ಪುತ್ತೂರು: ಪುಣಚ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಲ್ಲಾಳಿ-ಹಿತ್ತಿಲು ಸಂಪರ್ಕಿಸುವ ಕಾಲುದಾರಿಯು ಅಲ್ಲಲ್ಲಿ ಕುಸಿತಗೊಂಡಿರುವುದರಿಂದ ಕಾಲುದಾರಿಯಲ್ಲಿ ಸಂಚರಿಸುವ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಭಯದಿಂದಲೇ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪುಣಚ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಬಳಿಯಿಂದ ಕೆಲ್ಲಾಳಿ, ಹಿತ್ತಿಲು ಪರಿಸರಕ್ಕೆ ಸಂಪರ್ಕಿಸುವ ಬಹಳ ಪುರಾತನ ಕಾಲುದಾರಿ ಇದಾಗಿದೆ. ಈ ಕಾಲುದಾರಿಯು ಆರಂಭದಿಂದ ಕೊನೆತನಕವೂ ಒಂದು ತೋಡಿನ ಬದಿಯಲ್ಲೇ ಸಾಗುತ್ತಿದ್ದು ತೋಡಿನಲ್ಲಿ ನೀರಿನ ಹರಿವು ಹೆಚ್ಚಿದ ಪರಿಣಾಮ ಒಂದೆರಡು ಕಡೆಗಳಲ್ಲಿ ತೋಡಿನ ಬದಿ ಕುಸಿತಗೊಂಡಿದ್ದು ಇದರಿಂದಾಗಿ ಕಾಲುದಾರಿಯೂ ಕುಸಿತಕ್ಕೊಳಗಾಗಿದ್ದು ನಡೆದಾಡಲು ಅಪಾಯದ ಸ್ಥಿತಿಯಲ್ಲಿದೆ.
ಹಿಂದಿನ ಕಾಲದಿಂದ ಹಿಡಿದು ಪ್ರಸ್ತುತ ದಿನಗಳಲ್ಲೂ ಕಲ್ಲಾಜೆ, ಹಿತ್ತಿಲು, ಕೆಲ್ಲಾಳಿ ಭಾಗದ ಜನರು ಇದೇ ಕಾಲುದಾರಿಯಲ್ಲಿ ನಡೆದುಕೊಂಡು ಗರಡಿ, ಪರಿಯಾಲ್ತಡ್ಕ ಪೇಟೆಯನ್ನು ಸಂಪರ್ಕ ಮಾಡುತ್ತಿದ್ದರು. ಇದಲ್ಲದೆ ಹಿತ್ತಿಲು ಕೆಲ್ಲಾಳಿ ಭಾಗದಿಂದ ಪುಣಚ ದೇವಾಲಯಕ್ಕೆ ಬರುವ ಭಕ್ತಾಧಿಗಳು ಕೂಡ ಇದೇ ಕಾಲುದಾರಿಯನ್ನು ಅವಲಂಭಿಸಿದ್ದಾರೆ. ಇದೀಗ ತೋಡಿನ ಬದಿಯಲ್ಲಿ ಅಲ್ಲಲ್ಲಿ ಕುಸಿತಗೊಂಡಿರುವುದರಿಂದ ಕಾಲುದಾರಿಗೆ ಕಂಟಕ ಎದುರಾಗಿದೆ. ಕಾಲುದಾರಿ ಅರ್ಧದಷ್ಟು ಕುಸಿತಗೊಂಡಿದ್ದು ನಡೆದುಕೊಂಡು ಹೋಗಲು ಕಷ್ಟವಾಗಿದೆ. ಕೆಲ್ಲಾಳಿ ಭಾಗದ ಸುಮಾರು 6 ಮನೆಗಳ ಮಕ್ಕಳು ಇದೇ ಕಾಲುದಾರಿಯಲ್ಲಿ ಬೆಳಿಗ್ಗೆ ಸಂಜೆ ನಡೆದುಕೊಂಡೇ ದೇವಿನಗರ ಶಾಲೆಗೆ ತೆರಳುತ್ತಿದ್ದಾರೆ. ಪುಣಚ ದೇವಳದ ಅರ್ಚಕರು ಪ್ರತಿದಿನ ಹಗಲು ರಾತ್ರಿ ಇದೇ ಕಾಲುದಾರಿಯಲ್ಲಿ ನಡೆದುಕೊಂಡೇ ಮನೆಗೆ ತೆರಳುತ್ತಿದ್ದಾರೆ.

