ಸ್ವಾತಿ ಮಹಾನಕ್ಷತ್ರ ಮಳೆನೀರು ಮಹತ್ವ

0

ಸ್ವಾತಿ ಮಹಾನಕ್ಷತ್ರದಲ್ಲಿ ಸುರಿಯುವ ಮಳೆನೀರು ಸಾಧಾರಣ ನೀರಾಗಿರದೆ ಬಹಳಷ್ಟು ಔಷಧೀಯ ಗುಣಗಳನ್ನು ಹೊಂದಿದೆ. ಈ ವರ್ಷದ ಸ್ವಾತಿ ಮಹಾನಕ್ಷತ್ರವು, ಇದೇ ಅಕ್ಟೋಬರ್ 24 ರಿಂದ ನವೆಂಬರ್ 4 ರ ವರೆಗಿದೆ. ಈ ನೀರನ್ನು ಶುದ್ಧವಾಗಿ ಸಂಗ್ರಹಿಸಲು ಸ್ವಲ್ಪ ಶ್ರಮ ಪಡಬೇಕಾಗುತ್ತದೆ. ಸ್ವಚ್ಛವಾದ, ಅಗಲವಾದ ತಾಮ್ರ, ಮಣ್ಣು, ಅಥವಾ ಸ್ಟೀಲ್ ಪಾತ್ರೆಯನ್ನು ನೆಲದಿಂದ ಸ್ವಲ್ಪ ಎತ್ತರದಲ್ಲಿಟ್ಟು, ನೀರು ನೆಲಕ್ಕೆ ಬೀಳುವ ಮೊದಲೇ, ಆಕಾಶದಿಂದ ನೇರವಾಗಿ ಬೀಳುವ ನೀರನ್ನು ಸಂಗ್ರಹಿಸಬೇಕು. ನಂತರ ಶುದ್ಧ ಹತ್ತಿ ಬಟ್ಟೆಯಲ್ಲಿ ಸೋಸಿ ಗಾಜಿನ ಬಾಟಲಿಯಲ್ಲಿ ಗಾಳಿಯಾಡದಂತೆ ಇಟ್ಟರೆ ವರ್ಷಗಟ್ಟಲೆ ಹಾಳಾಗುವುದಿಲ್ಲ. ಈ ನೀರು ಕೆಲವು ರೋಗಗಳಿಗೆ ದಿವ್ಯೌಷಧಿಯಾಗಿರುವುದು ಅನುಭವದಿಂದ ಸಾಬೀತಾಗಿದೆ. ಯಾವುದೇ ಔಷಧಿಯಿಂದ ಗುಣವಾಗದ ನನ್ನ ಕೈ ಉಗುರಿನ ದೀರ್ಘ ಕಾಲದ ನೋವು, ಸ್ವಾತಿ ನೀರಿನ ಉಪಯೋಗದಿಂದ ಸುಮಾರು ಎರಡು ತಿಂಗಳುಗಳಲ್ಲಿ ಸರಿಯಾಗಿ ಗುಣವಾಗಿದೆ. ಹಾಗೆಯೇ ಸಣ್ಣ ಪುಟ್ಟ ಕಿವಿ ನೋವು ಹಾಗೂ ಕಣ್ಣು ನೋವುಗಳನ್ನು ಗುಣಪಡಿಸುವಲ್ಲಿ ಕೂಡಾ ಇದು ಬಹಳ ಸಹಕಾರಿಯಾಗಿದೆ.

ಇದು ಮಾತ್ರವಲ್ಲದೆ, ಹಾಲಿಗೆ ಹೆಪ್ಪು ಹಾಕಲು ಉಪಯೋಗಿಸಿ, ವರ್ಷಕ್ಕೊಮ್ಮೆ ಹೊಸದಾಗಿ ಮೊಸರು ಮಾಡಬಹುದು. ಇದನ್ನು ಹೆಪ್ಪು ಹಾಕಿ ತಯಾರಿಸಿದ ಮೊಸರು ವಿಶೇಷ ರುಚಿ ಹಾಗೂ ಸುವಾಸನೆಯನ್ನು ಹೊಂದಿರುತ್ತದೆ. ನಮ್ಮೂರಿನ ಶಾಲಾ ವಿದ್ಯಾರ್ಥಿಗಳಿಂದ ಪ್ರಯೋಗ ಶಾಲೆಯಲ್ಲಿ ಇದರ ಕುರಿತು ವಿಶೇಷವಾದ ಸಂಶೋಧನೆಯು ನಡೆಯುತ್ತಿದ್ದು, ಈ ನೀರಿನ ಹೆಪ್ಪಿನಿಂದ ಅತ್ಯುತ್ಕೃಷ್ಟ ಮೊಸರು ಪಡೆಯಬಹುದೆಂಬುದು ಸಾಬೀತಾಗಿದೆ.

