ನೆಲ್ಯಾಡಿ: ನೃತ್ಯ, ಮಾಡೆಲಿಂಗ್, ಸಂಗೀತ, ಯೋಗ ಹಾಗೂ ಕ್ರೀಡೆಯಲ್ಲಿ ಮಾಡಿರುವ ಸಾಧನೆಗಾಗಿ ಶಿರಾಡಿ ಗ್ರಾಮದ ಸಂಪ್ಯಾಡಿ ನಿವಾಸಿ, ನೆಲ್ಯಾಡಿ ಜ್ಞಾನೋದಯ ಬೆಥನಿ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಅರ್ಚನಾ ಎಸ್., ಅವರು 2025ನೇ ಸಾಲಿನ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕಡಬ ತಾಲೂಕು ಶಿರಾಡಿ ಗ್ರಾಮದ ಸಂಪ್ಯಾಡಿ ನಿವಾಸಿ ಸುದರ್ಶನ್ ಕುಮಾರ್ ಹಾಗೂ ರಮ್ಯಾ ದಂಪತಿ ಪುತ್ರಿಯಾದ ಅರ್ಚನಾ ಎಸ್. ತನ್ನ ಎರಡೂವರೇ ವಯಸ್ಸಿನಲ್ಲೇ ಶ್ರೀಕೃಷ್ಣ ವೇಷಧಾರಿಯಾಗಿ ಹಲವು ಸಂಘ ಸಂಸ್ಥೆಗಳು ಆಯೋಜಿಸಿದ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದುಕೊಂಡಿದ್ದರು. ಮುಂದಕ್ಕೆ ಭರತನಾಟ್ಯ ತರಬೇತಿ ಪಡೆದು ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು.
8ನೇ ವಯಸ್ಸಿನಿಂದಲೇ ಭರತನಾಟ್ಯದಲ್ಲಿ ವಿಶೇಷ ಶೈಲಿಯ ನೃತ್ಯವಾದ ತಲೆಯಲ್ಲಿ ದೀಪ, ಮೊಳೆಸ್ಟಾಂಡ್, ಮಡಕೆ, ಗಾಜಿನ ಲೋಟದ ಮೇಲೆ ನಿಂತು ನೃತ್ಯ ಮಾಡುವ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸಿದ್ದರು. ಯೋಗಾಸನದಲ್ಲಿ ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಮಾಡಿದ್ದಾರೆ. ಯೋಗಾಸನದೊಂದಿಗೆ ದೀಪದ ನೃತ್ಯ ಮಾಡುತ್ತಾರೆ. ಸಂಗೀತ, ಯೋಗ, ನೃತ್ಯಗಳ ಬಗ್ಗೆ ಒಲವುಳ್ಳ ಅಪೂರ್ವ ಸಾಧಕಿಯಾಗಿ ರಾಜ್ಯ, ರಾಷ್ಟ್ರ, ಅಂತರಾಷ್ಟ್ರ ಮಟ್ಟದ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಈ ತನಕ ಸುಮಾರು 700ಕ್ಕೂ ಹೆಚ್ಚು ಪ್ರತಿಷ್ಠಿತ ವೇದಿಕೆಗಳಲ್ಲಿ ಭರತನಾಟ್ಯ, ಯೋಗನೃತ್ಯ, ವೆಸ್ಟರ್ನ್‌ನೃತ್ಯ, ಅರೆಶಾಸ್ತ್ರೀಯ, ಜಾನಪದ, ಯಕ್ಷನಾಟ್ಯ, ಕಥಕ್‌ಶೈಲಿಯ ನೃತ್ಯ ಪ್ರದರ್ಶನ ನೀಡುತ್ತಾ ಬಂದಿದ್ದು, ಹಲವಾರು ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ, ಬಹುಮಾನ ಪಡೆದ ಗ್ರಾಮೀಣ ಪ್ರದೇಶದ ಬಾಲಪ್ರತಿಭೆಯಾಗಿದ್ದಾರೆ. ಎಲ್‌ಕೆಜಿಯಿಂದ 7ನೇ ತರಗತಿ ತನಕ ಉದನೆ ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿದ್ದ ಅರ್ಚನಾ ಈಗ ನೆಲ್ಯಾಡಿ ಜ್ಞಾನೋದಯ ಬೆಥನಿ ಆಂಗ್ಲಮಾಧ್ಯಮ ಶಾಲೆಯಲ್ಲಿ 9ನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ.
