ಎಸ್.ಎಸ್.ಎಲ್.ಸಿ, ಪಿಯು ಉತ್ತೀರ್ಣ ಅಂಕದಲ್ಲಿ ಇಳಿಕೆ : ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಜಾರಿ

0

ಬೆಂಗಳೂರು: ಎಸ್.ಎಸ್.ಎಲ್.ಸಿ ಯಲ್ಲಿ 625ಕ್ಕೆ ಕನಿಷ್ಠ 206 ಹಾಗೂ ದ್ವಿತೀಯ ಪಿಯುಸಿಯಲ್ಲಿ 600ಕ್ಕೆ 198 ಅಂಕಗಳನ್ನು ಗಳಿಸುವ ವಿದ್ಯಾರ್ಥಿಗಳು ಉತ್ತೀರ್ಣರಾಗಲಿದ್ದಾರೆ. ಪ್ರಸಕ್ತ (2025-26) ಶೈಕ್ಷಣಿಕ ಸಾಲಿನಿಂದ ಹೊಸ ನಿಯಮ ಜಾರಿಯಾಗಲಿದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.


ಎಸ್.ಎಸ್.ಎಲ್.ಸಿ ಪರೀಕ್ಷೆಯ ಉತ್ತೀರ್ಣತೆ ಪ್ರಮಾಣವನ್ನು 35 ರಿಂದ 33ಕ್ಕೆ ಇಳಿಕೆ ಮಾಡಲಾಗಿದೆ. ಒಟ್ಟು 625 ಅಂಕಗಳಲ್ಲಿ ಕನಿಷ್ಠ 206 ಅಂಕಗಳನ್ನು ಗಳಿಸಬೇಕು ಎಂದು ತಿಳಿಸಿದ್ದಾರೆ. ಹೊಸ ನಿಯಮಗಳ ಪ್ರಕಾರ, ಆಂತರಿಕ ಮೌಲ್ಯಮಾಪನ ಮತ್ತು ಬಾಹ್ಯ ಪರೀಕ್ಷೆಯಲ್ಲಿ ಸರಾಸರಿ ಶೇ.33 ಅಂಕಗಳನ್ನು ಗಳಿಸಿದ ಅಭ್ಯರ್ಥಿಗಳು ಉತ್ತೀರ್ಣರಾಗಲಿದ್ದಾರೆ ಎಂದು ಘೋಷಿಸಲಾಗುತ್ತದೆ. ಆಯಾ ವಿಷಯದ ಒಟ್ಟು ಅಂಕಗಳಲ್ಲಿ ಪ್ರತೀ ವಿಷಯದಲ್ಲಿ ಕನಿಷ್ಠ ಶೇ.30 ಅಂಕಗಳನ್ನು ಒಳಗೊಂಡಂತೆ ಒಟ್ಟು 625 ಅಂಕಗಳಲ್ಲಿ ಕನಿಷ್ಠ 206 ಅಂಕಗಳನ್ನು ಗಳಿಸಬೇಕು ಎಂದರು.


ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600ಕ್ಕೆ 198 ಅಂಕಗಳನ್ನು ಪಡೆದರೆ ಉತ್ತೀರ್ಣರಾಗುತ್ತಾರೆ. ಯಾವುದೇ ಪ್ರಾಯೋಗಿಕ ಪರೀಕ್ಷೆ ಅಥವಾ ಆಂತರಿಕ ಮೌಲ್ಯಮಾಪನವಿಲ್ಲದ ವಿಷಯಗಳಲ್ಲಿ 80 ಅಂಕಗಳ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆಂದು ಘೋಷಿಸಲು ಅಭ್ಯರ್ಥಿಯು ಅಂತಹ ಪ್ರತಿಯೊಂದು ವಿಷಯದಲ್ಲಿ ಕನಿಷ್ಠ 24 ಅಂಕಗಳನ್ನು ಪಡೆಯಬೇಕಾಗುತ್ತದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ಅಥವಾ ಆಂತರಿಕ ಮೌಲ್ಯಮಾಪನ ಇರುವ ವಿಷಯಗಳಲ್ಲಿ 70 ಅಂಕಗಳ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಅಭ್ಯರ್ಥಿಯು ಅಂತಹ ಪ್ರತಿಯೊಂದು ವಿಷಯದಲ್ಲೂ ಕನಿಷ್ಠ 21 ಅಂಕಗಳನ್ನು ಪಡೆಯಬೇಕು. ಪ್ರಾಯೋಗಿಕ ಅಂಶವನ್ನು ಹೊಂದಿರುವ ವಿಷಯಗಳಿಗೆ ಸಂಬಂಧಿಸಿದಂತೆ ಸಾಮಾನ್ಯ ಷರತ್ತುಗಳ ಪ್ರಕಾರ, ಪ್ರಾಯೋಗಿಕ ಪರೀಕ್ಷೆಗೆ ಅಸ್ತಿತ್ವದಲ್ಲಿರುವ 30 ಅಂಕಗಳ ಹಂಚಿಕೆಯನ್ನು ವಿಭಾಗ ಮಾಡಲಾಗುವುದು. ಅದರಂತೆ ಪ್ರಾಯೋಗಿಕ ಪರೀಕ್ಷೆಯನ್ನು ಗರಿಷ್ಠ 20 ಅಂಕಗಳಿಗೆ ನಡೆಸಲಾಗುವುದು. ಉಳಿದ 10 ಅಂಕಗಳನ್ನು ಹಾಜರಾತಿ ಸೇರಿ ಮತ್ತಿತರ ಷರತ್ತುಗಳಿಗೆ ನಿಗದಿಪಡಿಸಲಾಗಿದೆ ಎಂದು ಅವರು ತಿಳಿಸಿದರು.

ಆಕ್ಷೇಪಣೆಗೆ ಕಾಲಾವಕಾಶ ನೀಡಲಾಗಿತ್ತು
ಹೊಸ ನಿಯಮಗಳಿಗೆ ಸಾರ್ವಜನಿಕರು ಆಕ್ಷೇಪ ಸಲ್ಲಿಸಲು ಸರಕಾರ 15 ದಿನಗಳ ಕಾಲಾವಕಾಶ ನೀಡಿತ್ತು. ಅಂಕ ಕಡಿತ ವಿಚಾರವಾಗಿ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಆ ಪೈಕಿ ಶೇ.33ರಷ್ಟು ಪರವಾಗಿ 701 ಪತ್ರ ಮತ್ತು ಶೇ.35ರಷ್ಟು ಪರವಾಗಿ 8 ಪತ್ರಗಳು ಬಂದಿದ್ದವು. ಹೀಗಾಗಿ 2025-26ನೇ ಸಾಲಿನಿಂದ ಎಸ್.ಎಸ್.ಎಲ್.ಸಿ ಯಲ್ಲಿ ಪ್ರಥಮ ಭಾಷೆ ಹೊರತುಪಡಿಸಿ ಶೇ.33 ಫಲಿತಾಂಶ ಬಂದರೆ ವಿದ್ಯಾರ್ಥಿಗಳು ತೇರ್ಗಡೆ ಆಗಲಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಹೇಳಿದರು.

LEAVE A REPLY

Please enter your comment!
Please enter your name here