ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈಯವರಿಗೆ ಸನ್ಮಾನ
ಪುತ್ತೂರು: ಸಂಪ್ಯ ಕಮ್ಮಾಡಿಯಲ್ಲಿರುವ ಮೆಡ್ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬೇಸಿಕ್ ಲೈಫ್ ಸಪೋರ್ಟ್ ಪ್ರೋಗ್ರಾಂ ಮತ್ತು ಆಂಬ್ಯುಲೆನ್ಸ್ ಚಾಲಕರ ಸಮ್ಮಿಲನ ಕಾರ್ಯಕ್ರಮ ಅ.23ರಂದು ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಮಾತನಾಡಿ, ರೋಗಿಗಳಿಗೆ ಪ್ರಾರಂಭಿಕ ಹಂತದಲ್ಲಿ ಸಕಾಲದಲ್ಲಿ ಚಿಕಿತ್ಸೆ ದೊರೆಯಬೇಕಾದರೆ ಅಲ್ಲಿ ಆಂಬುಲೆನ್ಸ್ ಚಾಲಕರ ಸೇವೆ ಅತೀ ಅಗತ್ಯ, ಅಂತಹ ಆಂಬುಲೆನ್ಸ್ ಚಾಲಕರಿಗೆ ಕಾರ್ಯಕ್ರಮ ಏರ್ಪಡಿಸಿರುವುದು ಉತ್ತಮ ಕಾರ್ಯ ಎಂದರು. ಉತ್ತಮ ವ್ಯವಸ್ಥೆಗಳೊಂದಿಗೆ ಪ್ರಾರಂಭಗೊಂಡಿರುವ ಮೆಡ್ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥೆಯ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಆರ್ಯಾಪು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ನಾಗೇಶ್ ಎಂ ಮಾತನಾಡಿ, ಆಂಬುಲೆನ್ಸ್ ಚಾಲಕರು ನಿಜವಾಗಿಯೂ ಜೀವ ರಕ್ಷಕರು, ಅವರು ತಮ್ಮ ಜೀವದ ಹಂಗು ತೊರೆದು ಇತರರಿಗಾಗಿ ಕೆಲಸ ಮಾಡುತ್ತಾರೆ, ಅವರ ಸೇವೆಯನ್ನು ವರ್ಣಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಆರ್ಯಾಪು ಗ್ರಾ.ಪಂ ವ್ಯಾಪ್ತಿಯ ಸಂಪ್ಯದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಿದ ಅಶ್ರಫ್ ಕಮ್ಮಾಡಿಯವರ ಕಾರ್ಯ ಶ್ಲಾಘನೀಯ ಎಂದರು.
ದೀಪಕ್ ರೈಗೆ ಸನ್ಮಾನ:
ಡಾ.ದೀಪಕ್ ರೈ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು. ಕೆ.ಎಂ.ಸಿ ಆಸ್ಪತ್ರೆಯ ಡಾ.ಅನಿಕೇತ್ ಶೆಟ್ಟಿ ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು. ವೇದಿಕೆಯಲ್ಲಿ ಮೆಡ್ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯ ಡಾ.ಅಶ್ರಫ್ ಕಮ್ಮಾಡಿ, ಮೆಡಿಕಲ್ ಡೈರೆಕ್ಟರ್ ಅದ್ರಾಮ ಇಬ್ರಾಹಿಂ, ಕಾನೂನು ಸಲಹೆಗಾರ ಮೂಸಕುಂಞಿ ಪೈಂಬೆಚ್ಚಾಲ್, ಮ್ಯಾನೇಜಿಂಗ್ ಡೈರೆಕ್ಟರ್ ಅಶ್ಮೀರ್ ಕಮ್ಮಾಡಿ, ಅಕೌಂಟೆಂಟ್ ಅಬ್ದುಲ್ ಅಝೀಝ್ ಉಪಸ್ಥಿತರಿದ್ದರು.

ಕುಮಾರಿ ವಿದಿಶಾ ಸ್ವಾಗತಿಸಿದರು. ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಅಬ್ದುಲ್ ರಝಾಕ್ ಸಾಲ್ಮರ ಕಾರ್ಯಕ್ರಮ ನಿರೂಪಿಸಿದರು. ಮೆಡ್ಲ್ಯಾಂಡ್ ಆಸ್ಪತ್ರೆಯ ಆಂಬುಲೆನ್ಸ್ ಚಾಲಕ ಶಾಫಿ ಸಂಪ್ಯ ಸಹಕರಿಸಿದರು.