ಬೆಟ್ಟಂಪಾಡಿ: ದೀಪಾವಳಿ ಹಬ್ಬದ ಬಳಿಕ ಅವಿಭಜಿತ ದ.ಕ. ಜಿಲ್ಲೆಯಲ್ಲಿ ದೈವ ದೇವರುಗಳ ಉತ್ಸವಾದಿಗಳು ಆರಂಭಗೊಳ್ಳುತ್ತವೆ. ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳಲ್ಲಿ ಮೊದಲ ಜಾತ್ರೋತ್ಸವ ಎಂದೇ ಪ್ರಸಿದ್ದಿ ಹೊಂದಿರುವ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಉತ್ಸವ ನ. 4 ರಿಂದ 7 ರವರೆಗೆ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದ್ದು, ಅದರಂಗವಾಗಿ ಗೊನೆಮುಹೂರ್ತ ಅ.29ರಂದು ನಡೆಯಿತು.

ಹಿಂದೂ ಪಂಚಾಂಗ ಪ್ರಕಾರ ಪ್ರತೀ ವರ್ಷ ಇಲ್ಲಿ ಕಾರ್ತಿಕ ಮಾಸದ ಹುಣ್ಣಿಮೆಯಂದು ಜಾತ್ರೋತ್ಸವ ನಡೆಯುತ್ತದೆ. ನ.4 ರಂದು ಬಲಿವಾಡು ಶೇಖರಣೆ, ರಾತ್ರಿ ಮಹಾಗಣಪತಿ ಪೂಜೆ ನಡೆದು, ನ. 5 ರಂದು ಗಣಪತಿ ಹೋಮ, ನವಕ ಕಲಶಾಭಿಷೇಕ, ತುಲಾಭಾರ ಸೇವೆ, ದೇವರ ಬಲಿ, ಬ್ರಹ್ಮಸಮಾರಾಧನೆ ನಡೆಯುತ್ತದೆ. ಅದೇ ದಿನ ರಾತ್ರಿ ಶ್ರೀ ದೇವರ ಬಲಿ ಹೊರಟು ಕಟ್ಟೆಪೂಜೆ, ದೇವರ ಮೂಲಸ್ಥಾನವಾದ ಬಿಲ್ವಗಿರಿ ಪ್ರವೇಶ, ಕೆರೆ ಉತ್ಸವ ನಡೆಯುತ್ತದೆ. ಮರುದಿನ ನ. 6 ರಂದು ಬೆಳಿಗ್ಗೆಯಿಂದ ದೇವರ ಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ ಜರಗುತ್ತದೆ. ಅದೇ ದಿನ ರಾತ್ರಿ ಶಿವನ ದೈವ ಸ್ವರೂಪ ಶ್ರೀ ಜಟಾಧಾರಿ ಮಹಿಮೆ ನಡೆದು ಮರುದಿನ ನ. 7 ರಂದು ಕ್ಷೇತ್ರದ ದೈವಗಳಾದ ಧೂಮಾವತಿ ಹಾಗೂ ಹುಲಿಭೂತ ನೇಮ ನಡೆಯುತ್ತದೆ. ಬಿಲ್ವಗಿರಿಯಲ್ಲಿ ನ. 5 ರಂದು ರಾತ್ರಿ ವಿಶೇಷವಾಗಿ ‘ಬೆಟ್ಟಂಪಾಡಿ ಬೆಡಿ’ ಪ್ರದರ್ಶನಗೊಳ್ಳುತ್ತದೆ. ಕಟ್ಟೆಪೂಜೆಯ ಸಂದರ್ಭ ಈ ಬಾರಿ ರಸಮಂಜರಿ, ಸಿಂಗಾರಿ ಮೇಳ ಕಾರ್ಯಕ್ರಮವೂ ನಡೆಯಲಿದೆ.
ಗೊನೆ ಮುಹೂರ್ತದ ವೇಳೆ ದೇವಳದ ಅರ್ಚಕ ನಾರಾಯಣ ಭಟ್ ಕಾನುಮೂಲೆಯವರು ಬೆಳಿಗ್ಗೆ ಶ್ರೀದೇವರ ಸನ್ನಿಧಿಯಲ್ಲಿ ಪ್ರಾರ್ಥಿಸಿದರು. ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್, ಮೊಕ್ತೇಸರ ವಿನೋದ್ ಕುಮಾರ್ ರೈ ಗುತ್ತು, ಶಿವಕುಮಾರ್ ಬಲ್ಲಾಳ್, ಸಹಾಯಕರಾದ ಪ್ರಸನ್ನ ಭಟ್, ಕ್ಲರ್ಕ್ ವಿನಯ ಕುಮಾರ್ ಮತ್ತು ಭಕ್ತಾಧಿಗಳು ಉಪಸ್ಥಿತರಿದ್ದರು.