ರಸ್ತೆ ಬದಿಯಲ್ಲಿ ಚರಂಡಿ ಮೇಲೆಯೆ ನಿಲ್ಲುವ ರಿಕ್ಷಾಗಳು…
ಪುತ್ತೂರು: ಬಂಟ್ವಾಳ ತಾಲೂಕಿನ ಪುಣಚ ಗ್ರಾಮವು ಜನಸಂಖ್ಯೆ ಮತ್ತು ವಿಸ್ತಾರದಲ್ಲಿ ತಾಲೂಕಿನ ಅತೀ ದೊಡ್ಡ ಗ್ರಾಮವಾಗಿದೆ. ಗ್ರಾಮದ ಮುಖ್ಯ ಪಟ್ಟಣವಾಗಿ ಪರಿಯಾಲ್ತಡ್ಕವು ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಪೇಟೆಯಾಗಿದೆ. ಗ್ರಾಮದ ಬಹುತೇಕ ಕಡೆಗಳಿಂದ ಜನರು ಅಗತ್ಯ ವಸ್ತುಗಳಿಗಾಗಿ ಮತ್ತು ಇತರ ಪಟ್ಟಣಗಳನ್ನು ತಲುಪಲು ಪರಿಯಾಲ್ತಡ್ಕಕ್ಕೆ ಬರಲೇಬೇಕಾಗುತ್ತದೆ. ಸಂಚಾರ ವ್ಯವಸ್ಥೆಯ ಬಗ್ಗೆ ಹೇಳುವುದಾದರೆ ಗ್ರಾಮೀಣ ಭಾಗಕ್ಕೆ ಬಸ್ಸು ಸಂಚಾರ ಕಡಿಮೆ ಇರುವುದರಿಂದ ಜನರು ಅಟೋ ರಿಕ್ಷಾಗಳನ್ನೇ ಹೆಚ್ಚಾಗಿ ಅವಲಂಭಿಸಿರುತ್ತಾರೆ. ಇದರಿಂದಾಗಿಯೇ ಪುಣಚದ ಪರಿಯಾಲ್ತಡ್ಕ ಪೇಟೆಯಲ್ಲಿ ೬೫ ಕ್ಕೂ ಅಧಿಕ ಅಟೋ ರಿಕ್ಷಾಗಳಿವೆ. ಆದರೆ ಈ ಅಟೋ ರಿಕ್ಷಾಗಳಿಗೆ ಸರಿಯಾದ ತಂಗುದಾಣ ಇಲ್ಲದೆ ಇರುವುದೇ ದೊಡ್ಡ ಸಮಸ್ಯೆಯಾಗಿದೆ. ಪಂಚಾಯತ್ ಅನುಮತಿ ಪಡೆದುಕೊಂಡು ಖಾಸಗಿ ಜಾಹೀರಾತು ಕಂಪೆನಿಯೊಂದು ಬಸ್ಸು ನಿಲ್ದಾಣದ ಬಳಿ ನಿರ್ಮಿಸಿದ ತಂಗುದಾಣದಲ್ಲಿ ಕೇವಲ 6 ರಿಕ್ಷಗಳು ಮಾತ್ರ ನಿಲ್ಲುತ್ತಿವೆ ಉಳಿದಂತೆ ರಸ್ತೆ ಬದಿಯ ಚರಂಡಿಗೆ ಹಾಸಿದ ಸ್ಲಾಬ್ ಕಲ್ಲುಗಳ ಮೇಲೆಯೇ ರಿಕ್ಷಾ ಪಾರ್ಕಿಂಗ್ ಮಾಡಬೇಕಾದ ಅನಿವಾರ್ಯತೆ ಇದ್ದು ಕಳೆದ ಹಲವು ವರ್ಷಗಳಿಂದ ಇದೇ ರೀತಿಯಲ್ಲಿ ಪಾರ್ಕಿಂಗ್ ಮಾಡುತ್ತಾ ಬಂದಿದ್ದಾರೆ. ಎಲ್ಲಾದರೂ ಸ್ಲಾಬ್ ಕಲ್ಲುಗಳು ತುಂಡಾದರೆ ರಿಕ್ಷಾ ಚರಂಡಿಗೆ ಬೀಳುವ ಅಪಾಯವೂ ಇಲ್ಲಿದೆ.
