ವಿದ್ಯಾರ್ಥಿಗಳು ಕನ್ನಡ ನಾಡು ನುಡಿಯ ಬಗ್ಗೆ ಪ್ರೀತಿ ಅಭಿಮಾನ ಬೆಳೆಸಿಕೊಳ್ಳಬೇಕು -ಕೆ.ಸೇಸಪ್ಪ ರೈ
ರಾಮಕುಂಜ: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಡಬ ತಾಲೂಕ ಘಟಕ ಮತ್ತು ಶ್ರೀ ರಾಮಕುಂಜೇಶ್ವರ ವಸತಿ ಶಾಲೆ ರಾಮಕುಂಜ ಇದರ ಆಶ್ರಯದಲ್ಲಿ ೭೦ನೇ ಕನ್ನಡ ರಾಜ್ಯೋತ್ಸವನ್ನು ಶ್ರೀ ರಾಮಕುಂಜೇಶ್ವರ ವಸತಿ ಶಾಲೆಯಲ್ಲಿ ಆಚರಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತು ಕಡಬ ತಾಲೂಕು ಘಟಕದ ಅಧ್ಯಕ್ಷರಾದ ಕೆ.ಸೇಸಪ್ಪ ರೈಯವರು ಧ್ವಜಾರೋಹಣಗೈದು ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ನಡೆದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೆ.ಸೇಸಪ್ಪ ರೈಯವರು ಮಾತನಾಡಿ, ಕನ್ನಡ ನಾಡು ನುಡಿಗಾಗಿ ಹೋರಾಡಿದ ನಾಯಕರ ಉದ್ದೇಶವನ್ನು ನಾವೆಲ್ಲ ಸೇರಿ ಕಾರ್ಯಗತಗೊಳಿಸಬೇಕು. ಆದರೆ ಇಂದು ಕನ್ನಡ ನಾಡಿನಲ್ಲಿ ದುಡಿದು ಸಂಬಳ ಪಡೆಯುವ ಅಧಿಕಾರಿಗಳು, ಶಾಲೆಗಳಲ್ಲಿ ಅಧ್ಯಾಪಕರು ಕನ್ನಡ ಭಾಷೆಯ ಬಗ್ಗೆ ಅಭಿಮಾನ ತೋರದಿರುವುದು ಬೇಸರದ ಸಂಗತಿ. ವಿದ್ಯಾರ್ಥಿಗಳು ಕನ್ನಡ ನಾಡು ನುಡಿಯ ಬಗ್ಗೆ ಪ್ರೀತಿ ಅಭಿಮಾನ ಬೆಳೆಸಿಕೊಳ್ಳಬೇಕೆಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಕನ್ನಡ ಸಾಹಿತ್ಯ ಪರಿ?ತ್ತು ಕಡಬ ತಾಲೂಕು ಘಟಕದ ಕೋಶಾಧಿಕಾರಿ ಬಾಲಚಂದ್ರ ಮುಚ್ಚಿಂತಾಯ ಅವರು ಕನ್ನಡ ನಾಡು ನುಡಿಯ ಗತವೈಭವವನ್ನು ಮನಮುಟ್ಟುವಂತೆ ತಿಳಿಸಿ, ನಾಡು ನುಡಿ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವಲ್ಲಿ ನಾವೆಲ್ಲರೂ ಕೈ ಜೋಡಿಸಬೇಕು ಎಂದರು. ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಗಿರೀಶ್ ಎ.ಪಿ. ಮಾತನಾಡಿ, ಮಾತೃಭಾಷೆ ಯಾವುದೇ ಇರಲಿ ಕನ್ನಡವನ್ನು ನಾವು ಮರೆಯಬಾರದು ಎಂದರು.
ಶಿಕ್ಷಕಿ ಹರಿಣಿ, ವಿದ್ಯಾರ್ಥಿಗಳಾದ ಧನ್ವಿ, ಆಶೀರ್ವಾದ್ ಕನ್ನಡ ನಾಡು ನುಡಿಯ ಮಹತ್ವದ ಬಗ್ಗೆ ಮಾತನಾಡಿದರು. ವೇದಿಕೆಯಲ್ಲಿ ಸಂಸ್ಥೆಯ ಆಡಳಿತ ಅಧಿಕಾರಿ ಆನಂದ ಎಸ್.ಟಿ., ವ್ಯವಸ್ಥಾಪಕರಾದ ರಮೇಶ್ ರೈ ಆರ್.ಬಿ., ಉಪಸ್ಥಿತರಿದ್ದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯನಿ ಗಾಯತ್ರಿ ಯು.ಎನ್. ಸ್ವಾಗತಿಸಿ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯನಿ ಲೋಹಿತಾ ಎ.ವಂದಿಸಿದರು. ಸಹ ಶಿಕ್ಷಕರಾದ ಕಿಶೋರ್ ಕುಮಾರ್ ಬಿ., ಹರೀಶ್, ಸೌಮ್ಯ, ಸುಜಿತಾ ಕಾರ್ಯಕ್ರಮ ನಿರ್ವಹಿಸಿದರು. ಸಂಸ್ಥೆಯ ಶಿಕ್ಷಕ, ಶಿಕ್ಷಕೇತರ ವೃಂದದವರು ಸಹಕರಿಸಿದರು. ಸಿಹಿತಿಂಡಿ ವಿತರಿಸಲಾಯಿತು.
ಗೌರವಾರ್ಪಣೆ:
ಮೂಲೆತ್ತಮಜಲಿನ ನಾಟಿ ವೈದ್ಯರಾದ ಚಿದಾನಂದ ಇವರನ್ನು ಕನ್ನಡ ಸಾಹಿತ್ಯ ಪರಿಷತ್ತು ಕಡಬ ತಾಲೂಕು ಘಟಕದ ವತಿಯಿಂದ ಗೌರವಿಸಲಾಯಿತು. ಸಂಸ್ಥೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಂದ ಕನ್ನಡ ನಾಡು ನುಡಿ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು.