ಜಲದುರ್ಗೆಗೆ ಮನೆ ಮನೆಯ ಬಲಿವಾಡು ಸಮರ್ಪಣೆ..!
ಎರಡು ತಾಲೂಕಿನ ಮೂರು ದೇಗುಲಕ್ಕಿದೆ ನಂಟು
ಪೆರುವಾಜೆ: ಸುಳ್ಯ, ಪುತ್ತೂರು, ಕಡಬ ತಾಲೂಕಿನ 21 ಗ್ರಾಮಗಳ ಮಾಗಣೆ ಕ್ಷೇತ್ರ ಶ್ರೀ ಜಲದುರ್ಗಾದೇವಿ ದೇವಾಲಯದ ನವರಾತ್ರಿ ಉತ್ಸವ ಹಲವು ವಿಶೇಷತೆಗಳನ್ನು ಹೊಂದಿದೆ. ಅವುಗಳಲ್ಲಿ ವಾರ್ಷಿಕ ಬಲಿವಾಡು ಸಮರ್ಪಣೆಯು ಒಂದು..!
ಸಾಮಾನ್ಯವಾಗಿ ಹಸುರು ಹೊರೆಕಾಣಿಕೆ, ಬಲಿವಾಡು ಸಮರ್ಪಣೆ ಭಕ್ತರು ತನ್ನಿಷ್ಷದಂತೆ ಸಲ್ಲಿಸುವ ಪದ್ಧತಿ ಪ್ರತಿ ದೇವಾಲಯದಲ್ಲಿ ಇದೆ. ಆದರೆ ಜಲದುರ್ಗಾ ದೇವಾಲಯದಲ್ಲಿ ಅದಕ್ಕೂಂದು ಚೌಕಟ್ಟು ಇದೆ. ಧಾರ್ಮಿಕ ನಂಬಿಕೆಯು ಇದರೊಂದಿಗೆ ಬೆರೆತುಕೊಂಡಿದೆ. ಇಂತಹ ಅಪರೂಪದ ಪದ್ಧತಿ ಬೇರೆಲ್ಲೂ ಕಾಣ ಸಿಗುವುದು ವಿರಳ.
ಏನಿದು ಬಲಿವಾಡು..!
ನವರಾತ್ರಿ ಸಂದರ್ಭದಲ್ಲಿ ಮಾಗಣೆ ಕ್ಷೇತ್ರದ ಪ್ರತಿ ಮನೆಯವರು ಕ್ಷೇತ್ರಕ್ಕೆ ಬರುವುದು ರೂಢಿ. ಹಾಗೇ ಬರುವಾಗ ಬರಿಗೈಯಲ್ಲಿ ಬರುವುದಿಲ್ಲ.ಪೂರ್ವ ಸಂಪ್ರದಾಯದಂತೆ ಹುಂಡಿಗೆ ಅರ್ಪಿಸುತ್ತಾರೆ. ಇದಕ್ಕೆ ವಾರ್ಷಿಕ ಬಲಿವಾಡು ಅರ್ಪಣೆ ಎನ್ನಲಾಗುತ್ತದೆ. ಪ್ರತಿ ಮನೆಯಿಂದ ಒಂದು ತೆಂಗಿನಕಾಯಿ, ಒಂದು ಸೇರು ಬೆಳ್ತಿಗೆ ಅಕ್ಕಿ, ಒಂದು ಕುಡ್ತೆ ಶುದ್ಧ ಎಳ್ಳೆಣ್ಣೆ, ಒಂದು ಸೀಯಾಳ, ಎಲೆ ಅಡಿಕೆ, 101 ರೂ. ಅನ್ನು ತರುತ್ತಾರೆ. ಸುತ್ತು ಪೌಳಿಯ ಒಂದು ಭಾಗದಲ್ಲಿ ಬಲಿವಾಡು ಸಮರ್ಪಣೆಗೆಂದು ನವರಾತ್ರಿಯ ಮೊದಲ ದಿನವೇ ತೆರೆಯುವ ಹುಂಡಿಗೆ ಇದನ್ನು ಅರ್ಪಿಸುತ್ತಾರೆ. ಅದಾದ ನಂತರ ಪ್ರಸಾದ ಸ್ವೀಕರಿಸುತ್ತಾರೆ. ನವರಾತ್ರಿಯ ಮೊದಲ ದಿನ ಕ್ಷೇತ್ರದ ಪ್ರಧಾನ ಅರ್ಚಕರು ದೀಪ ಬೆಳಗಿಸುವ ಪದ್ಧತಿ ಇದ್ದು ಅನಂತರ ನವರಾತ್ರಿ ಕೊನೆಯ ದಿನದ ತನಕವೂ ಭಕ್ತರು ಇಲ್ಲಿ ವಾರ್ಷಿಕ ಬಲಿವಾಡು ಅರ್ಪಿಸುತ್ತಾರೆ.

