ಎರಡು ಬದಿ 8 ಲೇನ್ಗಳಲ್ಲಿ ವಾಹನ ಸಾಗಲು ಅವಕಾಶ
ದ್ವಿಚಕ್ರ, ರಿಕ್ಷಾಗಳಿಗೆ ಪ್ರತ್ಯೇಕ ಲೇನ್
ವರದಿ: ಹರೀಶ್ ಬಾರಿಂಜ
ನೆಲ್ಯಾಡಿ: ಬಿ.ಸಿ.ರೋಡ್-ಅಡ್ಡಹೊಳೆ ಚತುಷ್ಪಥ ಕಾಂಕ್ರಿಟ್ ಹೆದ್ದಾರಿ ಅಭಿವೃದ್ಧಿಯ ಭಾಗವಾಗಿ ಉಪ್ಪಿನಂಗಡಿ ಸಮೀಪದ ಬಜತ್ತೂರು ಗ್ರಾಮದ ವಳಾಲು ಸಮೀಪ ಟೋಲ್ ಪ್ಲಾಜಾ ನಿರ್ಮಾಣ ಆಗುತ್ತಿದೆ. ಈ ಕಾಮಗಾರಿ ಭರದಿಂದ ಸಾಗುತ್ತಿದ್ದು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮುಗಿಯುತ್ತಿದ್ದಂತೆ ಟೋಲ್ಗೇಟ್ ಆರಂಭವಾಗುವ ಸಾಧ್ಯತೆ ಇದೆ.
ಬಿ.ಸಿ.ರೋಡ್ನಿಂದ ಅಡ್ಡಹೊಳೆ ತನಕ ಚತುಷ್ಪಥ ಹೆದ್ದಾರಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ಶೇ.75ರಷ್ಟು ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಹೆದ್ದಾರಿ ಅಭಿವೃದ್ಧಿಯ ಭಾಗವಾಗಿ ಉಪ್ಪಿನಂಗಡಿಯಿಂದ ಸುಮಾರು 8 ಕಿ.ಮೀ.ದೂರದ ಬಜತ್ತೂರು ಗ್ರಾಮದ ವಳಾಲು-ನೀರಕಟ್ಟೆ ಮಧ್ಯೆ ಟೋಲ್ಗೇಟ್ ನಿರ್ಮಾಣಗೊಳ್ಳುತ್ತಿದೆ. ಇಲ್ಲಿ ವಿಶಾಲವಾದ ಜಾಗ ಇರುವುದು ಟೋಲ್ ಪ್ಲಾಝಾ ನಿರ್ಮಾಣಕ್ಕೆ ಪೂರಕವಾಗಿದೆ. ಇಲ್ಲಿ ಹೆದ್ದಾರಿಯ ಕಾಂಕ್ರಿಟ್ ಕಾಮಗಾರಿ ಪೂರ್ಣಗೊಂಡಿದ್ದು ಟೋಲ್ ಪ್ಲಾಜಾ ಅನುಷ್ಠಾನದ ಕಾರ್ಯ ನಡೆಯುತ್ತಿದೆ. ಶೆಲ್ಟರ್ ಹಾಗೂ ಹೆದ್ದಾರಿಯ ಪಕ್ಕದಲ್ಲೇ ಕಾಂಪ್ಲೆಕ್ಸ್ ಕೂಡ ನಿರ್ಮಾಣಗೊಂಡಿದೆ. ಟೋಲ್ಗೇಟ್ ಕಾಮಗಾರಿ ಭರದಿಂದ ನಡೆಯುತ್ತಿದ್ದು ಇನ್ನು ಒಂದೆರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.
