ಕಲೆ ನಿಂತ ನೀರಾಗದೆ ಗುರು ಶಿಷ್ಯ ಸಂಬಂಧ ಮುಂದುವರಿಯುತ್ತಾ ಸಾಗಿದಾಗ ಅನೇಕ ಕಲಾವಿದರ ಸೃಷ್ಟಿ- ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದರು
ಪುತ್ತೂರು: ಕಲೆ ನಿಂತ ನೀರಾಗದೆ ಗುರು ಶಿಷ್ಯ ಸಂಬಂಧ ಮುಂದುವರಿಯುತ್ತಾ ಸಾಗಿದಾಗ ಅನೇಕ ಕಲಾವಿದರ ಸೃಷ್ಟಿಯಾಗುತ್ತದೆ. ರಂಗಪ್ರವೇಶದ ನಂತರ ಕಲಾವಿದೆಯು ಇನ್ನಷ್ಟು ಜವಾಬ್ದಾರಿಯೊಂದಿಗೆ ತನ್ನ ಕಲಾ ಪ್ರೌಢಿಮೆಯನ್ನು ಶಿಷ್ಯಂದಿರಿಗೆ ಧಾರೆಯೆರೆಯಬೇಕು. ತನ್ಮೂಲಕ ಕ್ಷೇತ್ರಕಲೆಗಳಿಗೆ ಮತ್ತಷ್ಟು ಪ್ರೋತ್ಸಾಹವನ್ನು ನೀಡಬೇಕು ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದರು ನುಡಿದರು.

ಎಡನೀರು ಮಠದಲ್ಲಿ ಅ.2ರಂದು ನಡೆದ ವಿಜಯದಶಮಿಯ ಶುಭ ಸಂದರ್ಭದಲ್ಲಿ ವಿದುಷಿ ರೂಪ ವಿಘ್ನೇಶ್ ಕುಳಾಯಿ ಅವರ ಭರತನಾಟ್ಯ ರಂಗ ಪ್ರವೇಶದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಭಾರತೀಯ ಕಲೆಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ.ಬಾಲ್ಯದಿಂದಲೇ ಮಕ್ಕಳನ್ನು ನಮ್ಮ ದೇಶಿಯ ಕಲಾ ಪ್ರಕಾರಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದಾಗ ಮುಂದೆ ಅವರು ಸದಾ ನಮ್ಮ ಸಂಸ್ಕೃತಿಗೆ ಬದ್ಧರಾಗಿರುತ್ತಾರೆ ಎಂದರು.
ಶ್ರೀ ಎಡ ನೀರು ಸಂಸ್ಥಾನದ ಪ್ರಬಂಧಕ ರಾಜೇಂದ್ರ ಕಲ್ಲುರಾಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಿಶ್ವಕಲಾ ನಿಕೇತನದ ಕರ್ನಾಟಕ ಕಲಾಶ್ರೀ ವಿದುಷಿ ನಯನಾ. ವಿ. ರೈ, ಬದಿಯಡ್ಕ ಶ್ರೀ ಭಾರತಿ ವಿದ್ಯಾಪೀಠದ ಮುಖ್ಯ ಶಿಕ್ಷಕ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಮುಖ್ಯ ಅತಿಥಿಗಳಾಗಿದ್ದರು.
ನೃತ್ಯ ಗುರುಗಳಾದ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ದಂಪತಿಗೆ ವಿದುಷಿ ರೂಪ ವಿಘ್ನೇಶ್ ಗುರುವಂದನೆ ಸಲ್ಲಿಸಿದರು. ವಿದುಷಿ ಯೋಗೀಶ್ವರಿ ಜಯಪ್ರಕಾಶ್ ಸ್ವಾಗತಿಸಿ, ಸತ್ಯನಾರಾಯಣ ಭಟ್ ವಂದಿಸಿ, ಕಾರ್ತಿಕ್ ಪಡ್ರೆ, ವಿದುಷಿ ಹರ್ಷಿತ ಬದಿಯಡ್ಕ,ವಿದುಷಿ ಅಭಿಜ್ಞಾ ಕೊಳ್ತಿಗೆ ಕಾರ್ಯಕ್ರಮ ನಿರೂಪಿಸಿದರು.