ದರ್ಬೆ ಕಾರ್‌ಟೆಕ್ ಗ್ಯಾರೇಜ್ ಆವರಣದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ

0

50 ಮಂದಿ ಫಲಾನುಭವಿಗಳು ತಪಾಸಣೆಯಲ್ಲಿ ಭಾಗಿ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಗ್ಯಾರೇಜು ಮಾಲಕರ ಸಂಘ ಪುತ್ತೂರು ವಲಯ ಹಾಗೂ ರೋಟರಿ ಜಿಲ್ಲೆ 3181 ಇದರ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ಕಾಮತ್ ಆಪ್ಟಿಕಲ್ಸ್ ಇವರ ಸಹಕಾರದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರವು ನ.2 ರಂದು ದರ್ಬೆ ಕಾವೇರಿಕಟ್ಟೆ ಕಾರ್‌ಟೆಕ್ ಮಲ್ಟಿ ಬ್ರಾಂಡ್ ವರ್ಕ್ ಶಾಪ್ ಆವರಣದಲ್ಲಿ ನಡೆದಿದ್ದು ೫೦ ಮಂದಿ ಫಲಾನುಭವಿಗಳು ತಪಾಸಣೆಯಲ್ಲಿ ಭಾಗಿಯಾಗಿದ್ದರು.


ದ.ಕ ಜಿಲ್ಲಾ ಗ್ಯಾರೇಜು ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಜಗೋಪಾಲ್‌ರವರು ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಮಾತನಾಡಿ, ವಾಹನಗಳನ್ನು ಸುಸ್ಥಿತಿಗೆ ತಂದು ಮಾನವನ ಜೀವ ಕಾಪಾಡುವಲ್ಲಿ ಗ್ಯಾರೇಜು ಮಾಲಕರು ಹಾಗೂ ಕಾರ್ಮಿಕರು ಪ್ರಮುಖ ಪಾತ್ರ ವಹಿಸುತ್ತಾರೆ. ಗ್ಯಾರೇಜು ಶ್ರಮಿಕರು ಎಷ್ಟೇ ಎತ್ತರಕ್ಕೇರಿದರೂ ನಮ್ಮ ಕೆಲಸದ ಬಗ್ಗೆ ಗೌರವವನ್ನು ಕಳೆದುಕೊಳ್ಳಬಾರದು ಜೊತೆಗೆ ಸಂಘಟಿತರಾಗಿ ದುಡಿಯಬೇಕು. ದೇಹದ ಪ್ರಧಾನ ಅಂಗಗಳಲ್ಲಿ ಒಂದು ಕಣ್ಣು. ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಂಡರೆ ಈ ಪರಿಸರವನ್ನು ಆಸ್ವಾದಿಸಬಹುದು ಎಂಬ ನಿಟ್ಟಿನಲ್ಲಿ ರೋಟರಿ ಕ್ಲಬ್‌ರವರೊಂದಿಗೆ ಸೇರಿಕೊಂಡು ಗ್ಯಾರೇಜು ಕಾರ್ಮಿಕರಿಗೆ ಹಾಗೂ ಸಾರ್ವಜನಿಕರಿಗೆ ಉಚಿತ ಕಣ್ಣಿನ ಶಿಬಿರವನ್ನು ಆಯೋಜಿಸಿರುವುಸದು ಅರ್ಥಪೂರ್ಣ. ಇದರ ಸದುಪಯೋಗ ಎಲ್ಲರೂ ಪಡೆದುಕೊಳ್ಳುವಂತಾಗಲಿ ಎಂದರು.


ದ.ಕ ಜಿಲ್ಲಾ ಗ್ಯಾರೇಜು ಮಾಲಕರ ಸೌಹಾರ್ದ ಸಹಕಾರ ಸಂಘದ ನಿರ್ದೇಶಕ ಜಯಕರ ಸೋನ್ಸ್‌ರವರು ಮಾತನಾಡಿ, ಸಂಘಟನೆಯ ಬೆಳೆಯುವಿಕೆ ಹಿಂದೆ ಹಲವರ ಶ್ರಮ ಇದೆ. ಇದನ್ನು ತಿಳಿದುಕೊಂಡು ಮುಂದೆ ಹೋದ್ರೆ ಸಂಸ್ಥೆಗಳು ನಶಿಸಿ ಹೋಗುವುದಿಲ್ಲ. ಕೆಲವೊಂದು ಕಡೆ ಕಷ್ಟಪಟ್ಟು ಕಟ್ಟಿರುತ್ತಾರೆ ಆದರೆ ಬೆಳೆಸುವ ಹಂತದಲ್ಲಿ ಸ್ವಾಭಿಮಾನ ಅಡ್ಡ ಬರುತ್ತದೆ. ತಾನು ಮಾಡಿರುವುದು ಎಂಬುದಾಗಿ ಮನಸ್ಸಿನಲ್ಲಿ ಬಂದರೆ ಸಂಘಟನೆಗೆ ಪೆಟ್ಟು ಬೀಳುತ್ತದೆ. ನಮ್ಮ ಈ ಗ್ಯಾರೇಜು ಮಾಲಕರ ಸಂಘ ನಮ್ಮದೇ ಕುಟುಂಬದ ಸಂಘ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುವುದೇ ಸಂಘದ ಸದಸ್ಯರ ಪ್ರಮುಖ ಉದ್ಧೇಶವಾಗಿದೆ. ಜಿಲ್ಲಾ ಸಂಘ ಇಂದು ಯಶಸ್ವಿಯಾಗಿ ಕಾರ್ಯಾಚರಿಸುವಲ್ಲಿ ತಾಲೂಕು ಸಂಘದ ಪಾತ್ರ ಬಹಳಷ್ಟಿದೆ ಎಂದು ಹೇಳಿ ಗ್ಯಾರೇಜು ಮಾಲಕರ ಸಹಕಾರಿ ಸಂಘದಲ್ಲಿ ಚಿನ್ನದ ಮೇಲೆ ಹೂಡುವಿಕೆ ಬಗ್ಗೆ ಮಾಹಿತಿ ನೀಡಿದರು.


ರೋಟರಿ ಕ್ಲಬ್ ಪುತ್ತೂರು ಈಸ್ಟ್ ಪೂರ್ವಾಧ್ಯಕ್ಷ ಕೆ.ವಿಶ್ವಾಸ್ ಶೆಣೈ, ದ.ಕ ಜಿಲ್ಲಾ ಗ್ಯಾರೇಜು ಮಾಲಕರ ಸಂಘದ ಕೋಶಾಧಿಕಾರಿ ಕಿರೆಣ್ ರಾಜ್ ಗಾಣಿಗ, ಕಾರ್‌ಟೆಕ್ ಮಲ್ಟಿಬ್ರಾಂಡ್ ವರ್ಕ್ ಶಾಪ್ ಮಾಲಕ ನಳಿನಾಕ್ಷ, ಕಾಮತ್ ಆಪ್ಟಿಕಲ್ಸ್‌ನ ಲೋಕೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು.ಲಿಖಿತಾ ಪ್ರಾರ್ಥಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಗ್ಯಾರೇಜು ಮಾಲಕರ ಸಂಘ ಪುತ್ತೂರು ವಲಯದ ಅಧ್ಯಕ್ಷ ಶರತ್ ಕುಮಾರ್ ರೈರವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಶಶಿಧರ್ ಕಿನ್ನಿಮಜಲು ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here