ಪುತ್ತೂರು: ಹೆಜ್ಜೇನು ಯಾ ಕಣಜದ ಹುಳು ದಾಳಿಯಿಂದ ಬಾಲಕಿಯೊಬ್ಬರು ಮೃತಪಟ್ಟ ಪ್ರಕರಣದಲ್ಲಿ, ಬಾಲಕಿಯ ಚಿಕಿತ್ಸೆಯಲ್ಲಿ ಆಸ್ಪತ್ರೆಯ ವೈದ್ಯರಿಂದ ಯಾವುದೇ ಲೋಪ ಆಗಿಲ್ಲ ಎಂದು ಆದರ್ಶ ಆಸ್ಪತ್ರೆಯ ವೈದ್ಯ ಡಾ.ಎಂ.ಕೆ.ಪ್ರಸಾದ್ ಸ್ಪಷ್ಟನೆ ನೀಡಿದ್ದಾರೆ.
ಹೆಜ್ಜೇನು ದಾಳಿಗೊಳಗಾದ ಇಬ್ಬರು ಮಕ್ಕಳನ್ನು ಆರಂಭದಲ್ಲಿ ನಮ್ಮ ಅಸ್ಪತ್ರೆಗೆ ಕರೆ ತಂದಿರಲಿಲ್ಲ.ಮಹಾವೀರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಮಕ್ಕಳ ತಜ್ಞೆ ಡಾ.ಶ್ರೀದೇವಿವಿಕ್ರಮ್ ಅವರ ಸಲಹೆಯಂತೆ ನಮ್ಮ ಆಸ್ಪತ್ರೆಯಲ್ಲಿ ದಾಖಲಿಸಿ ಅವರೇ ಎಲ್ಲಾ ಸೂಕ್ತ ಚಿಕಿತ್ಸೆ ನೀಡುತ್ತಿದ್ದರು.ಎಲ್ಲಾ ಪರೀಕ್ಷೆಗಳ ಪ್ರಕಾರ ಮಕ್ಕಳ ಎಲ್ಲಾ ಅಂಗಾಂಗಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದು,ಪ್ರತಿ ಸಮಯದಲ್ಲೂ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.ನೋವು, ಸುಸ್ತು ಇದ್ದರೂ ಮಗು ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸುತ್ತಿದ್ದಳು.ಬೆಳಗಿನ ಜಾವ ಆಕೆಯ ಹೃದಯದ ಆರೋಗ್ಯದಲ್ಲಿ ಏರುಪೇರಾಗಿರುವುದನ್ನು ಕಂಡು ಕೂಡಲೇ ಸಂದರ್ಶಕ ವೈದ್ಯರು ಆಗಮಿಸಿ ಚಿಕಿತ್ಸೆ ಮುಂದುವರಿಸಿದಾಗ ತೀವ್ರತರದಲ್ಲಿ ತೊಂದರೆ ಹೆಚ್ಚಾಗುವುದನ್ನು ಗಮನಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಳಿಗ್ಗೆ ಗಂಟೆ 6ಕ್ಕೆ ಮಂಗಳೂರು ಆಸ್ಪತ್ರೆಗೆ ಶಿಫ್ಟ್ ಮಾಡಿಸಿದ್ದರು.ಶಿಫ್ಟ್ ಮಾಡುವ ಸಂದರ್ಭ ಇಬ್ಬರು ಶುಶ್ರೂಷಕಿಯರು ಜೊತೆಗಿದ್ದು ಚಿಕಿತ್ಸೆ ಮುಂದುವರಿಸಿದ್ದರು.ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದ ಬಾಲಕಿ ಮಧ್ಯಾಹ್ನ 1 ಗಂಟೆ ವೇಳೆಗೆ ಮೃತಪಟ್ಟಿದ್ದಾರೆ.ಬಾಲಕಿಯನ್ನು ಉಳಿಸಿಕೊಳ್ಳಲಾಗದ ಕುರಿತು ನಮಗೆ ನೋವಿದೆ.ಆದರೆ ಚಿಕಿತ್ಸೆಯಲ್ಲಿ ಆಸ್ಪತ್ರೆಯಿಂದ ಎಲ್ಲೂ ಲೋಪ ಆಗಿಲ್ಲ ಎಂದು ಸ್ಪಷ್ಟಪಡಿಸುತ್ತೇವೆ.ಅದೇ ರೀತಿ ಇನ್ನೋರ್ವ ಬಾಲಕ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇವೆ ಎಂದು ಡಾ.ಎಂ.ಕೆ.ಪ್ರಸಾದ್ ತಿಳಿಸಿದ್ದಾರೆ.