ಪುತ್ತೂರು: ಬಹುಗ್ರಾಮ ಕುಡಿಯುವ ನೀರು ಯೋಜನೆಯ ಪೈಪುಲೈನ್ ಕಾಮಗಾರಿಯಿಂದ ಕೆಲವೊಂದು ಕಡೆಗಳಲ್ಲಿ ಭಾರೀ ಅವ್ಯವಸ್ಥೆ ಉಂಟಾಗಿದೆ. ಶಾಲಾ,ಕಾಲೇಜು ವಿದ್ಯಾರ್ಥಿಗಳು, ಪಾದಚಾರಿಗಳು ನಡೆದುಕೊಂಡು ಹೋಗಲು ಕೂಡ ಕಷ್ಟಪಡುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಗಲ ಕಿರಿದಾದ ರಸ್ತೆಗಳಲ್ಲಿ ರಸ್ತೆಬದಿಯಲ್ಲಿ ಪೈಪು ಅಳವಡಿಸಲು ಗುಂಡಿ ತೋಡುತ್ತಿದ್ದು ಅದರ ಮಣ್ಣನ್ನು ರಸ್ತೆ ಮೇಲೆಯೇ ಹಾಕಿರುವುದರಿಂದ ಇದು ಮಳೆನೀರಿಗೆ ರಸ್ತೆ ತುಂಬಾ ಆವರಿಸಿಕೊಂಡು ಕೆಸರುಮಯವಾಗಿದೆ. ಇದಲ್ಲದೆ ವಾಹನ ಸಂಚಾರಕ್ಕೂ ತೊಂದರೆಯುಂಟಾಗಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ಬೆಟ್ಟಂಪಾಡಿ ಗ್ರಾಮದ ಗೋಳಿಪದವು ಪಾರ ರಸ್ತೆಯಲ್ಲಿ, ನಿಡ್ಪಳ್ಳಿ ಗ್ರಾಮದ ತಂಬುತ್ತಡ್ಕ ರಸ್ತೆಯಲ್ಲಿ ಹಾಗೆ ಹಂಟ್ಯಾರು ಬೆಟ್ಟಂಪಾಡಿ ಲೋಕೋಪಯೋಗಿ ರಸ್ತೆಯಲ್ಲಿ ಅಲ್ಲಲ್ಲಿ ಪೈಪು ಅಳವಡಿಸಲು ರಸ್ತೆ ಬದಿಯಲ್ಲಿ ಅಗೆಯುತ್ತಿರುವುದರಿಂದ ಸಮಸ್ಯೆ ಉಂಟಾಗಿದೆ. ಕೈಕಾರದಲ್ಲಿ ಕುಡಿಯುವ ನೀರಿನ ಪೈಪು ತುಂಡಾಗಿರುವುದರಿಂದ ಈ ಭಾಗದ ಜನರಿಗೆ ಕುಡಿಯುವ ನೀರು ಇಲ್ಲದೆ ಹಲವು ದಿನಗಳೆ ಕಳೆದಿದೆ. ವ್ಯವಸ್ಥಿತವಾದ ರೀತಿಯಲ್ಲಿ ಕಾಮಗಾರಿ ನಡೆಯದೇ ಇರುವುದರಿಂದ ಈ ರೀತಿಯ ತೊಂದರೆಗಳು ಆಗುತ್ತಿದ್ದು ಈ ಬಗ್ಗೆ ಜನಪ್ರತಿನಿಧಿಗಳು ಕಾಮಗಾರಿಗೆ ಸಂಬಂಧಪಟ್ಟವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ ಎಂದು ಮಾತುಗಳು ಕೇಳಿಬರುತ್ತಿವೆ.