ಪುತ್ತೂರು:ಶಾಸಕ ಅಶೋಕ್ ಕುಮಾರ್ ರೈರವರು ಅಕ್ರಮ ಗೋಸಾಗಾಟ, ಅಕ್ರಮ ಚಟುವಟಿಕೆಯಂತಹ ಪ್ರಕರಣಗಳಿಗೆ ಬ್ರೇಕ್ ಹಾಕುವ ಕೆಲಸ ಮಾಡಿದ್ದಾರೆ.ಮೊನ್ನೆ ಈಶ್ವರಮಂಗಲದಲ್ಲಿ ನಡೆದ ಘಟನೆಯಲ್ಲಿ,ಅನ್ಯ ಸಮುದಾಯದವರು ಆರೋಪಿ ಸ್ಥಾನದಲ್ಲಿರುವಾಗ ಅದನ್ನು ಧರ್ಮಾತೀತವಾಗಿ ಗುರುತಿಸಿ ಧರ್ಮವನ್ನು ಎತ್ತಿಕಟ್ಟುವ ಕೆಲಸವನ್ನು ಮಾಡಬಾರದು ಎಂದು ಅವರು ಹೇಳಿದ್ದರಲ್ಲದೆ, ಗೋರಕ್ಷಕ ಎಂದು ಹೇಳುವ ವ್ಯಕ್ತಿಗಳು ಸ್ಥಳಕ್ಕೆ ಹೋಗಿ ಫೋಸ್ ಕೊಟ್ಟದ್ದು ತಪ್ಪು ಎಂದೂ ಹೇಳಿದ್ದಾರೆ.ಹಿಂದಿನ ಸರಕಾರ ಇದ್ದಾಗ ಕಟ್ಟುನಿಟ್ಟಿನ ಕ್ರಮ ನಡೆಯಲಿಲ್ಲ.ಆದರೆ ನಮ್ಮ ಸರಕಾರ ಇದ್ದಾಗ ಇಂತಹ ಕಟ್ಟುನಿಟ್ಟಿನ ಕ್ರಮ ನಡೆದಿರುವುದರಿಂದ ಪೊಲೀಸರನ್ನು ಅಭಿನಂದಿಸುವುದಾಗಿ ಶಾಸಕರು ಹೇಳಿದ್ದಾರೆಯೇ ಹೊರತು ಯಾವುದೇ ಒಂದು ಸಮುದಾಯವನ್ನು ಗುರಿಯಾಗಿಸಿ,ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಶಾಸಕರು ಹೇಳಿಕೆ ನೀಡಿಲ್ಲ.ಆದುದರಿಂದ ಎಸ್‌ಡಿಪಿಐನವರ ಹೇಳಿಕೆಯನ್ನು ನಾವು ಖಂಡಿಸುತ್ತೇವೆ ಎಂದು ಕೆಪಿಸಿಸಿ ಸಂಯೋಜಕ,ನ್ಯಾಯವಾದಿ ನೂರುದ್ದೀನ್ ಸಾಲ್ಮರ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.
ಶಾಸಕ ಅಶೋಕ ಕುಮಾರ್ ರೈರವರು ಸಂಘ ಪರಿವಾರ ಮತ್ತು ಬಿಜೆಪಿ ಮನಸ್ಥಿತಿಯಿಂದ ಹೊರಬಂದಿಲ್ಲ ಎಂದು ಎಸ್‌ಡಿಪಿಐನವರು ಆರೋಪಿಸಿದ್ದಾರೆ.ಆದರೆ ಅಶೋಕ್ ಕುಮಾರ್ ರೈ ನೇತೃತ್ವದ ಅಶೋಕ ಜನಮನ ಕಾರ್ಯಕ್ರಮ ಪುತ್ತೂರಿನಲ್ಲಿ ಜಾತಿ, ಧರ್ಮಾತೀತವಾಗಿ ನಡೆದಿದೆ.ಎಲ್ಲ ಜಾತಿ ಧರ್ಮದವರೂ ದೀಪಾವಳಿ ಸಂದರ್ಭದಲ್ಲಿ ಒಟ್ಟಿಗೆ ಸೇರುವ ಕೆಲಸವನ್ನು ಅಶೋಕ್ ಕುಮಾರ್ ರೈ ಮಾಡಿದ್ದಾರೆ.ಜನರ ಮನಸ್ಸು ಗೆದ್ದ ಕಾರ್ಯಕ್ರಮ ಅದಾಗಿದೆ.ಪುತ್ತೂರಿನ ನಮ್ಮ ಶಾಸಕರು ಕಾಂಗ್ರೆಸ್ ಪಕ್ಷದ ಜಾತ್ಯಾತೀತ ಮೌಲ್ಯವನ್ನು ಎತ್ತಿಹಿಡಿದಿದ್ದಾರೆ.ಅವರು ಆದರ್ಶ ಶಾಸಕನಾಗಿ ಇದ್ದಾರೆ.ಆದರೆ,ಎಸ್‌ಡಿಪಿಐನವರು ರಾಜಕೀಯ ಲಾಭಕ್ಕೋಸ್ಕರ, ಅಲ್ಪಸಂಖ್ಯಾತರ ಮತಗಳನ್ನು ಸೆಳೆಯುವುದಕ್ಕೋಸ್ಕರ ಶಾಸಕರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ.ಇದನ್ನು ಮುಸ್ಲಿಂ ಸಮುದಾಯ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ ನೂರುದ್ದೀನ್ ಸಾಲ್ಮರ, ಗುಂಡೇಟು ಪ್ರಕರಣದಲ್ಲಿ ಅದೇ ಸತ್ಯ ಎಂದು ತಿಳಿದುಕೊಳ್ಳಬಾರದು.ಪೊಲೀಸರು ಮಾಡಿದ್ದೇ ಸರಿ ಎಂದು ಹೇಳಬಾರದು.ಅದರ ಬಗ್ಗೆ ಸಂಶಯಗಳಿದ್ದರೆ ನ್ಯಾಯಾಂಗವಿದೆ.ಮಾನವ ಹಕ್ಕುಗಳ ಆಯೋಗವಿದೆ.ಇದಕ್ಕೆ ದೂರು ಕೊಡಬಹುದು.ತನಿಖೆ ಕೂಡ ಮಾಡಬಹುದು. ಎಲ್ಲವನ್ನೂ ನಾವೇ ಜಡ್ಜ್‌ಮೆಂಟ್ ಮಾಡಬಾರದು ಎಂದರು.
ಅಕ್ರಮ ಚಟುವಟಿಕೆ ನಡೆಸುವವರ ವಿರುದ್ಧ ಶಾಸಕರು ಮಾತನಾಡಿದ್ದಾರೆ-ಯು.ಟಿ.ತೌಶಿಫ್:
ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಟಿ.ತೌಶಿಫ್ ಮಾತನಾಡಿ ಮೊನ್ನೆ ನಡೆದ ಅಶೋಕ್ ಕುಮಾರ್ ರೈ ಅವರ ಜನಮನ ಕಾರ್ಯಕ್ರಮದಲ್ಲಿ ಗಿಫ್ಟ್ ಪಡೆದುಕೊಳ್ಳಲು ಹಿಂದುಗಳು ಮಾತ್ರ ಅಲ್ಲ, ಮುಸ್ಲಿಮರು ಕೂಡ ಬಂದಿದ್ದಾರೆ.ಶಾಸಕರು ಈ ಹಿಂದೆ ಬಿಜೆಪಿಯಲ್ಲಿದ್ದಾಗಲೂ ಮುಸ್ಲಿಮರಿಗೆ ನೋವಾಗುವ ಹಾಗೆ ಒಂದೇ ಒಂದು ಹೇಳಿಕೆ ನೀಡಿಲ್ಲ.ಈಶ್ವರಮಂಗಲದ ಘಟನೆಯಲ್ಲಿ ಗುಂಡು ಬೇರೆ ಕಡೆ ಬೀಳಬಹುದು ಎಂಬ ಶಾಸಕರ ಹೇಳಿಕೆ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ನೀಡಿದ ಹೇಳಿಕೆಯಲ್ಲ.ಅಕ್ರಮ ಚಟುವಟಿಕೆ ನಡೆಸುವವರ ವಿರುದ್ಧ ಶಾಸಕರು ಹೇಳಿದ್ದಾರೆ. ಇದನ್ನು ನಾವು ಸ್ವಾಗತಿಸುತ್ತೇವೆ ಎಂದರು.ಅಕ್ರಮ ಚಟುವಟಿಕೆಗಳಿಗೆ ಮುಸ್ಲಿಮರು ಬೆಂಬಲ ನೀಡುವುದಿಲ್ಲ ಎಂದ ಅವರು, ಅಶೋಕ್ ಕುಮಾರ್ ರೈರವರ ವಿರುದ್ಧ ಕೇಸ್ ದಾಖಲಿಸಬೇಕು ಎನ್ನುವವರ ಉದ್ದೇಶ ಅಕ್ರಮ ಚಟುವಟಿಕೆಗಳಿಗೆ ಸಹಾಯ ಮಾಡಬೇಕು ಎಂಬುದಾಗಿದೆಯೇ? ಎಂದರು.ಈಶ್ವರಮಂಗಲ ಪ್ರಕರಣದಲ್ಲಿ ಪೊಲೀಸರು ಒಳ್ಳೆಯ ಕೆಲಸ ಮಾಡಿದ್ದಾರೆ.ಇದರ ಕ್ರೆಡಿಟ್ ಬೇರೆಯವರು ತೆಗೆದುಕೊಳ್ಳಬಾರದು.ಪೊಲೀಸ್ ಇಲಾಖೆಯೇ ಕ್ರೆಡಿಟ್ ತೆಗೆದುಕೋಳ್ಳಬೇಕು ಎಂದರು.
