ಪುತ್ತೂರು:8 ವರ್ಷಗಳ ಹಿಂದೆ ಗೋಳಿತೊಟ್ಟು ಗ್ರಾಮದ ಕಾಂಚನ ಕ್ರಾಸ್ ಬಳಿಯ ಉಪ್ಪಳಿಗೆಯಲ್ಲಿ ನಡೆದ ಕೆಎಸ್ ಆರ್ಟಿಸಿ ಬಸ್ಗಳ ಮುಖಾಮುಖಿ ಡಿಕ್ಕಿ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಬಸ್ ಚಾಲಕ ಮಲ್ಲಪ್ಪ ಎಂಬಾತನಿಗೆ ಪುತ್ತೂರು ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶ ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿ ಪ್ರಕೃತಿ ಕಲ್ಯಾಣಪುರ ಅವರು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
2017ರ ಮೇ 9ರಂದು ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಚಾಲಕ ಮಲ್ಲಪ್ಪ ಎಂಬವರು ಕೆಎಸ್ಆರ್ಟಿಸಿ ಬಸ್ನ್ನು ಚಲಾಯಿಸಿಕೊಂಡು ಹೋಗಿ ಪುತ್ತೂರು ತಾಲೂಕು ಗೋಳಿತೊಟ್ಟು ಗ್ರಾಮದ ಕಾಂಚನ ಕ್ರಾಸ್ ಬಳಿ ಉಪ್ಪಳಿಗೆ ಎಂಬ ಸ್ಥಳದಲ್ಲಿ ಅಜಾಗರೂಕತೆಯಿಂದ ಮತ್ತು ನಿರ್ಲಕ್ಷತನದಿಂದ ರಸ್ತೆಯ ತೀರಾ ತಪ್ಪು ಬದಿಯಲ್ಲಿ ಚಲಾಯಿಸಿದ ಪರಿಣಾದು ಬೆಂಗಳೂರು ಕಡೆಯಿಂದ ಮಂಗಳೂರಿಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ಗೆ ಡಿಕ್ಕಿಯಾಗಿತ್ತು.ಬಸ್ ಗಳೆರೆಡು ಮುಖಾಮುಖಿ ಡಿಕ್ಕಿಯಾದ್ದರಿಂದ ಎರಡು ಬಸ್ ಗಳು ಜಖಂಗೊಂಡು ಬಸ್ ನಲ್ಲಿದ್ದ ಪ್ರಯಾಣಿಕರು ಮತ್ತು ಆರೋಪಿ ಸೇರಿ ಒಟ್ಟು 30 ಜನರಿಗೆ ಸಾಮಾನ್ಯ ಸ್ವರೂಪದ ಗಾಯಗಳಾಗಿತ್ತು.
ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯ ಆಗಿನ ಉಪನಿರೀಕ್ಷಕರಾಗಿದ್ದ ಜಗದೀಶ್ ರೆಡ್ಡಿಯವರು ಆರೋಪಿ ಚಾಲಕ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ ಶಿಕ್ಷೆ ವಿಧಿಸಿದೆ.ಆರೋಪಿಗೆ ಐಪಿಸಿ ಸೆಕ್ಷನ್ 279, 237, 338ರ ಅಡಿಯಲ್ಲಿ ಶಿಕ್ಷೆ ವಿಧಿಸಿದ್ದು ರೂ.2500 ದಂಡವನ್ನು ಪಾವತಿಸಲು ಆದೇಶ ನೀಡಲಾಗಿದೆ. ಸರಕಾರದ ಪರ ಸಹಾಯಕ ಸರಕಾರಿ ಅಭಿಯೋಜಕರಾದ ಕವಿತಾ ಕೆ ಅವರು ವಾದಿಸಿದ್ದರು.