ಪ್ರಶ್ನಾಚಿಂತನೆಯಲ್ಲಿ ಗೋಚರ..!
ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯ . ಉದ್ಭವ ಶ್ರೀ ಜಲದುರ್ಗಾದೇವಿ ಹಾಗೂ ಉದ್ಭವ ಶ್ರೀ ಮಹಾಗಣಪತಿ ಸಾನಿಧ್ಯ ಇರುವ ಕಾರಣಿಕ ಕ್ಷೇತ್ರ. ಎರಡು ದಶಕಗಳ ಹಿಂದೆ ಕ್ಷೇತ್ರದಲ್ಲಿ ನಡೆದ ಪ್ರಶ್ನಾಚಿಂತನೆಯ ಸಂದರ್ಭದಲ್ಲಿ ಮಾಗಣೆ ಕ್ಷೇತ್ರದ ಪ್ರತಿ ಮನೆಯವರು ನವರಾತ್ರಿ ಉತ್ಸವದ ಸಂದರ್ಭದಲ್ಲಿ ಕ್ಷೇತ್ರಕ್ಕೆ ಬಂದು ಬಲಿವಾಡು ಅರ್ಪಿಸಬೇಕು ಎನ್ನುವ ಅಂಶ ಕಂಡು ಬಂದಿತ್ತು. ಆರಂಭ ವರ್ಷಗಳಲ್ಲಿ ಕಾಣಿಕೆ ಮೊತ್ತ 25.25 ರೂ. ಇತ್ತು. ಉಳಿದ ವಸ್ತುಗಳ ಯಥಾಪ್ರಕಾರ ಇತ್ತು. ವರ್ಷದಿಂದ ವರ್ಷಕ್ಕೆ ಈ ಹುಂಡಿಗೆ ಬಲಿವಾಡು ಅರ್ಪಿಸುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ.
ಹನ್ನೊಂದು ದಿನಗಳ ಆಚರಣೆ
ಹೆಚ್ಚಿನ ದೇಗುಲಗಳಲ್ಲಿ 9 ದಿನಗಳ ನವರಾತ್ರಿ ಇದ್ದರೆ ಪೆರುವಾಜೆಯಲ್ಲಿ 10 ಅಥವಾ 11 ದಿನಗಳ ನವರಾತ್ರಿ ಇರುತ್ತದೆ. ಪ್ರತಿ ವರ್ಷ 10 ದಿನ, ನಾಲ್ಕು ವರ್ಷಕ್ಕೊಮ್ಮೆ 11 ದಿನಗಳ ಆಚರಣೆ ಇಲ್ಲಿನ ವಿಶೇಷ. ಅಂದರೆ ಮಹಾಲಯ ಅಮಾವಾಸೆ ರಾತ್ರಿ ಗೋಚರವಾಗುವ ದಿನ ವೇ ಇಲ್ಲಿ ನವರಾತ್ರಿ ಆರಂಭಗೊಳ್ಳುವ ಪದ್ಧತಿ ಇದೆ. ಈ ಬಾರಿ ದೇವಿ ದೇವಾಲಯಗಳಲ್ಲಿ ಸೆ.22 ರಂದು ನವರಾತ್ರಿ ಆರಂಭಗೊಂಡಿದ್ದರೆ ಪೆರುವಾಜೆ ಕ್ಷೇತ್ರದಲ್ಲಿ ಸೆ.21 ರಂದೇ ಪ್ರಾರಂಭಗೊಂಡಿದೆ. ಅ.2 ರಂದು ಸಂಪನ್ನಗಳ್ಲಲಿದೆ.
ಪೇರ್ ಉಕ್ಕಿತ್ತು..!
