ನಕಲಿ ಚಿನ್ನಾಭರಣ ಅಡವಿಟ್ಟು ವಂಚನೆ : ಪುತ್ತೂರು ಮೂಲದ ಓರ್ವ ಸಹಿತ ಮೂವರ ಬಂಧನ

0

ಪುತ್ತೂರು: ಕಾವೂರಿನ ಸಹಕಾರಿ ಸಂಸ್ಥೆಯೊಂದರಲ್ಲಿ ಅಸಲಿ ಎಂದು ನಂಬಿಸಿ ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು 6.24 ಲಕ್ಷ ರೂ. ವಂಚನೆ ಮಾಡಿದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಕಾವೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರಿನ ಆಕಾಶಭವನ ಅನಂದ ನಗರ ನಿವಾಸಿ ಹಾರೀಫ್ ಅಬೂಬಕ್ಕರ್ (39), ನಂತೂರು ಬಿಕರ್ನಕಟ್ಟೆ ನಿವಾಸಿ ಮಹಮ್ಮದ್ ಆಶೀಕ್ ಕಟ್ಟತ್ತಾರ್ ಹುಸೈನ್ (34) ಮತ್ತು ಪುತ್ತೂರು ತಾಲೂಕು ಬೆಳಂದೂರು ಗ್ರಾಮದ ಅಬ್ದುಲ್ ರಮೀಝ್ (33) ಬಂಧಿತರು.

ಆರೋಪಿಗಳಿಂದ 5 ಲಕ್ಷ ರೂ. ನಗದು, ಸುಮಾರು 45 ಗ್ರಾಂ. ತೂಕದ ನಕಲಿ ಚಿನ್ನದ ಒಡವೆಗಳು, 20 ಲಕ್ಷ ರೂ. ಮೌಲ್ಯದ ಕಾರು ಹಾಗೂ ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸ್ವಾಧೀನಪಡಿಸಿಕೊಂಡಿರುವ ಸೊತ್ತುಗಳ ಒಟ್ಟು ಮೌಲ್ಯ 26.50 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಹಾರೀಫ್ ಅಬೂಬಕ್ಕರ್ ಅ.9ರಂದು ಕಾವೂರು ಬಳಿಯ ವಿವಿದೋದ್ದೇಶ ಸಹಕಾರಿ ಸಂಘವನ್ನು ವಂಚಿಸಿ 6.24 ಲಕ್ಷ ರೂ. ಸಾಲ ಪಡೆದಿದ್ದ. ಚಿನ್ನದ ಬಗ್ಗೆ ಅನುಮಾನ ಬಂದ ಹಿನ್ನೆಲೆಯಲ್ಲಿ ತಪಾಸಣೆಗೆ ಒಳಪಡಿಸಿದಾಗ ನಕಲಿ ಎಂದು ತಿಳಿದು ಬಂದಿದ್ದು, ಕಾವೂರು ಠಾಣೆಗೆ ದೂರು ನೀಡಲಾಗಿತ್ತು.

ಮಂಗಳೂರು ಉತ್ತರ ಉಪವಿಭಾಗದ ಎ.ಸಿ.ಪಿ. ಶ್ರೀಕಾಂತ್ ಕೆ. ಅವರ ಮಾರ್ಗದರ್ಶನದಲ್ಲಿ, ಕಾವೂರು ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರಾಘವೇಂದ್ರ ಎಂ. ಬೈಂದೂರು, ಪೊಲೀಸ್ ಉಪನಿರೀಕ್ಷಕ ಮಲ್ಲಿಕಾರ್ಜುನ ಬಿರಾದಾರ, ಎ.ಎಸ್.ಐ. ಚಂದ್ರಹಾಸ ಸನೀಲ್, ಎಚ್.ಸಿ. ಗಳಾದ ಸಂಬಾಜಿ ಕದಂ, ಕೆಂಚನ್ ಗೌಡ, ಪ್ರಮೋದ್ ಕುಮಾರ್. ಪಿ.ಸಿ. ಗಳಾದ ನಾಗರಾಜ್ ಬೈರಗೊಂಡ, ಪ್ರವೀಣ್, ರಿಯಾಝ್, ತೀರ್ಥಪ್ರಸಾದ್, ಆನಂದ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿದೆ.

LEAVE A REPLY

Please enter your comment!
Please enter your name here