ಸರಿಯಾದ ಕೃಷಿ ಮಾಹಿತಿ ಪಡೆದುಕೊಳ್ಳುವುದು ರೈತನ ಕರ್ತವ್ಯ: ವಾಸು ಪೂಜಾರಿ
ಪುತ್ತೂರು: ಪ್ರತಿಯೊಬ್ಬ ರೈತ ಕೂಡ ಸರಿಯಾದ ಕೃಷಿ ಮಾಹಿತಿಯನ್ನು ಪಡೆದುಕೊಂಡು ಕೃಷಿ ಮಾಡಿದಾಗ ಅದರಿಂದ ಹೆಚ್ಚಿನ ಲಾಭ ಪಡೆದುಕೊಳ್ಳಲು ಸಾಧ್ಯವಿದೆ. ಈ ವರ್ಷ ಅತೀ ಹೆಚ್ಚು ಮಳೆಯಿಂದಾಗಿ ಕೃಷಿ ನಾಶದಿಂದಾಗಿ ಕೃಷಿಕ ಸಂಕಷ್ಟಕ್ಕೆ ಸಿಲುಕಿದ್ದಾನೆ. ಕೃಷಿಗೆ ರೋಗಬಾಧೆ ಕೂಡ ಜಾಸ್ತಿಯಾಗಿದೆ ಆದ್ದರಿಂದ ತಜ್ಞರಿಂದ ಸರಿಯಾದ ಕೃಷಿ ಮಾಹಿತಿ ಪಡೆದುಕೊಳ್ಳುವುದು ಪ್ರತಿಯೊಬ್ಬ ರೈತನ ಕರ್ತವ್ಯವಾಗಿದೆ ಎಂದು ಪ್ರಗತಿಪರ ಕೃಷಿಕ ವಾಸು ಪೂಜಾರಿ ಗುಂಡ್ಯಡ್ಕ ಹೇಳಿದರು.
ಅವರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕುಂಬ್ರ ಇದರ ಸುವರ್ಣ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಕರ್ನಾಟಕ ಆಗ್ರೋ ಕೆಮಿಕಲ್ಸ್(ಮಲ್ಟಿಫ್ಲೆಕ್ಸ್) ಬೆಂಗಳೂರು ಹಾಗೂ ಕರಾವಳಿ ಎಂಟರ್ಪ್ರೈಸಸ್ ಸುಳ್ಯ ಇವರ ಸಂಯುಕ್ತ ಆಶ್ರಯದಲ್ಲಿ ಅ.9 ರಂದು ಕುಂಬ್ರ ನವೋದಯ ರೈತ ಸಭಾ ಭವನದಲ್ಲಿ ನಡೆದ ಸಮಗ್ರ ಕೃಷಿ ಮಾಹಿತಿ ಕಾರ್ಯಾಗಾರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಸಭಾಧ್ಯಕ್ಷತೆ ವಹಿಸಿದ್ದ ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಮಾತನಾಡಿ, ಕುಂಬ್ರ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಮುಂದಿನ ವರ್ಷಕ್ಕೆ 50 ವರ್ಷಗಳು ತುಂಬುತ್ತಿದ್ದು ಸುವರ್ಣ ಮಹೋತ್ಸವ ಆಚರಣೆ ನಡೆಯಲಿದೆ ಈ ನಿಟ್ಟಿನಲ್ಲಿ ಒಂದು ವರ್ಷಗಳ ಕಾಲ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು ಈ ನಿಟ್ಟಿನಲ್ಲಿ ಪ್ರಥಮ ಕಾರ್ಯಕ್ರಮವಾಗಿದೆ ಎಂದರು. ಈ ವರ್ಷ ವಿಪರೀತ ಮಳೆಯಿಂದಾಗಿ ಕೃಷಿಗೆ ಎಲೆಚುಕ್ಕಿ, ಹಳದಿ ರೋಗ ಸಹಿತ ವಿವಿಧ ರೋಗಬಾಧೆಗಳು ಕಂಡು ಬಂದಿದ್ದು ಇವುಗಳ ಹತೋಟಿಗೆ ಸರಿಯಾದ ಮಾಹಿತಿ ಪಡೆದುಕೊಳ್ಳುವುದು ಅತೀ ಅವಶ್ಯ ಎಂದರು. ಗ್ರಾಮೀಣ ಭಾಗದ ರೈತರು ಕೃಷಿಯನ್ನೆ ಅವಲಂಭಿತರಾಗಿದ್ದು ಅವರಿಗೆ ಕೃಷಿಯೇ ಜೀವನಾಧಾರವಾಗಿದೆ ಆದರೆ ಕೃಷಿಗೆ ಹಲವಾರು ಸಮಸ್ಯೆಗಳು ಎದುರಾಗಿದ್ದು ಇವುಗಳ ಸಮಗ್ರ ಪರಿಹಾರದ ಬಗ್ಗೆ ತಜ್ಞರಿಂದ ಮಾಹಿತಿ ಪಡೆದುಕೊಳ್ಳುವುದು ಅತೀ ಅಗತ್ಯ ಈ ನಿಟ್ಟಿನಲ್ಲಿ ಸಂಘವು ಈ ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಸೂರ್ಯನಾರಾಯಣ ಭಟ್ ಉಪಸ್ಥಿತರಿದ್ದರು. ಕರ್ನಾಟಕ ಆಗ್ರೋ ಕೆಮಿಕಲ್ಸ್ ಬೆಂಗಳೂರು ಇದರ ಮಾರುಕಟ್ಟೆ ಹಾಗೂ ತಾಂತ್ರಿಕ ಮುಖ್ಯಸ್ಥ ಡಾ| ಎಂ.