ತಲಾ 4 ಲೇನ್;
ಬಿ.ಸಿ.ರೋಡು-ಪೆರಿಯಶಾಂತಿ ಮಧ್ಯೆ 46 ಕಿ.ಮೀ. ಹೆದ್ದಾರಿ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆ ಸಂಸ್ಥೆ ಕೆಎನ್ಆರ್ ಕನ್ಸ್ಟ್ರಕ್ಷನ್ ಕಂಪೆನಿಯೇ ಟೋಲ್ ಪ್ಲಾಜಾ ನಿರ್ಮಾಣದ ಕಾರ್ಯವನ್ನು ನಿರ್ವಹಿಸುತ್ತಿದೆ. ಚತುಷ್ಪಥ ಹೆದ್ದಾರಿಯಲ್ಲಿ ಎರಡೂ ಕಡೆ ತಲಾ ನಾಲ್ಕು ಲೇನ್ಗಳು ಇರಲಿವೆ. ಒಂದೇ ಸಮಯಕ್ಕೆ ಎರಡು ಬದಿ ಒಟ್ಟು 8 ಲೇನ್ಗಳಲ್ಲಿ ವಾಹನ ಸಾಗಲು ಅವಕಾಶ ಸಿಗಲಿದೆ. ದ್ವಿಚಕ್ರ ಹಾಗೂ ರಿಕ್ಷಾಗಳ ಸಂಚಾರಕ್ಕೆ ಎರಡೂ ಬದಿ ಪ್ರತ್ಯೇಕ ಲೇನ್ಗಳಿರಲಿದೆ. ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆ ಟೋಲ್ ಸಂಗ್ರಹವೂ ಆರಂಭಗೊಳ್ಳಲಿದ್ದು ವಾಹನ ಸವಾರರು ಟೋಲ್ ಪಾವತಿಗೆ ಸಿದ್ಧವಾಗಬೇಕಿದೆ.
ಏಪ್ರಿಲ್ನಿಂದ ಟೋಲ್ ಸಂಗ್ರಹ ಸಾಧ್ಯತೆ
ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ನಿರ್ಮಾಣ ಕಾಮಗಾರಿ ಬಹುತೇಕ ಅಂತಿಮ ಹಂತದಲ್ಲಿದ್ದು ಮಾರ್ಚ್,ಏಪ್ರಿಲ್ ವೇಳೆಗೆ ಬಜತ್ತೂರು ಟೋಲ್ಗೇಟ್ ಓಪನ್ ಆಗಿ ಟೋಲ್ ಸಂಗ್ರಹವೂ ಆರಂಭವಾಗುವ ಸಾಧ್ಯತೆ ಇದೆ. ಟೋಲ್ ಆರಂಭಗೊಳ್ಳಬೇಕಾದರೆ ಅದಕ್ಕೆ ಪ್ರತ್ಯೇಕ ನೋಟಿಫಿಕೇಶನ್ ಆಗಬೇಕಿದೆ. ಆ ಬಳಿಕವೇ ಟೋಲ್ ಸಂಗ್ರಹದ ಕಾರ್ಯವನ್ನು ಯಾರು ನಿರ್ವಹಿಸುತ್ತಾರೆ. ಸ್ಥಳೀಯರಿಗೆ ಯಾವ ರೀತಿಯ ಶುಲ್ಕ, ವಿನಾಯಿತಿ ಹೇಗೆ, ಉಳಿದ ವಾಹನಗಳಿಗೆ ಹೇಗೆ ಶುಲ್ಕ ಇರುತ್ತದೆ ಎಂಬುದು ನೋಟಿಫಿಕೇಶನ್ ಪ್ರಕ್ರಿಯೆಯಲ್ಲಿ ನಡೆಯಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಒಂದೆರಡು ತಿಂಗಳಲ್ಲಿ ಕಾಮಗಾರಿ ಪೂರ್ಣ
ಟೋಲ್ ಪ್ಲಾಜಾ ನಿರ್ಮಾಣ ಕಾಮಗಾರಿ ಭರದಿಂದ ನಡೆಯುತ್ತಿದೆ. ಬಹುತೇಕ ಕಾಮಗಾರಿಗಳು ಮುಗಿದಿವೆ. ಇನ್ನು ಒಂದೆರಡು ತಿಂಗಳಲ್ಲಿ ಉಳಿದ ಕಾಮಗಾರಿಗಳು ಪೂರ್ಣಗೊಳ್ಳಲಿದೆ. ಹೆದ್ದಾರಿ ಕಾಮಗಾರಿ ನಿರ್ವಹಿಸುತ್ತಿರುವ ಕೆಎನ್ಆರ್ ಕನ್ಸ್ಟ್ರಕ್ಷನ್ ಕಂಪೆನಿಯೇ ಟೋಲ್ ಪ್ಲಾಝಾ ನಿರ್ಮಾಣದ ಕಾಮಗಾರಿ ಮಾಡುತ್ತಿದೆ. ಕಾಮಗಾರಿ ಪೂರ್ಣಗೊಳಿಸಿ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಹಸ್ತಾಂತರ ಆಗಲಿದೆ. ಆ ಬಳಿಕವೇ ಟೋಲ್ ಸಂಗ್ರಹದ ಬಗ್ಗೆ ಇಲಾಖೆ ನಿರ್ಧರಿಸಲಿದೆ.
-ಅನಿಲ್ಕುಮಾರ್ ಸಿಂಗ್, ಮೇಲ್ವಿಚಾರಕರು