5.03 ಲಕ್ಷ ರೂ.ನಿವ್ವಳ ಲಾಭ | ಶೇ.5 ಡಿವಿಡೆಂಡ್, ಲೀ.ಹಾಲಿಗೆ 1.24 ರೂ.ಬೋನಸ್ ಘೋಷಣೆ
ನೆಲ್ಯಾಡಿ: ಕಡಬ ತಾಲೂಕಿನ ಇಚ್ಲಂಪಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ 2024-25ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಸೆ.24ರಂದು ಸಂಘದ ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕೇಶವ ಗೌಡ ಅಲೆಕ್ಕಿ ಮಾತನಾಡಿ, ವರದಿ ವರ್ಷದಲ್ಲಿ 1,91,305.17 ಲೀ.ಹಾಲು ಸಂಗ್ರಹಿಸಿ ಒಕ್ಕೂಟಕ್ಕೆ ಮಾರಾಟ ಮಾಡಲಾಗಿದ್ದು ರೂ. 68,43,338.26 ಸದಸ್ಯರಿಗೆ ಸಂದಾಯವಾಗಿದೆ. ಹಾಲು ಹಾಗೂ ಪಶು ಆಹಾರ ವ್ಯಾಪಾರದಿಂದ 5,03,533.42 ರೂ.ನಿವ್ವಳ ಲಾಭ ಬಂದಿದೆ. ಲಾಭಾಂಶದಲ್ಲಿ ಸಂಘದ ಸದಸ್ಯರಿಗೆ ಶೇ.5 ಡಿವಿಡೆಂಡ್ ಹಾಗೂ ಉತ್ಪಾದಕರಿಗೆ 1 ಲೀಟರ್ ಹಾಲಿಗೆ 1.24ರಂತೆ ಬೋನಸ್ ನೀಡಲಾಗುವುದು ಎಂದು ಹೇಳಿದರು. ಒಕ್ಕೂಟದ ಪಶುವೈದ್ಯಾಧಿಕಾರಿ ಡಾ.ಸಚಿನ್, ಕಡಬ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಅಜಿತ್, ಸಂಘದ ಮಾಜಿ ಅಧ್ಯಕ್ಷರೂ,ಹಾಲಿ ನಿರ್ದೇಶಕರೂ ಆದ ಮಹಾವೀರ ಜೈನ್ ಅವರು ಹೈನುಗಾರಿಕೆ ಬಗ್ಗೆ ಮಾಹಿತಿ ನೀಡಿದರು.

ಸಂಘದ ಉಪಾಧ್ಯಕ್ಷ ಅಣ್ಣಿ ನಾಯ್ಕ, ನಿರ್ದೇಶಕರಾದ ಕೆ.ಮಹಾವೀರ ಜೈನ್, ರಾಧಾಕೃಷ್ಣ ಕೆ., ವರ್ಗೀಸ್ ಅಬ್ರಹಾಂ, ಆನಂದ ಶೆಟ್ಟಿ, ಶಾಂತರಾಮ, ಮೋಹನ್‌ದಾಸ್ ಬಿ., ಸಜಿ ಪಿ.ಜಿ., ವಿ.ಎಂ.ಮ್ಯಾಥ್ಯು, ಜೋಗಿ ಮುಗೇರ, ವಿಜಯ, ಕಮಲಾಕ್ಷಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ಪ್ರವೀಣ್‌ಕುಮಾರ್ ವರದಿ ವಾಚಿಸಿದರು. ನಿರ್ದೇಶಕ ರಾಧಾಕೃಷ್ಣ ಕೆ.ಸ್ವಾಗತಿಸಿದರು. ಶಾಂತರಾಮ ಕುಡಾಲ ಪ್ರಾರ್ಥಿಸಿದರು. ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಗೌಡ ಇಚ್ಲಂಪಾಡಿ, ವೇಣುಗೋಪಾಲ ಶೆಟ್ಟಿ ಹೊಸಮನೆ ಸಹಿತ ಸಂಘದ ಸದಸ್ಯರು ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು. ಹಾಲು ಪರೀಕ್ಷಕ ತೇಜಸ್, ಸಹಾಯಕ ತನಿಯ ಸಹಕರಿಸಿದರು.
ಬಹುಮಾನ ವಿತರಣೆ;
ಸಂಘಕ್ಕೆ ಅತೀ ಹೆಚ್ಚು ಹಾಲು ಹಾಕಿದ ಇಬ್ಬರು ಸದಸ್ಯರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ವಾರ್ಷಿಕ 8166.20 ಲೀ.ಹಾಲು ಪೂರೈಸಿದ ಸದಸ್ಯ ಕೆ.ಸಿ.ವರ್ಗೀಸ್ ನೇರ್ಲ(ಪ್ರಥಮ) ಹಾಗೂ 6654.20 ಲೀ.ಹಾಲು ಪೂರೈಸಿದ ಶೀನಪ್ಪ ಗೌಡ ಕುಡಾಲ (ದ್ವಿತೀಯ) ಬಹುಮಾನ ಪಡೆದುಕೊಂಡರು. ಸಂಘಕ್ಕೆ ಹಾಲು ಹಾಕಿದ ಉಳಿದ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ ನೀಡಿ ಗೌರವಿಸಲಾಯಿತು.