ಈಗಾಗಲೇ ಒಂದು ಕಡೆಯಲ್ಲಿ ಪಂಚಾಯತ್ ವತಿಯಿಂದ ತೋಡಿಗೆ ತಡೆಗೋಡೆ ನಿರ್ಮಾಣದ ಕೆಲಸ ಆಗಿದೆ. ಇದೀಗ ಮತ್ತೆ ಒಂದೆರಡು ಕಡೆಗಳಲ್ಲಿ ತೋಡಿನ ಬದಿ ಕುಸಿತಗೊಂಡಿರುವುದರಿಂದ ಕಾಲುದಾರಿಯು ಬಂದ್ ಆಗುವ ಸೂಚನೆ ಇದೆ. ಒಂದು ಬದಿಯಲ್ಲಿ ಕೃಷಿತೋಟ ಇರುವುದರಿಂದ ನಡೆದುಕೊಂಡು ಹೋಗಲು ಕಷ್ಟ. ಆದ್ದರಿಂದ ತೋಡಿಗೆ ತಡೆಗೋಡೆ ನಿರ್ಮಾಣವೊಂದೇ ಇಲ್ಲಿ ಪರಿಹಾರವಾಗಿದೆ ಎನ್ನುತ್ತಾರೆ ಗ್ರಾಮಸ್ಥರು. ಈ ಬಗ್ಗೆ ಗ್ರಾಮ ಪಂಚಾಯತ್ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸಬೇಕಾಗಿದೆ ಎನ್ನುವುದು ಈ ಭಾಗದ ಗ್ರಾಮಸ್ಥರ ಆಗ್ರಹವಾಗಿದೆ.
‘ ಈ ಹಿಂದೆ ತೋಡಿಗೆ ಒಂದು ಕಡೆ ತಡೆಗೋಡೆ ನಿರ್ಮಾಣ ಕೆಲಸ ಆಗಿದೆ. ತೋಡಿನ ಬದಿ ಕುಸಿತಗೊಂಡು ಕಾಲುದಾರಿಗೆ ತೊಂದರೆಯಾಗಿರುವ ಬಗ್ಗೆ ಅಧಿಕಾರಿಗಳೊಂದಿಗೆ ಪರಿಶೀಲನೆ ಮಾಡುತ್ತೇವೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುತ್ತೇವೆ.’
ಮಹೇಶ್ ಶೆಟ್ಟ ಬೈಲುಗುತ್ತು,
ಉಪಾಧ್ಯಕ್ಷರು,ಪುಣಚ ಗ್ರಾಮ ಪಂಚಾಯತ್
ಅಪಾಯ ಕಟ್ಟಿಟ್ಟ ಬುತ್ತಿ…!
ಎರಡು ಕಡೆಗಳಲ್ಲಿ ತೋಡಿನ ಬದಿ ಕುಸಿತ ಗೊಂಡಿರುವುದರಿಂದ ಕಾಲುದಾರಿಯಲ್ಲಿ ನಡೆದುಕೊಂಡು ಹೋಗುವುದೇ ಕಷ್ಟಕರವಾಗಿದೆ. ಒಂದು ಬದಿಯಲ್ಲಿ ಕೃಷಿ ತೋಟ ಇನ್ನೊಂದು ಬದಿಯಲ್ಲಿ ತುಂಬಿ ಹರಿಯುವ ತೋಡು ನಡುವೆ ಕಾಲುದಾರಿ ಇದೆ. ಇದೀಗ ತೋಡಿನ ಬದಿ ಕುಸಿತದೊಂದಿಗೆ ಕಾಲುದಾರಿಯು ಕುಸಿತಗೊಂಡಿದೆ. ಬಹಳ ಎಚ್ಚರಿಕೆಯಿಂದ ನಡೆದುಕೊಂಡು ಹೋಗಬೇಕಾದ ಸ್ಥಿತಿ ಇಲ್ಲಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಪ್ರತಿನಿತ್ಯ ಬೆಳಿಗ್ಗೆ ಸಂಜೆ ಹಲವು ವಿದ್ಯಾರ್ಥಿಗಳು ಇದೇ ಕಾಲುದಾರಿಯಲ್ಲಿ ಮನೆಯಿಂದ ಶಾಲೆ, ಶಾಲೆಯಿಂದ ಮನೆಗೆ ತೆರಳುತ್ತಿದ್ದಾರೆ ಎಂಬುದು ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವಾಗಿದೆ.