಾಜೀವಿ ಬೊಟ್ಟಿಮಜಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಪದ್ಮನಾಭ ಭಟ್ ಕೆ.ವರದಿ ಮಂಡಿಸಿದರು. ರಮೇಶ ಕೆ.ಬಿ.ಸ್ವಾಗತಿಸಿ, ರಾಜೀವಿ ವಂದಿಸಿದರು. ಜಯಂತ ಅಂಬರ್ಜೆ ನಿರೂಪಿಸಿದರು. ಹೇಮಲತಾ ತಿರ್ಲೆ ಪ್ರಾರ್ಥಿಸಿದರು. ಹಾಲು ಪರೀಕ್ಷಕ ಧನಂಜಯ ಎ.ಸಹಕರಿಸಿದರು.

ಅತೀ ಹೆಚ್ಚು ಹಾಲು ಪೂರೈಸಿದ ಸದಸ್ಯರಿಗೆ ಬಹುಮಾನ
2024-25ನೇ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿದ ಸದಸ್ಯರಿಗೆ ಬಹುಮಾನ ನೀಡಿ ಗೌರವಿಸಲಾಯಿತು. 16,835 ಲೀ.ಹಾಲು ಪೂರೈಸಿದ ಕುಶಾಲಪ್ಪ ಗೌಡ ಕೊಂಬ್ಯಾನ (ಪ್ರಥಮ), 8005 ಲೀ.ಹಾಲು ಪೂರೈಸಿದ ಕಮಲಾಕ್ಷಿ ಅಂಬರ್ಜೆ(ದ್ವಿತೀಯ)ಹಾಗೂ 7056 ಲೀ.ಹಾಲು ಪೂರೈಸಿದ ನಾರಾಯಣ ಅಂಬರ್ಜೆ(ತೃತೀಯ)ಯವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಉಳಿದ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.



ವಿದ್ಯಾರ್ಥಿಗಳಿಗೆ ಗೌರವಾರ್ಪಣೆ:
ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸಂಘದ ಸದಸ್ಯ ನಾಗೇಶ್ ಶೆಟ್ಟಿ ಸಮರಗುಂಡಿ ಅವರ ಪುತ್ರ ಜಿತೇಶ್ ಎಸ್., ಪುಟ್ಟಣ್ಣ ನಾಯ್ಕ್ ಪಾಲೇರಿ ಅವರ ಪುತ್ರಿ ನಿರಿಜ್ಞಾ, ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸದಸ್ಯ ರೋಹಿನಾಥ್ ಶೆಟ್ಟಿ ತಿರ್ಲೆ ಅವರ ಪುತ್ರಿ ಶ್ರೀರಕ್ಷಾ, ಕೇಶವ ಗೌಡ ಕೊಂಬ್ಯಾನ ಅವರ ಪುತ್ರಿ ಲಕ್ಷಾ ಕೆ.ಕೆ.ಅವರಿಗೆ ಗೌರವಾರ್ಪಣೆ ಮಾಡಲಾಯಿತು.

LEAVE A REPLY

Please enter your comment!
Please enter your name here