ಅನಂತಾಡಿ: ಸಿಲಿಂಡರ್‌ನಿಂದ ಗ್ಯಾಸ್ ಸೋರಿಕೆಯಾಗಿ ಹತ್ತಿಕೊಂಡ ಬೆಂಕಿ – ಯುವಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅವಘಡ

0

ವಿಟ್ಲ : ಯುವಕನೊಬ್ಬನ ಸಮಯ ಪ್ರಜ್ಞೆಯಿಂದ ಮನೆಮಂದಿ ಗ್ಯಾಸ್ ಸಿಲಿಂಡರ್ ಅವಘಡದಿಂದ ಪಾರಾದ ಘಟನೆ ಅನಂತಾಡಿ ಗ್ರಾಮದ ಬಾಬನಕಟ್ಟೆ ಎಂಬಲ್ಲಿ ನಡೆದಿದೆ.


ಅನಂತಾಡಿ ಗ್ರಾಮದ ಬಾಬನಕಟ್ಟೆ ಸಮೀಪದ ಹಿರ್ತಂದ ಬೈಲು ಎಂಬಲ್ಲಿ ಅ.22ರಂದು ರಾತ್ರಿ 9.45ರ ಸುಮಾರಿಗೆ ಘಟನೆ ನಡೆದಿದ್ದು, ಘಟನೆಯಲ್ಲಿ ಸಮಯಪ್ರಜ್ಞೆ ಮೆರೆದ ಯುವಕ ಜಯರಾಜ್‌ನ ಮುಖ ಹಾಗೂ ಕೈ ಗೆ ಗಾಯಗಳಾಗಿದೆ. ಘಟನೆಯಲ್ಲಿ ದ್ವಿಚಕ್ರವಾಹನ ಸಹಿತ ಮನೆಯಲ್ಲಿದ್ದ ಹಲವು ಉಪಕರಣಗಳಿಗೆ ಹಾನಿಯಾಗಿದೆ.


ತಾಯಿ ಸುಶೀಲ ಹಾಗೂ ಜಯರಾಜ್ ವಾಸ್ತವ್ಯವಿರುವ ಮನೆಯಲ್ಲಿ, ಅ.22ರಂದು ಗ್ಯಾಸ್ ಸಿಲಿಂಡರ್ ಮುಗಿದ ಹಿನ್ನೆಲೆಯಲ್ಲಿ ಹೊಸ ಸಿಲಿಂಡರ್ ಅಳವಡಿಸಿದ್ದರು. ಈ ಸಂದರ್ಭ ಅಳವಡಿಸಿದ್ದ ರೆಗ್ಯೂಲೇಟರ್ ಪಕ್ಕದಿಂದ ಗ್ಯಾಸ್ ಸೋರಿಕೆಯಾಗಿದ್ದು ಒಮ್ಮೆಲೇ ಬೆಂಕಿ ಹತ್ತಿಕೊಂಡಿದೆ. ಪರಿಣಾಮ ಅಡುಗೆ ಕೋಣೆಯಲ್ಲಿ ಬೆಂಕಿಯ ಜ್ವಾಲೆ ಆವರಿಸಿದೆ. ಈ ಸಂದರ್ಭ ಧೃತಿಗೆಡದ ಜಯರಾಜ್ ಬೆಂಕಿಯ ತೀವ್ರತೆಯ ನಡುವೆಯೂ ಸಿಲಿಂಡರ್ ಅನ್ನು ಎತ್ತಿ ಮನೆಯಿಂದ ಹೊರಗೆ ಇಟ್ಟಿದ್ದಾನೆ. ಈ ಸಂದರ್ಭ ಸ್ಥಳಕ್ಕೆ ಧಾವಿಸಿದ ನೆರೆಮನೆ ನಿವಾಸಿ ವೆಂಕಪ್ಪ ಪೂಜಾರಿಯವರು ಉರಿಯುತ್ತಿದ್ದ ಗ್ಯಾಸ್ ಸಿಲಿಂಡರ್ ಗೆ ಒದ್ದೆಮಾಡಿದ ಗೋಣಿ ಚೀಲವನ್ನು ಹಾಕಿ ಬೆಂಕಿಯನ್ನು ನಂದಿಸಿದ್ದಾರೆ.


ಸಿಲಿಂಡರ್ ಗೆ ಹತ್ತಿಕೊಂಡ ಬೆಂಕಿಯ ತೀವ್ರತೆಗೆ ಮನೆಯ ವಿದ್ಯುತ್ ಉಪಕರಣ , ಕಿಟಕಿ ಬಾಗಿಲು, ದ್ವಿಚಕ್ರವಾಹನ, ಇತರ ಸಾಮಾಗ್ರಿಗಳಿಗೆ ಹಾನಿಯಾಗಿದೆ. ಗ್ಯಾಸ್ ಸಿಲಿಂಡರ್ ನಲ್ಲಿ ರೆಗ್ಯೂಲೇಟರ್ ಅಳವಡಿಸಿದ ಸಂದರ್ಭ ಸೋರಿಕೆ ತಡೆಯಲು ಇರಬೇಕಿದ್ದ ವಾಶರ್ ಇರದೇ ಇದ್ದುದು ಈ ಅವಘಡಕ್ಕೆ ಕಾರಣವೆನ್ನಲಾಗಿದೆ. ಜಯರಾಜ್ ಸಿಲಿಂಡರ್ ಅನ್ನು ಮನೆಯಿಂದ ಹೊರಗೆ ಹಾಕದೇ ಇರುತ್ತಿದ್ದರೆ ಮತ್ತಷ್ಟು ಹಾನಿ ಸಂಭವಿಸುವ ಸಾಧ್ಯತೆ ಇತ್ತು ಎನ್ನಲಾಗಿದೆ.


ಘಟನೆ ಕುರಿತಾಗಿ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನಾ ಸ್ಥಳಕ್ಕೆ ಅನಂತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ, ಮಾಜಿ ಅಧ್ಯಕ್ಷರಾದ ಗಣೇಶ್, ಸನತ್ ಕುಮಾರ್ ರೈ, ಗಣೇಶ್ ಬಂಟ್ರಿಂಜ, ಉಮೇಶ್ ನೆಡ್ಯಾರ , ಗ್ರಾಮ ಕರಣಿಕರು ಭೇಟಿ ನೀಡಿದ್ದಾರೆ. ಬಂಟ್ವಾಳ ಕಾರಿಂಜೇಶ್ವರ ಗ್ಯಾಸ್ ಏಜೆನ್ಸಿಯ ಕರುಣಾಕರ ಶೆಟ್ಟಿಯವರು ಭೇಟಿ ನೀಡಿ, ಪರಿಹಾರ ಕ್ರಮದ ಭರವಸೆ ನೀಡಿದ್ದಾರೆ.

LEAVE A REPLY

Please enter your comment!
Please enter your name here