ನೆಲ್ಯಾಡಿ: ವಿಧಾನಪರಿಷತ್ ಸದಸ್ಯ ಕಿಶೋರ್ಕುಮಾರ್ ಬೊಟ್ಯಾಡಿ ಅವರು ಬಜತ್ತೂರು ಗ್ರಾ.ಪಂ.ಗೆ ಭೇಟಿ ನೀಡಿ ಅಧ್ಯಕ್ಷರು, ಸದಸ್ಯರು, ಪಿಡಿಒ, ಕಾರ್ಯದರ್ಶಿಗಳೊಂದಿಗೆ ಅಭಿವೃದ್ಧಿ ಕೆಲಸಗಳ ಕುರಿತು ಚರ್ಚಿಸಿದರು.
ಪಿಎಂ ಆವಾಸ್ ಯೋಜನೆ, 15ನೇ ಹಣಕಾಸು ಅನುದಾನ, ಸ್ವಚ್ಛ ಭಾರತ ಮಿಷನ್, ಜಲಜೀವನ್ ಮಿಷನ್ ಸೇರಿದಂತೆ ವಿವಿಧ ಯೋಜನೆಗಳ ಪ್ರಗತಿಯನ್ನು ವಿಶ್ಲೇಷಿಸಿದರು. ಅದೇ ರೀತಿ ನಮೀನೆ 9, 11ಎ, 11ಬಿ ಪ್ರಮಾಣಪತ್ರ ನೀಡುವ ವಿಧಾನಗಳು, ಗ್ರಾಮ ಅಭಿವೃದ್ಧಿಗಿರುವ ಅಡಚಣೆಗಳ ಕುರಿತು ಚರ್ಚಿಸಿದರು. ನರೇಗಾ ಮತ್ತು ಜಲಜೀವನ್ ಮಿಷನ್ ಯೋಜನೆಗಳ ಅನುಷ್ಠಾನದಲ್ಲಿ ಉತ್ತಮ ಪಾರದರ್ಶಕತೆ ಮತ್ತು ಪ್ರಗತಿಯನ್ನು ಸಾಧಿಸಿರುವುದಕ್ಕೆ ಎಂಎಲ್ಸಿ ಕಿಶೋರ್ಕುಮಾರ್ ಪ್ರಶಂಸೆ ವ್ಯಕ್ತಪಡಿಸಿದರು. ಬಳಿಕ ಮಾತನಾಡಿದ ಕಿಶೋರ್ಕುಮಾರ್, ಗ್ರಾ.ಪಂ.ಗಳಿಗೆ ಭೇಟಿ ನೀಡಿ ಸರ್ಕಾರದ ವಿವಿಧ ಯೋಜನೆಗಳು ತಳಮಟ್ಟದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಪರಿಶೀಲಿಸುತ್ತಿದ್ದೇನೆ. ಅಲ್ಲದೇ ಸ್ಥಳೀಯ ಬೇಡಿಕೆ ಮತ್ತು ಪ್ರಾಮುಖ್ಯತೆಗಳನ್ನು ಆಧಾರವಾಗಿ ಅನುದಾನಗಳನ್ನು ಒದಗಿಸುವ ಉದ್ದೇಶದಿಂದ ಭೇಟಿ ನೀಡುತ್ತಿದ್ದೇನೆ. ಯೋಜನೆಗಳು ಕೇವಲ ಕಡತದಲ್ಲಿ ಉಳಿಯದೆ ಜನರಿಗೆ ನೇರ ಪ್ರಯೋಜನವಾಗುವಂತೆ ನೋಡಿಕೊಳ್ಳುವುದಾಗಿ ಹೇಳಿದರು.
ಗ್ರಾ.ಪಂ.ಅಧ್ಯಕ್ಷ ಗಂಗಾಧರ ಪಿ.ಎನ್., ಸದಸ್ಯರಾದ ಸಂತೋಷ್ಕುಮಾರ್, ಸ್ಮಿತಾ, ಪ್ರೇಮ, ಭಾಗೀರಥಿ, ರತ್ನಾ, ಪ್ರೆಸಿಲ್ಲಾ ಡಿ.ಸೋಜ, ಗಂಗಾಧರ ಕೆ.ಎಸ್., ಮೋನಪ್ಪ ಗೌಡ, ಯಶೋಧ, ತಾ.ಪಂ.ಮಾಜಿ ಸದಸ್ಯ ಮುಕುಂದ ಗೌಡ ಬಜತ್ತೂರು, ಗ್ರಾ.ಪಂ.ಮಾಜಿ ಸದಸ್ಯರಾದ ಆನಂದ ಕೆ.ಎಸ್.ಮೇಲೂರು, ರಾಜೇಶ್ ಪಿಜಕ್ಕಳ, ಸ್ಥಳೀಯ ಮುಖಂಡರಾದ ವಸಂತ ಪಿಜಕ್ಕಳ, ವಿಶ್ವನಾಥ ಪಿಜಕ್ಕಳ, ಶಾಸಕರ ಆಪ್ತಕಾರ್ಯದರ್ಶಿ ಅವಿನಾಶ್ ಬಿ.ಆರ್., ಜ್ಯೋತಿ ಸಂಜೀವಿನಿ ಒಕ್ಕೂಟದ ಸದಸ್ಯರಾದ ಸುನೀತಾ, ನಯನ ಹಾಗೂ ಇತರರು ಉಪಸ್ಥಿತರಿದ್ದರು.
ಪಿಡಿಒ ಚಿತ್ರಾವತಿ ಸ್ವಾಗತಿಸಿದರು. ಕಾರ್ಯದರ್ಶಿ ಕೊರಗಪ್ಪ ನಾಯ್ಕ್ ಕೆ.ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.
ಸಿಬ್ಬಂದಿಗಳಿಗೆ ಮುಂಭಡ್ತಿಗೆ ಮನವಿ;
ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮುಂಭಡ್ತಿ ಹಾಗೂ ಸಿಬ್ಬಂದಿಗಳ ಇತರೇ ಸಮಸ್ಯೆ ಬಗ್ಗೆ ಗ್ರಾ.ಪಂ.ಸಿಬ್ಬಂದಿ ಮಹಮ್ಮದ್ರವರು ಶಾಸಕರ ಗಮನ ಸೆಳೆದರು.