ಅಧ್ಯಕ್ಷರಾಗಿ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಉಪಾಧ್ಯಕ್ಷರಾಗಿ ರಾಯ್ ಅಬ್ರಹಾಂ ಅವಿರೋಧವಾಗಿ ಆಯ್ಕೆ
ನೆಲ್ಯಾಡಿ: ಕಡಬ ತಾಲೂಕಿನ ನೆಲ್ಯಾಡಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಪ್ರತಿಷ್ಠಿತ ಪುತ್ತೂರು ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘದ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿ ಅಧ್ಯಕ್ಷರಾಗಿ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಹಾಗೂ ಉಪಾಧ್ಯಕ್ಷರಾಗಿ ರಾಯ್ ಅಬ್ರಹಾಂ ಪದವು ಕುಂತೂರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸೆ.23 ರಂದು ಬೆಳಿಗ್ಗೆ ನೆಲ್ಯಾಡಿಯಲ್ಲಿರುವ ಸಂಘದ ಕೇಂದ್ರ ಕಚೇರಿಯಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ನಿರ್ದೇಶಕರಾದ ಕೇಶವ ಭಂಡಾರಿ ಕೆ.ಕೈಪ ಕೋಡಿಂಬಾಡಿ, ಜಾರ್ಜ್ ಕುಟ್ಟಿ ಸಿ.ನಿಡ್ಯಡ್ಕ ಇಚ್ಲಂಪಾಡಿ, ರಮೇಶ್ ಕಲ್ಪುರೆ 102 ನೆಕ್ಕಿಲಾಡಿ ಮರ್ದಾಳ, ವ್ಯಾಸ ಎನ್.ವಿ. ನೆಕ್ಕರ್ಲ ಕೌಕ್ರಾಡಿ, ಶ್ರೀರಾಮ ಪಕ್ಕಳ ಕರ್ನೂರುಗುತ್ತು ನೆಟ್ಟಣಿಗೆ ಮುಡ್ನೂರು, ಸತ್ಯಾನಂದ ಬಿ.ಬೊಳ್ಳಾಜೆ ನೂಜಿಬಾಳ್ತಿಲ, ಗಿರೀಶ್ ಸಾಲಿಯಾನ್ ಬಿ. ಬದನೆ ಇಚ್ಲಂಪಾಡಿ, ಜಯರಾಮ ಬಿ.ಬಾಣಜಾಲು ಕೌಕ್ರಾಡಿ, ಅರುಣಾಕ್ಷಿ ಅಕ್ಷಯ ನಿಲಯ ಪುಚ್ಚೇರಿ ನೆಲ್ಯಾಡಿ, ಗ್ರೇಸಿ ನೈನಾನ್ ಸ್ನೇಹ ಸದನ ನೆಲ್ಯಾಡಿ ಹಾಗೂ ಸುಭಾಸ್ ನಾಯಕ್ ನೆಕ್ರಾಜೆ ಕೋಡಿಂಬಾಡಿ ಉಪಸ್ಥಿತರಿದ್ದರು.
ಮಂಗಳೂರು ಉಪ ವಿಭಾಗದ ಸಹಕಾರ ಸಂಘಗಳ ಕಚೇರಿಯ ಸಹಾಯಕ ನಿಬಂಧಕರರಾದ ತ್ರಿವೇಣಿ ರಾವ್ ಕೆ. ಆಯ್ಕೆ ಪ್ರಕ್ರಿಯೆ ನಡೆಸಿದರು. ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಶಿಪ್ರಭಾ ಕೆ. ಸಹಕರಿಸಿದರು.
ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಅವರು 2010 ರಿಂದ ಸಂಘದ ಅಧ್ಯಕ್ಷರಾಗಿದ್ದು, ಇದೀಗ ಸತತ ನಾಲ್ಕನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇವರು ದ ಕ ಜಿಲ್ಲಾ ಸಹಕಾರಿ ಯೂನಿಯನ್ ಮಾಜಿ ಅಧ್ಯಕ್ಷರಾಗಿ, ಪುಡಾದ ಮಾಜಿ ಅಧ್ಯಕ್ಷರಾಗಿದ್ದಾರೆ. ಪ್ರಸ್ತುತ ರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕರಾಗಿ, ಕರ್ನಾಟಕ ರಾಜ್ಯ ರಬ್ಬರ್ ಬೆಳೆಗಾರರ ಸಂಘದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಉಪಾಧ್ಯಕ್ಷರಾಗಿ ಆಯ್ಕೆ ಆಗಿರುವ ರಾಯ್ ಅಬ್ರಹಾಂ ಅವರು 2010 ರಿಂದ ಸಂಘದ ಉಪಾಧ್ಯಕ್ಷರಾಗಿದ್ದು ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿದ್ದಾರೆ.