ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಎಂಬಿಎ, ಎಂಸಿಎ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮ

0

ಪುತ್ತೂರು: ಕಾಲೇಜಿನಿಂದ ಬೀಳ್ಕೊಡುಗೆ ಎನ್ನುವುದು ಅಂತ್ಯವಲ್ಲ ಬದಲಾಗಿ ಜ್ಞಾನ, ಸ್ನೇಹ ಮತ್ತು ಅಪಾರ ಅನುಭವಗಳಿಂದ ಕೂಡಿದ ಜೀವನದ ಆರಂಭ ಎಂದು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿಯ ನಿರ್ದೇಶಕ ರವಿಕೃಷ್ಣ.ಡಿ.ಕಲ್ಲಾಜೆ ಹೇಳಿದರು.


ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಶ್ರೀರಾಮ ಸಭಾಭವನದಲ್ಲಿ ಕಾಲೇಜಿನ ಎಂಬಿಎ ಮತ್ತು ಎಂಸಿಎ ವಿಭಾಗದ ವಿದ್ಯಾರ್ಥಿಗಳನ್ನು ಬೀಳ್ಕೊಡುವ ಸಾಮಾರಂಭದಲ್ಲಿ ಮಾತಾಡಿದರು.

ಇದುವರೆಗೆ ನೈತಿಕವಾಗಿ ಮತ್ತು ಸಾಮಾಜಿಕ ಜವಾಬ್ಧಾರಿಯುತವಾಗಿ ನಿಮ್ಮ ಜೀವನವನ್ನು ರೂಪಿಸಲು ಅಗತ್ಯವಾದ ತಿಳುವಳಿಕೆಯನ್ನು ಕಾಲೇಜು ನೀಡಿದೆ. ಇನ್ನು ಮುಂದೆ ಇದನ್ನು ಉಳಿಸಿ ಬೆಳೆಸುವ ಜವಾಬ್ಧಾರಿ ನಿಮ್ಮದು ಎಂದರು. ಜೀವನದ ಹೊಸ ಹಂತವನ್ನು ಆತ್ಮವಿಶ್ವಾಸ ಮತ್ತು ಸಮರ್ಪಣಾ ಮನೋಭಾವದಿಂದ ಪ್ರವೇಶಿಸಬೇಕು ಮತ್ತು ನಮ್ಮ ಏಳಿಗೆಗಾಗಿ ಅಪಾರ ತ್ಯಾಗವನ್ನು ಮಾಡುವ ಹೆತ್ತವರ ಆಶೋತ್ತರಗಳನ್ನು ಗಮನದಲ್ಲಿರಿಸಿಕೊಂಡು ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.


ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ.ಕೆ ಮಾತನಾಡಿ ಕಾಲೇಜಿನಲ್ಲಿ ಕಲಿತ ಪಾಠಗಳನ್ನು ಮತ್ತು ಸವಿನೆನಪುಗಳನ್ನು ಹೊತ್ತುಕೊಂಡು ಮುಂದುವರಿಯಿರಿ, ಏನಾದರೂ ನಕಾರಾತ್ಮಕ ಅಂಶಗಳಿದ್ದರೆ ಅದನ್ನು ಇಲ್ಲಿಯೇ ಬಿಟ್ಟುಬಿಡಿ ಎಂದರು. ಮುಂದಿನ ಜೀವನದಲ್ಲಿ ಯಶಸ್ಸನ್ನು ಸಾಧಿಸಿ ದೇಶದ ಸತ್ಪ್ರಜೆಗಳಾಗುವಂತೆ ಶುಭ ಹಾರೈಸಿದರು.


ವಿದ್ಯಾರ್ಥಿಗಳ ಕೊಡುಗೆಗಳನ್ನು ಸ್ಮರಿಸುವ ಮತ್ತು ಕಾಲೇಜಿನೊಂದಿಗೆ ಶಾಶ್ವತ ಸಂಬಂಧವನ್ನು ಉಳಿಸುವ ದ್ಯೋತಕವಾಗಿ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು. ಎಂಬಿಎ ವಿಭಾಗ ಮುಖ್ಯಸ್ಥ ಡಾ.ರಾಬಿನ್ ಮನೋಹರ್ ಶಿಂಧೆ ಮತ್ತು ಎಂಸಿಎ ವಿಭಾಗದ ನಿರ್ದೇಶಕಿ ಡಾ.ಜೋತಿಮಣಿ.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಪ್ರವೇಶ ಮತ್ತು ನೇಮಕಾತಿ ವಿಭಾಗ ಮುಖ್ಯಸ್ಥೆ ಪ್ರೊ.ವಂದನಾ ಶಂಕರ್ ಮತ್ತು ಇತರ ವಿಭಾಗಗಳ ಮುಖ್ಯಸ್ಥರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಡಾ.ಜೋತಿಮಣಿ.ಕೆ ಸ್ವಾಗತಿಸಿ, ಡಾ.ರಾಬಿನ್ ಮನೋಹರ್ ಶಿಂಧೆ ವಂದಿಸಿದರು. ಸುಷ್ಮಿತಾ ಮತ್ತು ಮೇಘನ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here