ಉಪ್ಪಿನಂಗಡಿ : ದನದ ಮೂರು ತಿಂಗಳ ಗರ್ಭ ಸಹಿತ ತ್ಯಾಜ್ಯವನ್ನು ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕು ಬಾರ್ಯ ಗ್ರಾಮದ ಕಂಗಿನಾರುಬೆಟ್ಟು ಎಂಬಲ್ಲಿ ಎಸೆದ ಪ್ರಕರಣ ಗುರುವಾರದಂದು ಬೆಳಕಿಗೆ ಬಂದಿದ್ದು, ಉಪ್ಪಿನಂಗಡಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕದಿಯಲಾದ ಗೋವನ್ನು ವಧಿಸಿ ಅದರ ತ್ಯಾಜ್ಯವನ್ನು ಎಸೆಯುವ ವೇಳೆ ಅದರ ಹೊಟ್ಟೆಯಲ್ಲಿದ್ದ ಮೂರು ತಿಂಗಳ ಗರ್ಭಸ್ಥ ಕರುವನ್ನೂ ಕೂಡಾ ಎಸೆದಿರುವುದಾಗಿ ಸ್ಥಳೀಯರು ಶಂಕಿಸಿದ್ದಾರೆ. ಪತ್ತೆ ಯಾದ ಗೋ ಮಾಂಸದ ತ್ಯಾಜ್ಯ ಕೊಳೆತ್ತಿದ್ದು, ಕಳೆದ ಎರಡುಮೂರು ದಿನಗಳ ಹಿಂದೆ ಎಸೆದಿರಬಹುದೆಂದು ಅಂದಾಜಿಸಲಾಗಿದೆ.
ವಾರದ ಹಿಂದೆ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ತುರ್ಕರಕೋಡಿ ಎಂಬಲ್ಲಿ ಈಶ್ವರ ನಾಯ್ಕ ಎಂಬವರ ಸುಮಾರು 30 ಸಾವಿರ ರೂ ಮೌಲ್ಯದ ದನವೊಂದನ್ನು ಮೇಯಲು ಬಿಟ್ಟ ಸ್ಥಳದಿಂದಲೇ ಕದ್ದೊಯ್ದ ಘಟನೆ ಸಂಭವಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದ್ದು, ಗೋ ಹಂತಕರ ಈ ರೀತಿಯ ವರ್ತನೆಯಿಂದ ಹೈನುಗಾರರು ಕಂಗೆಡುವ ಸ್ಥಿತಿ ನಿರ್ಮಾಣವಾಗಿದೆ.
ಗೋ ಕಳ್ಳತನ ಮತ್ತು ಹತ್ಯೆ ನಿರಂತರ . . . . ತಡೆ ಅಸಾಧ್ಯವೇ ?
ಪ್ರಸಕ್ತ ದ ಕ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧಿಕಾರಿಯವರ ಕಠಿಣ ಕ್ರಮದ ಕಾರಣದಿಂದಾಗಿ ಜಿಲ್ಲೆಯಲ್ಲಿ ಯಾವುದೇ ಅಕ್ರಮ ಚಟುವಟಿಕೆಗಳು ನಡೆಯದೆ ಶಾಂತಿಯುತ ವಾತಾವರಣ ನಿರ್ಮಾಣವಾಗಿದ್ದರೂ ಜಿಲ್ಲೆಯಲ್ಲಿ ಅಲ್ಲಲ್ಲಿ ಮನೆಯ ಹಟ್ಟಿಯಿಂದ , ಮೇಯಲು ಬಿಟ್ಟ ಸ್ಥಳದಿಂದ ಗೋವುಗಳನ್ನು ಕದಿಯುವುದು, ಅಲ್ಲೇ ಪರಿಸರದಲ್ಲಿ ಅದನ್ನು ಹತ್ಯೆಗೈದು ಅದರ ಮಾಂಸವನ್ನು ಸಾಗಾಟ ಮಾಡುತ್ತಿರುವ ಕೃತ್ಯಗಳು ಪದೇ ಪದೇ ಘಟಿಸುತ್ತಿರುವುದು ಜಿಲ್ಲೆಯ ಶಾಂತಿ ಸುವ್ಯವಸ್ಥೆಗೆ ಶೋಭಿಸುವುದಿಲ್ಲ. ಜಿಲ್ಲೆಯಲ್ಲಿ ಉಳಿದೆಲ್ಲಾ ಅಕ್ರಮಗಳನ್ನು ತಡೆಗಟ್ಟಲು ಸಾಧ್ಯವಾಗಿರುವ ಪೊಲೀಸ್ ಇಲಾಖೆಗೆ ಗೋ ಹಂತಕರನ್ನು ನಿಗ್ರಹಿಸಲು ಅಸಾಧ್ಯವಾಗಿರುವುದು ಶಂಕಾಸ್ಪದವಾಗಿದೆ ಎಂದು ಅಭಿಪ್ರಾಯಿಸಿರುವ ವಿಶ್ವ ಹಿಂದೂ ಪರಿಷತ್ ಉಪ್ಪಿನಂಗಡಿ ಪ್ರಖಂಡದ ಅಧ್ಯಕ್ಷ ಸುದರ್ಶನ್ ಎಂ ರವರು , ಈ ಕಾರಣದಿಂದ ಕಂಗಿನಾರು ಬೆಟ್ಟು ಸೇತುವೆಯ ಕೆಳಗೆ ಎಸೆದಿರುವ ಗೋ ಮಾಂಸದ ತ್ಯಾಜ್ಯ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಮೂರು ದಿನಗಳ ಒಳಗಾಗಿ ಗೋ ಹಂತಕರನ್ನು ಪತ್ತೆ ಹಚ್ಚಿ ಕಾನೂನು ಕ್ರಮಕ್ಕೆ ಒಳಪಡಿಸಬೇಕು. ಇಲ್ಲವಾದಲ್ಲಿ ಪೊಲೀಸ್ ಠಾಣೆಯ ಮುಂದೆ ಧರಣಿ ಸಹಿತ ಪ್ರತಿಭಟನಾ ಕಾರ್ಯಕ್ಕೆ ಮುಂದಾಗಬೇಕಾದೀತೆಂದು ಪೊಲಿಸ್ ಇಲಾಖೆಗೆ ಸಲ್ಲಿಸಿದ ದೂರಿನಲ್ಲಿ ಎಚ್ಚರಿಸಿದ್ದಾರೆ.