ವರ್ಷಕ್ಕೊಮ್ಮೆ ರೇಶ್ಮೆ ಸೀರೆಗಳನ್ನು ಈ ಸಮಯದಲ್ಲಿ ಎಳೆ ಬಿಸಿಲಿಗೆ ಒಂದು ತಾಸು ಅಥವಾ ಮನೆಯೊಳಗೆ ನೆರಳಿನಲ್ಲಿ ನಾಲ್ಕೈದು ತಾಸು ಗಾಳಿಯಾಡಲು ಹಾಕಿದರೆ ವರ್ಷವಿಡೀ ಸೀರೆಗೆ ಕೀಟ ಬಾಧೆ ಇರುವುದಿಲ್ಲ. ಅಲ್ಲದೆ ಈ ಸಮಯದಲ್ಲಿ ನೆಟ್ಟ ಗಿಡಗಳು ಚೆನ್ನಾಗಿ ಬದುಕಿದ ನಿದರ್ಶನವಿದೆ. ಈ ಸ್ವಾನುಭವಗಳನ್ನು ಇತರರಿಗೂ ತಿಳಿಸಿ, ಅವರು ಕೂಡಾ ಇದರ ಉಪಯೋಗ ಪಡೆಯುವಂತೆ ಆಗಬೇಕು. ವೈದ್ಯರ ಬಳಿ ಹೋಗಿ ಗುಣ ಕಾಣದ ಹಳೆ ಗಾಯಗಳು ಕೂಡಾ ಗುಣವಾದ ಬಗ್ಗೆ ಕೇಳಿ ಗೊತ್ತು. ಇನ್ನೂ ಒಂದು ವಿಶೇಷವೇನೆಂದರೆ, ಬೆಳೆಗಳಿಗೂ ಕೀಟ ನಿರೋಧಕವಾಗಿ ಈ ನೀರನ್ನು ಬಳಸಲ್ಪಡುತ್ತದೆ. ಈ ನೀರು ಪುಟ್ಟ ಮಗುವಿಗೆ ತಾಯಿಯ ಎದೆ ಹಾಲಿನಷ್ಟೇ ಆರೋಗ್ಯಕರವೆಂದು ಹಿರಿಯರು ಹೇಳುತ್ತಿದ್ದರು.

ಕಳೆದ ವರ್ಷದ ಲೇಖನಕ್ಕೆ ಪ್ರತಿಕ್ರಿಯೆ ನೀಡಿದ ಕೆಲವು ಮಂದಿ ಅವರ ಬಾಲ್ಯದ ನೆನಪುಗಳನ್ನು ಹಂಚಿಕೊಳ್ಳುತ್ತಾ, ಚಿಕ್ಕಂದಿನಲ್ಲಿಅವರಿಗೆ ಸ್ವತ: ಚರ್ಮ ಸುಟ್ಟಿರುವ ಸಂದರ್ಭದಲ್ಲಿ ಬೇರೆ ಔಷಧಿಗಳ ಜೊತೆಗೆ ಈ ಸ್ವಾತಿ ನೀರನ್ನು ಬಳಸಿ, ಇದರಿಂದ ಸುಟ್ಟಗಾಯವು ಬಹುತೇಕ ಮಾಯವಾಗಿರುವ ಬಗ್ಗೆ ಮಾಹಿತಿಯು ಅವರ ಹೆತ್ತವರಿಂದ ಲಭಿಸಿದ ಕುರಿತು ತಿಳಿಸಿದರು. ಕೆಲವರು ಈ ನೀರನ್ನು ಹೆಪ್ಪು ಹಾಕಿ ತಯಾರಿಸಿದ ರುಚಿಕರವಾದ ಮೊಸರಿನ ಕುರಿತು ಪ್ರಾಸ್ತಾಪಿಸಿದರು. ಅಂತೂ ಈ ಬರೆಹದ ಉಪಯೋಗವನ್ನು ಕೆಲವು ಮಂದಿಯಾದರೂ ಪಡೆದಿರುವುದು, ಇದರ ಉದ್ದೇಶವು ಸ್ವಲ್ಪ ಮಟ್ಟಿಗಾದರೂ ಈಡೇರಿತೆಂಬ ಸಾರ್ಥಕ ಭಾವವನ್ನು ಹೊಂದುವಂತೆ ಮಾಡಿದೆ.

ಆದರೆ, ಹಿತ್ತಲ ಗಿಡ ಮದ್ದಲ್ಲವೆಂಬಂತೆ, ನಮಗೆ ತಿಳಿದ ಹಾಗೂ ತಿಳಿಯದ ಅತ್ಯದ್ಭುತ ಔಷಧೀಯ ಗುಣ ಹೊಂದಿದ, ಸುಲಭವಾಗಿ, ಉಚಿತವಾಗಿ ಸಿಗುವಂತಹ ಈ ಸ್ವಾತಿ ಮಹಾನಕ್ಷತ್ರದಲ್ಲಿ ಬರುವ ಮಳೆ ನೀರಿನ ಮಹತ್ವವು ಬಹಳ ಪ್ರಚಾರ ಪಡೆದಿಲ್ಲ. ಇದರ ಗುಣಗಳ ಬಗ್ಗೆ ದೊಡ್ಡ ಮಟ್ಟದಲ್ಲಿ ಸಂಶೋಧನೆ ನಡೆಸಿದರೆ, ಇದರಲ್ಲಿರುವ ರೋಗ ನಿರೋಧಕ ಔಷಧೀಯ ಗುಣಗಳನ್ನು ಪತ್ತೆ ಹಚ್ಚಬಹುದು. ನೋಡೋಣ….ಮುಂದಕ್ಕೆ ಇದರ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಇದರಿಂದಾಗಿ ಕಡಿಮೆ ವೆಚ್ಚದಲ್ಲಿ ಹಲವು ರೋಗಗಳಿಗೆ ಔಷಧಿ ಸಿಗುವ ಸಂಭವವಿದೆ. ಇನ್ನು ಮುಂದಾದರೂ ಸ್ವಾತಿ ಮಹಾನಕ್ಷತ್ರದ ಮಳೆ ನೀರಿನ ಉಪಯುಕ್ತತೆಯ ಕುರಿತು ಎಲ್ಲರಿಗೂ ಅರಿವುಂಟಾಗಲಿ ಎಂಬುದು ಹಾರೈಕೆಯಾಗಿದೆ

ಶಂಕರಿ ಶರ್ಮ, ಪುತ್ತೂರು.
94498 56033

LEAVE A REPLY

Please enter your comment!
Please enter your name here