ಪುತ್ತೂರು:ಏನೂ ಅರಿಯದ ಮಗುವಿನ ಗಂಟಲಲ್ಲಿದ್ದ ಕಾಡಿಗೆ ಡಬ್ಬವನ್ನು ಇಎನ್ಟಿ ತಜ್ಞ ಡಾ.ರಾಮಮೋಹನ್ ಅವರು ಯಾವುದೇ ಶಸ್ತ್ರ ಚಿಕಿತ್ಸೆಯಿಲ್ಲದೆ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ನೆಹರುನಗರ ನಿವಾಸಿಯಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ವಾಸ್ತವ್ಯವಿರುವ ಮಂಜು ಹಾಗೂ ವಿಶಾಲಾಕ್ಷಿ ದಂಪತಿಯ ಒಂದೂವರೆ ವರ್ಷದ ಗಂಡು ಮಗು ಆರ್ಯನ್ ವರ್ಷದ ಹಿಂದೆ ಜುಲೈನಲ್ಲಿ ಶೃಂಗಾರ ಕಂಪನಿಯ ಸಣ್ಣದಾದ ಕಾಡಿಗೆ ಡಬ್ಬವನ್ನು ನುಂಗಿತ್ತು.ಇದು ಮಗುವಿನ ಹೊಟ್ಟೆಗೆ ಹೋಗದೇ ಗಂಟಲಲ್ಲಿಯೇ ಇದ್ದುದರಿಂದ ಮಗು ಊಟ ಮಾಡಲಾಗದೇ, ಮಾತನಾಡಲೂ ಆಗದ ಪರಿಸ್ಥಿತಿಯಲ್ಲಿತ್ತು.ಆದರೆ ಇದು ಮೇಲ್ನೋಟಕ್ಕೆ ಯಾರಿಗೂ ಕಾಣುತ್ತಿರಲಿಲ್ಲ.ಮಗು ಅಮ್ಮ ಅನ್ನುವುದು ಬಿಟ್ಟರೆ ಬೇರೇನೂ ಮಾತನಾಡಲಾಗದ ಸ್ಥಿತಿಯಲ್ಲಿತ್ತು.ಇದರಿಂದಾಗಿ ಮಗು ಯಾವುದೇ ವಸ್ತು ನುಂಗಿ ಅದು ಗಂಟಲಲ್ಲಿ ಸಿಲುಕಿರುವ ಸಂಶಯ ಪೋಷಕರಲ್ಲಿತ್ತು.ಆದರೆ,ಮಗುವನ್ನು ಬೆಂಗಳೂರು ಸಹಿತ ಹಲವು ಕಡೆ ವೈದ್ಯರಿಗೆ ತೋರಿಸಿದರೂ ಮಗುವಿನ ಸಮಸ್ಯೆಗೆ ಯಾವುದೇ ಪರಿಹಾರ ದೊರಕಿರಲಿಲ್ಲ.ಸ್ಕ್ಯಾನಿಂಗ್ ನಡೆಸಿದರೂ ಕಾಡಿಗೆ ಡಬ್ಬ ಗಂಟಲಲ್ಲಿ ಸಿಲುಕಿರುವುದು ಪತ್ತೆಯಾಗಿರಲಿಲ್ಲ. ಮಗುವನ್ನು ಪರೀಕ್ಷಿಸಿದ ವೈದ್ಯರು ಕೆಮ್ಮು, ಕಫಗಳಿಗೆ ಔಷಧಿ ನೀಡುತ್ತಿದ್ದರು ಹೊರತು ಯಾವುದೇ ರೀತಿಯ ಪರಿಹಾರ ದೊರೆತಿರಲಿಲ್ಲ.ಇದರಿಂದ ಕಳೆದ ಒಂದು ವರ್ಷದಿಂದ ಮಗುವಿನ ಆರೋಗ್ಯದ ಕುರಿತು ಪೋಷಕರು ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದ್ದರು.
ಪುತ್ತೂರಿನ ನೆಹರು ನಗರದಲ್ಲಿರುವ ತನ್ನ ಅಕ್ಕನ ಮನೆಗೆ ಬಂದಿದ್ದ ಮಗುವಿನ ತಾಯಿ ಅ.13ರಂದು ಮಗುವಿನ ಕಫ, ಕೆಮ್ಮುವಿಗೆ ಚಿಕಿತ್ಸೆಗೆಂದು ಮಕ್ಕಳ ತಜ್ಞೆ ಡಾ.ಅರ್ಚನ ಕರಿಕ್ಕಳರವರ ಬಳಿ ಬಂದಿದ್ದರು.ಅವರು ಪರೀಕ್ಷಿಸಿದಾಗ ಮಗುವಿಗೆ ಕೆಮ್ಮು, ಕಫದ ಸಮಸ್ಯೆಯಲ್ಲ.ಮಗುವಿನ ಗಂಟಲಿನಲ್ಲಿ ಯಾವುದೋ ವಸ್ತು ಸಿಲುಕಿಕೊಂಡಿರುವ ಬಗ್ಗೆ ಬಲವಾದ ಅನುಮಾನ ಉಂಟಾಗಿತ್ತು. ಹೀಗಾಗಿ ಅವರು ನೇರವಾಗಿ ಇಎನ್ಟಿ ತಜ್ಞ ಡಾ.ರಾಮಮೋಹನ ಅವರ ಬಳಿಗೆ ಕಳುಹಿಸಿದ್ದರು.ಮಗುವನ್ನು ಪರೀಕ್ಷಿಸಿದ ಡಾ.ರಾಮಮೋಹನ್ ಅವರಿಗೆ ಮಗುವಿನ ಗಂಟಲಿನಲ್ಲಿ ಯಾವುದೋ ವಸ್ತು ಸಿಲುಕಿಕೊಂಡಿರುವುದು ಗೋಚರಿಸಿತ್ತು.ಬಳಿಕ ಮಗುವಿಗೆ ಚಿಕಿತ್ಸೆ ನೀಡಿದ ವೈದ್ಯರು ಗಂಟಲಿಲ್ಲಿ ಸಿಲುಕಿಕೊಂಡಿರುವ ವಸ್ತುವನ್ನು ಕೈಯಿಂದಲೇ ಹೊರೆ ತೆಗೆದಾಗ, ಮುಚ್ಚಳ ಸಹಿತವಾಗಿದ್ದ ಶೃಂಗಾರ ಕಾಡಿಗೆ ಡಬ್ಬವಾಗಿತ್ತು.

ಶಸ್ತ್ರಚಿಕಿತ್ಸೆಯಿಲ್ಲದೆ ಹೊರತೆಗೆದ ವೈದ್ಯರು:
ಚಿಕಿತ್ಸೆಗೆ, ಮಗುವಿನೊಂದಿಗೆ ಕ್ಲಿನಿಕ್ಗೆ ಬಂದಿದ್ದ ತಾಯಿ ವಿಶಾಲಾಕ್ಷಿಯವರು ಗಂಟಲಲ್ಲಿ ಸಿಲುಕಿರುವ ವಸ್ತುವನ್ನು ಹೊರ ತೆಗೆಯುವ ಬಗ್ಗೆ ಭಯಗೊಂಡಿದ್ದರು. ಕ್ಲಿನಿಕ್ನ ಸಿಬ್ಬಂದಿಗಳು ಆಕೆಗೆ ಸಾಕಷ್ಟು ಧೈರ್ಯ ತುಂಬಿದ್ದರು. ಕ್ಲಿನಿಕ್ ಸಿಬ್ಬಂದಿ ಹಾಗೂ ಮಗವಿನ ತಾಯಿಯ ಸಹಕಾರದೊಂದಿಗೆ, ಯಾವುದೇ ಶಸ್ತ್ರ ಚಿಕಿತ್ಸೆಯಿಲ್ಲದೆ ಮಗುವಿನ ಆರೋಗ್ಯಕ್ಕೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಯಶಸ್ವಿಯಾಗಿ ಕಾಡಿಗೆ ಡಬ್ಬವನ್ನು ಹೊರತೆಗೆಯಲಾಗಿದೆ. ಮಗುವಿನ ಬಾಯಿಯ ಒಳಗೆ ಕೈ ಬೆರಳು ಹಾಕಿದಾಗ ಕೈಗೆ ವಸ್ತು ಇರುವುದು ಗೊತ್ತಾಗಿದೆ. ಹೀಗಾಗಿ ಮಗುವಿಗೆ ನೋವಾಗದಂತೆ ಅತ್ಯಂತ ಜಾಗರೂಕತೆಯಿಂದ ಗಂಟಲಿನಿಂದ ಅದನ್ನು ಹೊರತೆಗೆಯಲಾಗಿದೆ. ಕಾಡಿಗೆ ಡಬ್ಬವನ್ನು ಹೊರ ತೆಗೆದ ಬಳಿಕ ಮಗುವಿನ ಮನಸ್ಸಿನಲ್ಲಿ ಮಂದಹಾಸ ಉಂಟಾಗುತ್ತು. ಮಗುವಿನ ತಾಯಿಯೂ ಸಾಕಷ್ಟು ಸಂತೋಷಗೊಂಡಿದ್ದರು. ಪುತ್ತೂರಿನಲ್ಲಿರುವ ಅಕ್ಕನ ಮನೆಗೆ ಬಂದಿದ್ದ ಮಗುವಿನ ತಾಯಿ ಚಿಕಿತ್ಸೆಗೆ ಬಂದಾಗ ಗಂಟಲಲ್ಲಿ ವಸ್ತು ಸಿಲುಕಿಕೊಂಡಿರುವುದು ಪತ್ತೆಯಾಗಿದೆ.ಅದನ್ನು ಯಾವುದೇ ಶಸ್ತ್ರ ಚಿಕಿತ್ಸೆಯಿಲ್ಲದೆ ಗಂಟಲಿನಿಂದ ಹೊರಕ್ಕೆ ತೆಗೆಯಲಾಗಿದೆ. ಮಗು ಈಗ ಆರೋಗ್ಯವಂತವಾಗಿದೆ. ಇದೆಲ್ಲಾ ಪುತ್ತೂರಿನ ಮಹಾಲಿಂಗೇಶ್ವರ ದೇವರ ದಯೆಯಿಂದ ಸಾಧ್ಯವಾಗಿದೆ ಎನ್ನುತ್ತಾರೆ ಡಾ.ರಾಮಮೋಹನ್ ಅವರು.ವೈದ್ಯರ ಯಶಸ್ಸಿ ಚಿಕಿತ್ಸೆಗೆ ಕ್ಲಿನಿಕ್ನ ಸಿಬ್ಬಂದಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ.
ಮಗುವಿನ ತಾಯಿ ತಿಳಿಸಿದಂತೆ ಕಳೆದ ಒಂದು ವರ್ಷದಿಂದ ಮಗುವಿನ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿತ್ತು. ಮಗು ನುಂಗಿದ್ದ ಕಾಡಿಗೆ ಡಬ್ಬವು ಗಂಟಲಿನಲ್ಲಿ ಅನ್ನಹೋಗುವ ಪೈಪ್ನಲ್ಲಿ ಸಿಲುಕಿಕೊಂಡಿತ್ತು. ಅದು ಪೈಪ್ನ ಒಳಗೆ ಪೂರ್ತಿಯಾಗಿ ಆವರಿಸಿತ್ತು. ಹೀಗಾಗಿ ಅದು ಉಸಿರಾಡುವ ಗಾಳಿ, ನುಂಗುವ ನೀರು, ಆಹಾರದ ಜೊತೆಗೆ ಹೊಟ್ಟೆಗೆ ಹೋಗದೇ ಹಾಗೆಯೇ ಉಳಿದುಕೊಂಡಿತ್ತು.ಮಕ್ಕಳ ತಜ್ಞೆ ಅರ್ಚನ ಕರಿಕ್ಕಳ ಅವರ ಸಲಹೆಯಂತೆ ಮಗುವನ್ನು ಪರೀಕ್ಷಿಸಿದಾಗ ವಸ್ತು ಗಂಟಲಲ್ಲಿರುವುದು ಪತ್ತೆಯಾಗಿದೆ.ಮಗುವಿನ ಅರೋಗ್ಯಕ್ಕೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಗಂಟಲಿನಿಂದ ಹೊರ ತೆಗೆಯಲಾಗಿದೆ. ಮಗು ಆರೋಗ್ಯವಂತವಾಗಿದೆ.
