ಮನವಿ ಮಾಡಿದ್ದೆ ತಡ ದಾನಿಗಳು ಸಹಕಾರ ನೀಡಿದ್ದಾರೆ – ಈಶ್ವರ ಭಟ್ ಪಂಜಿಗುಡ್ಡೆ
ಇನ್ನಷ್ಟು ಮಂದಿ ದಾನಿಗಳು ಮುಂದೆ ಬರಲಿ – ರಾಧಾಕೃಷ್ಣ ನಾೖಕ್
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದಿನೇ ದಿನೇ ಭಕ್ತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಭಕ್ತರಿಗೆ ಅನ್ನದಾನದಲ್ಲಿ ಎಲ್ಲೂ ಕೊರತೆ ಅಗಬಾರದು ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಮನವಿಗೆ ದಾನಿಗಳು ಒಂದೇ ದಿನದಲ್ಲಿ ಕ್ವಿಂಟಾಲ್ಗಟ್ಟಲೆ ಅಕ್ಕಿಯನ್ನು ದೇವಸ್ಥಾನಕ್ಕೆ ಸಮರ್ಪಣೆ ಮಾಡಿದ್ದಾರೆ.
ಅಕ್ಕಿ ಸಮರ್ಪಣೆ ಮಾಡಿದ ದಾನಿಗಳಿಗೆ ಸೆ.25ರಂದು ಬೆಳಗ್ಗಿನ ಪೂಜೆಯ ಸಂದರ್ಭ ಪ್ರಸಾದ ನೀಡಿ ದೇವಳದ ಗೌರವಾರ್ಥವಾಗಿ ಶಲ್ಯ ತೊಡಿಸಿ ಗೌರವಿಸಲಾಯಿತು. ದಾನಿಗಳ ಪೈಕಿ ಸುಮಾರು 16 ಮಂದಿ ಒಂದು ವರ್ಷ ಪ್ರತಿ ತಿಂಗಳಿಗೆ ತಲಾ 1 ಕ್ವಿಂಟಾಲ್ ಅಕ್ಕಿಯನ್ನು ನೀಡುವ ವಾಗ್ದಾನ ಮಾಡಿ ಪ್ರಥಮ ತಿಂಗಳ ಅಕ್ಕಿಯನ್ನು ಸಮರ್ಪಣೆ ಮಾಡಿದರು. ಉಳಿದಂತೆ ಎರಡು ಮೂರು ಕ್ವಿಂಟಾಲ್ ಅಕ್ಕಿಯನ್ನು ಒಂದೇ ಬಾರಿ ನೀಡಿದ್ದಾರೆ.
ಮನವಿ ಮಾಡಿದ್ದೆ ತಡ ದಾನಿಗಳು ಸಹಕಾರ ನೀಡಿದ್ದಾರೆ:
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಮಾತನಾಡಿ, ದೇವಸ್ಥಾನಲ್ಲಿ ನಾವು ಒಳ್ಳೆಯ ಕೆಲಸ ಮಾಡಿದಾಗ ಭಕ್ತರು ಕೈ ಜೋಡಿಸುತ್ತಾರೆ ಎಂಬುದಕ್ಕೆ ಮಹಾಲಿಂಗೇಶ್ವರ ದೇವಸ್ಥಾನವೇ ಸಾಕ್ಷಿ. ನಮ್ಮ ಸಮಿತಿ ಬಂದು 9 ತಿಂಗಳು ಆಗಿದೆ. ಈ ಸಂದರ್ಭ ನಾವು ಹಲವಾರು ಬದಲಾವಣೆ ತಂದೆವು. ಅದರಲ್ಲಿ ಪ್ರಮುಖವಾಗಿ ಗಣೇಶ ಚತುರ್ಥಿಯ ದಿನ ಮೋದಕ ಹೋಮ, ತುಪ್ಪದ ದೀಪದ ವ್ಯವಸ್ಥೆ, ನವರಾತ್ರಿಯ ಸಂದರ್ಭ ದುರ್ಗಾದೇವಿಯ ಪೂಜೆಗೆ ಸಂಬಂಧಿಸಿ ಗಾಯತ್ರಿ ಪೂಜೆಯನ್ನು ವಿಶೇಷವಾಗಿ ಆಯೋಜಿಸಿದ್ದೇವೆ. ಒಟ್ಟಿನಲ್ಲಿ ದೇವಸ್ಥಾನದ ಜಾಗದ ವಿಚಾರ, ಸ್ವಚ್ಛತೆ, ಸೇವೆಯ ವಿಚಾರದಲ್ಲಿ ನಮ್ಮ ಸಮಿತಿ ಮುಂಚೂಣಿಯಲ್ಲಿ ಬಹಳ ಅಚ್ಚುಕಟ್ಟಾಗಿ ಮಾಡಿದ್ದರಿಂದ ದೇವಳಕ್ಕೆ ಅಗಮಿಸುವ ಭಕ್ತರ ಸಂಖ್ಯೆಯೂ ಹೆಚ್ಚಾಗಿದೆ. ಸೇವೆಗಳು ಕೂಡಾ ಹೆಚ್ಚಾಗಿದೆ. ಎಷ್ಟು ಸಂಖ್ಯೆಯಲ್ಲಿ ಭಕ್ತರು ಬಂದರೂ ಮಧ್ಯಾಹ್ನ ಅನ್ನಪ್ರಸಾದ ನೀಡುವಲ್ಲಿ ಎಲ್ಲೂ ಕೊರತೆ ಆಗದಂತೆ ನೋಡುತ್ತಿದ್ದೇವೆ. ಮುಂದೆಯೂ ಯಾವುದೇ ಸಮಸ್ಯೆ ಆಗದಂತೆ ನಮ್ಮ ಸಮಿತಿ ನಿರ್ಣಯದಂತೆ ಅನ್ನದಾನಕ್ಕೆ ದೇಣಿಗೆಯಾಗಿ ಭಕ್ತರಲ್ಲಿ ವಿನಂತಿ ಮಾಡಿದ್ದೆವು. ಈ ಸಂದರ್ಭ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾೖಕ್ ಅವರು ಹಲವು ಸಲಹೆ ನೀಡಿದರು. ಅವರ ಸಲಹೆಯನ್ನು ಪಡೆದು ಕೊಂಡಂತೆ ಸುಮಾರು 16 ಮಂದಿ ವರ್ಷದ 12 ತಿಂಗಳು ಕೂಡಾ ಪ್ರತಿ ತಿಂಗಳು 1 ಕ್ವಿಂಟಾಲ್ ಅಕ್ಕಿ ನೀಡುವ ಭರವಸೆ ನೀಡಿದ್ದಾರೆ. 232 ಕ್ವಿಂಟಾಲ್ ಅಕ್ಕಿ ವಾಗ್ದಾನ ಮಾಡಿದ್ದಾರೆ. 25 ಕ್ವಿಂಟಾಲ್ ಅಕ್ಕಿ ಈಗಲೇ ಬಂದಿದೆ. ಮುಂದೆ ಅಭಿವೃದ್ದಿ ಕೆಲಸದಲ್ಲಿ ಭಕ್ತರು ನಮ್ಮೊಂದಿಗೆ ಈ ರೀತಿಯಲ್ಲಿ ಸಹಕರಿಸುವಂತೆ ವಿನಂತಿಸಿದರು.