ಪುರಾತನ ಕಾಲದಲ್ಲಿ ಪೆರುವಾಜೆ ಗ್ರಾಮದ ದೇವರಮಾರು ಗದ್ದೆಯ ಎತ್ತರದ ಗುಡ್ಡೆಯಲ್ಲಿ ಅಜ್ಜ-ಮೊಮ್ಮಗ ನರೆ ಅಗೆಯುತ್ತಿದ್ದಾಗ ನೆಲದಿಂದ ಹಾಲು ಚಿಮ್ಮಿತು. ಆಗ ಮೊಮ್ಮಗ ಪೇರ್ ಅಜ್ಜ ( ತುಳು ಭಾಷೆಯಲ್ಲಿ ಹಾಲಿಗೆ ಪೇರ್ ಅನ್ನುತ್ತಾರೆ) ಎಂದು ಜೋರಾಗಿ ಕಿರುಚಿಕೊಂಡ. ಪೇರ್-ಅಜ್ಜ ಪರಿಣಾಮ ಊರು ಪೇರಜ್ಜ ಎಂದಾಯಿತು. ಕ್ರಮೇಣ ತುಳುವಿನ ಪೇರಜ್ಜ ಪೆರುವಾಜೆ ಆಗಿ ಪ್ರಚಲಿತದಲ್ಲಿದೆ. ನರೆ ಅಗೆಯುತಿದ್ದಾಗ ಹಾಲು ಚಿಮ್ಮಿದ ವಿಚಾರ ತಿಳಿದ ರಾಜನೂ, ಊರ ಪ್ರಮುಖರು ಸ್ಥಳಕ್ಕೆ ಆಗಮಿಸಿ ಇದರ ಮಹತ್ವ ಅರಿತು ಸಪ್ತ ಶಕ್ತಿಗಳು ಒಂದಾಗಿ ಲಿಂಗ ರೂಪಿಯಾಗಿ ಅವಿರ್ಭವಿಸಿದನ್ನು ಅರಿತುಕೊಂಡರು. ದೇವರಮಾರು ಗದ್ದೆಯ ಬದಿಗೆ ಎತ್ತರದ ಗುಡ್ಡೆಯಲ್ಲಿ ದೇವಿ ಸಾನಿಧ್ಯ ಗೋಚರಿಸಿದ ಮಹತ್ವ ಅರಿತ ಬಲ್ಲಾಳ ಅರಸರು ದೇವಸ್ಥಾನ ಕಟ್ಟಲು ನಿಶ್ಚಯಿಸಿದ್ದರು. ಸ್ಥಳ ಸೂಕ್ತವಾಗಿರದ ಕಾರಣ ತುಸು ದೂರದಲ್ಲಿ ( ಈಗ ದೇವಾಲಯ ಇರುವ ಸ್ಥಳ) ನಿರ್ಮಾಣಗೊಂಡಿತು ಅನ್ನುತ್ತಿದೆ ಇತಿಹಾಸ.
ಉದ್ಭವ ರೂಪ..!
ಊರಿನಲ್ಲಿ ಜಲಕ್ಷಾಮ ತಲೆದೋರಿದಾಗ ಋಷಿಯ ತಪಸ್ಸಿಗೊಳಿದ ಶ್ರೀದೇವಿ ಜಲದುರ್ಗೆಯಾಗಿ, ಉದ್ಭವ ಸ್ವರೂಪದಲ್ಲಿ ಗೋಚರಿಸಿರುವ ನಂಬಿಕೆಯು ಇದೆ. ರಾಜ, ಊರಿನ ಜನರೂ ಬ್ರಹ್ಮರ್ಷಿಗಳೂ ಆಗಿದ್ದ ಮುನಿಶ್ರೇಷ್ಟರಲ್ಲಿ ನೀರಿನ ಅಭಾವ (ಜಲಕ್ಷಾಮ) ತಲೆದೋರಿದಾಗ ನಿವೇದಿಸಿಕೊಂಡರು. ಮುನಿಶ್ರೇಷ್ಟರ ದಿವ್ಯದೃಷ್ಟಿಗೆ ಶ್ರೀ ದೇವಿಯು ಗೋಚರಿಸಿ ಅನನ್ಯ ಭಕ್ತಿಗೊಲಿದ ದೇವಿಯು ಜಲದುರ್ಗೆಯಾಗಿ ಕಾಣಿಸಿಕೊಂಡಳು. ಶ್ರೀ ಕ್ಷೇತ್ರದಲ್ಲಿ ನೀರಿಗಾಗಿ ಪ್ರಾರ್ಥಿಸಿಕೊಂಡಲ್ಲಿ ಅದು ಈಡೇರಿದ ನೂರಾರು ಉದಾಹರಣೆಗಳಿವೆ. ಈ ಕ್ಷೇತ್ರದ ಮಹಿಮೆಯೆಂದರೆ ಆದಿಯಲ್ಲಿ ಶ್ರೀ ಗಣೇಶ ಉದ್ಭವಿಸಿದರೆಂಬುದು ಜನರ ನಂಬಿಕೆ. ಹಿಂದೆ ಮುನಿಶ್ರೇಷ್ಠರೊಬ್ಬರು ಈ ಉದ್ಭವ ಗಣಪತಿಯನ್ನು ಪೂಜಿಸುತ್ತಿದ್ದರೆಂದೂ ಮತ್ತು ಅವರು ಪರಂಧಾಮರಾಗುವ ಕಾಲದಲ್ಲಿ ತಮ್ಮೆಲ್ಲಾ ತಪಃಶಕ್ತಿಯನ್ನು ಲೋಕ ಕಲ್ಯಾಣಾರ್ಥವಾಗಿ ಶ್ರೀ ಉದ್ಭವ ಗಣೇಶನ ಪಾದಕ್ಕೆ ಸಮರ್ಪಿಸಿದರೆಂದೂ ಹೇಳಲಾಗಿದೆ. ನೆಲದಡಿಯಿಂದಲೇ ಎದ್ದು ಬರುವಂತೆ ತೋರುತ್ತಿರುವ ಈ ಮಹಾಮೂರ್ತಿಯ ಸೊಂಡಿಲು ಮತ್ತು ಕಿವಿಯ ಆಕಾರಗಳು ವಿಶೇಷವಾಗಿವೆ. ಇದು ಸ್ವಯಂ ಭೂ ಅಲ್ಲ. ಇದು ಶಿಲೆಯಲ್ಲಿ ಗಣಪತಿಯ ರೂಪ ಉದ್ಭವ. ಶಿಲ್ಪಿ ನಿರ್ಮಿಸಿದ್ದು ಅಲ್ಲ.
ಎರಡು ತಾಲೂಕಿನ ಮೂರು ದೇಗುಲದ ನಂಟು
ಪೆರುವಾಜೆ ಶ್ರೀ ಜಲದುರ್ಗಾದೇವಿ, ಶರವೂರು ಶ್ರೀ ದುರ್ಗಾಪರಮೇಶ್ವರಿ, ಕೇರ್ಪಡ ಶ್ರೀ ಮಹಿಷಮರ್ದಿನಿ ಅಕ್ಕ-ತಂಗಿಯರು. ಹಿಂದೆ ವಾರ್ಷಿಕ ಜಾತ್ರೆಯ ಸಮಯದಲ್ಲಿ ಶಾಂತಿಮುಗೇರು ಕುಮಾರಧಾರೆಯಲ್ಲಿ ಜತೆಯಾಗಿ ಅವಭೃತ ನೆರವೇರುತಿದ್ದ ಹಿನ್ನೆಲೆ ಇದೆ. ಪ್ರಸ್ತುತ ಜಲದುರ್ಗಾದೇವಿ ದೇವಿಯ ಅವಭೃತ ದೇವಾಲಯದ ಸನಿಹದ ಗೌರಿ ಹೊಳೆಯಲ್ಲಿನ ಜಳಕದ ಗುಂಡಿಯಲ್ಲಿ ನಡೆಯುತ್ತಿದೆ.
ಮಲ್ಲಿಗೆ ಶಯನೋತ್ಸವ
ಕ್ಷೇತ್ರದ ವಾರ್ಷಿಕ ಜಾತ್ರೆಯ ರಥೋತ್ಸವದ ದಿನ ಇಲ್ಲಿ ನಡೆಯುವ ಮಲ್ಲಿಗೆ ಶಯನೋತ್ಸವ ವಿಶೇಷ. ಜ.19 ರಂದು ಶ್ರೀ ಕ್ಷೇತ್ರದಲ್ಲಿ ಜಲದುರ್ಗೆಗೆ ಶಯನೋತ್ಸವ ನಡೆಯುತ್ತದೆ. ಶಯನವೆಂದರೆ ಹಾಸಿಗೆ ಎಂದರ್ಥ. ಪೌರಾಣಿಕ ನಂಬಿಕೆಗಳ ಪ್ರಕಾರ ದುರ್ಗಾದೇವಿಯು ಮಲ್ಲಿಗೆ ಪ್ರಿಯಳು ಎಂಬ ಐತಿಹ್ಯವಿದೆ. ಇಷ್ಟಾರ್ಥ ಸಿಧಿಗಾಗಿ ಭಕ್ತರು ಒಂದು ಚೆಂಡು ಮಲ್ಲಿಗೆಯನ್ನು ಶಯನೋತ್ಸವದ ಸಂದರ್ಭದಲ್ಲಿ ಶ್ರೀದೇವಿಗೆ ಸಮರ್ಪಿಸಿದರೆ ತನ್ನ ಮನದಲ್ಲಿರುವ ಅಭೀಷ್ಟ ನೆರವೇರುತ್ತದೆ ಎನ್ನುವ ಪ್ರತೀತಿಯಿದೆ. ಶಯನೋತ್ಸವಕ್ಕೆ ಸಮರ್ಪಿಸಿದ ಮಲ್ಲಿಗೆ ಹೂವಿನಲ್ಲಿ ಶ್ರೀದೇವಿಯು ಪವಡಿಸುತ್ತಾಳೆ ಎಂಬುವುದು ಭಕ್ತರ ನಂಬಿಕೆ. ಹೀಗಾಗಿ ನೂರಾರು ಭಕ್ತರು ರಾಶಿ ರಾಶಿ ಮಲ್ಲಿಗೆ ಸಮರ್ಪಿಸುತ್ತಾರೆ.