ಎಲ್ಲರೂ ಜೊತೆ ಸೇರಿ ಕುಟುಂಬಕ್ಕೆ ಮನೆ ನಿರ್ಮಾಣ ಮಾಡಬೇಕಿದೆ: ಅಶೋಕ್ ರೈ
ಪುತ್ತೂರು: ಸಿಡಿಲು ಬಡಿದು ಚಿಕ್ಕಮುಡ್ನೂರು ಗ್ರಾಮದ ಬೆದ್ರಾಳ ನೆಕ್ಕರೆ ನಿವಾಸಿ ದಯಾನಂದ ಕುಲಾಲ್ ರವರ ಮನೆ ಸಂಪೂರ್ಣ ಧ್ವಂಸವಾಗಿದ್ದು, ಘಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಅಶೋಕ್ ರೈ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಸ್ಥಳದಿಂದಲೇ ಕಂದಾಯ ಅಧಿಕಾರಿಗಳಿಗೆ ಕರೆ ಮಾಡಿದ ಶಾಸಕರು, ಶೀಘ್ರ ವರದಿ ಮಾಡಿ ಕುಟುಂಬಕ್ಕೆ ಸರಕಾರದಿಂದ ಸಿಗಬೇಕಾದ ನೆರವನ್ನು ಕೊಡಿಸಬೇಕು. ತಕ್ಷಣಕ್ಕೆ 10 ಸಾವಿರ ರೂ ನೀಡಬೇಕು ಎಂದು ಸೂಚಿಸಿದರು.
ಎಲ್ಲರೂ ಸೇರಿ ಮನೆ ನಿರ್ಮಿಸೋಣ: ಶಾಸಕರ ಮನವಿ
ದಯಾನಂದ ಕುಲಾಲ್ ರವರ ಮನೆ ಸಿಡಿಲಿಗೆ ಹಾನಿಯಾಗಿದೆ. ಇವರು ಮುಂದಕ್ಕೆ ಹೊಸ ಮನೆಯನ್ನು ನಿರ್ಮಾಣ ಮಾಡಬೇಕಷ್ಟೆ. ಈಗ ಇರುವ ಮನೆಯ ಮೇಲ್ಛಾವಣಿ ಸಂಪೂರ್ಣ ನಾಶವಾಗಿದ್ದು, ಗೋಡೆಗಳು ಬಿರುಕು ಬಿಟ್ಟಿದೆ. ಪಕ್ಷದ ಕಾರ್ಯಕರ್ತರು, ಮುಖಂಡರು ಎಲ್ಲರೂ ಸೇರಿ ಮನೆಯ ನಿರ್ಮಾಣ ಕಾರ್ಯಕ್ಕೆ ನೆರವು ನೀಡಬೇಕು. ನಾನು ನನ್ನಿಂದಾಗುವ ಸಹಾಯವನ್ನು ನೀಡುವುದಾಗಿ ಹೇಳಿದರು.
ಹಿರಿಯ ಕಾಂಗ್ರೆಸ್ ಮುಖಂಡ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಮಾತನಾಡಿ, ದಯಾನಂದ ಕುಲಾಲ್ ಕಾಂಗ್ರೆಸ್ ಕಾರ್ಯಕರ್ತರಾಗಿದ್ದು, ಸಂಕಷ್ಟದಲ್ಲಿರುವ ಅವರಿಗೆ ನೆರವು ನೀಡಬೇಕಾದ್ದು ನಮ್ಮೆಲ್ಲರ ಕರ್ತವ್ಯವಾಗಿದೆ. ಎಲ್ಲರೂ ಕೈಜೋಡಿಸುವ ಮೂಲಕ ಕುಟುಂಬಕ್ಕೆ ಆಸರೆಯಾಗಬೇಕು ಎಂದು ಹೇಳಿದರು. ಪಕ್ಷದ ಮುಖಂಡರಾದ ಕೇಶವ ಬೆದ್ರಾಳ, ನವೀನ್ ನಾಯಕ್ ಉಪಸ್ಥಿತರಿದ್ದರು.