ಇನ್ನಷ್ಟು ಮಂದಿ ದಾನಿಗಳು ಮುಂದೆ ಬರಲಿ:
ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾೖಕ್ ಅವರು ಮಾತನಾಡಿ, ಮಹಾಲಿಂಗೇಶ್ವರ ದೇವಸ್ಥಾನಕ್ಕೂ ನಮಗೂ ಅವಿನಾಭಾವ ಸಂಬಂಧವಿದೆ. ದೇವಳದಲ್ಲಿ ಅಕ್ಕಿ ಕಡಿಮೆ ಆಗಿರುವ ಕುರಿತು ಈಶ್ವರ ಭಟ್ ಅವರು ಪ್ರಸ್ತಾಪಿಸಿದಾಗ ಆಗ ನಾನು ತಕ್ಷಣ ಅಕ್ಕಿ ಕೊಡುವ ಭರವಸೆ ನೀಡಿದ್ದೇನೆ. ಯಾಕೆಂದರೆ ದೇವಳದ ಅಭಿವೃದ್ಧಿಗೆ ಈಶ್ವರ ಭಟ್ ಅವರ ಕಾಲದಲ್ಲಿ ಆದಷ್ಟು ಅಭಿವೃದ್ದಿ ಬೇರೆ ಯಾರ ಕಾಲದಲ್ಲೂ ಆಗಿಲ್ಲ. ನಾವೆಲ್ಲ ದೇವರ ಭಕ್ತರು. ದೇವರು ಒಂದಲ್ಲ ಒಂದು ರೀತಿಯಲ್ಲಿ ನಮಗೆ ದಾರಿ ತೋರಿಸುತ್ತಾನೆ ಎಂದ ಅವರು ನಮ್ಮ ಉಪ್ಪಿನಂಗಡಿ ದೇವಸ್ಥಾನಕ್ಕೆ 352 ಕೋಟಿ ರೂಪಾಯಿಯ ಯೋಜನೆಯನ್ನು ಶಾಸಕರು ತಂದಿದ್ದಾರೆ. ಅದರಿಂದ ನಮ್ಮ ಊರಿನ ಚಿತ್ರಣವೇ ಬದಲಾಗುತ್ತಿದೆ. ಬೆಂಗಳೂರಿನಿಂದ ಆ ಯೋಜನೆಯ ಸರ್ವೆ ಕಾರ್ಯಕ್ಕೆ ಎಲ್ಲಾ ಇಂಜಿಯರ್ಗಳ ಟೀಮ್ ಬಂದು ಸರ್ವೆ ಕಾರ್ಯ ಆರಂಭಿಸಿದ್ದಾರೆ. ದೇವಸ್ಥಾನದಲ್ಲಿ ಅನ್ನಸಂತರ್ಪಣೆ ನಿತ್ಯ ನಡೆಯುತ್ತಿರಬೇಕು. ದೇವರಿಗೆ ಸೇವಾ ರೂಪದಲ್ಲಿ ಇನ್ನಷ್ಟು ಮಂದಿ ದಾನಿಗಳು ಮುಂದೆ ಬರಲಿ ಎಂದರು. ಅಕ್ಕಿ ಸಮರ್ಪಣೆ ಮಾಡಿದವರ ಪೈಕಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾೖಕ್, ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಪಿ.ಬಿ, ರಾಮದಾಸ್ ಉಪ್ಪಿನಂಗಡಿ ಸಹಿತ ಹಲವಾರು ಮಂದಿಗೆ ದೇವಳದ ಸತ್ಯಧರ್ಮ ನಡೆಯಲ್ಲಿ ಪ್ರಸಾದ ನೀಡಿ ಗೌರವಿಸಲಾಯಿತು.
ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ನಳಿನಿ ಪಿ ಶೆಟ್ಟಿ, ಸುಭಾಶ್ ರೈ ಬೆಳ್ಳಿಪ್ಪಾಡಿ, ವಿನಯ ಸುವರ್ಣ, ಈಶ್ವರ ಬೆಡೇಕರ್, ಕಾರ್ಯನಿರ್ವಹಣಾದಿಕಾರಿ ಕೆ.ವಿ.ಶ್ರೀನಿವಾಸ್, ಪಡ್ನೂರು ಕುಂಜಾರು ಶ್ರೀ ಮದಗ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರೋಹನ್ರಾಜ್, ಲೋಕೇಶ್ ಪಡ್ಡಾಯೂರು, ರೋಶನ್ ರೈ ಬನ್ನೂರು, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಪಿ.ಬಿ, ಮಾನಕ ಜ್ಯುವಲ್ಸ್ನ ಸಿದ್ದನಾಥ ಕಂದಾರೆ, ಸುರೇಶ್ಚಂದ್ರ ರೈ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.
ಶಾಸ್ತ್ರದಲ್ಲಿ ವರ್ಣಿಸಿರುವಂತೆ ಮಹಾದಾನಗಳಲ್ಲಿ ‘ಅನ್ನದಾನ’ ಮಹತ್ವದ ದಾನವಾಗಿದೆ. ‘ಅನ್ನದಾನದಂತಹ ದಾನ ಹಿಂದೆಂದೂ ಆಗಿಲ್ಲ ಮುಂದೆಂದೂ ಆಗಲಾರದು. ಹಾಗಾಗಿ ಯಾವಾಗಲೂ ಅನ್ನದಾನ ಮಾಡಬೇಕು’ ಎಂದು ಹೇಳಲಾಗಿದೆ. ನಾವು ಇತರರಿಗೆ ಅನ್ನದಾನ ಮಾಡಿದರೆ ಶ್ರೀ ಅನ್ನಪೂರ್ಣಾಮಾತೆಯು ಪ್ರಸನ್ನಳಾಗಿ ನಮ್ಮ ಮೇಲೆ ಕೃಪೆ ಮಾಡುತ್ತಾಳೆ. ಅನ್ನದಾನ ಮಾಡುವವನಿಗೆ ಅನ್ನ ಸ್ವೀಕರಿಸುವವರಿಂದ ಆಶೀರ್ವಾದಾತ್ಮಕ ಸದಿಚ್ಛೆಗಳ ಲಾಭವೂ ಆಗುತ್ತದೆ.
ವೇ ಮೂ ವಸಂತ ಕೆದಿಲಾಯ ಪ್ರಧಾನ ಅರ್ಚಕರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ
ಕ್ವಿಂಟಾಲ್ ಗಟ್ಟಲೆ ಅಕ್ಕಿ ಸಮರ್ಪಣೆ ದೇವರ ಪ್ರೇರಣೆ:
ದೇವಸ್ಥಾನದಲ್ಲಿ ಅನ್ನಪ್ರಸಾದ ವಿತರಣೆಯಲ್ಲಿ ಎಲ್ಲೂ ಕೊರತೆ ಆಗಬಾರದೆಂದು ದೇವರಲ್ಲಿ ಪ್ರಾರ್ಥನೆ ಮಾಡಿದಂತೆ ದೇವರ ಪ್ರೇರಣೆಯಂತೆ ಕ್ವಿಂಟಾಲ್ ಗಟ್ಟಲೆ ಅಕ್ಕಿಯನ್ನು ದಾನಿಗಳು ಸಮರ್ಪಣೆ ಮಾಡಿದ್ದರೆ. ಅವರಿಗೆ ಬೆಳಗ್ಗೆ ದೇವಳದ ಸತ್ಯಧರ್ಮ ನಡೆಯಲ್ಲಿ ಪ್ರಸಾದ ಕೊಡಿಸಿದ್ದೇವೆ. ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯ್ಕ್, ಕೆದಂಬಾಡಿಗುತ್ತು ಪದ್ಮಾವತಿ ಶ್ರೀಧರ್ ರೈ ದಂಪತಿ ಹೆಸರಿನಲ್ಲಿ ಪದ್ಮಶ್ರೀ ಸೋಲಾರ್ ಸಿಸ್ಟಮ್ಸ್ನ ಮಾಲಕ ಶ್ರೀ ಶಾರದೋತ್ಸವ ಸಮಿತಿ ಗೌರವಾಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು ಸಹೋದರರು, ರಾಮದಾಸ್ ಶೆಣೈ ಉಪ್ಪಿನಂಗಡಿ, ಹೊಟೇಲ್ ಹರಿಪ್ರಸಾದ್ ಮಾಲಕ ಹರಿನಾರಾಯಣ ಹೊಳ್ಳ, ರಾಘವೇಂದ್ರ ಮಯ್ಯ, ಭರತ್ ಕುಮಾರ್ ಆರಿಗ ಪಟ್ಟೆಗುತ್ತು, ಮಾನಕ ಜ್ಯುವೆಲ್ಸ್ನ ಮಾಲಕ ಸಿದ್ದನಾಥ ಕಂದಾರೆ, ವಾಮದೇವ, ಯಮುನಾ ಬೋರ್ವೆಲ್ಸ್ನ ದಿವ್ಯಾ ಶೆಟ್ಟಿ, ಕೋಟಿಚೆನ್ನಯ ಜೋಡುಕರೆ ಕಂಬಳ ಸಮಿತಿಯ ಪರವಾಗಿ ರೋಶನ್ ರೈ ಬನ್ನೂರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ, ಮಂಗಲ ಸ್ಟೋರ್ಸ್ ಪುತ್ತೂರು, ಅಂಬಿಕಾ ವಿದ್ಯಾ ಸಂಸ್ಥೆಯ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಪ್ರತಿ ತಿಂಗಳಿಗೆ ತಲಾ 1 ಕ್ವಿಂಟಾಲ್ ಅಕ್ಕಿಯನ್ನು 1 ವರ್ಷಕ್ಕೆ ನೀಡುವ ಭರವಸೆ ನೀಡಿ ಪ್ರಥಮ ತಿಂಗಳ ಅಕ್ಕಿಯನ್ನು ನೀಡಿದ್ದಾರೆ. ಅದೇ ರೀತಿ ತಾರನಾಥ ಗೋಪಾಲ 1 ಕ್ವಿಂಟಾಲ್, ಹಿತೇಶ್ ಪಾಟೇಲ್ ಕಾರ್ಣಿಯ ಟ್ರೇಡರ್ಸ್ 3 ಕ್ವಿಂಟಾಲ್, ಪಾಂಡುರಂಗ ಭಟ್ ಮಹಾಲಸ ಟ್ರೆಡರ್ಸ್ 5 ಕ್ವಿಂಟಾಲ್, ಗೋಪಾಲಕೃಷ್ಣ ಭಟ್ ಶ್ರೀನಿಧಿ 1 ಕ್ವಿಂಟಾಲ್, ಸುರೇಶ್ ಸಂಪ್ಯ ಪಿಡಬ್ಲ್ಯೂ ಇಲಾಖೆ 3 ಕ್ವಿಂಟಾಲ್, ಮನೋಜ್ ಪಂಜಿಗುಡ್ಡೆ 1 ಕ್ವಿಂಟಾಲ್, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಪಿ.ಬಿ 1 ಕ್ವಿಂಟಾಲ್ ಅಕ್ಕಿ ನೀಡಿದ್ದಾರೆ. ಸುಮಾರು 232 ಕ್ವಿಂಟಾಲ್ ಅಕ್ಕಿ ಸಮರ್ಪಣೆಯ ವಾಗ್ದಾನ ನೀಡಿದ್ದಾರೆ. ಈಗಾಗಲೇ 26 ಕ್ವಿಂಟಾಲ್ ಅಕ್ಕಿ ದೇವಸ್ಥಾನದ ಪಾಕಶಾಲೆಗೆ ಬಂದಿದೆ.
ಈಶ್ವರ ಭಟ್ ಪಂಜಿಗುಡ್ಡೆ ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು