ನ.8-9ರಂದು ಬೆಂಗಳೂರಿನಲ್ಲಿ ಸಮಾಜಮುಖಿ ಸಾಹಿತ್ಯ ಸಮ್ಮೇಳನ
ಪುತ್ತೂರು: ಕನ್ನಡ ಸಾಹಿತ್ಯಕ್ಕೆ ಹೊಸ ದಿಕ್ಸೂಚಿ ನೀಡುವ ಪ್ರಯತ್ನವಾಗಿ ಸಮಾಜಮುಖಿ ಪತ್ರಿಕೆಯ ವತಿಯಿಂದ ಸಮಾಜಮುಖಿ ಸಾಹಿತ್ಯ ಸಮ್ಮೇಳನವೊಂದು ನ.08 ಮತ್ತು 09ರಂದು ಬೆಂಗಳೂರು ಅರಮನೆ ರಸ್ತೆಯ ಸ್ಕೌಟ್ ಮತ್ತ ಗೈಡ್ಸ್ ಆವರಣದಲ್ಲಿ ನಡೆಯಲಿದೆ. ಖ್ಯಾತ ಸಾಹಿತಿ ಹಂ.ಪ. ನಾಗರಾಜಯ್ಯ ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದಾರೆ.
ಕನ್ನಡ ಸಾಹಿತ್ಯ ಸಂದರ್ಭವನ್ನು ಮರು ವಿಶ್ಲೇಷಿಸಿ ಸೃಜನಶೀಲ ಹಾಗೂ ವೈಚಾರಿಕ ಸಾಹಿತ್ಯಗಳೆರಡರಲ್ಲಿ ತೊಡಗಿಸಿಕೊಂಡಿರುವ ಕನ್ನಡ ಬರಹಗಾರರಿಗೆ ಸ್ಪೂರ್ತಿ-ಚೈತನ್ಯ-ಇಂಬು ನೀಡುವಂತಹ ಮೂರ್ತ ವೇದಿಕೆಯೊಂದರ ಅಗತ್ಯವಿದೆ. ಸಾಹಿತ್ಯ ಸಮ್ಮೇಳನದ ನಿಜ ಅಗತ್ಯ ಮತ್ತು ಉದ್ದೇಶಗಳನ್ನು ಈಡೇರಿಸುವಂತಹ ಸಂಭ್ರಮವೊಂದನ್ನು ಆಯೋಜಿಸಬೇಕಿದೆ. ಕನ್ನಡದ ಎಲ್ಲ ಆರೋಗ್ಯವಂತ ಹಾಗೂ ಕ್ರಿಯಾಶೀಲ ಮನಸ್ಸುಗಳನ್ನು ವರ್ಷದಲ್ಲಿ ಒಮ್ಮೆಯಾದರೂ ಒಂದೆಡೆ ಸೇರಿಸಿ ಸಮಾಲೋಚನೆಗೆ ತೊಡಗಿಸಬೇಕಾಗಿದೆ. ಮುಂದಿನ ದಶಕಗಳಲ್ಲಿ ಕನ್ನಡ, ಕನ್ನಡ ಸಾಹಿತ್ಯ ಮತ್ತು ಕರ್ನಾಟಕದ ಬೆಳವಣಿಗೆ-ಸ್ಥಿತಿಗತಿ-ಸ್ಥಾನಮಾನಗಳನ್ನು ಚರ್ಚಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸಮಾಜಮುಖಿ ಪತ್ರಿಕೆಯ ವತಿಯಿಂದ ನವೆಂಬರ್ 8 ಮತ್ತು 9 ಶನಿವಾರ-ಭಾನುವಾರಗಳಂದು ’ಸಮಾಜಮುಖಿ ಸಾಹಿತ್ಯ ಸಮ್ಮೇಳನ’ ಹೆಸರಿನಲ್ಲಿ ಸಾಹಿತ್ಯ ಸಂಭ್ರಮವೊಂದನ್ನು ಆಯೋಜಿಸಲಾಗಿದೆ. ಬೆಂಗಳೂರಿನ ಕೇಂದ್ರ ಭಾಗದಲ್ಲಿ ನಡೆಸಲಾಗುತ್ತಿರುವ ಈ ಸಮಾವೇಶದಲ್ಲಿ ನಾಡಿನ ಎಲ್ಲ ಹಿರಿಯ, ಕಿರಿಯ ಸಾಹಿತಿ. ಬರಹಗಾರರನ್ನು ಒಳಗೊಳ್ಳಲಾಗುತ್ತಿದೆ. ಎಲ್ಲ ಸಾಹಿತ್ಯಾಸಕ್ತರು ಹಾಗೂ ಸಾಹಿತ್ಯದ ವಿದ್ಯಾರ್ಥಿಗಳನ್ನು ಆಹ್ವಾನಿಸಲಾಗುತ್ತಿದೆ. ಆದರೆ ಯಾವುದೇ ಮಂತ್ರಿ-ಶಾಸಕ-ಅಧಿಕಾರಿಗಳನ್ನು ಅವರ ಹುದ್ದೆಯ ಕಾರಣಕ್ಕೆ ಕರೆಯುವುದಿಲ್ಲ. ವೈಯಕ್ತಿಕ ನೆಲೆಯಲ್ಲಿ ಹಾಗೂ ಸಾಹಿತ್ಯಾಸಕ್ತಿಯಿಂದ ಬರುವ ಯಾರಿಗೂ ತಡೆಯಿಲ್ಲ ಎಂದು ಅವರು ಹೇಳಿದರು.