ನಾರಾಯಣ ಸ್ವಾಮಿಯವರು ಅಡಿಕೆ, ತೆಂಗು, ಕಾಳುಮೆಣಸು, ಕೊಕ್ಕೋ, ರಬ್ಬರ್ ಬೆಳೆಯ ಬೇಸಾಯ ಕ್ರಮ ಹಾಗೂ ರೋಗ ಕೀಟಗಳ ನಿರ್ವಹಣೆಯ ಬಗ್ಗೆ ಹಾಗೂ ವಿಶೇಷವಾಗಿ ಹಳದಿರೋಗ, ಎಲೆಚುಕ್ಕಿ ರೋಗ ಇತ್ಯಾದಿಗಳ ನಿರ್ವಹಣೆಯ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಇದಲ್ಲದೆ ಪ್ರತಿಯೊಬ್ಬ ರೈತನು ಕೂಡ ಮಣ್ಣು ಪರೀಕ್ಷೆಯನ್ನು ಮಾಡಿಸಿಕೊಂಡು ಮಣ್ಣಿನ ಗುಣಮಟ್ಟವನ್ನು ತಿಳಿದುಕೊಳ್ಳುವುದು ಅತೀ ಅಗತ್ಯ ಎಂದು ಹೇಳಿದರು.
ಶಿವಮೊಗ್ಗ ಬ್ರಾಂಚ್ನ ಎ.ಎನ್.ಎಂ, ಕೆ.ವಿ.ಪಿ ಎ.ಎನ್ ಕೃಷ್ಣಮೂರ್ತಿ, ಸುಳ್ಯ ಕರಾವಳಿ ಎಂಟರ್ಪ್ರೈಸಸ್ನ ಚೆನ್ನಪ್ಪ ಕುಕ್ಕುಜೆ ಉಪಸ್ಥಿತರಿದ್ದರು. ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಿಬ್ಬಂದಿ ಉದಯಶಂಕರ ಕೆ.ಪಿ ಪ್ರಾರ್ಥಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ಬಿ.ಆರ್ ಸ್ವಾಗತಿಸಿದರು. ನಿರ್ದೇಶಕ ಅಮರನಾಥ ರೈ ವಂದಿಸಿದರು. ನಿರ್ದೇಶಕರುಗಳಾದ ಸಂತೋಷ್ ಆಳ್ವ, ವಸಂತ ಕುಮಾರ್, ಶ್ರೀನಿವಾಸ ಪ್ರಸಾದ್ ಮುಡಾಲ ಹಾಗೂ ಸಾಮಾಜಿಕ ಕಾರ್ಯಕರ್ತ ರಾಜೇಶ್ ರೈ ಪರ್ಪುಂಜ, ಶಿವರಾಮ ಶೆಟ್ಟಿ ಅತಿಥಿಗಳಿಗೆ ಹೂ ಶಾಲು ನೀಡಿ ಸ್ವಾಗತಿಸಿದರು. ನಿರ್ದೇಶಕರುಗಳಾದ ಶಿವರಾಮ ಗೌಡ, ಮಲ್ಲಿಕಾ, ರಾಜೀವಿ ರೈ,ಉಮೇಶ್ ಗೌಡ, ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಸೇರಿದಂತೆ ಸಂಘದ ಸದಸ್ಯರುಗಳು, ಕೃಷಿಕರು, ಗ್ರಾಮಸ್ಥರು ಉಪಸ್ಥಿತರಿದ್ದರು.
‘ ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸುವರ್ಣ ಮಹೋತ್ಸವ ಆಚರಣೆಯ ಹಿನ್ನೆಲೆಯಲ್ಲಿ ಇದು ಪ್ರಥಮ ಕಾರ್ಯಕ್ರಮವಾಗಿದೆ. ಒಂದು ವರ್ಷಗಳ ಕಾಲ ರೈತರಿಗೆ ಅನುಕೂಲವಾಗುವ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುವುದು. ರೈತ ಸದಸ್ಯರ ಸಹಕಾರವಿರಲಿ.’
ಪ್ರಕಾಶ್ಚಂದ್ರ ರೈ ಕೈಕಾರ, ಅಧ್ಯಕ್ಷರು ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ.