ಪುತ್ತೂರು: 2025ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಆಯ್ಕೆ ಮಾಡಲು ಸಲಹಾ ಸಮಿತಿಯನ್ನು ರಚಿಸಿ ಸರಕಾರ ಆದೇಶಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಯಿಂದ ದೈವನರ್ತಕ ಹಾಗೂ ಪ್ರಾಧ್ಯಾಪಕರಾದ ಡಾ| ರವೀಶ್ ಪಡುಮಲೆಯವರನ್ನು ನೇಮಕ ಮಾಡಲಾಗಿದೆ.
ಒಟ್ಟು 64 ಮಂದಿ ಸದಸ್ಯರಿರುವ ಸಲಹಾ ಸಮಿತಿಯಲ್ಲಿ ಸಾಹಿತ್ಯ, ವೈದ್ಯಕೀಯ, ಕೃಷಿ, ಸಮಾಜ ಸೇವೆ, ಚಲನಚಿತ್ರ, ಕ್ರೀಡೆ ಮುಂತಾದ ಕ್ಷೇತ್ರಗಳ 47 ಮಂದಿ ಸದಸ್ಯರು, ಪದನಿಮಿತ್ತ 16 ಮಂದಿ ಸದಸ್ಯರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿದ್ದಾರೆ. ದಕ್ಷಿಣ ಕನ್ನಡದಿಂದ ಸಬಿಹ ಭೂಮಿಗೌಡ, ಪ್ರೊ. ಶಿವರಾಂ ಶೆಟ್ಟಿ ಸೇರಿದಂತೆ ದೈವನರ್ತಕ ಹಾಗೂ ಉಜಿರೆ ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜಿನ ವಿಭಾಗ ಮುಖ್ಯಸ್ಥರಾದ ಡಾ| ರವೀಶ್ ಪಡುಮಲೆಯವರನ್ನು ನೇಮಕ ಮಾಡಲಾಗಿದೆ. ಇವರು ಬಡಗನ್ನೂರು ಗ್ರಾಮದ ಪಡುಮಲೆ ನಿವಾಸಿಯಾಗಿದ್ದಾರೆ.