ಪುತ್ತೂರು: ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಕನ್ನಡ ಮಾತೆಗೆ ಪುಷ್ಪನಮನ ಸಲ್ಲಿಸಿ, ನಾಡಗೀತೆ ಹಾಡಿ ಕನ್ನಡಾಂಬೆಗೆ ನಮನ ಸಲ್ಲಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷೆ, ಶಾಲಾ ಮುಖ್ಯೋಪಾಧ್ಯಾಯಿನಿ ರೋಸಲಿನ್ ಲೋಬೊ ಮಾತನಾಡಿ ಕನ್ನಡ ನಾಡು ಭವ್ಯ ನಾಡು. ಸಂಸ್ಕೃತಿ ಕಲೆಗಳ ಬೀಡು. ಈ ನಾಡಿನಲ್ಲಿ ಹುಟ್ಟಿ ಬೆಳೆದ ನಾವು, ನಮ್ಮ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಪರಂಪರೆಯನ್ನು ಮುಂದುವರಿಸಬೇಕು. ನಮ್ಮನ್ನು ಇತರರು ನೋಡಿದ ಕ್ಷಣ ಇವರು ಕನ್ನಡಿಗರು ಎಂಬುವುದು ನಮ್ಮ ಮುಖಚರ್ಯೆಲ್ಲಿ ಅವರಿಗೆ ಗೊತ್ತಾಗಬೇಕು. ಇದಕ್ಕೆ ನಾವು ಶುದ್ಧವಾದ ಕನ್ನಡ ಭಾಷೆಯನ್ನು ಮಾತನಾಡಬೇಕು. ನಾವು ಎಲ್ಲೇ ಹೋದರೂ ನಮ್ಮತನವನ್ನು ಉಳಿಸಿಕೊಳ್ಳಬೇಕು, ಕನ್ನಡ ನಾಡಿಗಾಗಿ ಹೋರಾಡಿದ ಮಹನೀಯರನ್ನು ಸದಾ ಸ್ಮರಿಸೋಣ ಎಂದು ಶುಭ ಹಾರೈಸಿದರು. ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಶ್ವೇತಾ ಕೆ. ಮಾತನಾಡಿ ನಾಡಗೀತೆಯಲ್ಲಿ ಕನ್ನಡ ನಾಡಿಗೆ ಸಂಬಂಧಿಸಿದ ಎಲ್ಲಾ ವಿಚಾರಧಾರೆಗಳನ್ನು ಕವಿ ಕುವೆಂಪುರವರು ರಚಿಸಿದ್ದಾರೆ. ಕನ್ನಡ ನಾಡಿನ ವೈವಿಧ್ಯತೆ, ಪರಂಪರೆ, ಇತಿಹಾಸ, ಕವಿಗಳ ಬಗ್ಗೆ, ನದಿಗಳ ಬಗ್ಗೆ, ನಾಡಗೀತೆಯು ವರ್ಣಿಸುತ್ತದೆ. ಇತಂಹ ಶ್ರೇಷ್ಠ ನಾಡಿನಲ್ಲಿ ಹುಟ್ಟಿದ ನಾವು ಧನ್ಯರು ಎಂದು ಶುಭ ಹಾರೈಸಿದರು.
ಶಾಲಾ ನಾಯಕಿ ಮಾನ್ಯ, ಸಾಂಸ್ಕೃತಿಕ ಸಂಘದ ಅಧ್ಯಕ್ಷೆ ಸೌಜನ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿನಿಯರ ಹೆಸರನ್ನು ಕನ್ನಡ ಶಿಕ್ಷಕಿ ಭವ್ಯ ವಾಚಿಸಿದರು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು. ಕನ್ನಡ ಭೂಪಟವನ್ನು ರಂಗೋಲಿ ಮೂಲಕ ಬಿಡಿಸಿದ ವಿದ್ಯಾರ್ಥಿನಿಯರಾದ ಸಿಯಾ ಹಾಗೂ ಮಾನ್ಯತಾರವರನ್ನು ಅಭಿನಂದಿಸಲಾಯಿತು. ಸಾಂಸ್ಕೃತಿಕ ಸಂಘದ ಅಧ್ಯಕ್ಷೆ ಸೌಜನ್ಯ ಸ್ವಾಗತಿಸಿ, ತ್ರೇಶಾ ವಂದಿಸಿದರು. ಧೃತಿ ಹಾಗೂ ಸಮೃಧಿ ವಿ.ಎಸ್. ಕಾರ್ಯಕ್ರಮ ನಿರೂಪಿಸಿದರು.