ಶಾಸಕರ ಅಭಿವೃದ್ಧಿ ಕೆಲಸದ ಬಗ್ಗೆ ಯಾಕೆ ಮಾತನಾಡುತ್ತಿಲ್ಲ-ನಝೀರ್ ಮಠ:
ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ರಾಜ್ಯ ಕಾರ್ಯದರ್ಶಿ ನಝೀರ್ ಮಠ ಮಾತನಾಡಿ ಈಶ್ವರಮಂಗಲದ ಘಟನೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಯಾಕೆ ಬರಬೇಕು?ಹಗ್ಗ ಬಿಚ್ಚಿಸಲು ಪೊಲೀಸರಿಗೆ ಗೊತ್ತಿಲ್ಲವಾ? ಅಲ್ಲಿ ಅರುಣ್ ಕುಮಾರ್ ಪುತ್ತಿಲರು ತಲವಾರು ಹಿಡಿದ ಉದ್ಧೇಶ ಏನು?ಇದರ ಬಗ್ಗೆ ತನಿಖೆ ಆಗಬೇಕು.ಪೊಲೀಸರೊಂದಿಗೆ ಗೋರಕ್ಷಕರು ಕಾರ್ಯಾಚರಣೆಗೆ ಇಳಿದರೆ ಶಾಂತಿ ಕದಡುವ ಕೆಲಸ ಆಗುವುದಿಲ್ಲವಾ?ಪೊಲೀಸರೊಂದಿಗೆ ರೌಡಿ ಶೀಟರ್ ಇದ್ದರೆ ಕ್ರಮ ಏನು?ಎಂದು ಪ್ರಶ್ನಿಸಿದರು.ಶಾಸಕರ ವಿರುದ್ಧ ಕಪ್ಪುಚುಕ್ಕೆ ಹೇಳುವವರು ಶಾಸಕರ ಅಭಿವೃದ್ಧಿಯ ಕೆಲಸದ ಬಗ್ಗೆ ಯಾಕೆ ಹೇಳುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.
ಅಶೋಕ್ ಕುಮಾರ್ ರೈ ಶಾಸಕರಾಗಿ ಅಲ್ಪಸಂಖ್ಯಾತರಿಗೆ ಲಾಭ-ಅಬ್ದುಲ್ ರಹಿಮಾನ್ ಆಝಾದ್:
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರಹಿಮಾನ್ ಆಝಾದ್ ದರ್ಬೆ ಮಾತನಾಡಿ ಅಶೋಕ್ ಕುಮಾರ್ ರೈರವರು ಹಲವರಿಗೆ ಸಹಾಯ ಮಾಡಿದ್ದಾರೆ. ಶಾಸಕರಾದ ಬಳಿಕ ಹಲವು ಮಸೀದಿ, ದೇವಸ್ಥಾನ, ಚರ್ಚ್‌ಗಳಿಗೆ ಅನುದಾನ ನೀಡಿದ್ದಾರೆ.ನಮ್ಮ ಶಾಸಕರು ಬಿಜೆಪಿ, ಕಾಂಗ್ರೆಸ್ ಎಂದು ನೋಡದೆ ಪಕ್ಷಾತೀತವಾಗಿ ಅಭಿವೃದ್ಧಿ, ಎಲ್ಲರ ಕಲ್ಯಾಣ ನೋಡುವ ಜವಾಬ್ದಾರಿ ಮಾಡಿದ್ದಾರೆ.ಅಶೋಕ್ ಕುಮಾರ್ ರೈ ಶಾಸಕರಾಗಿ ಅಲ್ಪಸಂಖ್ಯಾತರಿಗೆ ಲಾಭ ಆಗಿದೆ ಎಂದರು.ಕಾಂಗ್ರೆಸ್ ಮುಖಂಡ ಶಬೀರ್ ಕೆಂಪಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.