ಇಂತಹ ಸಮಾಜಮುಖಿ ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲರಿಗೂ ಸೂಕ್ತ ವ್ಯವಸ್ಥೆ ಮಾಡಲು ಮುಂಚಿತವಾಗಿ ಆಸ್ಟೈನ್ ನೋಂದಣಿ ಕಡ್ಡಾಯ ಮಾಡಿದೆ. ಭಾಗವಹಿಸುವಿಕೆ, ಎರಡು ದಿನ ಊಟ ತಿಂಡಿ, ಕಾಫಿ ಇತ್ಯಾದಿಗಳ ಮೇಲಿನ ವೆಚ್ಚಕ್ಕೆ ಎಲ್ಲ ಪ್ರತಿನಿಧಿಗಳಿಗೆ ರೂ.300 ನೋಂದಣಿ ಶುಲ್ಕ ನಿಗದಿಪಡಿಸಲಾಗಿದೆ. ಆಹ್ವಾನಿತ ಗಣ್ಯ-ಹಿರಿಯ ಸಾಹಿತಿಗಳಿಗೆ ಪ್ರವಾಸ ವೆಚ್ಚ ಹಾಗೂ ಭತ್ಯೆ ನೀಡಲಾಗುವುದು. ಬೆಂಗಳೂರಿನ ಹೊರಗಿನ ಆಹ್ವಾನಿತ ಗಣ್ಯರಿಗೆ ವಸತಿ ಸೌಲಭ್ಯ ನೀಡಲಾಗುವುದು. ಕನ್ನಡ ಸಾಹಿತ್ಯದ ಪದವಿ-ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹಾಗೂ ಕನ್ನಡ ಸಾಹಿತ್ಯ ಪ್ರಾಧ್ಯಾಪಕರಿಗೆ ’ಕಾರ್ಯಭಾರ ನಿಮಿತ್ತ ಸೌಲಭ್ಯ ನೀಡಲು ಪ್ರಯತ್ನಿಸಲಾಗುವುದು. ಸಮ್ಮೇಳನವನ್ನು ಕನ್ನಡ ಸಾಹಿತ್ಯ ಜಗತ್ತಿಗೆ ಕನ್ನಡಿ ಹಿಡಿಯುವ ಮತ್ತು ದಾರಿದೀಪವಾಗುವ ರೀತಿಯಲ್ಲಿ ಆಯೋಜಿಸಲಾಗುವುದು.
ಯಾವುದೇ ಸರ್ಕಾರಿ ನೆರವಿಗೆ ಕಾಯದೇ ಅತ್ಯಂತ ಕಡಿಮೆ ಖರ್ಚಿನಲ್ಲಿ ಸಾಹಿತ್ಯಾಸಕ್ತರ ಹಾಗೂ ಮೌಲ್ಯಯುತ ಸಮಾಜ ಬಯಸುವವರ ದೇಣಿಗೆಯಿಂದಲೇ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುವುದು. ಆದಕಾರಣ ಕನ್ನಡ ಸಾಹಿತ್ಯದ ಹಿರಿಮೆ ಗರಿಮೆ ಹೆಚ್ಚಿಸಬೇಕೆನ್ನುವ ಎಲ್ಲ ಸಹೃದಯರು ಹಾಗೂ ಕನ್ನಡ ನಾಡಿನ ಒಳಿತನ್ನು ಬಯಸುವ ಎಲ್ಲರೂ ಉದಾರ ದೇಣಿಗೆ ನೀಡಿ ಈ ಕಾರ್ಯವನ್ನು ಸಫಲಗೊಳಿಸಬೇಕು. ಅದಾಗ್ಯೂ ನಿಮ್ಮ ಸ್ಪಷ್ಟ ಅಭಿಪ್ರಾಯ ಹಾಗೂ ನಿಲುವುಗಳು ಸಮ್ಮೇಳನ ರೂಪಿಸುವಲ್ಲಿ ಮಹತ್ವದ್ದಾಗಿವೆ ಎಂದು ಅವರು ಹೇಳಿದರು. ನೋಂದಣಿಗಾಗಿ https://samajamukhi.com/samajamukhi-form/ ಸಂಪರ್ಕಿಸಬಹುದು.
ಸಾಹಿತಿಗಳಿಗೆ ಹಣೆಪಟ್ಟಿ ನೀಡುವ ಬದಲಿಗೆ ಅವರ
ಪ್ರತಿಯೊಂದು ಕೃತಿಯ ಸ್ವತಂತ್ರ ಮೌಲ್ಯಮಾಪನವಾಗಬೇಕು ಸಾಹಿತ್ಯ ಕೃಷಿ ಮತ್ತು ಜೀವನಾನುಭವದ ಅರ್ಹತೆಯ ಮೇಲೆಯೇ ಆಯ್ಕೆ ಮಾಡುವ-ಮನ್ನಣೆ ನೀಡುವ ಈ ಸಮ್ಮೇಳನದಲ್ಲಿ ಕನ್ನಡದ ಪ್ರಸ್ತುತ ಬಿಕ್ಕಟ್ಟುಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸುವ ಉದ್ದೇಶವಿದೆ. ನಾಡಿನ ಹಿರಿಯ ಗಣ್ಯರೆಲ್ಲರು ಪಾಲ್ಗೊಳ್ಳುವ ಗೋಷ್ಠಿಗಳಲ್ಲಿ ವಿಷಯದ ವಿಷಮತೆಯ ಅನಾವರಣದ ಜೊತೆಗೆ ಪರಿಹಾರ ಗುರುತಿಸುವ ಸ್ಪಷ್ಟ ಯತ್ನದೆಡೆಗೆ ಚರ್ಚೆ ಆಯೋಜಿಸುವ ಗುರಿಯಿದೆ. ಮುಖ್ಯ ವೇದಿಕೆಯ ಜೊತೆಗೆ ನಾಲ್ಕು ಸಮಾನಾಂತರ ವೇದಿಕೆಗಳಲ್ಲಿ ಚರ್ಚೆ-ಕಾರ್ಯಾಗಾರ-ವಿಷಯ ಮಂಡನೆ ಇತ್ಯಾದಿ ಏರ್ಪಡಿಸಲಾಗುವುದು. ವೈಚಾರಿಕ, ಸೃಜನಶೀಲ, ಶಾಸೀಯ, ಕನ್ನಡೇತರ ಹಾಗೂ ಸಾಹಿತ್ಯೇತರ ವಿಷಯಗಳ ಬಗ್ಗೆ ಗೋಷ್ಠಿ ಕಮ್ಮಟ ಹಾಗೂ ಯುವ ಬರಹಗಾರರಿಗೆ ತರಬೇತಿ ಏರ್ಪಡಿಸಲಾಗುವುದು. ಸಾಹಿತ್ಯ ಸೃಷ್ಟಿಯನ್ನು ಕಟುವಾಗಿ ವಿಮರ್ಶೆ ಮಾಡುವ ಹಾಗೂ ಕಾಳು-ಜೊಳ್ಳನ್ನು ಬೇರ್ಪಡಿಸುವ ವಿಧಾನಕ್ಕೆ ಮನ್ನಣೆ ನೀಡಲಾಗುವುದು ಸಾಹಿತಿಗಳಿಗೆ ಹಣೆಪಟ್ಟಿ ನೀಡುವ ಬದಲಿಗೆ ಅವರ ಪ್ರತಿಯೊಂದು ಕೃತಿಯ ಸ್ವತಂತ್ರ ಮೌಲ್ಯಮಾಪನ ಮಾಡಬೇಕೆನ್ನುವ ನಿಲುವಿಗೆ ಬದ್ಧವಾಗಿರುವುದು ಎಂದು ಹಂ.ಪ. ನಾಗರಾಜಯ್ಯ ಹೇಳಿದರು.