-ಡಾ.ರಾಮಮೋಹನ್, ಇಎನ್ಟಿ ತಜ್ಞ
200 ರೂಪಾಯಿಗೆ ಪರಿಹಾರ
ಬೆಂಗಳೂರಿನಲ್ಲಿರುವಾಗ ಕಳೆದ ವರ್ಷದ ಜುಲೈನಲ್ಲಿ ಮಗು ಕಾಡಿಗೆ ಡಬ್ಬವನ್ನು ನುಂಗಿತ್ತು.ಆಗಲೇ ಬೆಂಗಳೂರಿನ ಆಸ್ಪತ್ರೆಗೆ ತೆರಳಿ ವೈದ್ಯರಲ್ಲಿ ಪರೀಕ್ಷಿಸಲಾಗಿದೆ.ಅಲ್ಲಿ ಎಕ್ಸರೇ, ಸ್ಕ್ಯಾನಿಂಗ್ ನಡೆಸಲಾಗಿದೆ.ಪರೀಕ್ಷಿಸಿದ ವೈದ್ಯರು ಏನಿಲ್ಲ ಎಂದು ಹೇಳಿ ಕಫಕ್ಕೆ ಔಷಧಿ ನೀಡಿದ್ದರು.ಬಳಿಕ ಬೇರೆ ವೈದ್ಯರಲ್ಲಿ ಕರೆದೊಯ್ದು ಪರೀಕ್ಷಿಸಲಾಗಿದೆ.ಅವರೂ ಏನೂ ಇಲ್ಲ ಎಂದಿದ್ದರು.ಆದರೂ ನನಗೆ ಸಂಶಯವಿತ್ತು.ಕೆಲ ದಿನಗಳ ಹಿಂದೆ ಅಕ್ಕನ ಮನೆಗೆ ಬಂದಿದ್ದ ನಾವು ಮಕ್ಕಳ ತಜ್ಞೆ ಅರ್ಜನ ಕರಿಕ್ಕಳರವರ ಬಳಿ ತೆರಳಿದ್ದೆವು.ಅವರು ಪರೀಕ್ಷಿಸಿ ಗಂಟಲಲ್ಲಿ ಏನೋ ಸಿಲುಕಿದೆ ಎಂದು ಹೇಳಿ ಡಾ.ರಾಮಮೋಹನರಲ್ಲಿ ಪರೀಕ್ಷಿಸುವಂತೆ ಸಲಹೆ ನೀಡಿದ್ದು ಡಾ.ರಾಮಮೋಹನರವರ ಬಳಿ ಬಂದಾಗ ಅವರು ಪರೀಕ್ಷಿಸಿ ಗಂಟಲಲ್ಲಿ ಸಿಲುಕಿಕೊಂಡಿದ್ದ ಕಾಡಿಗೆ ಡಬ್ಬವನ್ನು ಪತ್ತೆ ಮಾಡಿ ಹೊರಗೆ ತೆಗೆದಿದ್ದಾರೆ.ಮಗು ಆರೋಗ್ಯವಂತವಾಗಿ ಆಟವಾಡುತ್ತಿದೆ.ಮಗುವಿನ ಶಸ್ತ್ರ ಚಿಕಿತ್ಸೆ ನಡೆಯುತ್ತಿದ್ದರೆ ಲಕ್ಷಾಂತರ ಖರ್ಚು ಮಾಡಬೇಕಾಗಿತ್ತು.ಅದನ್ನು ಡಾ.ರಾಮಮೋಹನ ಅವರು ಸುಲಭವಾಗಿ ಹೊರೆತೆಗೆಯುವ ಮೂಲಕ ಕೇವಲ 200 ರೂಪಾಯಿಯಲ್ಲಿ ಮುಗಿಸಿದ್ದಾರೆ. ಸಲಹೆ ನೀಡಿದ ಡಾ. ಅರ್ಚನ ಕರಿಕ್ಕಳ ಹಾಗೂ ಸುಲಭವಾಗಿ ಹೊರತೆಗೆದ ಡಾ.ರಾಮಮೋಹನರವರಿಗೂ ನಮ್ಮ ಅನಂತ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.
-ವಿಶಾಲಾಕ್ಷಿ, ಮಗುವಿನ ತಾಯಿ