ಪುತ್ತೂರು: ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿ ಜೀವನವು ಅಧಿಕ ಸವಾಲಿನಿಂದ ಕೂಡಿದ್ದು,ಅದನ್ನು ಸಮರ್ಪಕವಾಗಿ ಎದುರಿಸಲು ಸಕರಾತ್ಮಕ ಧೋರಣೆ ಬೆಳೆಸಿಕೊಳ್ಳಬೇಕು.ವಿದ್ಯಾರ್ಥಿಗಳು ಸಾಧನೆಯ ಹಾದಿಗೆ ಆತ್ಮವಿಶ್ವಾಸವನ್ನೇ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಜೀವನದಲ್ಲಿ ಗೆಲುವು ಸಾಧಿಸಬೇಕು. ಎಂದು ಬೆಂಗಳೂರಿನ ಬಿಎಸ್‌ಬಿಎಸ್ ದ ಬಿ-ಸ್ಕೂಲ್ ನ ಉಪಾಧ್ಯಕ್ಷ ವಿನಯ್ ವಿ ಜಾದವ್ ಅವರು ಹೇಳಿದರು.
ಪುತ್ತೂರಿನ ತೆಂಕಿಲದಲ್ಲಿರುವ ನರೇಂದ್ರ ಪ.ಪೂ.ಕಾಲೇಜಿನಲ್ಲಿ ಒಕ್ಟೋಬರ್ 25 ರಂದು ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಸುಸ್ಥಿರ ಭವಿಷ್ಯವನ್ನು ರಚಿಸಲು, ನಾವು ಇಂದಿನ ಯುವಕರನ್ನು ಸಶಕ್ತಗೊಳಿಸಬೇಕು.ಅಗತ್ಯ ಕೌಶಲ್ಯ ಮತ್ತು ಜ್ಞಾನದೊಂದಿಗೆ ಅವರನ್ನು ಸಜ್ಜುಗೊಳಿಸುವ ಮೂಲಕ, ಅವರು ನಾಳೆಯ ಸವಾಲುಗಳನ್ನು ಎದುರಿಸಲು ಸಿದ್ಧರಾಗುವಂತೆ ಭವಿಷ್ಯದ ಬದುಕಿಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸಬೇಕು.ಎಂದು ಹೇಳಿದರು.ಶೈಕ್ಷಣಿಕ ಪ್ರಗತಿಗೆ ಮತ್ತು ಯಶಸ್ಸಿನ ಮೆಟ್ಟಿಲೇರಲು ಬೇಕಾದ ಹಲವು ಸೂತ್ರಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಜೊತೆ ಕಾರ‍್ಯದರ್ಶಿ ರೂಪಲೇಖ ರವರು ಮಾತನಾಡುತ್ತಾ ಶಿಕ್ಷಣದಲ್ಲಿ ಭಾರತೀಯತೆಯನ್ನು ಮೈಗೂಡಿಸಿಕೊಳ್ಳಬೇಕು.ಆತ್ಮಪ್ರಜ್ಞೆ, ಅಂತಃಸತ್ವಗಳನ್ನು ರೂಢಿಸಿಕೊಳ್ಳಬೇಕು.ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಒಳಗೊಂಡ ಶಿಕ್ಷಣವನ್ನು ಒದಗಿಸುವ ಮೂಲಕ ಇಡೀ ರಾಷ್ಟ್ರವನ್ನು ಮೌಲ್ಯಾಧಾರಿತ, ವೈಭವಯುತ, ಸರ್ವಾಂಗೀಣ ಉನ್ನತಿಯ ದಾರಿಯಲ್ಲಿ ಕೊಂಡುಹೋಗುವ ಮಹತ್ತರವಾದ ಜವಾಬ್ದಾರಿಯ ಅರಿವನ್ನು ಇಂದಿನ ಯುವಜನತೆಯಲ್ಲಿ ಮೂಡಿಸುವಲ್ಲಿ ಕಾರ್ಯಪ್ರವೃತ್ತರಾಗಬೇಕು.ಶಿಸ್ತಿನ ವ್ಯಾಸಂಗ ದೊಂದಿಗೆ ದೃಢತೆಯನ್ನು ಮೈಗೂಡಿಸಿಕೊಂಡು ಪ್ರಗತಿ ಪಥದತ್ತ ಸಾಗಬೇಕು.ಎಂದು ಹೇಳಿದರು.