ಪ್ರತಿನಿತ್ಯ ಪರಿಯಾಲ್ತಡ್ಕ ಪೇಟೆಯಿಂದ ವಿವಿಧ ಕಡೆಗಳಿಗೆ ಬಾಡಿಗೆಗೆ ತೆರಳುವ ಅಟೋ ರಿಕ್ಷಾಗಳು ಬಾಡಿಗೆಗೆ ರಸ್ತೆ ಬದಿಯ ಚರಂಡಿಗೆ ಹಾಸಿದ ಸ್ಲಾಬ್ ಕಲ್ಲುಗಳ ಮೇಲೆಯೇ ನಿಲ್ಲಬೇಕಾಗಿದೆ. ಕೆಲವು ಕಡೆಗಳಲ್ಲಿ ಸ್ಲಾಬ್ ಕಲ್ಲುಗಳು ಮುರಿದು ಬಿದ್ದಿದ್ದು ಇಲ್ಲಿದೆ ಸ್ವತಃ ರಿಕ್ಷಾ ಚಾಲಕರೇ ಮರದ ತುಂಡಗಳನ್ನು ತಂದು ಹಾಕಿ ಅದರ ಮೇಲೆ ಕಲ್ಲು ಹಾಸಿದ್ದಾರೆ. ಕಳೆದೆರಡು ದಿನಗಳ ಹಿಂದೆ ಒಂದೇ ದಿನ ಪಿಕ್ಅಪ್ ವಾಹನ ಸೇರಿದಂತೆ ಎರಡು ವಾಹನಗಳು ಇದೇ ಸ್ಲಾಬ್ ಕಲ್ಲುಗಳ ಮೇಲೆ ಚಲಿಸಿ ಕಲ್ಲು ತುಂಡಾಗಿ ವಾಹನ ಚರಂಡಿಗೆ ಬಿದ್ದಿದೆ. ಬಳಿಕ ಸಾರ್ವಜನಿಕರು ಇವುಗಳನ್ನು ಮೇಲಕ್ಕೆ ಎತ್ತಿದ್ದಾರೆ. ಆದ್ದರಿಂದ ವಾಹನ ಪಾರ್ಕಿಂಗ್ಗೆ ಇಲ್ಲಿ ಬಹಳಷ್ಟು ತೊಂದರೆಯಾಗುತ್ತಿದ್ದು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕಾಗಿದೆ.
ಹೆಸರಿಗೆ ರಸ್ತೆ ಬದಿಯ ಜಾಗವು ರಿಕ್ಷಾ ಪಾರ್ಕಿಂಗ್ ಜಾಗ ಎಂದಿದ್ದರೂ ಇದೇ ಜಾಗದಲ್ಲಿ ಪಿಕ್ಅಪ್ ಸೇರಿದಂತೆ ಇತರ ವಾಹನಗಳನ್ನು ಕೂಡ ಪಾರ್ಕ್ ಮಾಡುತ್ತಿದ್ದಾರೆ. ಇದರಿಂದಾಗಿ ಅಟೋ ರಿಕ್ಷಾದವರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಆದ್ದರಿಂದ ಅಟೋ ರಿಕ್ಷಾ ಚಾಲಕರಿಗೆ ತಮ್ಮ ಅಟೋ ರಿಕ್ಷಾಗಳನ್ನು ಬಾಡಿಗೆಗೆ ಪಾರ್ಕ್ ಮಾಡಲು ವ್ಯವಸ್ಥಿತವಾದ ಪಾರ್ಕಿಂಗ್ ಏರಿಯಾದ ಅಗತ್ಯತೆ ಇದೆ. ಈ ಬಗ್ಗೆ ಜನಪ್ರತಿನಿಧಿಗಳು, ಶಾಸಕರು,ಗ್ರಾಮ ಪಂಚಾಯತ್ ಅಧ್ಯಕ್ಷರು, ಆಡಳಿತ ಮಂಡಳಿ, ಅಧಿಕಾರಿ ವರ್ಗದವರು ಗಮನ ಹರಿಸಬೇಕು ಎನ್ನುವುದು ರಿಕ್ಷಾ ಚಾಲಕ ಮಾಲಕರ ಆಗ್ರಹವಾಗಿದೆ.
‘ ಪರಿಯಾಲ್ತಡ್ಕದಲ್ಲಿ ಪ್ರಸ್ತುತ 65ಕ್ಕೂ ಅಧಿಕ ಅಟೋ ರಿಕ್ಷಾಗಳಿದ್ದು ರಿಕ್ಷಾ ಪಾರ್ಕಿಂಗ್ ಇಲ್ಲದೆ ಬಹಳಷ್ಟು ಸಮಸ್ಯೆಯಾಗುತ್ತಿದೆ. ಖಾಸಗಿ ಜಾಹೀರಾತು ಕಂಪೆನಿಯೊಂದು ಚಿಕ್ಕ ತಂಗುದಾಣ ನಿರ್ಮಿಸಿಕೊಟ್ಟಿದ್ದು ಇದರಲ್ಲಿ 6 ರಿಕ್ಷಾಗಳು ನಿಲ್ಲುತ್ತಿವೆ ಉಳಿದಂತೆ ರಸ್ತೆ ಬದಿಯ ಚರಂಡಿ ಮೇಲೆಯೇ ಪಾರ್ಕಿಂಗ್ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ನಮಗೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಡುವಂತೆ ಈ ಮೂಲಕ ಜನಪ್ರತಿನಿಧಿಗಳಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ.’
ಅಝೀಜ್ ಪುಣಚ, ರಿಕ್ಷಾ ಚಾಲಕರು