2025-26 ನೇ ಸಾಲಿನಲ್ಲಿ ಶೈಕ್ಷಣಿಕ,ಕ್ರೀಡೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.ಮತ್ತು ವಾರ್ಷಿಕೋತ್ಸವದ ಪ್ರಯುಕ್ತ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ಮತ್ತು ವಿಶೇಷ ಸಾಧಕರಿಗೆ ದತ್ತಿನಿಧಿ ಬಹುಮಾನವನ್ನು ನೀಡಿ ಅಭಿನಂದಿಸಲಾಯಿತು. ಕಾಲೇಜಿನ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ಕ್ರೀಡೆ, ಯೋಗ, ಕರಾಟೆ ತರಬೇತುದಾರರನ್ನು ಅಭಿನಂದಿಸಲಾಯಿತು.
2024-25ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.ಉಪನ್ಯಾಸಕರಾದ ರೇಣುಕಾ, ಮಧುರಾ,ರೇಖಾ, ಅಪೂರ್ವ ಸಾಧಕ ವಿದ್ಯಾರ್ಥಿಗಳ ಹೆಸರು ವಾಚಿಸಿದರು.ಕೂರ್ನಡ್ಕದ ಮಾಧವ ಪ್ರಭು ಪ್ರತಿಭಾವಂತ ವಿದ್ಯಾರ್ಥಿಗೆ ಶೈಕ್ಷಣಿಕ ಪ್ರೋತ್ಸಾಹಧನವನ್ನು ನೀಡಿದರು.
ವೇದಿಕೆಯಲ್ಲಿ ನರೇಂದ್ರ ಪ.ಪೂ.ಕಾಲೇಜಿನ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕರಾದ ಸಂತೋಷ ಬಿ., ಕೋಶಾಧಿಕಾರಿಗಳಾದ ಸಂಪತ್ ಕುಮಾರ್, ಸದಸ್ಯರಾದ ಮೋಹಿನಿ ದಿವಾಕರ, ಉಮೇಶ್ ನಾಯಕ್,ವಿದ್ಯಾರ್ಥಿ ಸಂಘದ ಕಾರ‍್ಯದರ್ಶಿಯಾದ ದ್ವಿತೀಯ ವಿಜ್ಞಾನ ವಿಭಾಗದ ಸನಿಕ ಪಿ. ರೈ ,ಜೊತೆ ಕಾರ‍್ಯದರ್ಶಿಯಾದ ಪ್ರಥಮ ವಿಜ್ಞಾನ ವಿಭಾಗದ ಸಿಂಧು ಉಪಸ್ಥಿತರಿದ್ದರು.
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಸಂಚಾಲಕರಾದ ರವಿನಾರಾಯಣ, ಮುಖ್ಯೋಪಾಧ್ಯಾಯರಾದ ಸತೀಶ್‌ಕುಮಾರ್ ರೈ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ರಮೇಶ್ಚಂದ್ರ, ಮುಖ್ಯೋಪಾಧ್ಯಾಯರಾದ ಆಶಾ ಬೆಳ್ಳಾರೆ, ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳು, ಕ್ಯಾಂಪ್ಕೊ ಚಾಕಲೇಟ್ ಫ್ಯಾಕ್ಟರಿಯ ನಿರ್ದೇಶಕರಾದ ರಾಘವೇಂದ್ರ ಭಟ್ , ಹಿರಿಯ ವಿದ್ಯಾರ್ಥಿಗಳು, ಮತ್ತು ಪೋಷಕ ವೃಂದ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಪ್ರಾಂಶುಪಾಲರಾದ ಶ್ರೀ ಪ್ರಸಾದ್ ಶ್ಯಾನಭಾಗ್ ಕಾಲೇಜಿನ ವಾರ್ಷಿಕ ವರದಿಯನ್ನು ಮಂಡಿಸಿದರು.ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಕಾಂತ ಕೊಳತ್ತಾಯರವರು ಸ್ವಾಗತಿಸಿ, ವಿದ್ಯಾರ್ಥಿ ಸಂಘದ ಕಾರ‍್ಯದರ್ಶಿಯಾದ ದ್ವಿತೀಯ ವಿಜ್ಞಾನ ವಿಭಾಗದ ಸನಿಕ ಪಿ.ರೈವಂದಿಸಿದರು.ಉಪನ್ಯಾಸಕರಾದ ಶಶಿಕಲಾ,ನಾಗಶ್ರೀ ಕಾರ‍್ಯಕ್ರಮವನ್ನು ನಿರೂಪಿಸಿದರು.ಬಳಿಕ ವಿವಿಧ ಸಾಂಸ್ಕೃತಿಕ ಕಾರ‍್ಯಕ್ರಮಗಳು ನಡೆದವು.
